ನೂರಾರು ಕೋಟಿ ಬೆಲೆ ಬಾಳುವ ಬಿಡಿಎ ಆಸ್ತಿ ಡಿನೋಟಿಫಿಕೇಷನ್: ಮಾಜಿ ಮುಖ್ಯಮಂತ್ರಿಗಳ ವಿರುದ್ಧ ಆರೋಪ
ರಾಜ್ಯದಲ್ಲಿ ಮತ್ತೆ ಡಿನೋಟಿಫಿಕೇಷನ್ ಹಗರಣ ಸದ್ದು ಮಾಡುವ ಸೂಚನೆ ಸಿಕ್ಕಿದೆ. ಇದೀಗ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ. ಕುಮಾರಸ್ವಾಮಿ ಮತ್ತು ಬಿಎಸ್ ಯಡಿಯೂರಪ್ಪ ಅವರ ಹೆಸರು ಕೇಳಿಬಂದಿದ್ದು, ಬೆಂಗಳೂರಿನ ಹೃದಯಭಾಗದಲ್ಲಿರುವ ನೂರಾರು ಕೋಟಿ ರೂಪಾಯಿ ಬೆಲೆ ಬಾಳುವ ಜಾಗವನ್ನು ಹೆಚ್‌ಡಿಕೆ ಮತ್ತು ಬಿಎಸ್‌ವೈ ಡಿನೋಟಿಫಿಕೇಷನ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ದಿನ.ಕಾಂ ನ್ಯೂಸ್ ವೆಬ್‌ಸೈಟ್ ಈ ಬಗ್ಗೆ ದಾಖಲೆ ಸಮೇತ ವರದಿ ಮಾಡಿದೆ.
2007ರಲ್ಲಿ ಬಿಜೆಪಿ ಜೊತೆಗೂಡಿ ಹೆಚ್‌ಡಿ ಕುಮಾರಸ್ವಾಮಿ 20-20 ಸರ್ಕಾರ ರಚನೆ ಮಾಡಿದ್ದ ಅವಧಿಯಲ್ಲಿ ನೂರಾರು ಕೋಟಿ ರೂಪಾಯಿ ಬೆಲೆ ಬಾಳುವ ಬಿಡಿಎ ಸ್ವತ್ತನ್ನು ಗುಳುಂ ಮಾಡಲು, ಹೆಚ್‌ಡಿ ಕುಮಾರಸ್ವಾಮಿ ಪ್ರಯತ್ನ ಮಾಡಿದ್ದು, ಕೊನೆಗೆ ಅದು ಬಿಎಸ್ ಯಡಿಯೂರಪ್ಪ ಸಿಎಂ ಆಗಿದ್ದ ಅವಧಿಯಲ್ಲಿ ಪ್ರಯತ್ನ ಯಶಸ್ವಿಯಾಗಿದೆ.

ಹಗರಣ ಶುರುವಾಗಿದ್ದು ಹೀಗೆ
2007ರಲ್ಲಿ ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಾಜಶೇಖರಯ್ಯ ಎನ್ನುವವರು ಅರ್ಜಿ ಕೊಡುವ ಮೂಲಕ, ಹಗರಣದ ಅಧ್ಯಾಯ ಶುರುವಾಗುತ್ತದೆ. 2007ರ ಆಗಸ್ಟ್ 22, ರಾಜಶೇಖರಯ್ಯ ಹೆಸರಿನ ವ್ಯಕ್ತಿಯೊಬ್ಬ ಬೆಂಗಳೂರಿನ ಗಂಗೇನಹಳ್ಳಿ (ಗಂಗಾನಗರ)ದಲ್ಲಿರುವ ನಮ್ಮ ಕುಟುಂಬಕ್ಕೆ ಸೇರಿದ 1 ಎಕರೆ 11 ಗುಂಟೆ ಜಮೀನನ್ನು ಬಿಡಿಎ ಒತ್ತುವರಿ ಮಾಡಿಕೊಂಡಿದ್ದು, ಡಿ ನೋಟಿಫಿಕೇಷನ್ ಮಾಡಿಕೊಡಬೇಕು ಎಂದು ಸಿಎಂ ಕಚೇರಿಗೆ ಅರ್ಜಿ ಕೊಡುತ್ತಾರೆ.
