ಚಾಮರಾಜನಗರ: ದೇವಾಲಯ, ಮಸೀದಿ, ಚರ್ಚ್‌ಗಳ ಬಗ್ಗೆ ಹರವೆ ವಿರಕ್ತ ಮಠಾಧ್ಯಕ್ಷರು ಹೇಳಿದ್ದೇನು ಗೊತ್ತಾ?
ಚಾಮರಾಜನಗರ, ಸೆಪ್ಟೆಂಬರ್, 16: ನಗರದ ಮದೀನಾ ಮಸ್ಜಿದ್‌ಯಲ್ಲಿ ಜಮಾತೆ ಇಸ್ಲಾಮೀ ಹಿಂದ್ ಹಾಗೂ ಮದೀನಾ ಮಸ್ಜಿದ್ ಆಶ್ರಯದಲ್ಲಿ ಸೀರತ್ ಪ್ರಯುಕ್ತ ಸಾರ್ವಜನಿಕ ಮಸೀದಿ ದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತನಾಡಿದ ಸ್ವಾಮೀಜಿಯೊಬ್ಬರು ಭಾವೈಕ್ಯತೆ ಸಾರುವ ಪ್ರಮುಖ ಮಾಹಿತಿಯೊಂದನ್ನು ಬಿಚ್ಚಿಟ್ಟಿದ್ದಾರೆ.
ಸಾರ್ವಜನಿಕ ಮಸೀದಿ ದರ್ಶನದಿಂದ ಹಿಂದೂ & ಮುಸ್ಲಿಂರ ಭಾವೈಕ್ಯತೆ ಹಿಮ್ಮಡಿಗೊಳಿಸುತ್ತದೆ ಎಂದು ಹರವೆ ವಿರಕ್ತ ಮಠಾಧ್ಯಕ್ಷರಾದ ಶ್ರೀ ಸರ್ಪಭೂಷಣಸ್ವಾಮೀಜಿ ತಿಳಿಸಿದರು. ನಗರದ ಡಿವಿಯೇಷನ್ ರಸ್ತೆಯಲ್ಲಿರುವ ಮದೀನಾ ಮಸ್ಜಿದ್‌ಯಲ್ಲಿ ಜಮಾತೆ ಇಸ್ಲಾಮೀ ಹಿಂದ್ ಹಾಗೂ ಮದೀನಾ ಮಸ್ಜಿದ್ ಆಶ್ರಯದಲ್ಲಿ ಸೀರತ್ ಪ್ರಯುಕ್ತ ಸಾರ್ವಜನಿಕ ಮಸೀದಿ ದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ದೇವಸ್ಥಾನಗಳು, ಚರ್ಚ್‌ಗಳಲ್ಲಿ ದೇವರು ಇದ್ದಾನೆ ಎಂದು ಪ್ರಾರ್ಥನೆ ಮಾಡುವಂತೆ ಮುಸ್ಲಿಂ ಸಮುದಾಯವರಿಗೆ ಮಸೀದಿಗಳಲ್ಲಿ ದೇವರು ಕಾಣುತ್ತದೆ. ಆದ್ದರಿಂದ ಅವರು ಮಸೀದಿಗಳಲ್ಲಿ ಪ್ರಾರ್ಥನೆ ಮಾಡುವ ಮೂಲಕ ತಮ್ಮ ಇಷ್ಟಾರ್ಥ ಸಿದ್ದಿಸಿಕೊಳ್ಳುತ್ತಾರೆ. ಆದೇ, ರೀತಿ ಹಿಂದೂಗಳು ದೇವಸ್ಥಾನಗಳಲ್ಲಿ, ಕ್ರೈಸ್ತರು ದೇವಾಲಯಗಳಲ್ಲಿ ಪ್ರಾರ್ಥಿಸುತ್ತಾರೆ.
ಹೀಗಾಗಿ ಮಸೀದಿಗಳು ಸಹ ಪುಣ್ಯ ಕ್ಷೇತ್ರಗಳಾಗಿದ್ದು, ಈ ನಿಟ್ಟಿನಲ್ಲಿ ಮಸೀದಿಗಳಿಗೆ ಸಾರ್ವಜನಿಕರಿಗೆ ಮುಕ್ತ ಪ್ರವೇಶ ದೊರೆತಾಗ ಇತರೇ ಧರ್ಮದವರಲ್ಲಿ ಇರುವ ತಪ್ಪು ಗ್ರಹಿಕೆ ಹಾಗೂ ಅಂತರ ದೂರ ಆಗುತ್ತದೆ. ಇದರಿಂದ ಪರಸ್ಪರ ಭಾವೈಕ್ಯತೆ, ಸಾಮರಸ್ಯ ಮೂಡುತ್ತದೆ ಎಂದು ತಿಳಿಸಿದರು.
ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಕಾರ್ಯದರ್ಶಿ ಜನಾಬ್ ಮಹಮ್ಮದ್ ಕುಂಞ ಮಾತನಾಡಿ, ಮಸೀದಿ ದರ್ಶನ ಎನ್ನುವುದು ಪ್ರತಿಯೊಬ್ಬ ಮನುಷ್ಯನಿಗೂ ತಿಳುವಳಿಕೆ ಮೂಡಿಸುವ ಕಾರ್ಯಕ್ರಮ ಆಗಿದೆ. ಯಾವುದೇ ಮನುಷ್ಯ ಆ ಧರ್ಮದ ಬಗ್ಗೆ ಅರಿವಿಲ್ಲದೇ ಅದರ ಪೂರ್ವ ಪರ ಚಿಂತನೆ ಇಲ್ಲದೇ ದ್ವೇಷ ಮಾಡುವ ಮನೋಭಾವನ್ನು ಬೆಳೆಸಿಕೊಳ್ಳುತ್ತಾನೆ. ಹೀಗಾಗಿ ಇದರ ತಿಳುವಳಿಕೆ ಮೂಡಿಸಲು ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ ಎಂದರು.
ಈ ವೇಳೆ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಎ.ಆರ್.ಕೃಷ್ಣಮುರ್ತಿ, ಎಚ್.ಎಂ.ಗಣೇಶ್ ಪ್ರಸಾದ್ ಸೇರಿದಂತೆ ಮತ್ತಿರರು ಉಪಸ್ಥಿತರಿದ್ದರು.
ಇನ್ನು ಮಸೀದಿ ಸಮಿತಿ ಅವರಿಂದ ಬಾಳೆ ಎಲೆಯಲ್ಲಿ ಹೋಳಿಗೆ ಊಟದ ಸಹ ಪಂಕ್ತಿ ಭೋಜನಾ ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗೆಯಿಂದ ಸಾಯಂಕಾಲದವರೆಗೂ ಸಾರ್ವಜನಿರಕರಿಗೆ ಮಸೀದಿ ದರ್ಶನ ನಡೆದಿರುವುದು ವಿಶೇಷ.












Click it and Unblock the Notifications