Parappana Agrahara: ಪರಪ್ಪನ ಅಗ್ರಹಾರದಲ್ಲಿ ಮತ್ತೆ ಮುಂದುವರೆದ ರಾಜಾತಿಥ್ಯದ ಆಟ; ಇನ್‌ಸ್ಟಾಗ್ರಾಂನಲ್ಲೇ ಬೆದರಿಕೆ.!
Parappana Agrahara Jail: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ & ಪಟಾಲಂ ಗ್ಯಾಂಗ್ ಜೈಲುಪಾಲಾಗಿದೆ. ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ಹಿನ್ನೆಲೆ ದರ್ಶನ್‌ನ್ನು ಕೋರ್ಟ್ ಆದೇಶದ ಮೇರೆಗೆ ಪೊಲೀಸರು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಿದ್ದರು. ಇದೀಗ ಮತ್ತೆ ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ಮುಂದುವರೆದಿದೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲೇ ರೆಸಾರ್ಟ್ ರೀತಿಯಲ್ಲಿ ನಟ ದರ್ಶನ್ ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗನ ಜೊತೆ ಕುಳಿತುಕೊಂಡು ರೌಂಡ್ ಟೇಬಲ್ ಪಾರ್ಟಿ ಮಾಡಿದ್ದು, ಈ ವೇಳೆ ಒಂದು ಕೈಯಲ್ಲಿ ಸಿಗರೇಟ್, ಮತ್ತೊಂದು ಕೈಯಲ್ಲಿ ಕಾಫಿ ಮಗ್ ಹಿಡಿದುಕೊಂಡು ಹರಟೆ ಹೊಡೆಯುತ್ತಿರುವ ಫೋಟೋ ಭಾರೀ ವೈರಲ್ ಆಗಿತ್ತು.

ಇದರ ಬೆನ್ನಲ್ಲೆ ವಿಐಪಿ ಸೆಲ್‌ನಿಂದಲೇ ನಟ ದರ್ಶನ್ ರೌಡಿ ಶೀಟರ್‌ಗಳ ಜೊತೆ ವಿಡಿಯೋ ಕಾಲ್‌ನಲ್ಲಿ ಮಾತನಾಡಿರುವ ವಿಡಿಯೋ ಸಹ ವೈರಲ್ ಆಗಿದ್ದು, ಇದಕ್ಕೆ ವ್ಯಾಪಕ ಆಕ್ರೋಶಗಳು ವ್ಯಕ್ತವಾಗಿದ್ದವು. ಬಳಿಕ ಎಚ್ಚೆತ್ತ ಸರ್ಕಾರ ಪರಪ್ಪನ ಅಗ್ರಹಾರದ 9 ಜೈಲಾಧಿಕಾರಿಗಳನ್ನು ಅಮಾನತು ಮಾಡಿತ್ತು. ಇನ್ನು ಕೋರ್ಟ್ ಆದೇಶದ ಮೇರೆಗೆ ನಟ ದರ್ಶನ್‌ನನ್ನು ಪೊಲೀಸರು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಿದರು.
ಇದೀಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ರೌಡಿಗಳ ಮೊಬೈಲ್‌ಗಳು ಮತ್ತೆ ಆ್ಯಕ್ಟಿವ್ ಆಗಿವೆ. ಜೈಲಿನಲ್ಲಿದ್ದುಕೊಂಡೇ ರೌಡಿಶೀಟರ್‌ವೊಬ್ಬ ಸಾಕ್ಷಿದಾರನಿಗೆ ಬೆದರಿಕೆ ಹಾಕಿರುವುದು ಬೆಳಕಿಗೆ ಬಂದಿದೆ. ಇನ್‌ಸ್ಟಾಗ್ರಾಂ ಮೂಲಕ ಸಾಕ್ಷಿದಾರನೊಬ್ಬನಿಗೆ ಬೆದರಿಕೆ ಹಾಕಲಾಗಿದ್ದು, ಈ ಸಂಬಂಧ ಸಿಸಿಬಿಯಲ್ಲಿ ಪ್ರಕರಣ ದಾಖಲಾಗಿದೆ.
"ಸೆಪ್ಟೆಂಬರ್ 23ರಂದು ಸಲಗ ಸೋಮ ಎಂಬ ಇನ್‌ಸ್ಟಾಗ್ರಾಂ ಖಾತೆಯಿಂದ ನನಗೆ ಮೂರು ವಾಯ್ಸ್ ಸಂದೇಶ ಬಂದಿದ್ದು, ಅದರಲ್ಲಿ ತಮಿಳು ಮತ್ತು ಕನ್ನಡ ಭಾಷೆಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಲಾಗಿದೆ. ಜೋಸೆಫ್ ಬಾಬು ಅಲಿಯಾಸ್ ಬಬ್ಲಿ ಕೊಲೆ ಪ್ರಕರಣದಲ್ಲಿ ಯಾರೊಬ್ಬರೂ ನ್ಯಾಯಾಲಯದಲ್ಲಿ ಸಾಕ್ಷ್ಯ ಹೇಳಬಾರದು ಎಂದು ಬೆದರಿಸಿದ್ದಾರೆ," ಎಂದು ಅರ್ಮುಗಂ ದೂರಿನಲ್ಲಿ ತಿಳಿಸಿದ್ದಾರೆ.
ಈ ವಿಷಯವನ್ನು ಬಬ್ಲಿ ಪತ್ನಿ, ಸುನಿಲ್ ಅಲಿಯಾಸ್ ಸುಂಡಿಲಿ, ಜಾರ್ಜ್ ಹಾಗೂ ನಾದನಿಗೂ ತಲುಪಿಸಬೇಕು. ನಮ್ಮ ಬಾಸ್ ಶಿವ ಹೇಳಿದಂತೆ ಕೇಳದಿದ್ರೆ, ಎಲ್ಲರನ್ನೂ ಹೊಡೆದು ಹಾಕುತ್ತೇವೆ. ರೌಡಿ ಮಿಲಿಟರಿ ಸತೀಶ್‌ನನ್ನು ಹೊಡೆದು ಹಾಕಿದ್ದೇವೆ. ಅದೇ ರೀತಿ ಜೈಲಿನಿಂದಲೇ ಎಲ್ಲರನ್ನು ಹೊಡೆದು ಹಾಕ್ತೇವೆ. ಆಟೊ ಓಡಿಸುವ ನಿನ್ನನ್ನೂ ಮುಗಿಸುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ. ಇನ್ನು ಈ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.












Click it and Unblock the Notifications