Bengaluru 2nd Airport: ವಾರದಲ್ಲೇ ಸ್ಥಳ ಅಂತಿಮ, ಮಹತ್ವದ ಅಪ್ಡೇಟ್ ಕೊಟ್ಟ ಎಂಬಿ ಪಾಟೀಲ್
ಬೆಳಗಾವಿ, ಡಿಸೆಂಬರ್ 17: ಬೆಂಗಳೂರಿನಲ್ಲಿ ದೇಶದ ಪ್ರಮುಖ ಹಾಗೂ ಹಲವು ವಿಚಾರಗಳಿಗೆ ಖ್ಯಾತಿ ಪಡೆದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಾರ್ಷಿಕ ಪ್ರಯಾಣಿಕರ ಸಂಚಾರದಲ್ಲಿ ಭಾರೀ ಏರಿಕೆ ಕಂಡು ಬಂದಿದೆ. ಈ ಕಾರಣದಿಂದ ಬೆಂಗಳೂರಿನ ಸಮೀಪವೇ ಮತ್ತೊಂದು ಅಂತಾರಾಷ್ಟ್ರೀಯ ಏರ್‌ಪೋರ್ಟ್ (Bengaluru Second Airport) ಸ್ಥಾಪಿಸಬೇಕೆಂಬುದು ರಾಜ್ಯ ಸರ್ಕಾರದ ಉದ್ದೇಶವಾಗಿದೆ. ಇದರ ಮೊದಲ ಹಜ್ಜೆ ಇನ್ನೊಂದು ವಾರದಲ್ಲಿ ಅಂತಿಮಗೊಳ್ಳಲಿದೆ ಎಂದು ಸಚಿವರು ಅಧಿಕೃತ ಮಾಹಿತಿ ನೀಡಿದ್ದಾರೆ.
ಬೆಳಗಾವಿ ಚಳಿಗಾಲ ಅಧಿವೇಶನ ಕಲಾಪದಲ್ಲಿ ಜೆಡಿಎಸ್ ಸದಸ್ಯ ಟಿ ಎನ್ ಜವರಾಯಿಗೌಡರ ಪ್ರಶ್ನೆಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂಬಿ ಪಾಟೀಲ ಅವರು ಉತ್ತರಿಸಿದರು. ಬೆಂಗಳೂರಿನ ಜನರು ಮತ್ತು ಉದ್ಯಮಿಗಳ ಒಳಿತಿಗಾಗಿ 2ನೇ ವಿಮಾನ ನಿಲ್ದಾಣ ಅಭಿವೃದ್ಧಿಪಡಿಸಲಾಗುವುದು. ಇದಕ್ಕಾಗಿ ಬೆಂಗಳೂರಿನ ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ 4 ಸ್ಥಳಗಳನ್ನು ರಾಜ್ಯ ಸರ್ಕಾರ ಗುರುತಿಸಿದೆ.

ನಿಯಮಗಳ ಪ್ರಕಾರ, ಹೊಸ ವಿಮಾನ ನಿಲ್ದಾಣಕ್ಕೆ ಏನೆಲ್ಲ ಬೇಕು, ಜಾಗ ಅಂತಿಮ ಮಾಡುವ ಕುರಿತು ಐಡೆಕ್ ಸಂಸ್ಥೆ ಅಧ್ಯಯನ ನಡೆಸುತ್ತಿದೆ. ಇನ್ನೊಂದು ವಾರದಲ್ಲಿ ಅದರ ಸ್ಪಷ್ಟ ಚಿತ್ರಣ ಸಿಗಲಿದೆ. ನಂತರ ಎರಡು ವಾರಗಳಲ್ಲಿ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಆ ಸಂಸ್ಥೆಯು ಸ್ಥಳವನ್ನು ಆಖೈರು ಮಾಡುತ್ತದೆ. ಇದರಲ್ಲಿ ನನಗೇನೂ ಅಧಿಕಾರವಿಲ್ಲ ಎಂದು ಅವರು ವಿವರಿಸಿದರು.
ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಸ್ಥಳ ಆಖೈರಾದ ಮೇಲಷ್ಟೆ ಭೂ ಸ್ವಾಧೀನ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಆರಂಭಿಸಲಿದೆ. ಯಾವ ಜಾಗ ಅಂತಿಮವಾಗುತ್ತದೋ ಅಲ್ಲಿರುವ ಮಾರ್ಗಸೂಚಿ ದರದ ಪ್ರಕಾರ, ಜಮೀನು ಕಳೆದುಕೊಳ್ಳಲಿರುವ ರೈತರಿಗೆ ಸೂಕ್ತ ಪರಿಹಾರ ನೀಡಲಾಗುವುದು ಎಂದರು.

ವಿಮಾನಯಾನ ಪ್ರಯಾಣಿಕರ ದಟ್ಟಣೆ, ಕೈಗಾರಿಕಾ ಸಾಗಾಣಿಕೆ, ಸ್ಥಳದ ಭೌಗೋಳಿಕ ಲಕ್ಷಣ ಇತ್ಯಾದಿ ಅಂಶಗಳನ್ನು ಪರಿಗಣಿಸಲಾಗಿದೆ. ವಿಮಾನ ನಿಲ್ದಾಣ ಪ್ರಾಧಿಕಾರವು ಸ್ಥಳವನ್ನು ಪರಿಶೀಲಿಸಿ, ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಅವರು ತಿಳಿಸಿದರು.
ಈಗಾಗಲೇ ಬೆಂಗಳೂರಿನ ಸುತ್ತಮುತ್ತಲಿನ ಬಿಡದಿ, ನೆಲಮಂಗಲ, ತುಮಕೂರು ಮತ್ತು ರಾಮನಗರ ಕಡೆಗೆ ನಾಲ್ಕು ಕಡೆಗಳಲ್ಲಿ ಸ್ಥಳ ನಿಗದಿ ಮಾಡಲಾಗಿದೆ. ಯಾವ ಸ್ಥಳ ನಿಗದಿಯಾಗಲಿದೆ ಎಂಬುದರ ಕುತೂಹಲ ಹೆಚ್ಚಾಗಿದೆ.
ವಿವಿಧ ಸಂಘಟನೆಗಳು, ಸಾರ್ವಜನಿಕರ ಪೈಕಿ ಬಹುತೇಕರು ತುಮಕೂರು ರಸ್ತೆ ಕಡೆಗೆ ನೆಲಮಂಗಲ ಸಮೀಪ ನಿರ್ಮಿಸಬೇಕು ಎಂಬ ಒತ್ತಾಯಿಸುತ್ತಿದ್ದಾರೆ. ಸದ್ಯ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕಾಲ ಕೂಡಿ ಬಂದಿದ್ದು, ಇನ್ನೊಂದು ವಾರದಲ್ಲಿ ಜಾಗ ಅಂತಿಮ, ಯೋಜನೆ, ನಿರ್ಮಾಣದ ಅಧಿಕೃತ ಮಾಹಿತಿ ನಿರೀಕ್ಷಿಸಬಹುದಾಗಿದೆ.












Click it and Unblock the Notifications