ಚಾಮರಾಜನಗರ: ದೊಡ್ಡಾಣೆ ಗ್ರಾಮಸ್ಥರ ಕಾಡುತ್ತಿರುವ ಜ್ವರ, ಶೀತ, ಕೆಮ್ಮು; ವೈದ್ಯರು ಹೇಳಿದ್ದೇನು?

ಚಾಮರಾಜನಗರ, ಜನವರಿ 28: ನಗರ ನಾಗರಿಕತೆಯಿಂದ ದೂರವಾಗಿ ಬೆಟ್ಟಗುಡ್ಡಗಳಾಚೆ ಅರಣ್ಯದಲ್ಲಿ ಯಾವುದೇ ರೋಗರುಜಿನವಿಲ್ಲದೆ ತಮ್ಮ ಪಾಡಿಗೆ ತಾವು ಎಂಬಂತೆ ಬದುಕುತ್ತಿದ್ದ ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರಬೆಟ್ಟ ಗ್ರಾಮ ಪಂಚಾಯಿತಿ ಮತ್ತು ಮಲೆ ಮಹದೇಶ್ವರ ವನ್ಯಜೀವಿಧಾಮ ವ್ಯಾಪ್ತಿಯ ದೊಡ್ಡಾಣೆ ಗ್ರಾಮದ ಆದಿವಾಸಿಗಳ ಗುಡಿಸಲುಗಳಲ್ಲೀಗ ಭಯದ ವಾತಾವರಣ ನಿರ್ಮಾಣವಾಗಿದೆ.

ಇಲ್ಲಿನ ವೃದ್ಧರು, ಮಕ್ಕಳು ಸೇರಿದಂತೆ ಸುಮಾರು ಅರವತ್ತಕ್ಕೂ ಹೆಚ್ಚು ಮಂದಿ ಜ್ವರ, ಶೀತ, ಕೆಮ್ಮು, ನೆಗಡಿ, ಮೈಕೈ ನೋವು, ತಲೆನೋವು ಹೀಗೆ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಈಗಾಗಲೇ ಕೊರೊನಾ ಸಂಕಷ್ಟದಲ್ಲಿರುವಾಗಲೇ ದೊಡ್ಡಾಣೆ ಗ್ರಾಮದಲ್ಲಿ ಇಂತಹದೊಂದು ಅನಾರೋಗ್ಯ ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.

 ರಸ್ತೆ ಸಂಪರ್ಕವಿಲ್ಲದ ಕುಗ್ರಾಮ

ರಸ್ತೆ ಸಂಪರ್ಕವಿಲ್ಲದ ಕುಗ್ರಾಮ

ಬಹುಶಃ ಬೇರೆ ಯಾವುದೇ ಗ್ರಾಮದಲ್ಲಿ ಇಂತಹದೊಂದು ಪರಿಸ್ಥಿತಿ ತಲೆದೋರಿದ್ದರೆ ಅದನ್ನು ಸುಲಭವಾಗಿ ನಿಭಾಯಿಸಬಹುದಾಗಿತ್ತು. ಆದರೆ ದೊಡ್ಡಾಣೆ ಗ್ರಾಮಕ್ಕೆ ತೆರಳುವುದೇ ಒಂದು ಸಾಹಸವಾಗಿದೆ. ಏಕೆಂದರೆ ಇದೊಂದು ಕಾಡಂಚಿನಲ್ಲಿರುವ, ಸಮರ್ಪಕ ರಸ್ತೆ ಸೌಲಭ್ಯವಿಲ್ಲದ ಕುಗ್ರಾಮವಾಗಿದೆ.

ಇಲ್ಲಿ ಯಾರಿಗಾದರೂ ಆರೋಗ್ಯದ ಸಮಸ್ಯೆ ಕಾಣಿಸಿಕೊಂಡರೆ ಗ್ರಾಮದ ಇತರರು ಸೇರಿ ಅನಾರೋಗ್ಯ ಪೀಡಿತ ವ್ಯಕ್ತಿಯನ್ನು ಡೋಲಿಕಟ್ಟಿ ಹೊತ್ತುಕೊಂಡು ಬೆಟ್ಟ ಇಳಿಯುತ್ತಿದ್ದರು. ಆದರೆ ಗ್ರಾಮದ ಹೆಚ್ಚಿನ ಜನರು ಆರೋಗ್ಯ ಸರಿಯಿಲ್ಲದೆ ಹಾಸಿಗೆ ಹಿಡಿದಿರುವುದರಿಂದ ಆಸ್ಪತ್ರೆಗೆ ಕರೆ ತರುವವರು ಇಲ್ಲದಾಗಿದೆ.

