ಬಿಜೆಪಿ ಸೃಷ್ಟಿಸಿದ ಪ್ರಿಯಾಂಕ್ ಖರ್ಗೆ ವಿದ್ಯಾರ್ಹತೆಯ ಗೊಂದಲ: ಎಲೆಕ್ಷನ್ ಅಫಿಡವಿಟ್‌ನಲ್ಲಿ ಏನಿದೆ?
ಐಟಿ-ಬಿಟಿ, ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರ ವಿದ್ಯಾರ್ಹತೆಗೆ ಸಂಬಂಧಿಸಿದಂತೆ ಭಾರಿ ಚರ್ಚೆ ನಡೆಯುತ್ತಿದೆ. ಪಠ್ಯಕ್ರಮ ಬದಲಾವಣೆ ಬಗ್ಗೆ ಮಾತನಾಡಿದ್ದ ಪ್ರಿಯಾಂಕ್ ಖರ್ಗೆ, ಚಕ್ರವರ್ತಿ ಸೂಲಿಬೆಲೆಗೆ ಯಾವ ಅರ್ಹತೆ ಇದೆ, ಅವರು ಬರೆದ ಪಠ್ಯವನ್ನು ನಮ್ಮ ಮಕ್ಕಳು ಓದುವುದು ಬೇಡ, ಅವರ ಪಠ್ಯ ತೆಗೆದುಹಾಕುವುದಾಗಿ ಹೇಳಿಕೆ ನೀಡಿದ ಬಳಿಕ ಈ ವಿವಾದ ಶುರುವಾಗಿದೆ.
ಚಕ್ರವರ್ತಿ ಸೂಲಿಬೆಲೆ ವಿದ್ಯಾರ್ಹತೆ ಬಗ್ಗೆ ಮಾತನಾಡಿದ್ದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ, ಪ್ರಿಯಾಂಕ್ ಖರ್ಗೆ ಓದಿರುವುದು ಪಿಯುಸಿ ಮಾತ್ರ ಎಂದು ಹೇಳಿದೆ. ನಂತರ ಹಲವು ಬಿಜೆಪಿ ಬೆಂಬಲಿಗರು, ಬರೀ ಪಿಯುಸಿ ಓದಿರುವ ಪ್ರಿಯಾಂಕ್ ಖರ್ಗೆ ಐಟಿ ಬಿಟಿ ಸಚಿವರಾಗಿದ್ದಾರೆ ಎಂದು ವ್ಯಂಗ್ಯವಾಡಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಪ್ರಿಯಾಂಕ್ ಖರ್ಗೆ, ನಾನು ಯಾವ ವಿಚಾರವನ್ನು ಮುಚ್ಚಿಟ್ಟಿಲ್ಲ, ನನ್ನ ವಿದ್ಯಾರ್ಹತೆಯ ಬಗ್ಗೆ ಮಾಹಿತಿ ಬೇಕು ಎಂದಾದರೆ ಚುನಾವಣೆ ಸಂದರ್ಭದಲ್ಲಿ ಸಲ್ಲಿಸಿರುವ ಅಫಿಡವಿಟ್‌ನಿಂದ ತಿಳಿದುಕೊಳ್ಳಲಿ. ಪ್ರಧಾನಿ ಮೋದಿ ವಿದ್ಯಾರ್ಹತೆ ತಿಳಿದುಕೊಳ್ಳಲು ಮುಂದಾದವರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ತಿರುಗೇಟು ಕೊಟ್ಟಿದ್ದರು.
ನಿಜಕ್ಕೂ ಪ್ರಿಯಾಂಕ್ ಖರ್ಗೆ ಓದಿರುವುದೇನು?
ಇನ್ನು ಸಚಿವ ಪ್ರಿಯಾಂಕ್ ಖರ್ಗೆ ಅವರು ನಿಜವಾಗಿಯೂ ಏನು ಓದಿದ್ದಾರೆ, ಅವರ ವಿದ್ಯಾರ್ಹತೆ ಏನು ಎನ್ನುವ ಗೊಂದಲ ಹಲವರಿಗೆ ಇದೆ. ಅವರು ಚುನಾವಣೆಗೆ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ತಮ್ಮ ವಿದ್ಯಾರ್ಹತೆಯ ವಿವರಗಳನ್ನು ನೀಡಿದ್ದಾರೆ.
ಚುನಾವಣಾ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ, ಪ್ರಿಯಾಂಕ್ ಖರ್ಗೆ ಅವರು ಪ್ರಥಮ ಪಿಯುಸಿ ಓದಿದ್ದಾರೆ. 10ನೇ ತರಗತಿ ಪಾಸಾಗಿದ್ದು, 1996ರಲ್ಲಿ ಮಲ್ಲೇಶ್ವರಂನ ಎಂಇಎಸ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದಿರುವುದಾಗಿ ಅವರು ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ. ಅದಾದ ನಂತರ 1999 ರಲ್ಲಿ ಕಂಪ್ಯೂಟರ್ ಆರ್ಟ್ಸ್ ಮತ್ತು ಅನಿಮೇಷನ್‌ನಲ್ಲಿ ವೃತ್ತಿಪರ ಪ್ರಮಾಣಪತ್ರ ಪಡೆದುಕೊಂಡಿದ್ದೇನೆ ಎಂದು ನಮೂದಿಸಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿರುವ ಪ್ರಿಯಾಂಕ್ ಖರ್ಗೆ ನಾನು ನ್ಯಾಷನಲ್ ಲಾ ಸ್ಕೂಲ್‌ನಲ್ಲಿ ಓದಿದ್ದು, ಪಾಸಾಗಿದ್ದೇನೆ, ಬೇಕಿದ್ದರೆ ನ್ಯಾಷನಲ್ ಲಾ ಸ್ಕೂಲ್‌ಗೆ ಹೋಗಿ ನೋಡಲು ಹೇಳಿ ಎಂದು ಹೇಳಿದ್ದಾರೆ. ಆದರೆ ಚುನಾವಣಾ ಅಫಿಡವಿಟ್‌ನಲ್ಲಿ ಅವರು ಈ ಬಗ್ಗೆ ವಿವರ ನೀಡಿಲ್ಲ.
ಪ್ರಿಯಾಂಕ್ ಖರ್ಗೆ ವಿದ್ಯಾರ್ಹತೆ ವಿಚಾರಕ್ಕೆ ವ್ಯಂಗ್ಯವಾಡುತ್ತಿರುವ ಬಿಜೆಪಿ ನಾಯಕರು ಮತ್ತು ಬೆಂಬಲಿಗರಿಗೆ ಕಾಂಗ್ರೆಸ್ ಬೆಂಬಲಿಗರು ಕೂಡ ಪ್ರತ್ಯುತ್ತರ ನೀಡುತ್ತಿದ್ದಾರೆ. ಅಮಿತ್ ಶಾ ಮಗ ಜಯ್ ಶಾ ಅವರಿಗೆ ಯಾವ ಅರ್ಹತೆ ಇದೆ ಎಂದು ಬಿಸಿಸಿಐ ಕಾರ್ಯದರ್ಶಿ ಆಗಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಒಟ್ಟಾರೆ, ನಾಯಕರ ವಿದ್ಯಾರ್ಹತೆ ವಿಚಾರ ಈಗ ನಾಯಕರು ಮತ್ತು ಕಾರ್ಯಕರ್ತರ ನಡುವೆ ಜಟಾಪಟಿಗೆ ಕಾರಣವಾಗಿದೆ.












Click it and Unblock the Notifications