HD Revanna: ಮಹಿಳೆ ಅಪಹರಣ ಪ್ರಕರಣ: ಎಚ್‌ಡಿ ರೇವಣ್ಣಾಗೆ ಬಿಗ್ ರಿಲೀಫ್- ಷರತ್ತು ಸಡಿಲಿಸಿದ ಕೋರ್ಟ್
ಬೆಂಗಳೂರು ಸೆಪ್ಟೆಂಬರ್ 3: ಮಹಿಳೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಎಚ್‌ಡಿ ರೇವಣ್ಣ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನು ಷರತ್ತು ಸಡಿಲಿಕೆಗೊಳಿಸಿದೆ. ಇದರಿಂದ ರೇವಣ್ಣ ಅವರಿಗೆ ಹೊರ ರಾಜ್ಯಗಳಿಗೆ ಸಂಚರಿಸಲು ಅನುಮತಿ ಸಿಕ್ಕಿದೆ.
ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು ಎಚ್‌ಡಿ ರೇವಣ್ಣ ಅವರಿಗೆ ಹೊರ ರಾಜ್ಯಗಳಿಗೆ ತೆರಳಲು ಅವಕಾಶ ನೀಡಿ ಆದೇಶ ಹೊರಡಿಸಿದ್ದಾರೆ. ಆದರೆ ಕೋರ್ಟ್ ಅನುಮತಿ ಇಲ್ಲದೆ ದೇಶ ಬಿಟ್ಟು ತೆರಳದಂತೆ ಷರತ್ತು ವಿಧಿಸಲಾಗಿದೆ. ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ ಮಹಿಳೆಯನ್ನು ಅಪಹರಿಸಿದ ಆರೋಪದ ಮೇಲೆ ಎಚ್.ಡಿ.ರೇವಣ್ಣ ಹಾಗೂ ಇತರರ ವಿರುದ್ಧ ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೇ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಏಪ್ರಿಲ್ 29 ರಂದು ಎಚ್.ಡಿ.ರೇವಣ್ಣ ಅವರನ್ನು ಎಸ್ ಐಟಿ ಬಂಧಿಸಿತ್ತು. ಬಳಿಕ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು.

ಏನಿದು ಪ್ರಕರಣ?
ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯನ್ನು ಅಪಹರಿಸಲಾಗಿದೆ ಎಂಬ ಆರೋಪ ಸಂಬಂಧ ಕೆಆರ್ ನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ಎಚ್‌ಡಿ ರೇವಣ್ಣ ಈಗಾಗಲೇ ಬಂಧನಕ್ಕೊಳಗಾಗಿದ್ದರು ಮತ್ತು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು.
ರೇವಣ್ಣ ಮತ್ತು ಅವರ ಪುತ್ರ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊಳೆನರಸೀಪುರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಏಪ್ರಿಲ್ 28 ರಂದು ದಾಖಲಿಸಲಾಗಿದೆ.
ಲೈಂಗಿಕ ದೌರ್ಜನ್ಯದ ವಿಡಿಯೋಗಳ ಪೆನ್‌ಡ್ರೈವ್ ಹಂಚಿಕೆ ಸಂಬಂಧ ಪ್ರಜ್ವಲ್ ಮಾಜಿ ಕಾರು ಚಾಲಕ ಕಾರ್ತಿಕ್ ಗೌಡ, ಪುಟ್ಟಿ ಆಲಿಯಾಸ್ ಪುಟ್ಟರಾಜು, ನವೀನ್ ಗೌಡ, ಚೇತನ್ ಸೇರಿ ಹಲವರ ವಿರುದ್ಧ ಹಾಸನದ ಸೈಬರ್ ಪೊಲೀಸ್ ಠಾಣೆಯಲ್ಲಿ ಏ.23ರಂದು ಪ್ರಕರಣ ದಾಖಲಾಗಿತ್ತು. ಬಳಿಕ ಈ ಪ್ರಕರಣವನ್ನು ಎಸ್‌ಐಟಿಗೆ ವರ್ಗಾಯಿಸಲಾಯಿತು.












Click it and Unblock the Notifications