Bengaluru Weather: ಬೆಂಗಳೂರಿಗೆ ಶೀಘ್ರವೇ ಡಾಪ್ಲರ್ ವೆದರ್ ರಾಡಾರ್; ಕೇಂದ್ರ ಸಚಿವರಿಗೆ ಶೋಭಾ ಕರಂದ್ಲಾಜೆ ಪತ್ರ
ದೇಶದಲ್ಲಿ ಹಲವು ಪ್ರಮುಖ ಕ್ಷೇತ್ರಗಳಲ್ಲಿ ಕರ್ನಾಟಕ ಮುಂದಿದ್ದರೂ, ಹವಾಮಾನ ಪರಿವೀಕ್ಷಣೆ ವಿಚಾರದಲ್ಲಿ ಮಾತ್ರ ಹಿಂದುಳಿದಿದೆ. ರಾಜ್ಯದ ಹವಾಮಾನ ಮುನ್ಸೂಚನೆಯನ್ನು ನಿಖರವಾಗಿ ಅರಿಯಲು ಡಾಪ್ಲರ್ ವೆದರ್ ರಾಡಾರ್ ಅಗತ್ಯವಿದ್ದು, ಹಲವು ವರ್ಷಗಳಿಂದ ಬೇಡಿಕೆಯಾಗಿ ಉಳಿದಿದೆ.
ಅತಿ ಶೀಘ್ರದಲ್ಲೇ ಬೆಂಗಳೂರಿನಲ್ಲಿ ಡಾಪ್ಲರ್ ವೆದರ್ ರಾಡಾರ್ ಸ್ಥಾಪನೆಗೆ ಈಗ ಸಂಸದೆ ಶೋಭಾ ಕರಂದ್ಲಾಜೆ ಆಸಕ್ತಿ ತೋರಿಸಿದ್ದು, ಈ ಬಗ್ಗೆ ಕೇಂದ್ರ ಸಚಿವರಿಗೆ ಪತ್ರ ಬರೆದು ಮನವಿ ಕೂಡ ಮಾಡಿದ್ದಾರೆ.

ಸಂಸದೆ ಶೋಬಾ ಕರಂದ್ಲಾಜೆ ಅವರು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದು. ಶೀಘ್ರದಲ್ಲೇ ಡಾಪ್ಲರ್ ವೆದರ್ ರಾಡಾರ್ ಸ್ಥಾಪನೆ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಬೆಂಗಳೂರು ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದ್ದೇವೆ, ಜಲಾವೃತಗೊಂಡ ಬೀದಿಗಳಲ್ಲಿ ಅಲೆದಾಡುತ್ತಿದ್ದೇವೆ ಮತ್ತು ಮಳೆ ಯಾವಾಗ ನಿಲ್ಲುತ್ತದೆ ಎಂದು ನಿರೀಕ್ಷೆ ಮಾಡುತ್ತೇವೆ. ಆದರೆ ಆ ಧಾರಾಕಾರ ಮಳೆಗಳನ್ನು ನಾವು ಊಹಿಸಲು ಮತ್ತು ತಯಾರಿ ಮಾಡಲು ಸಾಧ್ಯವಾದರೆ ಹೇಗೆ? ನಾನು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಿ ಡಾ ಜಿತೇಂದ್ರ ಸಿಂಗ್ ಅವರಿಗೆ ಪತ್ರ ಬರೆದಿದ್ದೇನೆ.
ಬೆಂಗಳೂರಿಗೆ ಡಾಪ್ಲರ್ ಹವಾಮಾನ ರಾಡಾರ್ ಬೇಕೆಂದು ಮನವಿ ಮಾಡಿದ್ದೇನೆ. ಇದು ನಮ್ಮ ಹವಾಮಾನ ಮುನ್ಸೂಚನೆ ಸಾಮರ್ಥ್ಯಗಳಲ್ಲಿ ಕ್ರಾಂತಿಯನ್ನುಂಟು ಮಾಡುತ್ತದೆ, ನಮಗೆ ಮುಂಚಿನ ಮತ್ತು ನಿಖರವಾದ ಎಚ್ಚರಿಕೆಗಳನ್ನು ನೀಡುತ್ತದೆ ಎಂದು ಹೇಳಿದ್ದಾರೆ.