ಅಚ್ಚರಿ ಎಂದರೆ ಅದೇ ದಿನ ಸಿಎಂ ಆಗಿದ್ದ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸೆಕ್ರೆಟರಿಯಾಗಿದ್ದ ರಾಕೇಶ್ ಸಿಂಗ್ ನಗರಾಭಿವೃದ್ಧಿ ಪ್ರಾಧಿಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ ಸಿಎಂ ಪರವಾಗಿ ಪತ್ರ ಬರೆದು ಬೆಂಗಳೂರು ನಗರದ ಮೇಕ್ರಿ ಸರ್ಕಲ್ ಸಮೀಪದ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಗಂಗೇನಹಳ್ಳಿ (ಗಂಗಾನಗರ) 7/1ಬಿ, 7/1ಸಿ, 7/1ಡಿ ಮೂರು ಸರ್ವೆ ನಂಬರ್ ಗಳ ಒಟ್ಟು 1.11 ಎಕರೆ ಜಮೀನನ್ನು ಭೂಸ್ವಾಧೀನದಿಂದ ಕೈಬಿಡುವಂತೆ, ಮನವಿಯನ್ನು ಪರಿಶೀಲನೆ ಮಾಡಿ ಇಲಾಖೆ ಅಭಿಪ್ರಾಯದೊಂದಿಗೆ ಮುಖ್ಯಮಂತ್ರಿಯವರ ಅವಗಾಹನೆ/ಆದೇಶಕ್ಕೆ ಮಂಡಿಸುವಂತೆ ನಿರ್ದೇಶನ ನೀಡಲಾಗಿತ್ತು.
ಮೂಲತಃ ಜಿ. ತಿಮ್ಮಾರೆಡ್ಡಿ, ಟಿ. ನಾಗಪ್ಪ, ಮುನಿಸ್ವಾಮಪ್ಪ ಮೂವರ ಹೆಸರಿನಲ್ಲಿ ತಲಾ 17 ಗುಂಟೆಯಂತೆ ಒಟ್ಟು 1 ಎಕರೆ 11 ಗುಂಟೆ ಜಮೀನು ಮೂಲ ಮಾಲೀಕತ್ವ ಹೊಂದಿದ್ದು, ಬಳಿಕ ಬಿಡಿಎ ಸ್ವಾಧೀನಪಡಿಸಿಕೊಂಡಿತ್ತು. ಈ ಜಮೀನು ಪ್ರತಿಷ್ಠಿತ ಎಂಎಲ್‌ಎ ಬಡಾವಣೆಗೆ ಹೊಂದಿಕೊಂಡಂತಿದೆ.
16-03-1976ರಲ್ಲಿ ಬಿಡಿಎ ಬಡಾವಣೆ ನಿರ್ಮಾಣಕ್ಕಾಗಿ ಪ್ರಾಥಮಿಕ ಅಧಿಸೂಚನೆ ನೀಡಿದ್ದರು. ಸರ್ವೆ, ಪರಿಹಾರ ಮೊತ್ತ ನಿಗದಿ ಸೇರಿ ಎಲ್ಲಾ ಪ್ರಕ್ರಿಯೆ ಮುಗಿದ ಬಳಿಕ 1977 ಡಿಸೆಂಬರ್ 8ರಂದು ಗೆಜೆಟ್‌ನಲ್ಲಿ ಪ್ರಕಟವಾಗುತ್ತದೆ.
ಹಲವರು ಈ ಜಮೀನು ನಮಗೆ ಸೇರಿದ್ದು ಎಂದು ನ್ಯಾಯಾಲಯದ ಮೆಟ್ಟಿಲೇರಿದ್ದರು, 12 ವರ್ಷಗಳ ವಿಚಾರಣೆ ಬಳಿಕ 21-04-1988 ರಲ್ಲಿ ಭೂಸ್ವಾಧೀನ ಕಾಯ್ದೆ ಸೆಕ್ಷನ್ 16/2ರ ಅಡಿಯಲ್ಲಿ ಅಂತಿಮ ಅಧಿಸೂಚನೆ ಹೊರಡಿಸಲಾಗುತ್ತದೆ. (ಸೆಕ್ಷನ್ 16/2 ರ ಪ್ರಕಾರ ಯಾವುದೇ ತಕರಾರು, ಋಣಭಾರ ಇಲ್ಲದೆ ಸ್ವತ್ತು ಸಂಪೂರ್ಣವಾಗಿ ಸರ್ಕಾರದ ಒಡೆತನದಲ್ಲಿದೆ ಎಂದರ್ಥ).
