ಗಾಂಧಿನಗರ; ಬಿಜೆಪಿಗೆ ಬಂಡಾಯದ ಬಿಸಿ, ಗುಜರಾತ್‌ನಿಂದ ಪ್ರಭಾರಿ ಆಗಮನ!
ಬೆಂಗಳೂರು, ಏಪ್ರಿಲ್ 25; ಈ ಬಾರಿಯ ಚುನಾವಣೆಯಲ್ಲಿ ಬೆಂಗಳೂರಿನ ಗಾಂಧಿನಗರ ಕ್ಷೇತ್ರದಲ್ಲಿ ಬಿಜೆಪಿಗೆ ಬಂಡಾಯ ಬಿಸಿ ತಟ್ಟಿದೆ. ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಮಾಲೂರು ಬಿಟ್ಟು ಬೆಂಗಳೂರು ನಗರಕ್ಕೆ ಬಂದು ಚುನಾವಣಾ ಕಣಕ್ಕಿಳಿದಿದ್ದಾರೆ. ಅವರ ಮನವೊಲಿಕೆ ಕಾರ್ಯ ವಿಫಲವಾಗಿದ್ದು, ನಾಮಪತ್ರ ವಾಪಸ್ ಪಡೆದಿಲ್ಲ. ಆದ್ದರಿಂದ ಮೇ 10ರಂದು ನಡೆಯುವ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ.
ಗಾಂಧಿನಗರ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಪ್ರಭಾರಿಯಾಗಿ ಗುಜರಾತ್‌ನ ಜಾಮ್ ನಗರ ಕ್ಷೇತ್ರದ ಶಾಸಕ ದಿವ್ಯೇಶ್ ಹಾಗೂ ರಾಜಸ್ಥಾನದ ಪೊಗ್ರಾಮ್ ಕ್ಷೇತ್ರದ ಮಾಜಿ ಶಾಸಕ ಸೈತಾನ ಸೀ ರಾಥೋಡ್ ಆಗಮಿಸಿದ್ದಾರೆ. ಬಿಬಿಎಂಪಿಯ ಮಾಜಿ ಸದಸ್ಯ ಟಿ. ಗೋಪಾಲಕೃಷ್ಣ ನಿವಾಸಕ್ಕೆ ತೆರಳಿ ಅವರು ಮಾತುಕತೆ ನಡೆಸಿದರು.

ಬೆಂಗಳೂರಿನ ಗಾಂಧಿನಗರ ಕ್ಷೇತ್ರ ಹಾಲಿ ಕಾಂಗ್ರೆಸ್ ವಶದಲ್ಲಿದೆ. ಮಾಜಿ ಸಚಿವ ದಿನೇಶ್ ಗುಂಡೂರಾವ್ ಶಾಸಕರು. ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆಯಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಕ್ಷೇತ್ರವನ್ನು ವಶಕ್ಕೆ ಪಡೆಯುವ ಬಿಜೆಪಿ ತಂತ್ರಕ್ಕೆ ಬಂಡಾಯ ಅಡ್ಡಿಬರಲಿದೆಯೇ? ಎಂದು ಕಾದು ನೋಡಬೇಕು. ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಪ್ತಗಿರಿ ಗೌಡ. ಆದರೆ ಟಿಕೆಟ್ ಆಕಾಂಕ್ಷಿಯಾಗಿದ್ದ ಕೃಷ್ಣಯ್ಯ ಶೆಟ್ಟಿ ಬಂಡಾಯದ ಬಾವುಟ ಹಾರಿಸಿದ್ದು, ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.