 ದೊಡ್ಡಾಣಿಗೆ ದೌಡಾಯಿಸಿದ ವೈದ್ಯರು

ದೊಡ್ಡಾಣಿಗೆ ದೌಡಾಯಿಸಿದ ವೈದ್ಯರು

ಆದುದರಿಂದ ತಕ್ಷಣಕ್ಕೆ ಅಲ್ಲಿಂದ ಜನರನ್ನು ಕರೆತಂದು ಆಸ್ಪತ್ರೆಗೆ ದಾಖಲಿಸುವುದಾಗಲೀ, ಅಲ್ಲಿಗೆ ತೆರಳಿ ಚಿಕಿತ್ಸೆ ನೀಡುವುದಾಗಲೀ ಸುಲಭದ ಕೆಲಸವಲ್ಲ. ಆದರೂ ಗ್ರಾಮದಲ್ಲಿ ಜನ ಅನಾರೋಗ್ಯದಿಂದ ಬಳಲುತ್ತಿರುವ ವಿಚಾರ ಹೊರ ಬರುತ್ತಿದ್ದಂತೆಯೇ ಮಾರ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಾದ ಡಾ. ರಾಜೇಶ್ ಹಾಗೂ ಆರೋಗ್ಯ ಸಿಬ್ಬಂದಿಯನ್ನೊಳಗೊಂಡ ತಂಡ ಭೇಟಿ ನೀಡಿ ಅನಾರೋಗ್ಯದಿಂದ ಬಳಲುತ್ತಿದ್ದ ಗ್ರಾಮಸ್ಥರ ಆರೋಗ್ಯ ತಪಾಸಣೆ ನಡೆಸಿ ಚಿಕಿತ್ಸೆ, ಔಷಧೋಪಚಾರ ಕೈಗೊಂಡಿರುವುದು ಸಮಾಧಾನ ತಂದಿದೆ.

ಸದ್ಯ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ಅರಣ್ಯ ಇಲಾಖೆಯ ವಾಹನದಲ್ಲಿ ಕಡಿದಾದ ರಸ್ತೆಯಲ್ಲಿ ಜೀವ ಭಯದೊಂದಿಗೆ ತೆರಳಿದ್ದು, ಅಲ್ಲಿನ ಗುಡಿಸಲುಗಳಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದವರಿಗೆ ಔಷಧಿಗಳನ್ನು ನೀಡಿದ್ದಾರೆ. ಜತೆಗೆ ಗ್ರಾಮಸ್ಥರ ಮತ್ತು ಮಕ್ಕಳ ಆರೋಗ್ಯ ತಪಾಸಣೆ ನಡೆಸಿದ್ದಾರೆ.

 ಕೋವಿಡ್ ವರದಿ ಬರಬೇಕಿದೆ

ಕೋವಿಡ್ ವರದಿ ಬರಬೇಕಿದೆ

ಆರೋಗ್ಯ ಇಲಾಖೆ ಸಿಬ್ಬಂದಿ ಗ್ರಾಮದಲ್ಲಿ ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಗ್ರಾಮಸ್ಥರಿಗೆ ಸೂಚನೆ ನಡೆಸಿದ್ದಾರೆ. ಇದರೊಂದಿಗೆ ರೋಗಿಗಳ ಕೋವಿಡ್ ಪರೀಕ್ಷೆ ಮಾಡಿದ್ದು, ಅವರು ಕೊರೊನಾ ಕಾರಣದಿಂದ ಬಳಲುತ್ತಿದ್ದಾರೆಯೇ ಅಥವಾ ಇತರೆ ಸಾಂಕ್ರಾಮಿಕ ರೋಗದಿಂದ ಬಳಲುತ್ತಿದ್ದಾರೆಯೇ ಎಂಬುದು ಕೋವಿಡ್ ವರದಿ ಬಂದ ಬಳಿಕ ಗೊತ್ತಾಗಬೇಕಿದೆ.