ಅಂತಿಮ ಅಧಿಸೂಚನೆಯ 19 ವರ್ಷಗಳ ಬಳಿಕ 2007ರಲ್ಲಿ ಡಿನೋಟಿಫಿಕೇಷನ್ ಫೈಲ್ ಅನ್ನು ಯುಡಿಡಿ 424 ಬೆಂಗಳೂರು ಭೂಸ್ವಾಧೀನ 2007 ಅನ್ನುವ ನಂಬರ್ ಸೃಷ್ಟಿಸಿ ಮಾಡಿ, ಈ ಕೂಡಲೇ ದಾಖಲೆ ಸಿದ್ದಪಡಿಸಲು ಅಧಿಕಾರಿಗಳಿಗೆ ಆಗಿನ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಸೂಚನೆ ಕೊಡುತ್ತಾರೆ.
ದಾಖಲೆಗಳನ್ನು ಪರಿಶೀಲನೆ ಮಾಡಿದ ಅಧಿಕಾರಿಗಳು ಡಿನೋಟಿಫಿಕೇಶನ್ ಸಾಧ್ಯವಿಲ್ಲ ಎಂದು ವರದಿ ನೀಡುತ್ತಾರೆ, ಆದರೆ ಸಿಎಂ ಕುಮಾರಸ್ವಾಮಿ ಮತ್ತೊಮ್ಮೆ ಅಧಿಕಾರಿಗಳಿಗೆ ಪತ್ರ ಬರೆದು ಜಮೀನನನ್ನು ವಾಸ್ತವಿಕವಾಗಿ ಸ್ವಾಧೀನಕ್ಕೆ ಪಡೆಯಲಾಗಿದೆಯಾ ಇಲ್ಲವೇ ಎನ್ನುವುದನ್ನು ಪರಿಶೀಲಿಸಲು ಅರ್ಜಿದಾರ ರಾಜಶೇಖರಯ್ಯ ಮತ್ತು ಬಿಡಿಎಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ನಡೆಸಲು ಸೂಚನೆ ಕೊಡುತ್ತಾರೆ.
ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಯಾಗಿದ್ದ ಜ್ಯೋತಿ ರಾಮಲಿಂಗಂ ಇದು ಡಿ ನೋಟಿಫಿಕೇಷನ್ ಮಾಡಲು ಸಾಧ್ಯವೇ ಇಲ್ಲ ಎಂದು ತಿಳಿಸುತ್ತಾರೆ. 9-10-2007ರಲ್ಲಿ ಹೆಚ್‌ಡಿ ಕುಮಾರಸ್ವಾಮಿ ರಾಜೀನಾಮೆ ಕೊಡುತ್ತಾರೆ.
ಬಿಎಸ್ ಯಡಿಯೂರಪ್ಪ ಅವಧಿಯಲ್ಲಿ ಮುನ್ನಲೆಗೆ
2008 ಸಿಎಂ ಆಗಿ ಬಿಎಸ್‌ವೈ ಅಧಿಕಾರಕ್ಕೆ ಬಂದ ಬಳಿಕ ಈ ಪ್ರಕರಣಕ್ಕೆ ಮತ್ತೆ ಜೀವ ಬರುತ್ತದೆ. ಇಬ್ಬರು ಅಷ್ಟು ದ್ವೇಷ, ಆಕ್ರೋಶದಲ್ಲಿ ಮಾತನಾಡಿದರೂ ಯುಡಿಡಿ 424 ಬೆಂಗಳೂರು ಭೂಸ್ವಾಧೀನ 2007 ಫೈಲ್‌ಗೆ ಜೀವ ಬರುತ್ತದೆ. ಬಿಎಸ್‌ವೈ ಕಾರ್ಯದರ್ಶಿಯಾಗಿದ್ದ ಬಿ.ಜಿ. ನಂದಕುಮಾರ್ ನಗರಾಭಿವೃದ್ಧಿ ಇಲಾಖೆ ಪತ್ರ ಬರೆದು ಕಡತ ಸಂಖ್ಯೆ ಯುಡಿಡಿ 424 ಬೆಂಗಳೂರು ಭೂಸ್ವಾಧೀನ 2007ರ ಸ್ಪಷ್ಟ ಮಾಹಿತಿ ಮತ್ತು ಅಭಿಪ್ರಾಯದೊಂದಿಗೆ ಮುಖ್ಯಮಂತ್ರಿ ಅವಗಾಹನೆಗೆ ಕಳಿಸಿಕೊಡಲು ಆದೇಶ ನೀಡಲಾಗಿದೆ ಎಂದು ಪತ್ರ ಬರೆಯುತ್ತಾರೆ.
