ಕರ್ನಾಟಕ ಸರ್ಕಾರ ತೆರೆದ 'ನಮ್ಮ ಕ್ಲಿನಿಕ್'ಗಳು ಬಿಜೆಪಿ ಪ್ರಚಾರದ ಕೇಂದ್ರಗಳು
ರಾಜ್ಯ ಬಿಜೆಪಿ ಸರ್ಕಾರ ಉದ್ಘಾಟಿಸಿರುವ 'ನಮ್ಮ ಕ್ಲಿನಿಕ್' ಕೇವಲ ಪ್ರಚಾರ ಕೇಂದ್ರಗಳಾಗಿವೆ. ವೈದ್ಯಕೀಯ ಸೌಲಭ್ಯ ನೀಡದೇ ಜನರ ಭಾವನೆಗಳ ಜೊತೆಗೆ ಚೆಲ್ಲಾಟವಾಡುತ್ತಿದೆ. ಆಮ್ ಆದ್ಮಿ ಪಕ್ಷ ಹೀಗೆ ಹೇಳಲು ಕಾರಣ ಇಲ್ಲಿದೆ ನೋಡಿ.
ಬೆಂಗಳೂರು, ಫೆಬ್ರವರಿ 08: ರಾಜ್ಯ ಬಿಜೆಪಿ ಸರ್ಕಾರ ಉದ್ಘಾಟಿಸಿರುವ 'ನಮ್ಮ ಕ್ಲಿನಿಕ್' ಕೇವಲ ಪ್ರಚಾರ ಕೇಂದ್ರಗಳಾಗಿವೆ. ವೈದ್ಯಕೀಯ ಸೌಲಭ್ಯ ನೀಡದೇ ಜನರ ಭಾವನೆಗಳ ಜೊತೆಗೆ ಚೆಲ್ಲಾಟವಾಡುತ್ತಿದೆ. ವರ್ಷಕ್ಕೆ 36 ಲಕ್ಷ ರೂ.ನಲ್ಲಿ ಆಸ್ಪತ್ರೆ ನಡೆಸಲು ಹೇಗೆ ಸಾಧ್ಯ ಎಂದು ಆಮ್ ಆದ್ಮಿ ಪಕ್ಷ (AAP) ಪ್ರಶ್ನೆ ಮಾಡಿದೆ.
ಬೆಂಗಳೂರಿನಲ್ಲಿ ಪಕ್ಷದ ಕೇಂದ್ರ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, ರಾಜ್ಯ ಬಿಜೆಪಿ ಸರ್ಕಾರ ಅಗತ್ಯ ವೈದ್ಯಕೀಯ ಸೌಲಭ್ಯ ಕೊಡದೇ ಜನರ ಭಾವನೆಗಳ ಜೊತೆ ಆಟವಾಡುತ್ತಿದೆ. ನಮ್ಮ ಕ್ಲಿನಿಕ್ ಹೇಗಿದೆ ಎಂದು ಪರಿಶೀಲಿಸಲು ಎಎಪಿ ತಂಡ ತೆರಳಿತ್ತು. ಅವು ನಮ್ಮ ಕ್ಲಿನಿಕ್‌ಗಳು ಅಲ್ಲ, ಬಿಜೆಪಿ ಪ್ರಚಾರ ಕೇಂದ್ರಗಳಾಗಿವೆ ಎಂದು ಅವರು ದೂರಿದರು.
ಕ್ಲಿನಿಕ್‌ಗಳಲ್ಲಿ ಹಾಕಿರುವ ಬಿಜೆಪಿ ನಾಯಕರ ಭಾವಚಿತ್ರಗಳು, ಬ್ಯಾನರ್ ಮತ್ತು ಅಲ್ಲಿನ ಅವ್ಯವಸ್ಥೆಗಳನ್ನು ನೋಡಿದ್ದು, ಇವು ಬಿಜೆಪಿ ಪ್ರಚಾರ ಕೇಂದ್ರ ಎಂಬುದು ಗೊತ್ತಾಗಿದೆ. ದೆಹಲಿಯಲ್ಲಿ ಎಎಪಿ 500 ಮೊಹಲ್ಲಾ ಕ್ಲಿನಿಕ್ ತೆರೆದಿದೆ. ಮುಂದಿನ ದಿನಗಳಲ್ಲಿ ಇನ್ನು 500 ಕ್ಲಿನಿಕ್ ತೆರೆಯುವ ಪ್ರಯತ್ನದಲ್ಲಿದೆ. ಆದರೆ ಇಲ್ಲಿ ಬಿಜೆಪಿ ಸರ್ಕಾರ 438 ನಮ್ಮ ಕ್ಲಿನಿಕ್‌ಗಳಿಗೆ ಮಾತ್ರ ಯೋಜನೆ ರೂಪಿಸಿದೆ. ಆ ಪೈಕಿ ಬೆಂಗಳೂರಲ್ಲಿ 243, ಇನ್ನಿತರ ಕಡೆಗಳಲ್ಲಿ ಬರೀ 195 ಕ್ಲಿನಿಕ್‌ಗೆ ತೆರೆಯಲು ನಿರ್ಧರಿಸಿದೆ ಎಂದು ವಿವರಿಸಿದರು.

