ಸ್ಯಾಂಕಿ ರಸ್ತೆ ವಿಸ್ತರಣೆ, ಮೇಲ್ಸೇತುವೆ ಯೋಜನೆ ವಿರುದ್ಧ ನಿವಾಸಿಗಳ ಆನ್‌ಲೈನ್ ಅರ್ಜಿ ಅಭಿಯಾನ ಆರಂಭ
ಬೆಂಗಳೂರು, ಜನವರಿ 10: ಸಾಕಷ್ಟು ವಿರೋಧದ ನಡುವೆಯು ಪರಿಸರಕ್ಕೆ ವಿರುದ್ಧವಾಗಿ ಬೆಂಗಳೂರಿನ ಸ್ಯಾಂಕಿ ರಸ್ತೆ ವಿಸ್ತರಣೆ ಮತ್ತು ಮೇಲ್ಸೇತುವೆ ಯೋಜನೆ ಮುಂದುವರಿದೆ. ಹೀಗಾಗಿ ಬೆಂಗಳೂರಿನ ಕೆಲವು ನಿವಾಸಿಗಳು ಆನ್‌ಲೈನ್ ಅರ್ಜಿ ಅಭಿಯಾನ ಆರಂಭಿಸಿದ್ದಾರೆ.
ಸ್ಯಾಂಕಿ ರಸ್ತೆ ವಿಸ್ತರಣೆ ಮತ್ತು ಅದೇ ರಸ್ತೆಯ ಬಾಷ್ಯಂ ವೃತ್ತದಿಂದ ಮಲ್ಲೇಶ್ವರಂ 18ನೇ ಕ್ರಾಸ್ ವರೆಗೆ ಮೇಲ್ಸೇತುವೆ ನಿರ್ಮಾಣ ಸರ್ಕಾರ ಕೈ ಹಾಕಿದೆ. ಈ ಯೋಜನೆಗಾಗಿ ಪೂರ್ಣ ಪ್ರಮಾಣದಲ್ಲಿ ಬೆಳೆದು ನಿಂತ ಪಾರಂಪರಿಕ 40 ಮರಗಳಿಗೆ ಕೊಡಲಿ ಹಾಕಲು ನಿರ್ಧರಿಸಲಾಗಿದೆ. ಇದರ ವಿರುದ್ಧ ಪರಿಸರವಾದಿಗಳು ಸೇರಿದಂತೆ ಸ್ಥಳಿಯ ನಿವಾಸಿಗಳು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಬಿಬಿಎಂಪಿ ಮಾತ್ರ ಯೋಜನೆಯಿಂದ ಹಿಂದೆ ಸರಿದಿಲ್ಲ.
ಆದ್ದರಿಂದ ಆಕ್ರೋಶಗೊಂಡಿರುವ ನಿವಾಸಿಗಳು ಆನ್‌ಲೈನ್‌ನಲ್ಲಿ ಅರ್ಜಿ ಅಭಿಯಾನ ಆರಂಭಿಸಿ ಸಹಿ ಸಂಗ್ರಹಿಸುತ್ತಿದ್ದಾರೆ. ಈ ಉದ್ದೇಶಿತ ಯೋಜನೆಗಳು ಮತ್ತಷ್ಟು ಸಂಚಾರ ದಟ್ಟಣೆ ಉಂಟು ಮಾಡಲಿದೆ. ಪಾದಾಚಾರಿಗಳು ಸಂಚರಿಸಲು ಆಗದ ಸ್ಥಿತಿ ನಿರ್ಮಾಣವಾಗಲಿದೆ ಎಂದು ಅಭಿಯಾನದಲ್ಲಿ ಆರೋಪಿಸಲಾಗಿದೆ.

