Bengaluru: ಸ್ಪೇಸ್ ಪಾರ್ಕ್ ಸಹಿತ ಹಲವು ಯೋಜನೆಗಳಿಗೆ ವಿಶೇಷ ಪ್ರೋತ್ಸಾಹನಾ ನೀತಿ, ಇದೇ ವಾರ ಮಹತ್ವ ನಿರ್ಧಾರ ಘೋಷಣೆ: MB ಪಾಟೀಲ್
ಬೆಂಗಳೂರು, ಜುಲೈ 31: ಬೆಂಗಳೂರು ಹೊರ ವಲಯದಲ್ಲಿ ಬಾಹ್ಯಾಕಾಶ ಪಾರ್ಕ್, ವಿದ್ಯುನ್ಮಾನ ಬಿಡಿಭಾಗಗಳ ತಯಾರಿಕೆ ಪಾರ್ಕ್ ಸೇರಿದಂತೆ ಕೆಲವು ಯೋಜನೆಗಳ ಪ್ರಸ್ತಾವನೆ ಇದೆ. ಈ ಕೈಗಾರಿಕೆ ಯೋಜನೆಗಳಿಗೆ ರಾಜ್ಯ ಸರ್ಕಾರ ರಿಯಾಯಿತಿಗಳ ಕುರಿತ ನೀತಿ ರೂಪಿಸಲಿದೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಮಹತ್ವತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಮತ್ತು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ರಾಜ್ಯದ ಕೈಗಾರಿಕೆ ಹಾಗೂ ಐಟಿಬಿಟಿ ಎರಡು ಇಲಾಖೆಗಳ ಸಚಿವರ ನೇತೃತವದಲ್ಲಿ ಕೈಗಾರಿಕೆ ಯೋಜನೆಗಳು ಜಾರಿ ಕುರಿತು ಜಂಟಿ ಸಭೆ ನಡೆಯಿತು. ಈ ಯೋಜನೆಗಳ ಸಂಬಂಧ ಇನ್ನೊಂದು ವಾರದಲ್ಲಿ ಕೈಗಾರಿಕಾ ಮತ್ತು ಐಟಿ-ಬಿಟಿ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ವಿಸ್ತೃತ ಹೂಡಿಕೆ- ಪ್ರೋತ್ಸಾಹನಾ ನೀತಿಗೆ ಸಂಬಂಧಿಸಿದ ವರದಿ ಸಿದ್ಧಪಡಿಸಲು ನಿರ್ದೇಶಿಸಲಾಗಿದೆ. ಐಟಿ ಇಲಾಖೆಯು ಇಎಸ್‌ಡಿಎಂ ವಲಯಕ್ಕೆ ಸಂಬಂಧಿಸಿದಂತೆ ವಿಶೇಷ ಪ್ರೋತ್ಸಾಹನಾ ಕ್ರಮಗಳ ನೀತಿಯನ್ನು ರೂಪಿಸುತ್ತಿದೆ. ಇದಕ್ಕೆ ಪೂರಕವಾಗಿ ಕೈಗಾರಿಕಾ ಇಲಾಖೆ ಕೂಡ ವಿದ್ಯುನ್ಮಾನ ತಯಾರಿಕೆ ವಲಯದಲ್ಲಿ ಹೂಡಿಕೆ ಆಕರ್ಷಣೆಗೆ ಕಾರ್ಯತಂತ್ರ ರೂಪಿಸಬೇಕಾದ ಅವಶ್ಯಕತೆ ಇದೆ ಎಂಬುದು ಸೇರಿ ಅನೇಕ ವಿಷಯಗಳು ಚರ್ಚೆಗೆ ಬಂದವು.

