Bengaluru AAP: ನಗರ ಘಟಕದ ಅಧ್ಯಕ್ಷರಾಗಿ ಡಾ.ಸತೀಶ್ ಕುಮಾರ್ ನೇಮಕ, ಪದಾಧಿಕಾರಿಗಳ ಪಟ್ಟಿ
ಬೆಂಗಳೂರು, ಆಗಸ್ಟ್ 14: ಆಮ್ ಆದ್ಮಿ ಪಕ್ಷವು ಬೆಂಗಳೂರು ನಗರ ಘಟಕದ ಅಧ್ಯಕ್ಷರಾಗಿ ಡಾ.ಸತೀಶ್ ಕುಮಾರ್ ಅವರನ್ನು ನೇಮಕಗೊಳಿಸಿತು. ಅದರೊಂದಿಗೆ ಪದಾಧಿಕಾರಿಗಳನ್ನು ಸಹ ನೇಮಕ ಮಾಡಿರುವ ಪಟ್ಟಿಯನ್ನು ಪಕ್ಷದ ರಾಜ್ಯಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು ಅವರು ಬಿಡುಗಡೆಗೊಳಿಸಿದರು. ಇದೇ ವೇಳೆ ಬಿಬಿಎಂಪಿ ಚುನಾವಣೆಯನ್ನು ಶೀಘ್ರದಲ್ಲೇ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಅವರು ಆಗ್ರಹಿಸಿದರು.
ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ಪ್ರಧಾನ ಕಾರ್ಯದರ್ಶಿಯಾಗಿ ಜಗದೀಶ್ ಚಂದ್ರ ಸಿ, ಸಂಘಟನಾ ಕಾರ್ಯದರ್ಶಿಗಳಾಗಿ ಜಗದೀಶ್ ಬಾಬು, ಅಶೋಕ್ ಮೃತ್ಯುಂಜಯ, ಶಶಿಧರ್ ಸಿ ಆರಾಧ್ಯ, ವಿಶ್ವನಾಥ್ ಟಿ.ಜಿ. ನೇಮಕವಾಗಿದ್ದಾರೆ.

ಇನ್ನೂ ಎಎಪಿ ಸಾಮಾಜಿಕ ಮಾಧ್ಯಮ ಉಸ್ತುವಾರಿಯಾಗಿ ಕಮ್ರಾನ್, ಮಾಧ್ಯಮ ಉಸ್ತುವಾರಿಯಾಗಿ ಅನಿಲ್ ನಾಚಪ್ಪ, ಸಂಘಟನಾ ಸಂಪರ್ಕ ಮತ್ತು ತರಬೇತಿ ಉಸ್ತುವಾರಿಯಾಗಿ ರವಿಕುಮಾರ್ ಎಸ್., ಕಾರ್ಯದರ್ಶಿಗಳಾಗಿ ಭವ್ಯಾ ಭಸವರಾಜ, ಮಹಾಲಕ್ಷ್ಮೀ, ಮೊಹಮ್ಮದ್ ಅನಸ್ ನೇಮಕಗೊಂಡಿದ್ದಾರೆ ಎಂದು ತಿಳಿಸಿದರು.
ಯುವಘಟಕದ ಅಧ್ಯಕ್ಷ ಉಮೇಶ್ ಬಾಬು
ಎಎಪಿ ಯುವಘಟಕದ ಅಧ್ಯಕ್ಷರಾಗಿ ಉಮೇಶ್ ಬಾಬು ಪಿಳ್ಳೇಗೌಡ, ಯುವಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಶರತ್ ಬಿ.ಆರ್., ವೈದ್ಯರ ಘಟಕದ ಅಧ್ಯಕ್ಷರಾಗಿ ಡಾ.ಕೇಶವ ಕುಮಾರ್, ವಕೀಲರ ಘಟಕದ ಅಧ್ಯಕ್ಷರಾಗಿ ಮಂಜುನಾಥ್ ಗೌಡ, ಮಹಿಳಾ ಘಟಕದ ಅಧ್ಯಕ್ಷರಾಗಿ ವೀಣಾ ಸೆರಾವೊ, ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಸುಹಾಸಿನಿ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾಗಿ ಫಿರೋಜ್ ಖಾನ್.