ನೈಸರ್ಗಿಕ ವಿಪತ್ತುಗಳನ್ನು ಕಡಿಮೆ ಮಾಡಲು ಮತ್ತು ನಮ್ಮ ನಗರವು ಯಾವುದೇ ಹವಾಮಾನ ವೈಪರೀತ್ಯಕ್ಕೆ ಸಿದ್ಧವಾಗಿದೆ ಎಂದು ಖಚಿತಪಡಿಸಿಕೊಳ್ಳಲು ತಂತ್ರಜ್ಞಾನವನ್ನು ಬಳಸಿಕೊಳ್ಳುವ ಸಮಯ ಇದು. ವಿಪತ್ತು ತಡೆಗೆ ಬೆಂಗಳೂರನ್ನು ಮಾದರಿಯನ್ನಾಗಿ ಮಾಡೋಣ ಎಂದು ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಹಲವು ವರ್ಷಗಳಿಂದ ಇದೆ ಬೇಡಿಕೆ
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಬೆಂಗಳೂರಿನಲ್ಲಿ ಡಾಪ್ಲರ್ ವೆದರ್ ರಾಡಾರ್ (ಡಿಡಬ್ಲ್ಯೂಆರ್) ಸ್ಥಾಪಿಸಲು ಹಲವು ವರ್ಷಗಳಿಂದ ಪ್ರಯತ್ನ ಮಾಡುತ್ತಿದೆ. ಬೆಂಗಳೂರಿನಲ್ಲಿ ಬಹುಮಹಡಿ ಕಟ್ಟಡಗಳ ಮೇಲ್ಛಾವಣಿಯಲ್ಲಿ ಸ್ಥಳಾವಕಾಶಕ್ಕಾಗಿ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಿಗೆ ಸುದೀರ್ಘ ಹುಡುಕಾಟ ಮಾಡಿದೆ.
ಈಗ ಜಕ್ಕೂರಿನಲ್ಲಿ ಡಾಪ್ಲರ್ ವೆದರ್ ರಾಡಾರ್ ಸ್ಥಾಪಿಸಲು ಹವಾಮಾನ ಇಲಾಖೆ ಅಧಿಕಾರಿಗಳು ಯೋಜಿಸಿದ್ದು, ಇದಕ್ಕೆ ವಾಯುಪಡೆಗೆ ಮೇಲ್ಮನವಿಗಳನ್ನು ಕಳುಹಿಸಿದ್ದಾರೆ. ರಾಡಾರ್ ಸ್ಥಾಪನೆಗೆ ಸ್ಥಳ ಅಂತಿಮವಾದ ಬಳಿಕೆ ಯೋಜನೆಗೆ ಮತ್ತಷ್ಟು ವೇಗ ಸಿಗುವ ಸಾಧ್ಯತೆ ಇದೆ.
ರಾಜ್ಯದಲ್ಲಿ ಮಳೆ ಮುನ್ಸೂಚನೆ ನೀಡಲೂ ಇಂದಿಗೂ ತಮಿಳುನಾಡು ಮತ್ತು ಕೇರಳದಲ್ಲಿರುವ ಡಾಪ್ಲರ್ ವೆದರ್ ರಾಡಾರ್ ಗಳನ್ನು ಅವಲಂಭಿಸಲಾಗಿದೆ. ಇದು ಸರಿಯಾದ ಹವಾಮಾನ ಮುನ್ಸೂಚನೆ ನೀಡಲು ಹವಾಮಾನ ಇಲಾಖೆಗೆ ಕಠಿಣವಾಗಿದೆ.












Click it and Unblock the Notifications