ಸದ್ಯಕ್ಕೆ ನಮ್ಮಲ್ಲಿ ತಯಾರಾಗುತ್ತಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ಶೇಕಡ 44ರಷ್ಟು ಅಮೆರಿಕಕ್ಕೆ ರಫ್ತಾಗುತ್ತಿದೆ. ಇದರಲ್ಲಿ ಮೊದಲು ಶೇ.61ರಷ್ಟು ಪಾಲು ಹೊಂದಿದ್ದ ಚೀನಾದ ಪ್ರಮಾಣ ಈಗ ಶೇ.25ಕ್ಕೆ ಕುಸಿದಿದೆ. ಆದರೆ, ವಿಯಟ್ನಾಂನ ಪಾಲು ಮಾತ್ರ ಶೇ.50ರಷ್ಟಿದೆ. ಈ ಸ್ಪರ್ಧೆಯನ್ನು ಪರಿಗಣಿಸಿ ಬಂಡವಾಳವನ್ನು ಸೆಳೆಯಬೇಕಾಗಿದೆ. ಜೊತೆಗೆ ಸ್ಮಾರ್ಟ್‌ಫೋನ್ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕಾಗಿದೆ. ಇದಕ್ಕೆ ಪೂರಕವಾಗಿ ಈ ಕ್ಷೇತ್ರಕ್ಕೆ ಹಲವು ರಿಯಾಯಿತಿ ನೀಡಬೇಕಾಗಿದೆ ಎಂದು ಸಚಿವರಾದ ಎಂ ಬಿ ಪಾಟೀಲ್ ಅವರು ತಿಳಿಸಿದರು.
ಬಾಹ್ಯಾಕಾಶ ಪಾರ್ಕ್‌ಗೆ ಅಗತ್ಯ ಜಮೀನು
ಐಟಿ ಬಿಟಿ ಇಲಾಖೆಯು ದೇವನಹಳ್ಳಿ ಸಮೀಪದ ಆದಿನಾರಾಯಣ ಹೊಸಹಳ್ಳಿ ಅಥವಾ ಐಟಿಐಆರ್ ಪ್ರದೇಶದಲ್ಲಿ 100 ಎಕರೆಯಲ್ಲಿ ಸ್ಪೇಸ್ ಪಾರ್ಕ್, ಮೈಸೂರಿನ ಕೋಚನಹಳ್ಳಿ ಹಂತ-2ರಲ್ಲಿ 150 ಎಕರೆಯಲ್ಲಿ ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್ (ಪಿಸಿಬಿ) ಪಾರ್ಕ್, ಕ್ವಿನ್ ಸಿಟಿ / ಅಡಕನಹಳ್ಳಿ ಮತ್ತು ಕೋಚನಹಳ್ಳಿ ಎರಡೂ ಕಡೆಗಳಲ್ಲಿ ತಲಾ 100 ಎಕರೆಯಲ್ಲಿ ಗ್ಲೋಬಲ್ ಇನ್ನೋವೇಶನ್ ಸಿಟಿ, ಅಡಕನಹಳ್ಳಿ/ ಕೋಚನಹಳ್ಳಿಯಲ್ಲಿ 100 ಎಕರೆಯಲ್ಲಿ ಕಿಯೋನಿಕ್ಸ್ ಪ್ಲಗ್ ಮತ್ತು ಪ್ಲೇ ಸೌಲಭ್ಯ ಕೇಂದ್ರದ ಅಭಿವೃದ್ಧಿ ಮೂಲಕ 'ಗ್ಲೋಬಲ್ ಕೇಪಬಿಲಿಟಿ ಸೆಂಟರ್'ಗಳನ್ನು ಸ್ಥಾಪಿಸಲು ತೀರ್ಮಾನಿಸಲಾಗಿದೆ ಎಂದು ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ವಿವರಿಸಿದರು.
ಬೆಂಗಳೂರಿನ ಭಾಗವೇ ಆದ ಹೆಸರಘಟ್ಟದಲ್ಲಿ ಡ್ರೋನ್ ಪರೀಕ್ಷಾ ಕೇಂದ್ರ ಯೋಜನೆ ಅನುಷ್ಠಾನಕ್ಕೆ ತರಲಾಗುವುದು. ಅದಕ್ಕಾಗಿ ಸೂಕ್ತ ಜಾಗ ಹುಡುಕಿಡುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ.
