ಬೀದರ್; ಬಿಜೆಪಿ ಟಿಕೆಟ್ ಕೈತಪ್ಪಿದ ಸೂರ್ಯಕಾಂತ ನಾಗಮಾರಪಳ್ಳಿ ಜೆಡಿಎಸ್‌ಗೆ
ಬೀದರ್, ಏಪ್ರಿಲ್ 17; ಬಿಜೆಪಿ ಟಿಕೆಟ್ ವಂಚಿತ ನಾಯಕರ ಪಕ್ಷಾಂತರ ಪರ್ವ ಮುಂದುವರೆದಿದೆ. ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಬಳಿಕ ಸೂರ್ಯಕಾಂತ ನಾಗಮಾರಪಳ್ಳಿ ಬಿಜೆಪಿ ತೊರೆದಿದ್ದಾರೆ. ಜೆಡಿಎಸ್ ಪಕ್ಷ ಸೇರಿರುವ ಅವರು ಮೇ 10ರಂದು ನಡೆಯುವ ವಿಧಾನಸಭೆ ಚುನಾವಣೆಗೆ ಬೀದರ್ ಉತ್ತರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.
ಸೂರ್ಯಕಾಂತ ನಾಗಮಾರಪಳ್ಳಿ ಭಾನುವಾರ ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್ ಪಕ್ಷವನ್ನು ಸೇರಿದರು. ಇದಕ್ಕೂ ಮೊದಲು ಅಭಿಮಾನಿಗಳು, ಕಾರ್ಯಕರ್ತರ ಜೊತೆ ಅವರು ಸಭೆ ನಡೆಸಿ, ಜೆಡಿಎಸ್ ಪಕ್ಷ ಸೇರುವ ತೀರ್ಮಾನವನ್ನು ಕೈಗೊಂಡಿದ್ದರು. ಬಳಿಕ ಬೀದರ್ ಜಿಲ್ಲೆಯ ಜೆಡಿಎಸ್ ನಾಯಕ ಬಂಡೆಪ್ಪ ಕಾಶೆಂಪೂರ ಭೇಟಿ ಮಾಡಿದ್ದರು.

ಬೀದರ್ ಉತ್ತರ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಸೂರ್ಯಕಾಂತ ನಾಗಮಾರಪಳ್ಳಿಗೆ ಬಿಜೆಪಿ ಟಿಕೆಟ್ ಕೈತಪ್ಪಿತ್ತು. ಈಶ್ವರ್ ಸಿಂಗ್ ಠಾಕೂರ್‌ಗೆ ಪಕ್ಷ ಟಿಕೆಟ್ ನೀಡಿತ್ತು. ಇದರಿಂದ ಅಸಮಾಧಾನಗೊಂಡಿದ್ದ ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯರೂ ಆಗಿದ್ದ ಸೂರ್ಯಕಾಂತ ನಾಗಮಾರಪಳ್ಳಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು.
ಕಳೆದ ಚುನಾವಣೆಯಲ್ಲಿ ಸೋಲು; ಸೂರ್ಯಕಾಂತ ನಾಗಮಾರಪಳ್ಳಿ 2018ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬೀದರ್ ಕ್ಷೇತ್ರದದಲ್ಲಿ ಕಣಕ್ಕಿಳಿದಿದ್ದರು. 63,025 ಮತಗಳನ್ನು ಪಡೆದು 73,270 ಮತಗಳನ್ನು ಪಡೆದ ಬಿಜೆಪಿಯ ರಹೀಂ ಖಾನ್ ವಿರುದ್ಧ ಸೋಲು ಕಂಡಿದ್ದರು. ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿ ನಾಯಕರೇ ಸೂರ್ಯಕಾಂತ ನಾಗಮಾರಪಳ್ಳಿ ವಿರುದ್ಧ ಕೆಲಸ ಮಾಡಿದ್ದಾರೆ ಎಂದು ಪಕ್ಷದ ಕಾರ್ಯಕರ್ತರು ಆರೋಪ ಮಾಡುತ್ತಿದ್ದಾರೆ.