ಇನ್ನು ದೊಡ್ಡಾಣೆ ಗ್ರಾಮದಲ್ಲಿ ಜನ ಅನಾರೋಗ್ಯಕ್ಕೀಡಾಗಿರುವ ಕುರಿತಂತೆ ಮಾತನಾಡಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ವಿಶ್ವೇಶ್ವರಯ್ಯ, "ಗ್ರಾಮದಲ್ಲಿನ ಅನಾರೋಗ್ಯ ಪೀಡಿತರಿಂದ ಪರೀಕ್ಷೆಗಾಗಿ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಇನ್ನು ಮುಂದೆ ಪ್ರತೀ ಶುಕ್ರವಾರ ಅಥವಾ ಶನಿವಾರದಂದು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ನೆರವಿನೊಂದಿಗೆ ಗ್ರಾಮದಲ್ಲೇ ಆರೋಗ್ಯ ತಪಾಸಣೆ ನಡೆಸಿ ಔಷಧೋಪಚಾರದ ಕ್ರಮಗಳನ್ನು ಆರೋಗ್ಯ ಇಲಾಖೆ ಕೈಗೊಳ್ಳಲಿದೆ,'' ಎಂದು ತಿಳಿಸಿದ್ದಾರೆ.

 ಆಸ್ಪತ್ರೆಗೆ ತೆರಳುವುದೇ ಸಾಹಸ

ಆಸ್ಪತ್ರೆಗೆ ತೆರಳುವುದೇ ಸಾಹಸ

ಇಷ್ಟಕ್ಕೂ ದೊಡ್ಡಾಣೆ ಗ್ರಾಮದಲ್ಲಿ ಜನ ಕಾಯಿಲೆಯಿಂದ ಬಳಲುತ್ತಿದ್ದರೂ ಆಸ್ಪತ್ರೆಗೆ ಏಕೆ ತೆರಳಿಲ್ಲ ಅದಕ್ಕಿಂತ ಹೆಚ್ಚಾಗಿ ವೈದ್ಯರ ತಂಡ ಇಲ್ಲಿಗೇಕೆ ಭೇಟಿ ನೀಡಿಲ್ಲ ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೋದರೆ ಈ ಗ್ರಾಮವು ಯಾವುದೇ ಸೌಲಭ್ಯವಿಲ್ಲದ ಕುಗ್ರಾಮವಾಗಿರುವುದೇ ಮುಖ್ಯ ಕಾರಣವಾಗಿದೆ.

ಗ್ರಾಮಕ್ಕೆ ತೆರಳಲು ರಸ್ತೆ ಸಂಪರ್ಕವೂ ಇಲ್ಲದಾಗಿದೆ. ಬೆಟ್ಟ ಗುಡ್ಡಗಳ ಕಡಿದಾದ ಹೊಂಡ, ಗುಂಡಿಗಳ ರಸ್ತೆಯಲ್ಲಿ ಸಾಗಬೇಕು. ಗ್ರಾಮಸ್ಥರು ನಡೆದುಕೊಂಡೇ ಇಲ್ಲಿಗೆ ತೆರಳುತ್ತಾರೆ. ಸಣ್ಣಪುಟ್ಟ ರೋಗಗಳಿಗೆ ಸ್ಥಳೀಯ ನಾಟಿ ಔಷಧಿಗಳನ್ನೇ ಮಾಡಿಕೊಳ್ಳುವ ಗ್ರಾಮಸ್ಥರು, ಕಾಯಿಲೆ ಉಲ್ಬಣಗೊಂಡಾಗ ರೋಗಿಯನ್ನು ಗ್ರಾಮದಿಂದ ಸುಮಾರು 12 ಕಿ.ಮೀ ದೂರದಲ್ಲಿರುವ ಮಾರ್ಟಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಡೋಲಿ ಕಟ್ಟಿ ಹೊತ್ತು ತರುತ್ತಾರೆ. ಹೀಗೆ ಒಬ್ಬ ರೋಗಿಯನ್ನು ಹೊತ್ತು ಆಸ್ಪತ್ರೆಗೆ ತರಬೇಕಾದರೆ ಸುಮಾರು ಹತ್ತು ಮಂದಿಯಾದರೂ ಬೇಕಾಗುತ್ತಾರೆ. ಇಲ್ಲಿ ಒಗ್ಗಟ್ಟು ಇರುವುದರಿಂದ ಗ್ರಾಮಸ್ಥರು ಒಬ್ಬರಿಗೊಬ್ಬರು ಕಷ್ಟಕ್ಕೆ ಸ್ಪಂದಿಸುತ್ತಾ ಸಹ ಜೀವಿಗಳಾಗಿ ಬದುಕುತ್ತಿದ್ದಾರೆ. ಆದರೆ ಇದೀಗ ಕಾಣಿಸಿಕೊಂಡಿರುವ ಜ್ವರ, ನೆಗಡಿ, ಕೆಮ್ಮು ಜನರ ಜಂಘಾಬಲವನ್ನೇ ಹುದುಗಿಸಿದೆ. ಹೀಗಾಗಿ ಗ್ರಾಮದಿಂದ ಹೊರಗೆ ಹೋಗಲಾಗದ ಸ್ಥಿತಿ ನಿರ್ಮಾಣವಾಗಿದೆ.

