Mango Price: ದಿಢೀರ್ ದರ ಕುಸಿತ ಮಾವು ಬೆಳೆಗಾರರಿಗೆ ಸಂಕಷ್ಟ; ವಿಶೇಷ ಪ್ಯಾಕೇಜ್ ನೀಡಿ: ಆರ್ ಅಶೋಕ್
ಬೆಂಗಳೂರು: ರಾಜ್ಯದಲ್ಲಿ ಮಾವು ಋತು ಶುರುವಾಗಿದೆ. ಕಳೆದ ತಿಂಗಳು 150-180 ರೂಪಾಯಿ ಇದ್ದ ಬಾದಾಮಿ ಮಾವು ಇಂದು ಕೇವಲ 18-25 ರೂಪಾಯಿಗೆ ಇಳಿಕೆ ಆಗಿದೆ. ಮಾವು ಬೆಳೆ ಬೆಳೆದ ರೈತರಿಗೆ ಕನಿಷ್ಠ ಕೂಲಿಯೂ ಸಿಗದಂತಾಗಿದೆ. ಪರಿಸ್ಥಿತಿ ಹೀಗಿದ್ದರು ಸಹಿತ ಮಾವು ಬೆಳೆಗಾರರ ನೆರವಿಗೆ ಬಾರದ ಕಾಂಗ್ರೆಸ್ ಸರ್ಕಾರ ಕುರ್ಚಿ ಕಿತ್ತಾಟದಲ್ಲಿ ನಿರತವಾಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಅವರು ಟೀಕಾಪ್ರಹಾರ ನಡೆಸಿದರು.
ಮಾವು ಬೆಳೆಗಾರರ ಸಮಸ್ಯೆ, ಸಂಕಷ್ಟ, ದರ ಕುರಿತ ಕುರಿತು ಎಕ್ಸ್ ಪೋಸ್ಟ್ ಮಾಡಿರುವ ಅವರು, ರಾಮನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ಮಾವು ಬೆಳೆಗಾರರು ಇಂದು ಕಣ್ಣೀರುಡುತ್ತಿದ್ದಾರೆ. ಆದರೆ ಕುರ್ಚಿ ಕಿತ್ತಾಟದಲ್ಲಿ ಮಗ್ನವಾಗಿರುವ ಕಾಂಗ್ರೆಸ್ ಸರ್ಕಾರಕ್ಕೆ ರೈತರ ಕಷ್ಟದ ಅರಿವೇ ಇಲ್ಲದಂತಿದೆ ಎಂದು ದೂರಿದರು.

ರಾಜ್ಯದ ಮಾರುಕಟ್ಟೆಗಳಿಗೆ ಹೊರ ರಾಜ್ಯದ ವ್ಯಾಪಾರಿಗಳು ಬರುತ್ತಿಲ್ಲ. ರಫ್ತು ವಹಿವಾಟು ಕುಸಿದಿದೆ. ಮಾರುಕಟ್ಟೆಯಲ್ಲಿ ಮಧ್ಯಸ್ಥಿಕೆ ವಹಿಸಿ ರೈತರನ್ನು ರಕ್ಷಿಸಬೇಕಾದ ಸರ್ಕಾರ ನಿದ್ದೆ ಮಾಡುತ್ತಿದೆ? ಇದರಿಂದ ಮಾವು ಬೆಳೆಗಾರರು ಸಂಕಷ್ಟ ಅನುಭವಿಸುವಂತಾಗಿದೆ.
ಕೃಷಿ ಸಚಿವರು, ಉಸ್ತುವಾರಿ ಸಚಿವರ ನಿರ್ಲಕ್ಷ್ಯ ಆರೋಪ
ಒಂದೆಡೆ ಬರಗಾಲ, ಇನ್ನೊಂದೆಡೆ ರೋಗಬಾಧೆ, ಮತ್ತೊಂದೆಡೆ ಬೆಲೆ ಕುಸಿತ. ಇಷ್ಟೆಲ್ಲಾ ಆಗುತ್ತಿದ್ದರೂ ರಾಜ್ಯದ ಕೃಷಿ ಸಚಿವರಾಗಲಿ ಅಥವಾ ಈ ಜಿಲ್ಲೆಯ 'ಬಂಡೆ' (ಡಿಕೆ ಶಿವಕುಮಾರ್) ನಾಯಕರಾಗಲಿ ರೈತರ ಕಣ್ಣೀರು ಒರೆಸಲು ಮುಂದೆ ಬರುತ್ತಿಲ್ಲವೇಕೆ? ಎಂದು ಖಾರವಾಗಿ ಪ್ರಶ್ನಿಸಿದರು.
