ಬಿಬಿಎಂಪಿ ವಿರುದ್ದ ಬೀದಿ ಬದಿ ವ್ಯಾಪಾರಿಗಳಿಂದ ಪ್ರತಿಭಟನೆ
ಬೆಂಗಳೂರು ಜೂ. 16: ನಗರದ ಎಲ್ಲ ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ, ವ್ಯಾಪಾರ ಪ್ರಮಾಣಪತ್ರ ವಿತರಿಸುವುದು, ನಿಗದಿತ ಸಮಯಕ್ಕೆ ಸರಿಯಾಗಿ ಟಿವಿಸಿ ಸಭೆಯ ನಡೆಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಬೀದಿ ಬದಿ ವ್ಯಾಪಾರಿಗಳ ಸಂಘಟನೆ ವತಿಯಿಂದ ಗುರುವಾರದಂದು ಬಿಬಿಎಂಪಿ ಆವರಣದಲ್ಲಿ ಪ್ರತಿಭಟನೆ ನಡೆಯಿತು.
ಬಿಬಿಎಂಪಿ ಅಧಿಕಾರಿಗಳು ರಸ್ತೆ ಬದಿ ವ್ಯಾಪಾರಿಗಳು ಕೊರೋನಾ ಕಾಲದಲ್ಲಿ ಸಾಕಷ್ಟು ಆರ್ಥಿಕ ಸಂಕಷ್ಟ ಅನುಭವಿಸಿದರೂ ಸಹ ನಮ್ಮನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರ ಹಾಕಿದರು. ಎಲ್ಲ ಬೇಡಿಕೆಗಳನ್ನು ಕೂಡಲೇ ಈಡೇರಿಸುವಂತೆ ಪಟ್ಟು ಹಿಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಒಕ್ಕೂಟದ ರಾಜ್ಯಾಧ್ಯಕ್ಷ ರಂಗಸ್ವಾಮಿ ಅವರು, ''ಬಿಬಿಎಂಪಿ ವ್ಯಾಪ್ತಿಯಲ್ಲಿರು ಎಂಟು ವಲಯ ವ್ಯಾಪ್ತಿಗಳಲ್ಲಿ ಸರಿಯಾಗಿ ಪಟ್ಟಣ ವ್ಯಾಪಾರ ಸಮಿತಿ (ಟಿವಿಸಿ) ಸಭೆ ನಡೆಸಿ, ಬೀದಿ ಬದಿ ವ್ಯಾಪಾರಿಗಳ ಕುಂದು ಕೊರತೆ ಆಲಿಸುತ್ತಿಲ್ಲ. ಕೆಲವರಿಗಷ್ಟೇ ಗುರುತಿನ ಚೀಟಿ, ಪ್ರಮಾಣ ಪತ್ರ ನೀಡಿ ಕೈತೊಳೆದುಕೊಂಡಿದೆ. ವ್ಯಾಪಾರಿಗಳ ಸಮೀಕ್ಷೆಯ ಭರವಸೆ ಈಡೇರಿಸಿಲ್ಲ'' ಎಂದು ದೂರಿದರು.

ಸಾಲವ್ಯವಸ್ಥೆ ಕಲ್ಪಿಸಿ
ಬೀದಿ ಬದಿ ವ್ಯಾಪಾರಿಗಳಿಗೆಂದೆ ಸರ್ಕಾರ ಪಿಎಂ ಸ್ವನಿಧಿ ಯೋಜನೆ ಜಾರಿಗೊಳಿಸಿದೆ. ಇದರಿಂದ ಕಡಿಮೆ ಬಡ್ಡಿ ದರದಲ್ಲಿ ಬ್ಯಾಂಕುಗಳು ಸಾಲ ಕೊಡಬೇಕು. ಆದರೆ ಈ ಬಗ್ಗೆ ಕೇಳಿದರೆ ವ್ಯವಸ್ಥಾಪಕರು ಸ್ಪಂದಿಸುತ್ತಿಲ್ಲ. ಪಾಲಿಕೆ ವಲಯ ಆಯುಕ್ತರು ಟಿವಿಸಿ ಸಭೆ ಕರೆಯುತ್ತಿಲ್ಲ. ಈ ಮಧ್ಯೆ ವ್ಯಾಪಾರಿಗಳಿಗೆ ಪೊಲೀಸರಿಂದ ಸಾಕಷ್ಟು ಪ್ರಮಾಣದಲ್ಲಿ ತೊಂದರೆಯಾಗುತ್ತಿವೆ. ಈ ಎಲ್ಲ ಸಮಸ್ಯೆಗಳಿಗೆ ಬಿಬಿಎಂಪಿ ಪರಿಹಾರ ಒದಗಿಸಬೇಕು ಎಂದರು.
