ಕೆಪಿಎಸ್‍ಸಿ ಅಕ್ರಮದ ವಿರುದ್ಧ ಲೋಕಸತ್ತಾ ಹೋರಾಟ
ಬೆಂಗಳೂರು, ಜ.6 : ಕೆಪಿಎಸ್‍ಸಿ ಹಗರಣದ ವಿರುದ್ಧ ಲೋಕಸತ್ತಾ ಪಕ್ಷ ತನ್ನ ಪ್ರತಿಭಟನೆಯನ್ನು ಮುಂದುವರೆಸಿದೆ. ಭಾನುವಾರ ಪಕ್ಷದ ಕಾರ್ಯಕರ್ತರು ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಗೋನಾಳ ಭೀಮಪ್ಪ ಅವರ ಮನೆ ಮುಂದೆ ಧರಣಿ ನಡೆಸಿ ಆರೋಪಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಭಾನುವಾರ ಬೆಳಗ್ಗೆ 11 ಗಂಟೆಗೆ ಹೊಸೂರು ರಸ್ತೆಯ ಸಿಲ್ಕ್ ಬೋರ್ಡ್‍ನಿಂದ ಬೈಕ್ ರ್‍ಯಾಲಿಯ ಮುಖಾಂತರ ಆಗಮಿಸಿದ ಲೋಕಸತ್ತಾ ಪಕ್ಷದ 60 ಕಾರ್ಯಕರ್ತರು ಗೋನಾಳ್ ಭೀಮಪ್ಪ ಅವರ ಮನೆ ಮುಂದೆ ಮತ್ತು ಸುತ್ತಮುತ್ತಲಿನ ರಸ್ತೆಗಳಲ್ಲಿ ಪ್ರತಿಭಟನೆ ಮತ್ತು ಘೋಷಣೆಗಳನ್ನು ಕೂಗಿ, ಮನೆಗಳಿಗೆ ಕರಪತ್ರ ಹಂಚಿದರು. ಪಕ್ಷದ ಕಾರ್ಯಕಾರಿ ಸಮಿತಿ ಸದಸ್ಯರಾದ ರವಿ ಕೃಷ್ಣಾರೆಡ್ಡಿ, ಶಾಂತಲಾ ದಾಮ್ಲೆ, ಮತ್ತು ಕಾರ್ಯದರ್ಶಿ ಸಿ.ಎನ್.ದೀಪಕ್ ಮುಂತಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು. [ಲೋಕಸತ್ತಾ ಉಪವಾಸ]

ಕಳೆದು ಒಂದು ತಿಂಗಳಿನಿಂದ ಲೋಕಸತ್ತಾ ಪಕ್ಷವು 2011ರ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಆದೇಶವನ್ನು ಹಿಂಪಡೆಯಬೇಕು, ಪ್ರಾಮಾಣಿಕ ಅಭ್ಯರ್ಥಿಗಳ ಹಿತ ಕಾಪಾಡಬೇಕು, ಅಕ್ರಮದಲ್ಲಿ ತೊಡಗಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ವಿವಿಧ ರೀತಿಯ ಹೋರಾಟವನ್ನು ನಡೆಸುತ್ತಿದೆ. ಸಿಐಡಿ ವರದಿಯನ್ನು ಬಹಿರಂಗ ಪಡಿಸಿದ್ದ ಪಕ್ಷ, ಅದನ್ನು ಕೆಪಿಎಸ್‍ಸಿ ಕಛೇರಿ ಮುಂದೆ ಸಾರ್ವಜನಿಕವಾಗಿ ಹಂಚಿ ಜನರಲ್ಲಿ ಜಾಗೃತಿ ಮೂಡಿಸಿತು. [ಕೆಪಿಎಸ್‌ಸಿ ಹಗರಣದ ಬಗ್ಗೆ ಕ್ರಮ ಕೈಗೊಳ್ಳಿ]
ಮುಖ್ಯಮಂತ್ರಿ ಸಿದ್ದರಾಮಯ್ಯ ಮನೆಯ ಮುಂದೆ ಧರಣಿ ನಡೆಸಿದ ಲೋಕಸತ್ತಾ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರನ್ನು ಕೆಲವು ದಿನಗಳ ಹಿಂದೆ ಬಂಧಿಸಲಾಗಿತ್ತು. ಮೂರು ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿ ಅಕ್ರಮದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು.
ಮುಖ್ಯಮಂತ್ರಿಗಳು ಕೆಪಿಎಸ್ ಸಿ ಅಕ್ರಮದ ಬಗ್ಗೆ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು. ಕೆಪಿಎಸ್ ಸಿಯನ್ನು ಯುಪಿಎಸ್ ಸಿ ಮಾದರಿಯಲ್ಲಿ ಪರಿವರ್ತಿಸಬೇಕು ಎಂದು ಪಕ್ಷ ಮುಖ್ಯಮಂತ್ರಿಗಳಿಗೆ ಆಗ್ರಹಿಸಿದೆ. ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದ್ದರೆ, ಲೋಕಸತ್ತಾ ಪಕ್ಷವು ಹೋರಾಟ ತೀವ್ರಗೊಳಿಸುತ್ತದೆ ಎಂದು ಎಚ್ಚರಿಕೆ ನೀಡಿದೆ.












Click it and Unblock the Notifications