ಕಳ್ಳಬೇಟೆ ತಡೆ ಶಿಬಿರದ ಗುತ್ತಿಗೆ ಸಿಬ್ಬಂದಿಗೆ ನಟ ದರ್ಶನ್ ನೆರವು
ಚಾಮರಾಜನಗರ, ಡಿಸೆಂಬರ್ 13: ಇತ್ತೀಚೆಗಿನ ದಿನಗಳಲ್ಲಿ ಅರಣ್ಯಗಳಲ್ಲಿ ವನ್ಯಜೀವಿಗಳ ಬೇಟೆ, ಮರಗಳ ಕಳ್ಳಸಾಗಣೆ ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಅಪರಾಧ ಚಟುವಟಿಕೆಗಳು ನಡೆಯುತ್ತಿದ್ದು, ಇಂತಹ ಸಂದರ್ಭ ಅರಣ್ಯ ಸಿಬ್ಬಂದಿ ತಮ್ಮ ಪ್ರಾಣದ ಹಂಗನ್ನು ತೊರೆದು ಬೇಟೆಗಾರರ ವಿರುದ್ಧ ಹೋರಾಡಬೇಕಾಗುತ್ತದೆ. ಇಂತಹ ಸಂದರ್ಭ ಪ್ರಾಣ ಕಳೆದುಕೊಂಡ ನಿದರ್ಶನವೂ ಇದೆ.
ಇಂತಹ ಸಿಬ್ಬಂದಿಗೆ ಆತ್ಮವಿಶ್ವಾಸ ತುಂಬುವುದು ಮತ್ತು ಅವರಿಗೆ ಭದ್ರತೆ ಕಲ್ಪಿಸುವುದು ಅಗತ್ಯವಾಗಿದೆ. ಇದುವರೆಗೆ ಇಂತಹ ಸಿಬ್ಬಂದಿಗಳ ಬೆನ್ನಿಗೆ ನಿಂತವರು ಕಡಿಮೆಯೇ. ಆದರೆ ಇದೀಗ ನಟ ದರ್ಶನ್ ಅವರು ಹನೂರು ಸಮೀಪದ ಮಲೆ ಮಹದೇಶ್ವರ ವನ್ಯಜೀವಿಧಾಮದ ಕಳ್ಳಬೇಟೆ ತಡೆ ಶಿಬಿರದ ಸಿಬ್ಬಂದಿಗೆ ವೈಯಕ್ತಿಕವಾಗಿ 12 ಲಕ್ಷ ರೂ. ಧನಸಹಾಯ ನೀಡುವ ಮೂಲಕ ಗಮನಸೆಳೆದಿದ್ದಾರೆ.
ಇಷ್ಟಕ್ಕೂ ಈ ಸಿಬ್ಬಂದಿಗಳು ಖಾಯಂ ನೌಕರರಲ್ಲ. ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದು ಜೀವನ ನಿರ್ವಹಣೆಯೇ ಕಷ್ಟವಾಗಿದ್ದು ಇಂತಹವರ ಸಹಾಯಕ್ಕೆ ನಟ ದರ್ಶನ್ ಬಂದಿರುವುದು ಸಿಬ್ಬಂದಿಗೆ ಆತ್ಮವಿಶ್ವಾಸ ತುಂಬಿದಂತಾಗಿದೆ.

ಮಲೆ ಮಹದೇಶ್ವರ ವನ್ಯಜೀವಿಧಾಮಕ್ಕೆ ಭೇಟಿ ನೀಡಿದ ನಟ ದರ್ಶನ್ ಸಿಬ್ಬಂದಿಗೆ ಧನಸಹಾಯ ನೀಡಿ ಮಾತನಾಡಿ ಕುಟುಂಬ, ಜೀವದ ಹಂಗು ತೊರೆದು ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿ ತೊಡಗಿರುವ ಸಿಬ್ಬಂದಿ ಸೇವೆ ಶ್ಲಾಘನೀಯವಾಗಿದೆ.
ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ನೌಕರರಲ್ಲಿನ ಅಭದ್ರತೆಯನ್ನು ಹೋಗಲಾಡಿಸಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕಿದೆ. ತುರ್ತು ಸಂದರ್ಭ ಹಾಗೂ ಅವರಿಗೆ ಆಪತ್ತು ಎದುರಾದ ಸಂದರ್ಭದಲ್ಲಿ ಅವರ ಕುಟುಂಬಕ್ಕೆ ನೆರವಾಗುವ ದೃಷ್ಟಿಯಿಂದ ಈ ಸಹಾಯ ಮಾಡುತ್ತಿರುವುದಾಗಿ ಹೇಳಿದರಲ್ಲದೆ, ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯ ಬಗ್ಗೆ ಆಸಕ್ತಿಯಿರುವ ಮತ್ತಷ್ಟು ಸೇವಾ ಮನೋಭಾನೆಯಿರುವ ದಾನಿಗಳನ್ನು ಸಂಪರ್ಕಿಸಿ ಅವರಿಂದಲೂ ನೆರವು ಕೊಡಿಸುವ ಪ್ರಯತ್ನ ಮಾಡುವುದಾಗಿ ಇದೇ ವೇಳೆ ತಿಳಿಸಿದರು.

ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲು, ವಲಯ ಅರಣ್ಯಾಧಿಕಾರಿ ರಾಜೇಶ್ ಮತ್ತು ಸಿಬ್ಬಂದಿ ಈ ವೇಳೆ ಜತೆಗಿದ್ದರು.












Click it and Unblock the Notifications