ಕೃಷ್ಣಯ್ಯ ಶೆಟ್ಟಿ ಹಠವೇಕೆ?; ಯಾರ ಮನವೊಲಿಕೆಗೂ ಒಪ್ಪದ ಕೃಷ್ಣಯ್ಯ ಶೆಟ್ಟಿ ಬಂಡಾಯ ಅಭ್ಯರ್ಥಿಯಾಗಿ ಸಲ್ಲಿಕೆ ಮಾಡಿದ ನಾಮಪತ್ರ ವಾಪಸ್ ಪಡೆದಿಲ್ಲ. ನಾಮಪತ್ರ ಸಲ್ಲಿಕೆ ಮಾಡಿದ ಬಳಿಕ ಮಾತನಾಡಿದ್ದ ಅವರು, "ಕೊನೆಯ ಕ್ಷಣದ ತನಕ ಬಿಜೆಪಿ ಟಿಕೆಟ್ ದೊರೆಯುವ ಭರವಸೆ ಇತ್ತು. ಪಕ್ಷ ನಡೆಸಿದ ಸಮೀಕ್ಷೆಯಲ್ಲಿ ನನಗೆ ಹೆಚ್ಚಿನ ಮತ ಬಂದಿತ್ತು. ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ನನ್ನ ಪರವಾಗಿದ್ದರು" ಎಂದು ಹೇಳಿದ್ದರು.

"ಟಿಕೆಟ್ ಕೈತಪ್ಪಿದ ಬಳಿಕ ಕಾರ್ಯಕರ್ತರೇ ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಡ ಹೇರಿದ್ದರು. ಕಾರ್ಯಕರ್ತರ ಒತ್ತಾಸೆಯಂತೆಯೇ ಕಣಕ್ಕಿಳಿಸಿದ್ದೇನೆ. ನಾನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ. ಯಾವುದೇ ಕಾರಣಕ್ಕೂ ಪಕ್ಷ ತೊರೆಯುವುದಿಲ್ಲ. ಚುನಾವಣೆಯಲ್ಲಿ ನಾನು ಗೆಲ್ಲುವ ವಿಶ್ವಾಸವಿದೆ" ಎಂದು ಕೃಷ್ಣಯ್ಯ ಶೆಟ್ಟಿ ತಿಳಿಸಿದ್ದಾರೆ.
ಈ ಬಾರಿಯ ಚುನಾವಣೆಗೆ ಕಾಂಗ್ರೆಸ್‌ನಿಂದ ದಿನೇಶ್ ಗುಂಡೂರಾವ್, ಬಿಜೆಪಿಯಿಂದ ಸಪ್ತಗಿರಿ ಗೌಡ, ಜೆಡಿಎಸ್‌ನಿಂದ ನಾರಾಯಣಸ್ವಾಮಿ ಅಭ್ಯರ್ಥಿಗಳು. ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕೃಷ್ಣಯ್ಯ ಶೆಟ್ಟಿ ಕಣದಲ್ಲಿದ್ದಾರೆ. ಬಿಜೆಪಿ ಹೊರ ರಾಜ್ಯಗಳ ಶಾಸಕರು, ಮಾಜಿ ಶಾಸಕರನ್ನು ಕ್ಷೇತ್ರದ ಚುನಾವಣಾ ಪ್ರಭಾರಿಯಾಗಿ ನೇಮಕ ಮಾಡಿದ್ದು, ಅವರು ಕ್ಷೇತ್ರಕ್ಕೆ ಆಗಮಿಸಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಕ್ಷೇತ್ರದಲ್ಲಿ ಜೆಡಿಎಸ್‌ನ ಪ್ರಭಾವ ಅಷ್ಟಿಲ್ಲ. ಪೈಪೋಟಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಇದೆ. ಆದರೆ ಬಂಡಾಯ ಅಭ್ಯರ್ಥಿ ಇರುವುದು ಬಿಜೆಪಿಯ ಆತಂಕ ಹೆಚ್ಚಿಸಿದೆ.
ಗಾಂಧಿನಗರದ ಕುರಿತು; ಬೆಂಗಳೂರು ನಗರದ ಹೃದಯ ಭಾಗದ ಗಾಂಧಿ ನಗರ ಕ್ಷೇತ್ರ ವಾಣಿಜ್ಯ, ಸಿನಿಮಾ ಚಟುವಟಿಕೆಗಳ ಮೂಲಕ ಪ್ರಸಿದ್ಧಿ. ನಗರದ ಕೆ. ಎಸ್. ಆರ್. ರೈಲು ನಿಲ್ದಾಣ, ಕೆಎಸ್ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್ ನಿಲ್ದಾಣಗಳು ಈ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿಯೇ ಇವೆ. 2008, 2013 ಮತ್ತು 2018ರಲ್ಲಿ ಸತತವಾಗಿ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್‌ನ ದಿನೇಶ್ ಗುಂಡೂರಾವ್ ಕ್ಷೇತ್ರವನ್ನು ಕಾಂಗ್ರೆಸ್ ಭದ್ರಕೋಟೆಯಾಗಿ ಮಾಡಿದ್ದಾರೆ.