 ಡಿಸಿಎಫ್ ಏಡುಕೊಂಡಲು ಸ್ಪಂದನೆ

ಡಿಸಿಎಫ್ ಏಡುಕೊಂಡಲು ಸ್ಪಂದನೆ

ಅರಣ್ಯ ವ್ಯಾಪ್ತಿಯಲ್ಲಿರುವ ಕಾರಣ ದೊಡ್ಡಾಣೆ ಗ್ರಾಮದ ರಸ್ತೆಗೆ ಡಾಂಬರೀಕರಣ ಮಾಡಲು ಕಾನೂನು ತೊಡಕಿದೆ. ಹಾಗಾಗಿ ಮಳೆಗೆ ಕುಸಿದ, ಬಿಸಿಲಿಗೆ ಬಿರುಕು ಬಿಟ್ಟ ಕಚ್ಚಾ ರಸ್ತೆಯೇ ಸಂಚಾರ ಮಾಡಬೇಕಾಗಿದೆ. ಇದೀಗ ಈ ಗ್ರಾಮದ ಜನರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸವನ್ನು ಚಾಮರಾಜನಗರ ಜಿಲ್ಲಾಡಳಿತ ಮಾಡಿದೆ. ಇನ್ನೊಂದೆಡೆ ಮಲೆ ಮಹದೇಶ್ವರ ವನ್ಯಜೀವಿ ಧಾಮದ ಡಿಸಿಎಫ್ ಏಡುಕೊಂಡಲು ಅವರು ದೊಡ್ಡಾಣೆ ಗ್ರಾಮಸ್ಥರಿಗೆ ಚಿಕಿತ್ಸೆ ನೀಡಲು ಆರೋಗ್ಯ ಇಲಾಖೆಗೆ ಅರಣ್ಯ ಇಲಾಖೆಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು. ವೈದ್ಯರು ತಿಳಿಸಿದ ದಿನದಂದು ವಾಹನ ಸೌಲಭ್ಯ ಒದಗಿಸಿಕೊಡಲಾಗುವುದಾಗಿ ಹೇಳಿದ್ದಾರೆ.

ಒಟ್ಟಾರೆಯಾಗಿ ದೊಡ್ಡಾಣೆ ಗ್ರಾಮದ ಜನರನ್ನು ಕಾಡುತ್ತಿರುವ ಜ್ವರ ಯಾವುದು ಎಂಬುದು ತಿಳಿಯ ಬೇಕಾದರೆ ರೋಗಿಗಳಿಂದ ಸಂಗ್ರಹಿಸಿರುವ ಮಾದರಿಯ ವರದಿ ಬರಬೇಕಿದೆ. ಅಲ್ಲಿ ತನಕ ಕಾಯಬೇಕಾಗಿದೆ.

Recommended Video

      Russia Ukraine ಸಂಘರ್ಷದಿಂದ ಭಾರತಕ್ಕಿರುವ ಅಪಾಯವೇನು? | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+