ಸ್ಯಾಂಕಿ ರಸ್ತೆಯ ವಿಸ್ತರಣೆ ಯೋಜನೆ ಸುಮಾರು 10 ವರ್ಷಗಳ ಹಿಂದೆ ಹಿಂದೆ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಶಾಸಕ ಈಗಿನ ಐಟಿ ಬಿಟಿ ಸಚಿವ ಡಾ.ಸಿ. ಎನ್ ಅಶ್ವಥ್ ನಾರಾಯಣ ಪ್ರಸ್ತಾಪಿಸಿದ್ದರು. ಇದಕ್ಕೆ ಕಾರ್ಯಕರ್ತರು ಹಾಗೂ ಸ್ಥಳೀಯರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಕಾರಣ ಯೋಜನೆ ಕುರಿತು ಅಧಿಕಾರಿಗಳು ಸಾರ್ವಜನಿಕ ಸಮಾಲೋಚನೆ ನಡೆಸಲಿಲ್ಲ. ಯೋಜನೆಯ ವಿವರಗಳನ್ನು ಸಾರ್ವಜನಿಕರ ಜತೆ ಹಂಚಿಕೊಂಡಿಲ್ಲ. ಈ ಬಗ್ಗೆಯೂ ಆನ್‌ಲೈನ್ ಅಭಿಯಾನದಲ್ಲಿ ಆಪಾದಿಸಲಾಗಿದೆ.
ಸಮಗ್ರ ಸಂಚಾರ ಯೋಜನೆ ನಿಯಮ ಉಲ್ಲಂಘನೆ
ಮೇಲ್ಸೇತುವೆ ನಿರ್ಮಾಣ ಯೋಜನೆ ರಾಜ್ಯ ಸರ್ಕಾರ 2020ರಲ್ಲಿ ಹೊರಡಿಸಿದ ಬೆಂಗಳೂರಿನ ಸಮಗ್ರ ಸಂಚಾರ ಯೋಜನೆಯ ನಿಬಂಧನೆಗಳನ್ನು ಉಲ್ಲಂಘಿಸುತ್ತದೆ. ರಸ್ತೆ ಕಡಿಯುವ ಜೊತೆಗೆ ಪಾದಾಚಾರಿ ಮಾರ್ಗಗಳು ನಶಿಸುತ್ತವೆ. ಈ ಭಾಗದ ನಿವಾಸಿಗಳಿಗೆ ಸಾಕಷ್ಟು ತೊಂದರೆ ಆಗಲಿದೆ. ಮೇಲ್ಸೇತುವೆ ಬಗ್ಗೆ ಸೂಕ್ತವಾಗಿ ಯೋಚಿಸಲಾಗಿಲ್ಲ. ಅಲ್ಲದೇ ಈ ಯೋಜನಗಳಿಂದ ನಗರದ ಸಂಚಾರ ದಟ್ಟಣೆಗೆ ಪರಿಹಾರ ಸಿಗುವುದಿಲ್ಲ. ಆದ್ದರಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮೇಲ್ಸೇತುವೆ ಯೋಜನೆ ಹಿಂಪಡೆಯಬೇಕು ಎಂದು ನಿವಾಸಿಗಳು ಮನವಿ ಮಾಡಿದ್ದಾರೆ.
ಬೆಂಗಳೂರು ಮೆಟ್ರೋಪಾಲಿಟನ್ ಭೂ ಸಾರಿಗೆ ಪ್ರಾಧಿಕಾರ (ಬಿಎಂಎಲ್‌ಟಿಎ) ಅಡಿಯಲ್ಲಿ ಸಾರ್ವಜನಿಕ ಸಾರಿಗೆ ಸುಧಾರಣೆಗೆ ಕ್ರಮ ವಹಿಸಿ. ಆ ಮೂಲಕ ಸಂಚಾರದಟ್ಟಣೆ ಸಮಸ್ಯೆಗಳಿಗೆ ಸಮಗ್ರ ಪರಿಹಾರ ಕಂಡುಕೊಳ್ಳಬೇಕಿದೆ.

ಜನವರಿ 3ರಂದು ಬಳ್ಳಾರಿ ರಸ್ತೆಯ 600 ಮೀಟರ್ ಅಗಲೀಕರಣ ಹಾಗೂ ಕಾವೇರಿ ಥಿಯೇಟರ್ ಮತ್ತು ಮೇಖ್ರಿ ವೃತ್ತದ ನಡುವೆ ಎರಡು ಪಥಗಳನ್ನು ಸೇರಿಸಲು ಅರಮನೆ ಮೈದಾನದ ಮುಂದಿನ 50ಕ್ಕೂ ಹೆಚ್ಚು ಮರಗಳನ್ನು ಬಿಬಿಎಂಪಿ ಕಡಿದಿದೆ.
ಅಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ರಸ್ತೆ ಅಗಲೀಕರಣವನ್ನು ಮಾಡಲಾಗಿದೆ ಎಂದು ಬಿಬಿಎಂಪಿ ಹೇಳಿಕೊಂಡಿದೆ ಎಂದರು.












Click it and Unblock the Notifications