ಸೂರ್ಯಕಾಂತ ನಾಗಮಾರಪಳ್ಳಿ ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ, "ಬೀದರ್ ಜನತೆಯ ಆಸೆಯಂತೆ ಮತ್ತು ಕ್ಷೇತ್ರದ ಸಮಗ್ರ ಅಭಿವೃದ್ದಿಯನ್ನು ಬಯಸಿ ನಾನು ಜನತಾ ದಳ (ಜಾತ್ಯಾತೀತ) ಪಕ್ಷವನ್ನು ಸೇರಿಕೊಂಡಿರುವೆ. ಜೆಡಿಎಸ್ ಹಿರಿಯ ಮುಖಂಡರು ಮತ್ತು ಮುಂದಿನ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಹೆಚ್. ಡಿ. ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ನನ್ನ ಬೆಂಬಲಿಗರು, ಕಾರ್ಯಕರ್ತರು ಹಾಗೂ ಹಿತೈಷಿಗಳೊಂದಿಗೆ ಪಕ್ಷ ಸೇರ್ಪಡೆ ಜರುಗಿತು. ನಮ್ಮ ತಂದೆಯವರಾದ ಶ್ರೀ ಗುರುಪಾದಪ್ಪ ನಾಗಮಾರಪಳ್ಳಿ ಅವರ ಕನಸಿನಂತೆ ಬೀದರ್ ಅಭಿವೃದ್ದಿಗೆ ನಾನು ಕೆಲವು ಬೇಡಿಕೆಗಳನ್ನು ಶ್ರೀ ಕುಮಾರಸ್ವಾಮಿ ಅವರ ಮುಂದೆ ಇಟ್ಟಿದ್ದು, ಅವರು ಆ ಎಲ್ಲ ಬೇಡಿಕೆಗಳನ್ನು ನೆರವೇರಿಸುವುದಾಗಿ ಆಶ್ವಾಸನೆ ನೀಡೀದ್ದಾರೆ" ಎಂದು ಹೇಳಿದ್ದಾರೆ.
ಬೀದರ್ ಅಭಿವೃದ್ದಿಗೆ ಸೂರ್ಯಕಾಂತ ನಾಗಮಾರಪಳ್ಳಿ ಬೇಡಿಕೆಗಳು; ಜೆಡಿಎಸ್ ಪಕ್ಷ ಸೇರಿರುವ ಮಾಜಿ ಶಾಸಕ ಸೂರ್ಯಕಾಂತ ನಾಗಮಾರಪಳ್ಳಿ ಬೀದರ್ ಕ್ಷೇತ್ರದ ಅಭಿವೃದ್ಧಿಗಾಗಿ ಕೆಲವು ಬೇಡಿಕೆಗಳನ್ನು ಇಟ್ಟಿದ್ದಾರೆ. ಆ ಬೇಡಿಕೆಗಳು ಇಲ್ಲಿವೆ.
* ಗೋದಾವರಿ ಜಲಾನಯನದಲ್ಲಿ ಬೀದರ್ ಜಿಲ್ಲೆಗೆ ಹಂಚಿಕೆಯಾದ 22 ಟಿಎಂಸಿ ನೀರಿನ ಸಂಪೂರ್ಣ ಬಳಕೆಗೆ ಬ್ರಿಜ್ ಕಂ ಬ್ಯಾರೇಜು ನಿರ್ಮಾಣ. ತೆಲಂಗಾಣಕ್ಕೆ ಹರಿದು ಹೋಗುತ್ತಿರುವ ನೀರಿನ ಸದ್ಬಳಕೆಗೆ ಯೋಜನೆ ರೂಪಿಸುವುದು. ಬ್ರಿಜ್ ಕಂ ಬ್ಯಾರೇಜು ನಿರ್ಮಾಣದಿಂದ ನೀರಾವರಿಗೆ ಅನುಕೂಲ. ಅಂತರ್ಜಲ ಮಟ್ಟ ವೃದ್ಧಿ. ಗ್ರಾಮೀಣ ಪ್ರದೇಶದ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಸಿಗಲಿದೆ.
