ಬ್ರ್ಯಾಂಡ್ ಬೆಂಗಳೂರು ಅಲ್ಲ ಗುಂಡಿ ಬೆಂಗಳೂರು ಎಂದೆಲ್ಲ ಅವಹೇಳನ ಮಾಡ್ಬೇಡಿ ಮಳೆ ಬಂದಾಗ ಗುಂಡಿ ಬೀಳ್ತಾವೆ ಎಂದ ಜಿ ಪರಮೇಶ್ವರ
ಬೆಂಗಳೂರು ಮೇ 25: ಬ್ರ್ಯಾಂಡ್ ಬೆಂಗಳೂರು ಅಲ್ಲ ಗುಂಡಿ ಬೆಂಗಳೂರು ಎಂದೆಲ್ಲ ಅವಹೇಳನ ಮಾಡ್ಬೇಡಿ ಮಳೆ ಬಂದಾಗ ಗುಂಡಿ ಬೀಳ್ತಾವೆ ಎಂದು ಸಚಿವ ಜಿ ಪರಮೇಶ್ವರ ಹೇಳಿದ್ದಾರೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಳೆ ಬಂದಾಗ ಗುಂಡಿ ಬಿಳ್ಳುತ್ತವೆ. ಅದಕ್ಕಾಗಿ ನೀವು ಅವಹೇಳನ ಮಾಡುವುದು ಸರಿಯಲ್ಲ. ಇದರಿಂದ ಬೇರೆ ದೇಶದವರಿಗೆ, ಹೊರಗಿನವರಿಗೆ ಯಾವ ಸಂದೇಶ ನೀಡುತ್ತೀರಿ ಎಂದು ಪರಮೇಶ್ವರ ಪ್ರಶ್ನೆ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ಜನ ಬೇಸತ್ತು ಹೋಗಿದ್ದಾರೆ. ಯಾಕೆಂದರೆ ಮಳೆ ಬಂದರೆ ಸಾಕು ರಸ್ತೆಗಳಲ್ಲಿ ಬೃಹತ್ ಗುಂಡಿಗಳು ಬಾಯಿ ತೆರೆಯುತ್ತವೆ. ಇದರಿಂದ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ವಾಹನ ಚಲಾಯಿಸುವ ಅನಿವಾರ್ಯತೆ ಎದುರಾಗಿದೆ.
ಈ ನಡುವೆ ಬೆಂಗಳೂರನ್ನು ಬ್ರ್ಯಾಂಡ್ ಬೆಂಗಳೂರು ಮಾಡಬೇಕೆಂದು ಡಿಸಿಎಂ ಡಿಕೆ ಶಿವಕುಮಾರ್ ಯೋಜನೆ ಬಗ್ಗೆ ಬಿಜೆಪಿ ಟೀಕಿಸಿದೆ. ಇದು ಬ್ರ್ಯಾಂಡ್ ಬೆಂಗಳೂರು ಆಗುವುದಿರಲಿ ಗುಂಡಿ ಬೆಂಗಳೂರು ಆಗುತ್ತಿದೆ ಎಂದು ಆಕ್ರೋಶ ಹೊರ ಹಾಕಿದೆ. ಇದಕ್ಕೆ ಇಂದು ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಸಚಿವ ಪರಮೇಶ್ವರ್, ಬಿಜೆಪಿ ಆಡಳಿತದಲ್ಲಿ ಗುಂಡಿಗಳು ಆಗಿರಲಿಲ್ಲವಾ? ಎಲ್ಲರ ಆಡಳಿತದಲ್ಲಿಯೂ ರಸ್ತೆಯಲ್ಲಿ ಗುಂಡಿಗಳಾಗುತ್ತವೆ ಎಂದು ತಿರುಗೇಟು ಕೊಟ್ಟಿದ್ದಾರೆ.

ಮಳೆಗಾಲದಲ್ಲಿ ರಸ್ತೆ ಗುಂಡಿಗಳು, ಪ್ರವಾಹ, ನೆರೆಯಂಥ ಪರಿಸ್ಥಿತಿಗಳು ಸಾಮಾನ್ಯ. ನಮ್ಮಲ್ಲಿ ಚರಂಡಿ ವ್ಯವಸ್ಥೆಗಳು ಸರಿ ಇಲ್ಲ. ಅನೇಕ ಸಮಸ್ಯೆಗಳು ಇರುತ್ತವೆ. ಅವುಗಳನ್ನೆಲ್ಲ ಸರಿಪಡಿಸಬೇಕು. ಇವೆಲ್ಲ ದೊಡ್ಡ ಕೆಲಸ ಕಾರ್ಯಗಳು. ಆದರೆ ಈ ಬಗ್ಗೆ ಅವಹೇಳನ ಸಲ್ಲ ಎಂದು ಅವರು ಹೇಳಿದರು.
