'ನಮ್ಮ ಮೆಟ್ರೋ' ಮೆಜೆಸ್ಟಿಕ್ ನಿಲ್ದಾಣದಲ್ಲಿ ಹಳಿಗೆ ಬಿದ್ದ ಇಬ್ಬರು ಅಂಧ ಪ್ರಯಾಣಿಕರು
ಬೆಂಗಳೂರು, ಆಗಸ್ಟ್ 19: ಬೆಂಗಳೂರು ನಮ್ಮ ಮೆಟ್ರೋ ನಿಲ್ದಾಣದಲ್ಲಿ ಆತ್ಮಹತ್ಯೆ, ಬೇಕಿದ್ದೋ, ಆಕಸ್ಮಾತ್ ಆಗಿಯೋ ಮೆಟ್ರೋ ಟ್ರ್ಯಾಕ್‌ಗೆ ಜಿಗಿಯುವ ಘಟನೆಗಳು ಮೇಲಿಂದ ಮೇಳೆ ಮರುಕಳಿಸುತ್ತಿವೆ. ಇತ್ತೀಚೆಗೆ ಇಂದಿರಾನಗರ ಮೆಟ್ರೋ ನಿಲ್ದಾಣದ ಘಟನೆ ಮಾಸುವ ಮುನ್ನವೇ ನಗರದ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಇಬ್ಬರು ಅಂಧ ಪ್ರಯಾಣಿಕರು ಟ್ರ್ಯಾಕ್‌ಗೆ ಬಿದ್ದ ಘಟನೆ ನಡೆದಿದೆ.
ಹೌದು, ಈ ಕುರಿತು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಅಧಿಕೃತ ಮಾಹಿತಿ ನೀಡಿದೆ. ಇಂದು ಮಧ್ಯಾಹ್ನ ಗಂಟೆ 1.13ರ ಸುಮಾರಿಗೆ ಹಸಿರು ಮಾರ್ಗದ ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್ ನಲ್ಲಿ ಜಯನಗರದಿಂದ ಅತ್ತಿಗುಪ್ಪೆ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದ ಮೂವರು ಪ್ರಯಾಣಿಕರಲ್ಲಿ (ಅಂಧರು) ಇಬ್ಬರು ಆಸ್ಮಿಕವಾಗಿ ಹಳಿ ಮೇಲೆ ಬಿದ್ದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೂಡಲೇ ಎಚ್ಚೆತ್ತ ಮೆಟ್ರೋ ನಿಲ್ದಾಣದಲ್ಲಿನ ಭದ್ರತಾ ಸಿಬ್ಬಂದಿ ತುರ್ತು ಟ್ರಿಪ್ ಸಿಸ್ಟಂ ಕಾರ್ಯಾಚರಣೆ ನಡೆಸಿ ಸಹ ಪ್ರಯಾಣಿಕರ ನೆರವಿನಿಂದ ರಕ್ಷಿಸಿದ್ದಾರೆ. ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ದೃಢಪಟ್ಟಿದೆ. ಮಧ್ಯಾಹ್ನ ಗಂಟೆ 1.26 ಕ್ಕೆ ಎಂದಿನಂತೆ ರೈಲು ಕಾರ್ಯಾಚರಣೆ ಪುನರಾರಂಭಿಸಲಾಯಿತು ಎಂದು ಪ್ರಕಟಣೆಯಲ್ಲಿ BMRCL ತಿಳಿಸಿದೆ.
ಇತ್ತೀಚೆಗೆ ದೊಡ್ಡಕಲ್ಲಸಂದ್ರ ಮೆಟ್ರೋ ನಿಲ್ದಾಣದಲ್ಲಿ 57 ವರ್ಷದ ವ್ಯಕ್ತಿಯೊಬ್ಬರು ಟ್ರ್ಯಾಕ್‌ಗೆ ಜಿಗಿದು ಮೃತಪಟ್ಟಿದ್ದರು. ಇದಕ್ಕು ಮೊದಲು ನಮ್ಮ ಮೆಟ್ರೋ ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಲ್ಲಿ ಯುವಕ ಬರುವ ರೈಲಿಗೆ ತಲೆಯೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂತಹ ಘಟನೆಗಳು ಆಗಾಗ ಸಂಭವಿಸುತ್ತಲೇ ಇವೆ. ಆದ್ದರಿಂದ ಹೆಚ್ಚಿನ ಸುರಕ್ಷತೆ, ಪಿಎಸ್‌ಡಿ ಅವಳವಡಿಕೆ ತುರ್ತಾಗಿ ನಡೆಯಬೇಕಿದೆ..












Click it and Unblock the Notifications