ಕೊರೊನಾ 3ನೇ ಅಲೆ ಎಚ್ಚರಿಕೆ; ಸೆರೊ ಸರ್ವೇಗೆ ಸರ್ಕಾರ ಯೋಜನೆ
ಬೆಂಗಳೂರು, ಜುಲೈ 07: ಕೊರೊನಾ ಮೂರನೇ ಅಲೆ ಎಚ್ಚರಿಕೆ ನಡುವೆ ಕೊರೊನಾ ಸೋಂಕಿನ ವಿರುದ್ಧ ಜನರಲ್ಲಿನ ರೋಗನಿರೋಧಕ ಶಕ್ತಿ ಪತ್ತೆಗೆ ರಾಜ್ಯ ಸರ್ಕಾರ ಸೆರೋ ಸಮೀಕ್ಷೆ ನಡೆಸಲು ಯೋಜನೆ ರೂಪಿಸಿದೆ.
ಮಂಗಳವಾರ ಈ ಕುರಿತು ಮಾಹಿತಿ ನೀಡಿರುವ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, "ಸೆರೊ ಸರ್ವೇ ಕುರಿತ ಚರ್ಚೆಗಳು ಪ್ರಾಥಮಿಕ ಹಂತದಲ್ಲಿವೆ. ನಗರದಲ್ಲಿ ಎಷ್ಟು ಜನರು ಕೊರೊನಾ ಸೋಂಕಿಗೆ ಪ್ರತಿಕಾಯಗಳನ್ನು ಬೆಳೆಸಿಕೊಂಡಿದ್ದಾರೆ ಎಂಬ ಬಗ್ಗೆ ಅಧ್ಯಯನ ನಡೆಸಲಾಗುತ್ತದೆ. ಬಿಬಿಎಂಪಿ ಕೂಡ ಬೆಂಗಳೂರಿನಲ್ಲಿ ಈ ಸಮೀಕ್ಷೆ ನಡೆಸುವ ಕುರಿತು ಯೋಜನೆ ರೂಪಿಸುತ್ತಿದೆ. ಆರ್ಥಿಕವಾಗಿ ಲಾಭದಾಯಕವಾಗಿದ್ದರೆ ಮಾತ್ರ ಸಮೀಕ್ಷೆ ಕೈಗೊಳ್ಳುತ್ತೇವೆ. ಅಂತಿಮ ನಿರ್ಧಾರ ಸರ್ಕಾರದ ಮೇಲಿದೆ" ಎಂದು ತಿಳಿಸಿದರು.
"ಕೊರೊನಾ ಸೋಂಕಿನ ವಿರುದ್ಧ ದೇಹದಲ್ಲಿನ ನಿರೋಧಕ ಶಕ್ತಿಯನ್ನು ಅಳೆಯುವ ಆಲೋಚನೆ ಇದೆ. ಮೊದಲ ಬಾರಿ ಸರ್ಕಾರ ಇಂಥ ಯೋಜನೆ ರೂಪಿಸುತ್ತಿದೆ" ಎಂದು ಅವರು ಹೇಳಿದರು.

"ಕೊರೊನಾ ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ವ್ಯಕ್ತಗೊಂಡಿದ್ದು, ಮಕ್ಕಳಲ್ಲಿ ಸೋಂಕು ನಿರ್ವಹಣೆಗೆ ಮಕ್ಕಳ ತಜ್ಞರ ಸಮಿತಿಯನ್ನು ಬಿಬಿಎಂಪಿ ರಚಿಸಲಿದೆ. ಈ ಕುರಿತು ವಿವರಗಳನ್ನು ಚರ್ಚಿಸಲಾಗುತ್ತಿದೆ" ಎಂದು ಹೇಳಿದರು.
ಕೊರೊನಾ ಮೂರನೇ ಅಲೆ ಮುಂಚಿತವಾಗಿ ಆಸ್ಪತ್ರೆಗಳನ್ನು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ನಗರದಲ್ಲಿ ಮಕ್ಕಳ ನಿಖರ ಸಂಖ್ಯೆಯನ್ನು ನಿರ್ಣಯಿಸಲು ಬಿಬಿಎಂಪಿ ಪ್ರಯತ್ನಿಸುತ್ತಿದೆ . ಮೊದಲು ವಯಸ್ಕ ಜನಸಂಖ್ಯೆಗೆ ಲಸಿಕೆ ಹಾಕಿದರೆ ಮೂರನೇ ತರಂಗದಲ್ಲಿ ಮಕ್ಕಳ ಮೇಲೆ ಪರಿಣಾಮ ಬೀರುವುದಿಲ್ಲ. ನಗರದಲ್ಲಿ ಶೇ. 50ರಷ್ಟು ವಯಸ್ಕ ಜನರು ಒಂದು ಡೋಸ್ ಲಸಿಕೆ ಪಡೆದಿದ್ದಾರೆ.
ಜುಲೈ ಅಂತ್ಯದ ವೇಳೆಗೆ ಈ ಪ್ರಮಾಣವನ್ನು ಶೇ 70ರಷ್ಟು ಹೆಚ್ಚಿಸುವ ಗುರಿ ಹೊಂದಿದ್ದೇವೆ ಎಂದು ಗುಪ್ತಾ ಹೇಳಿದರು. ಡೆಲ್ಟಾ ಪ್ಲಸ್ ರೂಪಾಂತರದ ಭಯದ ನಡುವೆ ಹೆಚ್ಚಿನ ಲ್ಯಾಬ್‌ಗಳನ್ನು ಜೆನೋಮ್ ಅನುಕ್ರಮಕ್ಕಾಗಿ ಬಳಸಲಾಗುತ್ತದೆ ಎಂದು ಮಾಹಿತಿ ನೀಡಿದರು.












Click it and Unblock the Notifications