ಧರ್ಮಸ್ಥಳ ಕೇಸ್: ಕೇಂದ್ರ ಸೇವೆಗೆ SIT ಮುಖ್ಯಸ್ಥ ಪ್ರಣವ್ ಮೊಹಾಂತಿ? ಜಿ.ಪರಮೇಶ್ವರ ಸ್ಪಷ್ಟನೆ
ಬೆಂಗಳೂರು, ಜುಲೈ 31: ಕೇಂದ್ರ ಸರ್ಕಾರದ ಡೆಪ್ಯೂಟೇಷನ್ ಪಟ್ಟಿಯಲ್ಲಿ SIT ಮುಖ್ಯಸ್ಥರಾಗಿರುವ ಪೊಲೀಸ್ ಮಹಾನಿರ್ದೇಶಕ ಪ್ರಣವ್ ಮೊಹಾಂತಿ ಅವರ ಹೆಸರಿದ್ದು, ಅವರನ್ನು ಕೇಂದ್ರ ಸೇವೆಗೆ ಕಳುಹಿಸುವ ಬಗ್ಗೆ ರಾಜ್ಯ ಸರ್ಕಾರ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಸ್ಪಷ್ಟಪಡಿಸಿದರು. ಸದ್ಯ ಮೊಹಾಂತಿ ಅವರು ಧರ್ಮಸ್ಥಳದಲ್ಲಿ ಹೂತಿಟ್ಟ ಶವ ಪ್ರಕರಣಗಳ ತನಿಖೆಯ ಭಾಗವಾಗಿದ್ದಾರೆ.
ಗುರುವಾರ ಬೆಂಗೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಈ ಬಗ್ಗೆ ಬಹಳಷ್ಟು ತಪ್ಪು ಕಲ್ಪನೆಗಳನ್ನು ಹುಟ್ಟು ಹಾಕಲಾಗುತ್ತಿದೆ. ಡಿಜಿ ಹಂತದ ಅಧಿಕಾರಿ ಎಸ್‌ಐಟಿ ಮುಖ್ಯಸ್ಥರನ್ನಾಗಿ ಮಾಡಬೇಕು ಎಂದು ಸರ್ಕಾರ ತೀರ್ಮಾನ ಮಾಡಿತು. ಪ್ರಣವ್ ಮೊಹಾಂತಿಯವರನ್ನು ನೇಮಿಸಿದ್ದೇವೆ. ಕೇಂದ್ರ ಸರ್ಕಾರದ ಡೆಪ್ಯೂಟೇಷನ್ ಪಟ್ಟಿಯಲ್ಲಿ ಅವರ ಹೆಸರಿದೆ. ಅವರನ್ನು ಕೇಂದ್ರದ ಸೇವೆಗೆ ಕಳುಹಿಸುವ ಬಗ್ಗೆ ರಾಜ್ಯ ಸರ್ಕಾರ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದರು.

ಇದೆಲ್ಲ ನೋಡಿದರೆ ಸಾರ್ವಜನಿಕರು ಧರ್ಮಸ್ಥಳ ಪ್ರಕರಣ ತನಿಖೆ ದಾರಿ ತಪ್ಪಿಸುವ ಒಳ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ಏಕೆಂದರೆ ತನಿಖೆ ತಂಡದಲ್ಲಿರುವ ಮೊಹಾಂತಿ ಅವರ ಹೆಸರು ಕೇಂದ್ರದ ಪಟ್ಟಿಯಲ್ಲಿ ಸೇರಿಸಿದ್ದೇಕೆ ಎಂದು ಹಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ಕೇಂದ್ರ ಪಟ್ಟಿಯಲ್ಲಿರುವವರನ್ನು ಎಸ್‌ಐಟಿಯಲ್ಲಿ ಸೇರಿದ್ದನ್ನು ಶಂಕಿಸಿದ್ದಾರೆ.