ಎಎಪಿ ಬೆಂಗಳೂರಿನ ಶಾಂತಿನಗರದಲ್ಲಿ 2 ವರ್ಷದಿಂದ ಆಮ್ ಆದ್ಮಿ ಕ್ಲಿನಿಕ್ ನಡೆಸುತ್ತಿದೆ. ಇದು ಬೆಳಗ್ಗೆ ಮಾತ್ರ ತೆರೆದಿರುತ್ತಿದ್ದು, ತಿಂಗಳಿಗೆ 8ರಿಂದ 10 ಲಕ್ಷ ರೂಪಾಯಿ ಖರ್ಚಾಗುತ್ತಿದೆ. ಸರ್ಕಾರದ ನಮ್ಮ ಕ್ಲಿನಿಕ್‌ಗಳು ಸಂಜೆಯವರೆಗೂ ತೆರೆದಿರುವುದರಿಂದ ಎರಡು ಪಟ್ಟು ಹೆಚ್ಚು ಖರ್ಚು ಆಗಲಿದೆ. ಬಿಜೆಪಿ ತೆರೆದಿರುವ ಕ್ಲಿನಿಕ್‌ಗೆ ವಾರ್ಷಿಕ 36 ಲಕ್ಷ ಹಣ ನೀಡುವುದಾಗಿ ತಿಳಿಸಿದೆ. ಇದು ಅಲ್ಲಿನ ಸಿಬ್ಬಂದಿ ವೇತನ, ಬಾಡಿಗೆಗೆ ಸಾಕಾಗುವುದಿಲ್ಲ ಎಂದರು.
ಸಾರ್ವಜನಿಕರಿಗೆ ಉತ್ತಮ ವೈದ್ಯಕೀಯ ಸೇವೆ ಒದಗಿಸಬೇಕು. ದೆಹಲಿಯಲ್ಲಿ ಮೊಹಲ್ಲಾ ಕ್ಲಿನಿಕ್, ಪಾಲಿಕ್ಲಿನಿಕ್ ನಂತಹ ವ್ಯವಸ್ಥಿತ ಆಸ್ಪತ್ರೆಗಳಿವೆ. 'ನಮ್ಮ ಕ್ಲಿನಿಕ್' ಕೇಂದ್ರಗಳಲ್ಲಿ ತಪಾಸಣೆ ನಡೆಸಿದ ಬಳಿಕ ರೋಗಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ಅವರಿಗೆ ಮುಂದಿನ ಆಸ್ಪತ್ರೆಗೆ ಶಿಫಾರಸು ಮಾಡಬೇಕು. ಅಂತಹ ವ್ಯವಸ್ಥೆ ಇಲ್ಲಿ ದುಸ್ಥಿತಿಯಲ್ಲಿ ಎಂದು ಪೃಥ್ವಿ ರೆಡ್ಡಿ ತಿಳಿಸಿದರು.
ಮುಖ್ಯಮಂತ್ರಿಗಳು ನಮ್ಮ ಕ್ಲಿನಿಕ್ ನಲ್ಲಿ ಟೆಲಿಮೆಡಿಸಿನ್ ವ್ಯವಸ್ಥೆ ಇದೆ ಎಂದಿದ್ದಾರೆ. ರೋಗಿಯನ್ನು ವೈದ್ಯರು ನೋಡದೇ ಟೆಲಿಮೆಡಿಸಿನ್ ಮಾಡಲು ಸಾಧ್ಯವೇ. ಎಎಪಿ ಮೊಹಲ್ಲಾ ಕ್ಲಿನಿಕ್ ನಕಲು ಮಾಡಲು ಹೋಗಿ ಬಿಜೆಪಿ ಈ ಕ್ಲಿನಿಕ್‌ಗಳನ್ನು ತೆರೆದಿದೆ. ರಾಜಕೀಯ ಕಾರಣಕ್ಕೆ ಇಂದಿರಾ ಕ್ಯಾಂಟೀನ್ ಅನ್ನು ಸರ್ಕಾರ ಹಾಳುಗೆಡವಿತು. ಇದೀಗ ಕ್ಲಿನಿಕ್ ಹೆಸರಿನಲ್ಲಿ ಜನವರಿಗೆ ಮತ್ತೊಂದು ವಂಚನೆ ಮಾಡಲು ಹೊರಟಿದೆ ಎಂದು ಅವರು ಆರೋಪಿಸಿದರು.
ಈ ವೇಳೆ ಎಎಪಿಯ ರಾಜ್ಯ ಕಾರ್ಯದರ್ಶಿ ಬಿ.ಟಿ.ನಾಗಣ್ಣ ಹಾಗೂ ವಕ್ತಾರೆ ಉಷಾ ಮೋಹನ್ ಭಾಗವಹಿಸಿದ್ದರು.












Click it and Unblock the Notifications