Vatal Nagaraj: ಇಂದು ಮೆಜೆಸ್ಟಿಕ್‌ನಲ್ಲಿ 1 ರೂ.ಗೆ ಮುದ್ದೆ ಮಾರಾಟ, ಮುಂದಿನ ವಾರ ಮದ್ಯಪ್ರಿಯರ ಪರ ಸಮರ
ಬೆಂಗಳೂರು, ಆಗಸ್ಟ್, 04: ಈಗಾಗಲೇ ದಿನಬಳಕೆ ವಸ್ತುಗಳ ದರ ಏರಿಕೆಯಿಂದ ಜನರು ಬೇಸತ್ತು ಹೋಗಿದ್ದಾರೆ. ಇದರ ಬೆನ್ನಲ್ಲೇ ಇದೀಗ ಹೋಟೆಲ್‌ಗಳಲ್ಲಿ ಊಟ, ತಿಂಡಿಗಳ ಬೆಲೆಯನ್ನು ಏರಿಸುವ ಮೂಲಕ ಗ್ರಾಹಕರಿಗೆ ಶಾಕ್ ನೀಡಲಾಗಿದೆ. ಇನ್ನು ಹೋಟೆಲ್ ಫುಡ್ ದರ ಏರಿಕೆ ಖಂಡಿಸಿ ವಾಟಾಳ್ ನಾಗರಾಜ್ ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ವಿನೂತನ ಪ್ರತಿಭಟನೆ ನಡೆಸಿದ್ದಾರೆ.
ಊಟ, ತಿಂಡಿ ದರ ಏರಿಕೆ ಹಿನ್ನೆಲೆ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ವಾಟಾಳ್ ನಾಗರಾಜ್ ಹೋಟೆಲ್ ಸಂಘದ ವಿರುದ್ಧ ವಿನೂತನ ಪ್ರತಿಭಟನೆ ನಡೆಸಿದ್ದಾರೆ. ಇದೇ ವೇಳೆ ಅವರು 1 ರೂಪಾಯಿ ಮುದ್ದೆ ಮಾರುವ ಮೂಲಕ ದರ ಏರಿಕೆಯ ಬಿಸಿ ವಿರುದ್ಧ ಸಮರ ಸಾರಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, ಹೋಟೆಲ್‌ಗಳಲ್ಲಿ ಊಟ, ತಿಂಡಿಗಳ ಬೆಲೆ ಏರಿಕೆ ಮಾಡಿರುವುದು ಖಂಡನೀಯವಾಗಿದೆ. ಇದರಿಂದ ಊಟದ ಜನರಿಗೆ ತುಂಬಾ ಕಷ್ಟ ಆಗುತ್ತಿದೆ. ಆದ್ದರಿಂದ ನಾವು ಇಂದು 1 ರೂಪಾಯಿಗೆ ಮುದ್ದೆ ಮಾರುವ ಮೂಲಕ ವಿನೂತನ ಪ್ರತಿಭಟನೆ ಮಾಡುತ್ತಿದ್ದೇವೆ ಎಂದರು.
ತರಕಾರಿ, ಹೋಟೆಲ್ ಫುಡ್ ಸೇರಿದಂತೆ ಎಣ್ಣೆ ಬೆಲೆ ಜಾಸ್ತಿಯಾಗುತ್ತಲೇ ಇದ್ದು, ಇದರಿಂದ ಜನಸಾಮಾನ್ಯರು ತುಂಬಾ ತೊಂದರೆ ಅನುಭವಿಸುವಂತಾಗಿದೆ. ಹಾಗೆಯೇ ಸೂಪರ್‌ಸ್ಟಾರ್ ಎಂಬ ಮದ್ಯಪಾನ ಪ್ರಿಯರೊಬ್ಬರು ನಮ್ಮಿಂದಲೇ ಸರ್ಕಾರ ನಡೆಯುತ್ತಿದೆ. ಆದರೆ ಎಣ್ಣೆ ದರ ಜಾಸ್ತಿ ಮಾಡಿ ನಮಗೇ ಅನ್ಯಾಯ ಮಾಡಿದ್ದಾರೆ. ನಮಗಾಗಿಯೂ ಪ್ರತಿಭಟನೆ ಮಾಡಿ ಅಂತಾ ನನ್ನ ಬಳಿ ಅಳಲು ತೋಡಿಕೊಂಡಿದ್ದರು. ಹೀಗಾಗಿ ಮದ್ಯ ಪ್ರಿಯರಿಗಾಗಿ ಮುಂದಿನ ವಾರ ಪ್ರತಿಭಟನೆ ಮಾಡುತ್ತೇನೆ ಎಂದರು.












Click it and Unblock the Notifications