2008ರಲ್ಲಿ 41,188, 2013ರ ಚುನಾವಣೆಯಲ್ಲಿ 54,968 ಮತ್ತು 2018ರ ಚುನಾವಣೆಯಲ್ಲಿ 47,354 ಮತಗಳನ್ನು ಪಡೆದು ಅವರು ಜಯಗಳಿಸಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿಯೂ ಸಹ ಕಾಂಗ್ರೆಸ್ ಪಕ್ಷ ರಾಹುಲ್ ಗಾಂಧಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ದಿನೇಶ್ ಗುಂಡೂರಾವ್‌ಗೆ ಟಿಕೆಟ್ ನೀಡಿದೆ. ಬಿಜೆಪಿ ಮತ್ತು ಪಕ್ಷೇತರ ಅಭ್ಯರ್ಥಿ ಕೃಷ್ಣಯ್ಯ ಶೆಟ್ಟಿಗೆ ಅವರು ಪ್ರಬಲ ಎದುರಾಳಿ.
ಗಾಂಧಿನಗರದಲ್ಲಿ ಬಿಜೆಪಿ ಪ್ರಭಾವ ಹೇಗಿದೆ? ಎಂದು ನೋಡುವುದಾದರೆ 2008ರಲ್ಲಿ ಪಕ್ಷ 34,242 ಮತಗಳನ್ನು ಪಡೆದಿತ್ತು. 2013ರಲ್ಲಿ 32,361 ಮತ ಮತ್ತು 2018ರ ಚುನಾವಣೆಯಲ್ಲಿ 37,284 ಮತವನ್ನು ಪಕ್ಷ ಪಡೆದಿದೆ. ಪ್ರತಿ ಚುನಾವಣೆಯಲ್ಲಿಯೂ ಸುಮಾರು 20 ಸಾವಿರ ಮತಗಳ ಅಂತರದಿಂದ ಕಾಂಗ್ರೆಸ್‌ಗೆ ಗೆಲುವು ಸಿಕ್ಕಿದೆ. ಜೆಡಿಎಸ್ 2018ರಲ್ಲಿ 36,635 ಮತಗಳನ್ನು ಪಡೆದಿದ್ದು, ಬಿಟ್ಟರೆ ಉಳಿದಂತೆ ಯಾವ ಚುನಾವಣೆಯಲ್ಲಿಯೂ 3ನೇ ಸ್ಥಾನಕ್ಕೆ ಸಹ ಬಂದಿಲ್ಲ.
ಮಾಜಿ ಸಚಿವ ರಾಮಚಂದ್ರೇಗೌಡ ಪುತ್ರ ಸಪ್ತಗಿರಿ ಗೌಡ ಈ ಬಾರಿಯ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಗೆಲ್ಲುವ ಮೂಲಕ ಕಾಂಗ್ರೆಸ್ ಭದ್ರಕೋಟೆಯನ್ನು ಛಿದ್ರಗೊಳಿಸಲು ಮುಂದಾಗಿದ್ದರು. ಆದರೆ ಬಂಡಾಯದ ಬಿಸಿ ಪಕ್ಷಕ್ಕೆ ತಟ್ಟಿದೆ. ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಮಾಲೂರು ಬಿಟ್ಟು ಬೆಂಗಳೂರು ನಗರಕ್ಕೆ ಆಗಮಿಸಿದ್ದು, ಪಕ್ಷಕ್ಕೆ ತಲೆನೋವಾಗಿದೆ.












Click it and Unblock the Notifications