ಅಲ್ಪಸಂಖ್ಯಾತರ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಗ್ರೆಗ್ ಡಿ ಸಾ, ಎಸ್ಸಿ-ಎಸ್ಟಿ ಘಟಕದ ಅಧ್ಯಕ್ಷರಾಗಿ ಸಿದ್ದು, ಎಸ್ಸಿ-ಎಸ್ಟಿ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಮುನೇಂದ್ರ ಪಿ, ಆಟೋ ಘಟಕದ ಅಧ್ಯಕ್ಷರಾಗಿ ಅನಿಲ್, ವಿದ್ಯಾರ್ಥಿಗಳ ಘಟಕದ ಅಧ್ಯಕ್ಷರಾಗಿ ಅದ್ನಾನ್ ಆರಿಫ್ ಬೇಗ್ ಅವರು ಕಾರ್ಯನಿರ್ವಹಿಸಲಿದ್ದಾರೆ ಎಂದರು.
ಕಾಂಗ್ರೆಸ್ ನಿಂದ ಕರಪ್ಶನ್ ಮತ್ತು ಕಂಡಿಷನ್
ಕಮಿಷನ್ ಮತ್ತು ಕಲೆಕ್ಷನ್ ಸರ್ಕಾರವನ್ನು ಕಿತ್ತುಹಾಕಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಕರಪ್ಶನ್ ಮತ್ತು ಕಂಡಿಷನ್ ಸರ್ಕಾರವನ್ನು ತಂದಿದೆ. ಅಳಿಯ ಅಲ್ಲ ಮಗಳ ಗಂಡ ಎಂಬ ರೀತಿಯಲ್ಲಿ ಅದೇ ಭ್ರಷ್ಟಾಚಾರ, ಲೂಟಿ ಬೇರೆ ಹೆಸರಿನಲ್ಲಿ ತಾಂಡವವಾಡುತ್ತಿದೆ ಎಂದು ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ಧ ಮುಖ್ಯಮಂತ್ರಿ ಚಂದ್ರು ಅವರು ವಾಗ್ದಾಳಿ ನಡೆಸಿದರು.
ಸರ್ಕಾರ ಮತ್ತು ಗುತ್ತಿಗೆದಾರರ ನಡುವಣ ವ್ಯವಹಾರದ ಎಲ್ಲ ದಾಖಲೆಗಳನ್ನು ತನಿಖೆ ಮಾಡಬೇಕು. ಎಷ್ಟು ಬಾಕಿ ಇದೆ, ಕೆಲಸಗಳಿಗೆ ಎಷ್ಟು ವ್ಯಯಿಸಲಾಗಿದೆ, ಎಷ್ಟು ಭ್ರಾಷ್ಟಾಚಾರ ನಡೆದಿದೆ ಎಂಬ ಮಾಹತಿಯನ್ನು ಬಹಿರಂಗಪಡಿಸಬೇಕು.

ಬಿಜೆಪಿ ಸರ್ಕಾರ 40% ಕಮಿಷನ್, ಈಗ ಕಾಂಗ್ರೆಸ್ ಸರ್ಕಾರ ಬಾಕಿ ಹಣ ಬಿಡುಗಡೆಗೆ 15% ಕಮಿಷನ್ ಸೇರಿ ಒಟ್ಟು 65% ಹಣವನ್ನು ಇವರೇ ಲೂಟಿ ಹೊಡೆದರೆ ಅಭಿವೃದ್ಧಿ ಕೆಲಸಗಳಿಗೆ ಹಣವೆಲ್ಲಿ ಉಳಿಯುತ್ತದೆ?. ಉಳಿದ ಅಲ್ಪಸ್ವಲ್ಪ ಹಣದಲ್ಲಿ ಮಾಡಿದ ರಸ್ತೆಗಳು, ಒಳಚರಂಡಿ ವ್ಯವಸ್ಥೆಗಳು ಹಾಗೂ ಇನ್ನಿತರ ಕೆಲಸಗಳು ಕಳಪೆಯಾಗದೆ ಇರಲು ಹೇಗೆ ಸಾಧ್ಯ? ಎಂದು ಅವರು ಪ್ರಶ್ನಿಸಿದರು.