ಬ್ರ್ಯಾಂಡ್ ಬೆಂಗಳೂರು ಅಲ್ಲ ಗುಂಡಿ ಬೆಂಗಳೂರು ಎಂದೆಲ್ಲ ಅವಹೇಳನ ಮಾಡುವುದು ಸರಿಯಲ್ಲ. ನಮ್ಮವರೇ ಬೆಂಗಳೂರನ್ನು ಅವಹೇಳನ ಮಾಡಬಾರದು. ಈ ರೀತಿ ಹೇಳಿಕೆ ಹೊರ ದೇಶದವರಿಗೆ, ಹೊರಗಿನವರಿಗೆ ಏನು ಸಂದೇಶ ನೀಡಿದಂತಾಗುತ್ತದೆ? ನಮ್ಮ ವಿರುದ್ಧ ಟೀಕೆ ಮಾಡಿ. ಆದರೆ ಹೊರಗೆ ತಪ್ಪು ಸಂದೇಶ ಕೊಡಬಾರದು. ಜವಬ್ದಾರಿಯಿಂದ ವರ್ತಿಸಿ ಎಂದು ಬಿಜೆಪಿ ವಿರುದ್ಧ ಸಚಿವ ಜಿ ಪರಮೇಶ್ವರ ಕಿಡಿ ಕಾರಿದರು.
ಬೆಂಗಳೂರು ರಸ್ತೆಯಲ್ಲಿ ಗುಂಡಿಗಳ ಸರಮಾಲೆ:
ಅಂದಹಾಗೆ ಬೆಂಗಳೂರನ್ನು ಗುಂಡಿ ಬೆಂಗಳೂರು ಎನ್ನಲು ಕಾರಣವೂ ಇದೆ. ಬೆಂಗಳೂರು ನಗರದ ವಾರ್ಡ್ ರಸ್ತೆಗಳಲ್ಲಿ 5,500 ಗುಂಡಿಗಳಿವೆ. ಮುಖ್ಯ ರಸ್ತೆಗಳು ಹಾಗೂ ಉಪ ರಸ್ತೆಗಳಲ್ಲಿ 557 ಗುಂಡಿಗಳಿವೆ. 67 ರಸ್ತೆಗಳು ಹದಗೆಟ್ಟಿವೆ. ಇದನ್ನು ಮುಚ್ಚಲು ಹಾಗೂ ನಿರ್ವಹಣೆ ಮಾಡಲು ವಿಶೇಷ ಕಾರ್ಯಪಡೆ ರಚನೆ ಮಾಡಲಾಗುವುದು ಎಂದು ಕಳೆದ ಕೆಲ ದಿನಗಳ ಹಿಂದೆ ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಆದರೆ ಆದರೆ ಗುಂಡಿ ಮುಚ್ಚುವ ಕಾರ್ಯ ಮಾತ್ರ ಚುರುಕುಗೊಂಡಿಲ್ಲ.
ಸರ್ಕಾರದ 'ಬ್ರ್ಯಾಂಡ್ ಬೆಂಗಳೂರು' ಪರಿಕಲ್ಪನೆ
ಬೆಂಗಳೂರು ಸರ್ವತೋಮುಖ ಅಭಿವೃದ್ಧಿ ಹಾಗೂ ಬೆಂಗಳೂರನ್ನು ಜಾಗತಿಕ ಆಕರ್ಷಣೆಯ ಕೇಂದ್ರವನ್ನಾಗಿ ಮಾಡುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅಧ್ಯಕ್ಷತೆಯಲ್ಲಿ 'ಬ್ಯಾಂಡ್ ಬೆಂಗಳೂರು ಅಭಿಯಾನ' ವನ್ನು ಆರಂಭಿಸಿದೆ.
ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯಡಿ ಸುಸ್ಥಿರ ನಗರ ಯೋಜನೆ, ಒಳಚರಂಡಿ ವ್ಯವಸ್ಥೆಗಳು, ದಕ್ಷ ಸಾರಿಗೆ ವ್ಯವಸ್ಥೆಗಳು ಮತ್ತು ಸ್ಮಾರ್ಟ್ ಟ್ರಾಫಿಕ್ ನಿರ್ವಹಣೆ, ಪಾದಚಾರಿ ಸ್ನೇಹಿ ರಸ್ತೆಗಳು, ನಾಗರಿಕರ ಸುರಕ್ಷತೆ ಮತ್ತು ಅನುಕೂಲಕ್ಕಾಗಿ ಪ್ರಮುಖ ಸ್ಥಾನವನ್ನು ನೀಡುತ್ತದೆ. ಮಾಲಿನ್ಯ ರಹಿತ ಮತ್ತು ಹಸಿರು ನಗರವನ್ನಾಗಿ ಮಾಡಲು ಉತ್ತಮ ಯೋಜಿತ ಪಾದಚಾರಿ ಮಾರ್ಗಗಳು, ಮೀಸಲಾದ ಸೈಕ್ಲಿಂಗ್ ಮಾರ್ಗಗಳು ಮತ್ತು ಹಸಿರು ಸ್ಥಳಗಳು ಸಕ್ರಿಯ ಸಾರಿಗೆ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಇದು ಉತ್ತೇಜಿಸಲಿದೆ.












Click it and Unblock the Notifications