ಮುಂದುವರಿದು ಮಾತನಾಡಿದ ಸಚಿವರು, ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಇಲ್ಲಸಲ್ಲದ ಪೋಸ್ಟಿಂಗ್‌ಗಳನ್ನು ಮಾಡಲಾಗುತ್ತಿದೆ. ಇದು ಸರಿಯಲ್ಲ. ಪ್ರಕರಣದಲ್ಲಿ ಸರ್ಕಾರದ ಆಸಕ್ತಿ ಏನಿದೆ? ಎಸ್‌ಐಟಿ ಯಾಕೆ ರಚಿಸುತ್ತಿದ್ದೆವು ಎಂದು ಪ್ರಶ್ನಿಸಿದ ಅವರು, ಪ್ರಕರಣದಲ್ಲಿ ಸತ್ಯಾಂಶ ಹೊರಬರಬೇಕು ಎಂಬುದಷ್ಟೆ ಸರ್ಕಾರಕ್ಕೆ ಮುಖ್ಯ ಎಂದರು.
ಈ ನಿಟ್ಟಿನಲ್ಲಿ ಎಸ್‌ಐಟಿ ಮಾಡಿದ್ದೇವೆ. ಎಸ್‌ಐಟಿ ತನಿಖೆ ನಡೆಸಿ, ವರದಿ ಸಲ್ಲಿಸಿದ ನಂತರ ಸತ್ಯಾಸತ್ಯತೆ ಹೊರಬರುತ್ತವೆ. ನಮಗೆ ಬೇಕಿರುವುದು ಅಷ್ಟೆ. ಇದರಲ್ಲಿ ಯಾವುದೇ ರಾಜಕೀಯ ಅಲ್ಲ. ಯಾರನ್ನು ರಕ್ಷಣೆ ಮಾಡಬೇಕು, ಯಾರನ್ನೋ ಸಿಕ್ಕಿಹಾಕಿಸಬೇಕು ಎಂಬ ಅಜೆಂಡಾ ಸರ್ಕಾರಕ್ಕೆ ಖಂಡಿತವಾಗಿಯೂ ಇಲ್ಲ. ಯಾರು ಕೂಡ ಅದನ್ನು ತಪ್ಪು ಭಾವನೆಯಿಂದ ನೋಡಬಾರದು. ಪಾರದರ್ಶಕವಾಗಿ ತನಿಖೆ ಮಾಡಬೇಕು ಎಂದು ಹೇಳಿದ್ದೇವೆ. ಇದು ಸರ್ಕಾರಕ್ಕೆ ಇರುವ ಅಜೆಂಡಾ ಎಂದು ತಿಳಿಸಿದರು.
ಒಳಮೀಸಲಾತಿ ವಿಚಾರದಲ್ಲಿ ಬೇಸರ ಬೇಡ
ಒಳಮೀಸಲಾತಿ ಕುರಿತಂತೆ ನಾಗಮೋಹನ್ ದಾಸ್ ಅವರು ಸರ್ಕಾರಕ್ಕೆ ವರದಿ ಕೊಡುವ ಮೊದಲು ನಾವು ಚರ್ಚೆ ಮಾಡೋಣ. ಈ ವಿಚಾರದಲ್ಲಿ ಯಾರಿಗು ಸಹ ಬೇಸರ ಆಗುವುದು ಬೇಡ. ನಮ್ಮಲ್ಲಿರುವ ಅಭಿಪ್ರಾಯಗಳನ್ನು ಸರಿ ಮಾಡಿಕೊಳ್ಳೋಣ ಎಂಬ ನಿಟ್ಟಿನಲ್ಲಿ ಸಭೆ ಕರೆದಿದ್ದೇನೆ. ಚರ್ಚೆ ನಂತರ ಅಭಿಪ್ರಾಯಗಳು ಗೊತ್ತಾಗಲಿವೆ ಎಂದು ಹೇಳಿದರು.
ಒಳಮೀಸಲಾತಿ ವರದಿ ಪೂರ್ಣವಾಗಿದೆ ಎಂದು ಹೇಳಲಾಗುತ್ತಿದೆ. ಇನ್ನು ವರದಿ ಸಲ್ಲಿಸಿಲ್ಲ. ಸದ್ಯದಲ್ಲಿ ಸಲ್ಲಿಸುತ್ತೇವೆ ಎಂದಿದ್ದಾರೆ. ಒಳ ಪಂಗಡಗಳ ಬಗ್ಗೆ ಚರ್ಚೆ ಮಾಡಿಕೊಳ್ಳುವುದು ಸೂಕ್ತ. ಒಳಮೀಸಲಾತಿ ಕುರಿತು ಶಾಸಕರು ಮಾತಾಡಿಕೊಳ್ಳುವುದಿಕ್ಕೆ ಯಾರು ಬ್ರೆಕ್ ಹಾಕುವುದಿಲ್ಲ.
ಬೆಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯಲ್ಲಿ ಎಸ್‌ಒಪಿ ಮಾಡಿಕೊಂಡಿದ್ದಾರೆ. ಅದನ್ನು ಇಂಪ್ಲಿಮೆಂಟ್ ಮಾಡುತ್ತಾರೆ. ಇಲಾಖೆಗೆ ಅನೇಕ ಅನುಭವಗಳಾಗಿವೆ. ಆದ್ದರಿಂದ ಲಕ್ಷಾಂತರ ಜನ ಸೇರುವ ನಿರೀಕ್ಷೆ ಮಾಡುವುದಿಲ್ಲ. ಹತ್ತಿರದ ಜಿಲ್ಲೆಗಳಿಂದ ಮುಖಂಡರು, ಕಾರ್ಯಕರ್ತರು ಬರುತ್ತಾರೆ ಎಂದು ಅಧ್ಯಕ್ಷರು ತಿಳಿಸುತ್ತಾರೆ. ಎಲ್ಲ ರೀತಿಯ ಎಚ್ಚರಿಕೆಯನ್ನು ಪೊಲೀಸ್ ಇಲಾಖೆ ವತಿಯಿಂದ ತೆಗೆದುಕೊಳ್ಳುತ್ತೇವೆ. ರಾಹುಲ್ ಗಾಂಧಿಯವರಿಗೆ ಝಡ್ ಪ್ಲಸ್ ಸೆಕ್ಯೂರಿಟಿ ಕೊಟ್ಟಿರುತ್ತಾರೆ ಎಂದು ವಿವರಿಸಿದರು.
ಬೆಂಗಳೂರಿನಲ್ಲಿ ಸ್ಪೀಪರ್ ಸೆಲ್‌ಗಳಿವೆ ಎಂದು ಈ ಹಿಂದೆ ವರದಿಯಾಗಿತ್ತು. ತನಿಖಾ ಏಜೆನ್ಸಿ ಪತ್ತೆಹಚ್ಚಿದ್ದಾರೆ. ಅಲ್‌ಖೈದಾ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಮಹಿಳೆ ಕರ್ನಾಟಕದವಳಲ್ಲ. ಈ ಬಗ್ಗೆ ತನಿಖಾ ಸಂಸ್ಥೆಯವರು ಮಾಹಿತಿ ಹಂಚಿಕೊಂಡಿಲ್ಲ ಎಂದು ತಿಳಿಸಿದರು.
ಬೆಂಗಳೂರು ನಗರದಲ್ಲಿ ಇಲಾಖೆ ವತಿಯಿಂದ ಟೋಯಿಂಗ್ ಆರಂಭಿಸುತ್ತೇವೆ. ಈ ಹಿಂದೆ ಗುತ್ತಿಗೆ ನೀಡಲಾಗಿತ್ತು. ಈ ಬಾರಿ ಪೊಲೀಸರೇ ಟೋಯಿಂಗ್ ಮಾಡುತ್ತಾರೆ. ಯಾವುದೇ ಕಂಪನಿಗೆ ಗುತ್ತಿಗೆ ನೀಡುವುದಿಲ್ಲ. ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸುತ್ತಿರುವುದರಿಂದ ಟ್ರಾಫಿಕ್‌ಗೆ ಸಮಸ್ಯೆಯಾಗುತ್ತಿದೆ. ಎಲ್ಲಿ ಪಾರ್ಕಿಂಗ್ ಆಗಬಾರದು ಎಂಬ ನಿಯಮ ಇರುತ್ತದೆಯೋ, ಜನರು ಅಲ್ಲಿಯೇ ವಾಹನಗಳನ್ನು ಪಾರ್ಕಿಂಗ್ ಮಾಡಿರುತ್ತಾರೆ. ಜನ ಓಡಾಡುವ ರಸ್ತೆಯಲ್ಲಿ ಪಾರ್ಕಿಂಗ್ ಮಾಡುವಂತಿಲ್ಲ ಎಂದು ಎಚ್ಚರಿಸಿದರು.












Click it and Unblock the Notifications