ಡೇಟಾ ಸೈನ್ಸ್, ತಯಾರಿಕಾ ಸ್ಥಾವರಗಳು ಸೇರಿದಂತೆ ಕೈಗಾರಿಕೆಗಳು ಬೆಳೆಯಬೇಕೆಂದರೆ ವಿದ್ಯುತ್ ಮತ್ತು ನೀರಿನ ಭಾರೀ ಅಗತ್ಯವಿದೆ. ಹೀಗಾಗಿ ರಾಜ್ಯದಲ್ಲಿ ʻಕೈಗಾರಿಕಾ ನೀರು ಭದ್ರತಾ ಕಾಯ್ದೆʼಯನ್ನು (ಇಂಡಸ್ಟ್ರಿಯಲ್ ವಾಟರ್ ಸೆಕ್ಯುರಿಟಿ ಪಾಲಿಸಿ) ರೂಪಿಸುವ ಮತ್ತು ಕೈಗಾರಿಕಾ ಮರುಬಳಕೆ ವಿದ್ಯುತ್ ಉತ್ಪಾದನಾ ಪಾರ್ಕ್ ಸ್ಥಾಪಿಸುವ ಅಗತ್ಯ ಇದೆ. ನೈಸರ್ಗಿಕ ಅನಿಲದಿಂದ ವಿದ್ಯುತ್ ತಯಾರಿಸುವ ನಿಟ್ಟಿನಲ್ಲಿ ಗಂಬೀರವಾದ ಚರ್ಚೆ ಅಗತ್ಯ ಇದೆ. ಈ ಸಂಬಂಧ ಯೋಜನೆ ರೂಪಿಸುವಂತೆ ಇಬ್ಬರೂ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ನೀರು ಪೂರೈಕೆ ಯೋಜನೆಯಡಿಯಲ್ಲಿ ಉದ್ಯಮಗಳಿಗೆ ಶೇಕಡ 50ರಷ್ಟು ನೀರನ್ನು ನಾವು ಪೂರೈಸುತ್ತೇವೆ. ಉಳಿದ ಶೇಕಡ 50ರಷ್ಟನ್ನು ಕೈಗಾರಿಕೆಗಳೇ ಸಂಸ್ಕರಿಸಿ, ವ್ಯವಸ್ಥೆ ಮಾಡಿಕೊಳ್ಳಬೇಕು. ಕೆಐಎಡಿಬಿ ಕೈಗಾರಿಕಾ ಪ್ರದೇಶಗಳಿಗೆ ನೀರು ಪೂರೈಸಲು ಈಗಾಗಲೇ 2500 ಕೋಟಿ ರೂ. ವೆಚ್ಚದ ಯೋಜನೆ ರೂಪಿಸಲಾಗಿದೆ. ಅಂತಹ ಮಾದರಿಯ ಸಾಧ್ಯತೆಗಳ ಬಗ್ಗೆ ಗಂಭೀರ ಆಲೋಚನೆ ನಡೆದಿದೆ ಎಂದು ಪಾಟೀಲ ಅವರು ಮಾಹಿತಿ ನೀಡಿದ್ದಾರೆ.
ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಐಟಿಬಿಟಿ ಇಲಾಖೆ ಕಾರ್ಯದರ್ಶಿ ಏಕ್ ರೂಪ್ ಕೌರ್, ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ, ಕೆಐಎಡಿಬಿ ಸಿಇಒ ಡಾ.ಮಹೇಶ, ಐಟಿ ಇಲಾಖೆ ನಿರ್ದೇಶಕ ರಾಹುಲ್ ಸಂಕನೂರು ಸೇರಿದಂತೆ ಇತರ ಅಧಿಕಾರಿಗಳು ಸಭೆಯಲ್ಲಿ ಇದ್ದರು.












Click it and Unblock the Notifications