ಮಾವು ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಘೋಷಿಸಿ
ಗ್ಯಾರಂಟಿ ಯೋಜನೆಗಳ ಹೆಸರಲ್ಲಿ ರಾಜ್ಯದ ಬೊಕ್ಕಸ ಖಾಲಿ ಮಾಡಿದ್ಧೀರಿ. ಈಗ ಅನ್ನದಾತನ ಅನ್ನಕ್ಕೆ ಕಲ್ಲು ಹಾಕುತ್ತಿದ್ದೀರಾ? ಮಾವು ಬೆಳೆಗಾರರಿಗೆ ತಕ್ಷಣವೇ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಆಗ್ರಹಿಸಿದರು. ಬೆಂಬಲ ಬೆಲೆಯಲ್ಲಿ ಮಾವು ಖರೀದಿಸಲು ಕ್ರಮ ಕೈಗೊಳ್ಳಿ. ಇಲ್ಲದಿದ್ದರೆ, ರೈತರ ಶಾಪ ಈ ಸರ್ಕಾರವನ್ನು ಸುಟ್ಟು ಹಾಕುವುದರಲ್ಲಿ ಸಂಶಯವಿಲ್ಲ ಎಂದು ಅವರು ಎಚ್ಚರಿಸಿದರು.
ಮಾವು ಬೆಲೆ ದಿಢೀರ್ ಇಳಿಕೆ
ರಾಮನಗರ ಎಪಿಎಂಸಿ ಮಾರುಕಟ್ಟೆಯಲ್ಲಿ ಮಾವು ಬೆಳೆಗೆ ಉತ್ತಮ ಬೆಲೆ ಸಿಗದೇ ದರ ದಿಢೀರ್ ಕುಸಿತವಾಗಿದೆ. ರೋಗ ಹೆಚ್ಚಳದಿಂದ ಜಿಲ್ಲೆಯಲ್ಲಿ ಶೇ.10ರಷ್ಟು ಸಹ ಮಾವು ಬೆಳೆ ಬಂದಿಲ್ಲ. ಇದನ್ನೆ ನೆಚ್ಚಿಕೊಂಡಿದ್ದ ರೈತ ಕುಟುಂಬಗಳು ಆರ್ಥಿಕ ತೊಂದರೆಯಲ್ಲಿವೆ. ಮಳೆ ಸರಿಯಾಗಿ ಆಗದ ಹಿನ್ನೆಲೆ ಮಾವಿನ ಮರಗಳು ಒಣಗುತ್ತಿವೆ.
ಕಳೆದ ತಿಂಗಳು 150-180 ರೂನಷ್ಟಿದ್ದ ಬಾದಾಮಿ ಮಾವು, ಕಳೆದ ವಾರ 90 ರೂಪಾಯಿ ಅಸುಪಾಸಿಗೆ ಮಾರಾಟವಾಗಿದ್ದು, ಮೊನ್ನೆಯಷ್ಟೇ 25 ರೂಪಾಯಿ ಆಸುಪಾಸಿಗೆ ಮಾರಾಟವಾಗಿದೆ. ಹೊಲದಿಂದ ಮಾರುಕಟ್ಟೆಗೆ ಮಾವು ತಂದು ಹಾಕಿದ್ದರ ಗಾಡಿ ಬಾಡಿಗೆ ಸಹ ರೈತರಿಗೆ ಸಿಗುತ್ತಿಲ್ಲ. ಇತ್ತ ಸರ್ಕಾರ, ಕೃಷಿ ಸಚಿವರು ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಎಂಬ ದೂರುಗಳು ಕೇಳಿ ಬಂದಿವೆ.
ಇಳಿಕೆ ಕಂಡ ಮಾವು ದರ, ಎಷ್ಟಿದೆ?
* ಬಾದಾಮಿ ಮಾವು ಕೆಜಿಗೆ 18-25 ರೂ.
* ಸೆಂಧೂರ ಮಾವು ಕೆಜಿಗೆ 8-19 ರೂ.
* ರಸಪೂರಿ ಮಾವು ಕೆಜಿಗೆ 20-22 ರೂ.
* ತೋತಾಪುರಿ ಮಾವು ಕೆಜಿಗೆ 40-50 ರೂಪಾಯಿಗೆ ಕುಸಿದಿದೆ.













Click it and Unblock the Notifications