2001ರಲ್ಲೇ ಫೈಲ್ ಕ್ಲೋಸ್ ಮಾಡಿ ಸರ್ಕಾರಕ್ಕೆ ವಶಪಡಿಸಿಕೊಂಡಿದ್ದು ದಾಖಲೆ ಲಭ್ಯವಿರುವ ಸಾಧ್ಯತೆ ಇಲ್ಲ ಎಂದು ಅಧಿಕಾರಿಗಳು ಪ್ರತಿಕ್ರಿಯೆ ನೀಡುತ್ತಾರೆ. ಆದರೂ ಬಿಎಸ್‌ವೈ ಸುಮ್ಮನೆ ಕೂರುವುದಿಲ್ಲ, ಭೂಸ್ವಾಧೀನದಿಂದ ಕೈಬಿಡಲು ಆದೇಶಿಸಿದೆ ಎಂದು ಒಂದೇ ಸಾಲಿನಲ್ಲಿ ಆದೇಶ ಹೊರಡಿಸುತ್ತಾರೆ. ಜೂನ್ 5 ರಂದು ಅವರು ಸಹಿ ಹಾಕಿದ ಬಳಿಕ ಜೂನ್ 7ರಂದು ಸರ್ಕಾರದ ಗೆಜೆಟ್‌ನಲ್ಲಿ ಪ್ರಕಟವಾಗುತ್ತದೆ. ಭೂಸ್ವಾಧೀನವನ್ನು ಕೈಬಿಡಲಾಗಿದೆ ಎಂದು ಆದೇಶ ನೀಡಲಾಗುತ್ತೆ. ಸಮೂಹ ವಸತಿ ಸಮುಚ್ಛಯ ಕಟ್ಟಲು ಕಾಯ್ದಿರಿಸಿದ್ದ ಜಮೀನು ಆಗಿದ್ದ ಕಾರಣ ಯೋಜನೆಯನ್ನೇ ರದ್ದು ಮಾಡಲಾಗಿತ್ತು.
ಹೆಚ್‌ಡಿ ಕುಮಾರಸ್ವಾಮಿಗೆ ಲಾಭ ಏನು?
ಪ್ರಕರಣದ ಅಸಲಿ ಸಂಗತಿ ತಿಳಿಯಬೇಕು ಎಂದರೆ, ಈ ಜಾಗದ ಮೇಲೆ ಯಾರ ಕಣ್ಣಿತ್ತು ಎನ್ನುವುದು ತಿಳಿಯಬೇಕು. 22-08-2007 ರಲ್ಲಿ ಸಿಎಂ ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದ 18 ದಿನಗಳ ಬಳಿಕ 10-09-2007ರಲ್ಲಿ ಈ 1 ಎಕರೆ 11 ಗುಂಟೆ ಜಮೀನು ಮೂಲ ಮಾಲೀಕರ 21 ಜನ ವಾರಸುದಾರರಿಂದ ವಿಮಲ ಎನ್ನುವರರ ಹೆಸರಿಗೆ ರಿಜಿಸ್ಟರಡ್ ಜಿಪಿಎ ಆಗುತ್ತದೆ.
ಈ ವಿಮಲ ಬೇರೆ ಯಾರು ಅಲ್ಲ, ಹೆಚ್‌ಡಿ ಕುಮಾರಸ್ವಾಮಿ ಅವರ ಹೆಂಡತಿ ಅನಿತಾ ಕುಮಾರಸ್ವಾಮಿ ಅವರ ತಾಯಿ. ಡಿನೋಟಿಫಿಕೇಶನ್ ಅರ್ಜಿ ರಾಜಶೇಖರಯ್ಯ ಮತ್ತಿತರರು ಎನ್ನುವ ಹೆಸರಿನಲ್ಲಿ ಅರ್ಜಿ ಸಲ್ಲಿಸಲಾಗಿದ್ದು, ಕೇವಲ ರಾಜಶೇಖರಯ್ಯ ಎನ್ನುವವರು ಮಾತ್ರ ಸಹಿ ಮಾಡಿದ್ದು, ಉಳಿದವರು ಯಾರು, ರಾಜಶೇಖರಯ್ಯನವರಿಗೂ ಜಮೀನು ಮೂಲ ಮಾಲೀಕರ ಕುಟುಂಬಕ್ಕೂ ಏನು ಸಂಬಂಧ ಎನ್ನುವ ಮಾಹಿತಿಯೇ ಇಲ್ಲ. ವಿಮಲ ಎನ್ನುವವರಿಗೆ ಜಿಪಿಎ ಕೊಟ್ಟಿರುವ ಜಮೀನು ವಾರಸುದಾರರಲ್ಲಿ ರಾಜಶೇಖರಯ್ಯ ಎನ್ನುವ ಹೆಸರಿನವರೇ ಇಲ್ಲ. ಇದೊಂದು ಬೇನಾಮಿ ಅರ್ಜಿಯಾಗಿದೆ ಎನ್ನುವುದು ಮತ್ತೊಂದು ಆರೋಪ.