* ರಾಜ್ಯದಲ್ಲಿ ಎಲ್ಲಕ್ಕೂ ಅಧಿಕ ಸೋಯಾ ಬೆಳೆಯುವುದು ಬೀದರ್ ಜಿಲ್ಲೆಯಲ್ಲಿ. ಸೊಯಾ ಆಧಾರಿತ ಕೈಗಾರಿಕಾ ಘಟಕ ಸ್ಥಾಪಿಸಿದ್ದಲ್ಲಿ ಸೋಯಾ ಬೆಳೆಗಾರರಿಗೆ ಅನುಕೂಲ. ಉದ್ಯೋಗ ಸೃಷ್ಟಿ. ಜಿಲ್ಲೆಯ ರೈತರ ಆರ್ಥಿಕಾಭಿವೃದ್ಧಿಗೆ ಸಹಕಾರಿ.
* ಕೃಷಿ ಹೊರತುಪಡಿಸಿ ಬೇರೆ ಉದ್ಯೋಗಾವಕಾಶ ಇಲ್ಲದಿರುವುದರಿಂದ ಯುವಕರು ಉದ್ಯೋಗ ಅರಸಿ ದೊಡ್ಡ ದೊಡ್ಡ ನಗರಗಳಿಗೆ ಹೋಗುವುದು ಸಾಮಾನ್ಯವಾಗಿದೆ. ಇದನ್ನು ತಡೆಯಲು ಜಿಲ್ಲೆಯಲ್ಲಿಯೇ ಕೈಗಾರಿಕೆ ಸ್ಥಾಪಿಸುವುದು.
* ಬೀದರ್ ನಗರ ಮತ್ತು ಬೀದರ್ ಉತ್ತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ವಸತಿರಹಿತರಿಗೆ 5,000 ಮನೆ ನಿರ್ಮಿಸಿಕೊಡುವುದು.
* ಶತಮಾನ ಪೂರೈಸಿರುವ ಬೀದರ್ ನಗರದ ಮಿಷನ್ ಆಸ್ಪತ್ರೆಯನ್ನು ಆಧುನೀಕರಣಗೊಳಿಸುವುದು.
* ಬೀದರ್ ನಗರ ಸೇರಿದಂತೆ ನಗರಸಭೆ ವ್ಯಾಪ್ತಿಯಲ್ಲಿನ ಎಲ್ಲ ಬಡಾವಣೆಗಳಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಲು 1,000 ಕೋಟಿ ರೂ. ಅನುದಾನ ನೀಡುವುದು.
ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ಸೂರ್ಯಕಾಂತ ನಾಗಮಾರಪಳ್ಳಿ ಅವರು, 'ಇದು ನಾನು ಬೀದರ್‌ನ ಸಮಗ್ರ ಅಭಿವೃದಿಗೆ ಕಟ್ಟಿಕೊಂಡ ಕನಸಾಗಿದ್ದು, ಇದರ ಜೊತೆಗೆ ಇನ್ನೂ ಹತ್ತು ಹಲವಾರು ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಬೀದರ್ ಉತ್ತರ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸುವತ್ತ ಶ್ರಮಿಸುತ್ತೇನೆ. ಪ್ರೀತಿ, ವಿಶ್ವಾಸ, ಬೆಂಬಲ ಸದಾ ನನ್ನೊಂದಿಗಿರಲಿ' ಎಂದು ಮನವಿ ಮಾಡಿದ್ದಾರೆ.












Click it and Unblock the Notifications