Peenya Flyover: ಮೇಲ್ಸೇತುವೆಯ ಲೋಡಿಂಗ್ ತಪಾಸಣೆ, 50 ಟ್ರಾಫಿಕ್ ಪೊಲೀಸರ ನಿಯೋಜನೆ, ಓಪನ್ ಯಾವಾಗ?
ಬೆಂಗಳೂರು, ಜನವರಿ 17: ಸಿಲಿಕಾನ್ ಸಿಟಿ ಬೆಂಗಳೂರಿನ ಜಾಲಹಳ್ಳಿ ಸಮೀಪದ ಪೀಣ್ಯ ಮೇಲ್ಸೇತುವೆಯು ಜನವರಿ 19ರವರೆಗೆ ಮುಚ್ಚಲಾಗಿದೆ. ಲೋಸ್ಟ್ ಟೆಸ್ಟಿಂಗ್ ಹಿನ್ನೆಲೆಯಲ್ಲಿ ಎಲ್ಲ ರೀತಿಯ ವಾಹನಗಳಿಗೆ ನಿಷೇಧಿಸಲಾಗಿದ್ದು, ಇದರಿಂದ ಈ ಭಾಗದಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿದೆ. ಈ ಸಂಬಂಧ ಸುರಕ್ಷತೆ ಹಾಗೂ ನಿರ್ವಹಣೆ ದೃಷ್ಟಿಯಿಂದ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.
ಹೌದು, ಮೂರು ದಿನ ಬಂದ್ ಆಗಿರುವ ಪೀಣ್ಯ ಮೇಲ್ಸೇತುವೆ ಮೇಲೆ ಈ ಮೊದಲು ಲಘು ವಾಹನಗಳಿಗೆ ಅವಕಾಶ ನೀಡಿ, ಭಾರೀ ವಾಹನಗಳಿಗೆ ನಿಷೇಧ ಹೇರಲಾಗಿತ್ತು. ಇದೀಗ ದುರಸ್ತಿ ಕಾರ್ಯ ಪೂರ್ಣಗೊಂಡು ಲೋಡ್ ಹೊತ್ತ ಲಾರಿಗಳ ಮೂಲಕ ಮೇಲ್ಸೇತುವೆ ಲೋಡಿಂಗ್ ಪರೀಕ್ಷೆ ನಡೆಸಲಾಗುತ್ತಿದೆ. ಹೀಗಾಗಿ ಮೂರು ದಿನ ಎಲ್ಲ ರೀತಿಯ ವಾಹನಗಳಿಗೆ ಪ್ರವೇಶ ನಿಷೇಧಿಸಲಾಗಿದೆ.

ಸಂಚಾರ ದಟ್ಟಣೆ ಹೆಚ್ಚಳ
ಪೀಣ್ಯ ಫ್ಲೈಓವರ್ ಅನ್ನು ಮಂಗಳವಾರ ರಾತ್ರಿ 11 ರಿಂದ ಸಂಚಾರಕ್ಕೆ ಮುಚ್ಚಲಾಗಿದ್ದು, ಜನವರಿ 19 ರಂದು ಬೆಳಗ್ಗೆ ತೆರೆಯುವ ಸಾಧ್ಯತೆ ಇದೆ. ಸುಮಾರು 18 ಜಿಲ್ಲೆಗಳ ಜನರು ಇದೇ ಮಾರ್ಗವಾಗಿ ತುಮಕೂರು-ಬೆಂಗಳೂರು (NH4) ಮಾರ್ಗವಾಗಿ ಬೆಂಗಳೂರು ಪ್ರವೇಶಿಸಬೇಕಿದೆ. ಸದ್ಯ ನಿರ್ವಹಣೆ ಸಂಬಂಧ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಲೋಡ್ ಪರೀಕ್ಷೆ ನಡೆಸಲು ಮುಚ್ಚಿದೆ. ಎಲ್ಲಾ ವಿಧದ ವಾಹನಗಳಿಗೆ ತೊಂದರೆ ಆಗಿದೆ ಎಂದು ವರದಿ ಆಗಿದೆ.
ಬುಧವಾರ ಬೆಳಗ್ಗೆ ನೆಲಮಂಗಲ, ದಾಸರಹಳ್ಳಿ, ಜಾಲಹಳ್ಳಿ ಕ್ರಾಸ್ ಮತ್ತಿತರ ಕಡೆಗಳಲ್ಲಿ ಮುಂಜಾನೆ ಟ್ರಾಫಿಕ್ ಜಾಮ್ ಉಂಟಾಗಿದ್ದು ಕಂಡು ಬಂತು.