ಭ್ರಷ್ಟಾಚಾರ ಸಮಸ್ಯೆಯಿಂದ ರಸ್ತೆಗುಂಡಿಗಳು, ಅಪಾಯಕಾರಿ ಒಳಚಂರಂಡಿ ಸಮಸ್ಯೆಗಳು ಎಲ್ಲವೂ ಹಾಗೆಯೇ ಇವೆ ಎಂದು ಮುಖ್ಯಮಂತ್ರಿ ಚಂದ್ರು ಅವರು ಬೇಸರ ವ್ಯಕ್ತಪಡಿಸಿದರು.
ಚುನಾವಣಾ ಆಯೋಗದ ಸಂಪೂರ್ಣ ನಿಯಂತ್ರಣಕ್ಕೆ ಕೇಂದ್ರ ಸಂಚು
2024ರ ಲೋಕಸಭೆ ಚುನಾವಣೆಗೂ ಮುನ್ನ ಹಾಲಿ ಮುಖ್ಯ ಚುನಾವಣಾ ಆಯುಕ್ತರು ನಿವೃತ್ತರಾಗುತ್ತಿದ್ದಾರೆ. ಅದಕ್ಕೂ ಮೊದಲೇ ತನಗೆ ಬೇಕಾದ ಮುಖ್ಯ ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡುವಂತಹ ಸಂದರ್ಭವನ್ನು ಸೃಷ್ಟಿ ಮಾಡಿಕೊಳ್ಳುವ ಹುನ್ನಾರವನ್ನು ಕೇಂದ್ರ ಸರ್ಕಾರ ನಡೆಸಿದೆ ಎಂದು ಆರೋಪಿಸಿದರು.
ಮೊದಲು ಆಯ್ಕೆ ಸಮಿತಿಯಲ್ಲಿ ಮುಖ್ಯನ್ಯಾಯಮೂರ್ತಿ, ಪ್ರಧಾನಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕರು ಇರುತ್ತಿದ್ದರು. ಈ ಕಾಯ್ದೆಯನ್ನು ವಜಾಗೊಳಿಸಿರುವ ಕೇಂದ್ರ ಸರ್ಕಾರ ಹೊಸ ಮಸೂದೆಯನ್ನು ಹೊರಡಿಸಿದೆ. ಇದರ ಪ್ರಕಾರ ಮುಖ್ಯ ಚುನವಣಾ ಆಯುಕ್ತರನ್ನು ಆಯ್ಕೆ ಮಾಡುವ ಸಮಿತಿಗೆ ಪ್ರಧಾನಮಂತ್ರಿ ಮುಖ್ಯಸ್ಥರಾಗಿರುತ್ತಾರೆ.
ಓರ್ವ ಸಂಪುಟದ ಸಚಿವ ಹಾಗೂ ವಿರೋಧ ಪಕ್ಷದ ಓರ್ವ ಸದಸ್ಯ ಇರುತ್ತಾರೆ. ಈ ಮೂಲಕ ಸುಲಭವಾಗಿ ತನಗೆ ಬೇಕಾದ ವ್ಯಕ್ತಿಯನ್ನೇ ಪ್ರಮುಖ ಸ್ಥಾನಕ್ಕೆ ಕೂರಿಸುವ ಮೂಲಕ ಚುನಾವಣೆಯನ್ನು ಗೆಲ್ಲಲು ಪ್ರಯತ್ನಿಸುತ್ತಿದೆ. ಇದು ಸಂವಿಧಾನ ವಿರೋಧಿ ಕೃತ್ಯ. ಇದನ್ನು ಬಲವಾಗಿ ವಿರೋಧಿಸುತ್ತೇವೆ ಎಂದು ಮುಖ್ಯಮಂತ್ರಿ ಚಂದ್ರು ಗುಡುಗಿದರು.












Click it and Unblock the Notifications