5-6-2010ರಲ್ಲಿ ಜಿ. ತಿಮ್ಮಾರೆಡ್ಡಿ, ಟಿ. ನಾಗಪ್ಪ, ಮುನಿಸ್ವಾಮಪ್ಪ ಹೆಸರಿನಲ್ಲಿ ಡಿನೋಟಿಫಿಕೇಷನ್ ಮಾಡಲಾಗಿದ್ದು, ಆ ಸಮಯದಲ್ಲಿ ಜಮೀನು ಮೂಲಕ ಮಾಲೀಕರು ಯಾರು ಜೀವಂತವಾಗಿರಲಿಲ್ಲ. ಅದಾದ ಒಂದು ತಿಂಗಳ ಬಳಿಕ ಈ ಜಮೀನಿಗೆ 5-07-2010 ರಲ್ಲಿ ವಿಮಲ ಅವರಿಂದ ಟಿಎಸ್ ಚನ್ನಪ್ಪ ಹೆಸರಿಗೆ ಕ್ರಯಪತ್ರ ರಿಜಿಸ್ಟರ್ ಆಗುತ್ತದೆ. ಈ ಟಿಎಸ್ ಚನ್ನಪ್ಪ ವಿಮಲ ಅವರ ಸ್ವಂತ ಮಗ, ಹೆಚ್‌ಡಿ ಕುಮಾರಸ್ವಾಮಿ ಅವರ ಬಾಮೈದ.
2015ರಲ್ಲಿ ಸಾಮಾಜಿಕ ಕಾರ್ಯಕರ್ತ ಜಯಕುಮಾರ್ ಹಿರೇಮಠ ದಾಖಲೆಗಳ ಸಮೇತ ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದು. ಒಂದು ವಾರ ದಾಖಲೆಗಳ ಪರಿಶೀಲನೆ ಮಾಡಿದ ಬಳಿಕ, ಎಫ್‌ಐಆರ್ ರಿಜಿಸ್ಟರ್ ದಾಖಲಾಗುತ್ತದೆ.
ಪ್ರಕರಣದಲ್ಲಿ ಎ1 ಬಿಎಸ್ ಯಡಿಯೂರಪ್ಪ, ಎ2 ಹೆಚ್‌ಡಿ ಕುಮಾರಸ್ವಾಮಿ, ಎ3 ವಿಮಲ, ಎ4 ಟಿಎಸ್ ಚನ್ನಪ್ಪ, ಎ5 ರಾಜಶೇಖರಯ್ಯ ಎಂದು ನಮೂದಿಸಲಾಗಿದೆ. 13/1, 13/1ಡಿ, 13/2 ಸೆಕ್ಷನ್ ಐಪಿಸಿ 420 ಸೆಕ್ಷನ್, ಐಪಿಸಿ 409 (ವಿಶ್ವಾಸದ್ರೋಹ), ಐಪಿಸಿ 418 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಮಾಜಿ ಮುಖ್ಯಮಂತ್ರಿಗಳ ವಿರುದ್ಧ ಡಿನೋಟಿಫಿಕೇಷನ್ ಆರೋಪದಲ್ಲಿ ಪ್ರಕರಣ ದಾಖಲಾಗಿ 10 ವರ್ಷವಾದರೂ ಈ ಪ್ರಕರಣ ಧೂಳು ಹಿಡಿಯುತ್ತಿದೆ. ಈ ಪ್ರಕರಣದ ಬಗ್ಗೆ ಒಂದು ನೋಟಿಸ್ ಕೊಟ್ಟಿಲ್ಲ, ವಿಚಾರಣೆ ಮಾಡಿಲ್ಲದೇ ಇರುವುದು ಅನುಮಾನಕ್ಕೆ ಕಾರಣವಾಗಿದೆ.












Click it and Unblock the Notifications