KSRTC: ಸಾಲು ಸಾಲು ರಜೆ: ಊರುಗಳಿಗೆ ತೆರಳುವವರಿಗೆ ಹೆಚ್ಚುವರಿ ಬಸ್ ವ್ಯವಸ್ಥೆ, ಟ್ರಾಫಿಕ್ ಜಾಮ್
ಬೆಂಗಳೂರು, ಆಗಸ್ಟ್ 15: ಸ್ವಾತಂತ್ರೋತ್ಸವದ ರಜಾ ದಿನ, ವೀಕೆಂಡ್ ಹಾಗೂ ಸೋಮವಾರ ರಕ್ಷಾ ಬಂಧನ ಪ್ರಯುಕ್ತ ಸಾಲು ಸಾಲು ರಜೆಗಳು ಇವೆ. ಹೀಗಾಗಿ ರಾಜಧಾನಿಯಿಂದ ತಮ್ಮ ಊರುಗಳಿಗೆ, ರಾಜ್ಯಗಳಿಗೆ ತೆರಳುವವರ ಸಂಖ್ಯೆ ಹೆಚ್ಚಾಗಿ ಕಂಡು ಬಂತು. ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಹೆಚ್ಚುವರಿ ಒಟ್ಟು 510 ಬಸ್‌ಗಳನ್ನು ಬಿಡುಗಡೆ ಮಾಡಿದ್ದು, ಬುಧವಾರ ರಾತ್ರಿ ಮೆಜೆಸ್ಟಿಕ್ ಸುತ್ತಮುತ್ತ ಅತ್ಯಧಿಕ ಸಂಚಾರ ದಟ್ಟಣೆ ಕಂಡ ಬಂದಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಬೆಂಗಳೂರಿನಿಂದ ರಾಜ್ಯದ ಇತರ ಕಡೆಗೆ ತೆರಳುವವರಿಗೆ ಅನುಕೂಲವಾಗಲೆಂದು ಹೆಚ್ಚುವರಿಯಾಗಿ 450 ಬಸ್‌ಗಳನ್ನು ಬಿಟ್ಟಿದೆ. ಇನ್ನೂ ಇಲ್ಲಿಂದ ಹೊರ ರಾಜ್ಯಗಳಿಗೆ 60ಬಸ್‌ಗಳನ್ನು ಕಾರ್ಯಾಚರಣೆ ಮಾಡುತ್ತಿದೆ. ಈ ಪೈಕಿ ನೆನ್ನೆ ಪ್ರಯಾಣಿಕರು 150 ಬಸ್‌ಗಳನ್ನು ಬುಕ್ ಮಾಡಿದ್ದಾರೆ.

ಬಸ್ ಆಪರೇಟಿಂಗ್‌ಗೆ ಸಿಬ್ಬಂದಿ ನಿಯೋಜನೆ
ಹೆಚ್ಚುವರಿ ಬಸ್ ಬಿಡುವ ಜೊತೆಗೆ ಜಯನಗರ, ವಿಜಯನಗರ ಸೇರಿದಂತೆ ಬೆಂಗಳೂರಿನ ಎಲ್ಲ ಕೆಎಸ್‌ಆರ್‌ಟಿಸಿ ಬಸ್ ಟರ್ಮಿನಲ್ ಗಳಲ್ಲಿ ಹೆಚ್ಚವರಿ ಬಸ್ ಆಪರೇಟರ್ ಅಧಿಕಾರಿ, ಸಿಬ್ಬಂದಿ ನಿಯೋಜನೆ ಮಾಡಲಾಗಿತ್ತು ಎಂದು ನಿಗಮದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಾಲು ಸಾಲು ರಜೆ ಇರುವ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ತಮ್ಮ ತಮ್ಮ ಊರುಗಳಿಗೆ ತೆರಳುವವರ ಸಂಖ್ಯೆ ಹೆಚ್ಚಿದ್ದ ಕಾರಣ, ಮೆಜೆಸ್ಟಿಕ್, ಯಶವಂತಪುರ, ಕೆ.ಆರ್‌ಪುರಂ, ಸ್ಯಾಟ್‌ಲೈಟ್ ಸೇರಿದಂತೆ ವಿವಿಧ ಬಸ್ ನಿಲ್ದಾಣಗಳಲ್ಲಿ ಜನದಟ್ಟಣೆ ಕಂಡು ಬಂದಿದೆ.
ಪ್ರಮುಖ ರಸ್ತೆ, ವೃತ್ತ, ನಿಲ್ದಾಣಗಳಲ್ಲಿ ಜನ ದಟ್ಟಣೆ
ನಗರದ ಆನಂದ್ ರಾವ್ ವೃತ್ತ, ಮೆಜೆಸ್ಟಿಕ್ ಬಸ್ ನಿಲ್ದಾಣ, ಮೆಜೆಸ್ಟಿಕ್ ಮೆಟ್ರೋ ನಿಲ್ದಾಣ, ಮಹಾಲಕ್ಷ್ಮೀ ಲೇಔಟ್ ಮೆಟ್ರೋ ನಿಲ್ದಾಣ, ಯಶವಂತಪುರ ಮೆಟ್ರೋ ನಿಲ್ದಾಣ, ಕೆಂಗೇರಿ ಬಸ್ ನಿಲ್ದಾಣಗಳಲ್ಲಿ ಅತ್ಯಧಿಕ ಟ್ರಾಫಿಕ್ ಉಂಟಾಗಿತ್ತು. ಇಂದು ಗುರುವಾರವು ಸಹ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಊರುಗಳಿಗೆ ತೆರಳುವವರಿದ್ದಾರೆ. ಅವರೆಲ್ಲ ಕೆಎಸ್‌ಆರ್‌ಟಿಸಿ ಬಸ್ ಟಿಕೆಟ್ ಬುಕ್ಕಿಂಗ್ ಮಾಡಿಕೊಳ್ಳಬಹುದು.
ಇನ್ನೂ ಇದೇ ಸಮಯ ಎಂದುಕೊಂಡ ಖಾಸಗಿ ಬಸ್ ನಿರ್ವಾಹಕರು ಪ್ರಯಾಣಿಕರಿಂದ ಹೆಚ್ಚಿನ ಹಣ ಸುಲಿಗೆ ಮಾಡಿದ್ದು ಕಂಡು ಬಂದು ಮೆಜೆಸ್ಟಿಕ್ ಸುತ್ತಮುತ್ತ ಬೆಂಗಳೂರಿನಿಂದ ನಿಗದಿತ ಊರುಗಳಿಗೆ ತೆರಳುವ ಖಾಸಗಿ ಬಸ್‌ಗಳು ಟಿಕೆಟ್ ಹಣ ಸಾಮಾನ್ಯ ದಿನಗಳಿಗಿಂತ ದುಪ್ಪಟ್ಟು ನಿಗದಿ ಮಾಡಲಾಗಿದೆ.












Click it and Unblock the Notifications