ಮಾರುಕಟ್ಟೆಗಳಲ್ಲಿ ವೆಂಡಿಂಗ್ ಝೋನ್, ನಾನ್ ವೆಂಡಿಂಗ್ ಝೋನ್ ಎಂದು ಪ್ರತ್ಯೇಕಿಸಿ ವ್ಯಾಪಾರಕ್ಕೆ ಅನುಮತಿ ನೀಡಬೇಕು. ಸಕಾಲಕ್ಕೆ ಟಿವಿಸಿ ಸಭೆ ನಡೆಸುವುದರ ಜತೆಗೆ ಟಿವಿಸಿ ಎಲ್ಲ ಸದಸ್ಯರು, ಬಿಬಿಎಂಪಿ ವಲಯ ಆಯುಕ್ತರು, ಪೊಲೀಸ್ ಮತ್ತು ಸಂಚಾರ ವಿಭಾಗದ ಪೊಲೀಸ್ ಆಯುಕ್ತರು, ಬ್ಯಾಂಕ್ ವ್ಯವಸ್ಥಾಪಕರು ಸೇರಿದಂತೆ ನಿಯಮದಲ್ಲಿ ಸೂಚಿಸಲಾಗಿರುವ ಎಲ್ಲ ಮುಖ್ಯಸ್ಥರು ಹಾಜರಾಗಿ ವ್ಯಾಪಾರಿಗಳ ಸಮಸ್ಯೆ ಆಲಿಸಿ ಪರಿಸಬೇಕು ಎಂದು ರಂಗಸ್ವಾಮಿ ಆಗ್ರಹಿಸಿದರು.
ಭರವಸೆ ನೀಡಿದ ಬಿಬಿಎಂಪಿ; ಜೂ.21ಕ್ಕೆ ಟಿವಿಸಿ ಸಭೆ?
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರ ಆಹ್ವಾನದ ಮೇರೆಗೆ ಮಾತುಕತೆ ನಡೆಸಿ ಪ್ರತಿಭಟನಾಕಾರರು 16 ಅಂಶಗಳು ಇರುವ ಮನವಿ ಪತ್ರವನ್ನು ಸಲ್ಲಿಸಿದರು. ಈ ವೇಳೆ ಮಾತನಾಡಿದ ಮುಖ್ಯ ಆಯುಕ್ತರು, ಜೂನ್ 21ರಂದು ನಗರದ ಎಂಟು ವಲಯಗಳಲ್ಲಿ ಟಿವಿಸಿ ಸಭೆ ನಡೆಸಲಾಗುವುದು. ಅಲ್ಲದೇ ಬೀದಿ ಬದಿ ವ್ಯಾಪಾರಿಗಳ ಎಲ್ಲ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ಪ್ರತಿಭಟನೆಯಲ್ಲಿ ಟಿವಿಸಿ ಸದಸ್ಯರಾದ ದೊಡ್ಡಣ್ಣ, ಮಹಮ್ಮದ್, ಮಂಜುನಾಥ್ ಹಾಗೂ ಒಕ್ಕೂಟದ ಇತರ ಸದಸ್ಯರು, ವಾರ್ಡ್ ಮಟ್ಟದ ಬೀದಿ ಬದಿ ವ್ಯಾಪಾರಿ ಸದಸ್ಯರು ಮತ್ತಿತರು ಪಾಲ್ಗೊಂಡಿದ್ದರು.












Click it and Unblock the Notifications