ಟ್ರಾಫಿಕ್‌ನಲ್ಲಿ ಸಿಲುಕಿಕೊಂಡ ಆಂಬ್ಯುಲೆನ್ಸ್
10 ನಿಮಿಷಕ್ಕೂ ಹೆಚ್ಚು ಕಾಲ ಮೇಲ್ಸೇತುವೆ ಕೆಳಗಿನ ರಸ್ತೆಯಲ್ಲಿ ಆಂಬ್ಯುಲೆನ್ಸ್‌ವೊಂದು ಸಿಲುಕಿಕೊಂಡಿತ್ತು. ಸಂಚಾರ ಪೊಲೀಸರು ದಾರಿ ಮಾಡಿಕೊಟ್ಟ ನಂತರ ಆಂಬುಲೆನ್ಸ್ ತೆರಳಿತು. ಉಪ ಪೊಲೀಸ್ ಆಯುಕ್ತರು (ಸಂಚಾರ) ದಟ್ಟಣೆಯಲ್ಲಿ ನಿರ್ವಹಿಸಿದರು. ಇದರ ನಿರ್ವಹಣೆಗಾಗಿ ಒಟ್ಟು 50 ಮಂದಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಪೀಣ್ಯ ಮತ್ತು ಜಾಲಹಳ್ಳಿ ಜಂಕ್ಷನ್‌ನಲ್ಲಿ ವಾಹನ ದಟ್ಟಣೆಯಿಂದ ಸಂಚಾರ ನಿಧಾನವಾಗಿದೆ. ಪ್ರಯಾಣಿಕರು ಈ ರಸ್ತೆಗಳ ಮೂಲಕ ಪ್ರಯಾಣ ಬೆಳೆಸುವುದನ್ನು ಕಡಿಮೆ ಮಾಡುವಂತೆ ಮನವಿ ಮಾಡಲಾಗಿದೆ. ಸಂಚಾರ ನಿರ್ವಹಣೆಗೆ ಗರಿಷ್ಠ ಸಿಬ್ಬಂದಿ ನಿಯೋಜಿಸಲಾಗಿದೆ. ನಗರದ ಮಲ್ಲೇಶ್ವರಂ, ಯಶವಂತಪುರ, ಪೀಣ್ಯ ಠಾಣೆಗಳ ಸಿಬ್ಬಂದಿ ಜತೆಗೆ 30ಕ್ಕೂ ಹೆಚ್ಚು ಪೊಲೀಸರನ್ನು ಸಂಚಾರ ನಿರ್ವಹಣೆಗೆ ನಿಯೋಜಗೊಂಡಿದ್ದಾರೆ ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ.
ಪೀಣ್ಯ ಮೇಲ್ಸೇತುವೆ ಮುಚ್ಚಲು ಕಾರಣ?
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಜನವರಿ 9 ರಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದರು. ಅದರಲ್ಲಿ ಮೇಲ್ಸೇತುವೆ ಮೇಲೆ ವಿವಿಧ ಪರೀಕ್ಷೆಗಳಿಂದಾಗಿ ಮೂರು ದಿನಗಳ ಕಾಲ ಫ್ಲೈಓವರ್ ಅನ್ನು ಮುಚ್ಚುವ ಬಗ್ಗೆ ತಿಳಿಸಿತ್ತು.
ಒಟ್ಟು 38.5 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಪೀಣ್ಯ ಮೇಲ್ಸೇತುವೆಯನ್ನು ದುರಸ್ತಿಗೊಳಿಸಲಾಗಿತ್ತು. NHAI ಈಗ ಕೆಲಸದ ಗುಣಮಟ್ಟವನ್ನು ಪರಿಶೀಲಿಸಲು ವಿವಿಧ ಪರೀಕ್ಷೆಗಳನ್ನು ನಡೆಸುತ್ತಿದೆ. ಲೋಡ್ ಪರಿಶೀಲನೆ ನಡೆಸಿದ ಬಳಿಕ ಮೇಲ್ಸೇತುವೆ ಮೇಲೆ ಭಾರೀ ವಾಹನಗಳನ್ನು ಅನುಮತಿಸಲಾಗುವುದು ಎಂದು ಪ್ರಾಧಿಕಾರ ತಿಳಿಸಿದೆ.
ಮೇಲ್ಸೇತುವೆಯಲ್ಲಿ ಎಲ್ಲ ರೀತಿಯ ತಪಾಸಣೆಗಳು ನಡೆದ ಬಳಿಕ ಶುಕ್ರವಾರ ಬೆಳಗ್ಗೆ 11 ರ ನಂತರ ಫ್ಲೈಓವರ್‌ನಲ್ಲಿ ವಾಹನಗಳಿಗೆ ಸಂಚಾರಕ್ಕೆ ಅವಕಾಶ ನೀಡಲು NHAI ನಿರ್ಧರಿಸಿದೆ.












Click it and Unblock the Notifications