KR Puram to Whitefield Metro: ಮಾರ್ಚ್ 25ಕ್ಕೆ ಉದ್ಘಾಟನೆಯಾಗಲಿರುವ ಕೆಆರ್ ಪುರಂ - ವೈಟ್‌ಫೀಲ್ಡ್ ಮೆಟ್ರೋ, ವಿವರಗಳು
ಕೆಆರ್ ಪುರಂ ಮತ್ತು ವೈಟ್‌ಫೀಲ್ಡ್ ಎರಡು ನಿಲ್ದಾಣಗಳ ನಡುವಿನ ಪ್ರಯಾಣ ದರ ಸುಮಾರು 35 ರೂಪಾಯಿ
ಬೆಂಗಳೂರು, ಮಾರ್ಚ್. 21: ಬಹು ನಿರೀಕ್ಷಿತ ಕೆಆರ್ ಪುರಂ ಮತ್ತು ವೈಟ್‌ಫೀಲ್ಡ್ ನಡುವಿನ ಮೆಟ್ರೋ ರೈಲು ಸೇವೆಯನ್ನು ಮಾರ್ಚ್ 25 ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಎರಡು ಸ್ಥಳಗಳ ನಡುವಿನ ರಸ್ತೆ ಮೂಲಕ ಪ್ರಯಾಣಿಸುವ ಪ್ರಸ್ತುತ ಒಂದು ಗಂಟೆ ಸಮಯವನ್ನು ಸರಾಸರಿ 23 ನಿಮಿಷಗಳಿಗೆ ಇಳಿಸಲಿದೆ.
ಎರಡು ಪ್ರದೇಶಗಳು 10 ರಿಂದ 12 ಕಿಮೀ ಅಂತರದಲ್ಲಿವೆ. ಆದರೆ ಎರಡರ ನಡುವೆ ಹಲವಾರು ಕೆಲಸದ ಸ್ಥಳಗಳು ಮತ್ತು ಐಟಿ ಪಾರ್ಕ್‌ಗಳ ಕೇಂದ್ರೀಕರಣದಿಂದಾಗಿ, ರಸ್ತೆಯ ಮೂಲಕ ಪ್ರಯಾಣಿಸಲು ಗರಿಷ್ಠ ಒಂದು ಗಂಟೆ ತೆಗೆದುಕೊಳ್ಳುತ್ತದೆ. ಈ ಮೆಟ್ರೋ ಮಾರ್ಗವು ಬೈಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್‌ವರೆಗೆ ವಿಸ್ತರಿಸಿದ ನೇರಳೆ ಮಾರ್ಗದ ಭಾಗವಾಗಿದ್ದು, ಇದನ್ನು ನಮ್ಮ ಮೆಟ್ರೋ ಯೋಜನೆಯ II ನೇ ಹಂತದ ಅಡಿಯಲ್ಲಿ ನಿರ್ಮಿಸಲಾಗಿದೆ.

ವಿಸ್ತೃತ ಪರ್ಪಲ್ ಲೈನ್‌ನ ಒಟ್ಟು ಉದ್ದವು 15 ಕಿಮೀ ಆಗಿದ್ದರೆ ಕೆಆರ್ ಪುರಂ ಮತ್ತು ವೈಟ್‌ಫೀಲ್ಡ್ ನಡುವಿನ ವಿಸ್ತರಣೆಯು 13.2 ಕಿಮೀ ಆಗಿದೆ. ಆದರೆ, ವಿಸ್ತರಣೆಯಲ್ಲಿ ಕಾರ್ಯಾಚರಣೆಗಳು ಯಾವಾಗ ಪ್ರಾರಂಭವಾಗುತ್ತವೆ ಎಂಬುದರ ಕುರಿತು ಯಾವುದೇ ಸ್ಪಷ್ಟತೆ ಇಲ್ಲ. ಬಿಎಂಆರ್ಸಿಎಲ್ ಸಹ ಕೆಆರ್ ಪುರಂ ಮೆಟ್ರೋ ನಿಲ್ದಾಣವನ್ನು ಬೈಯಪ್ಪನಹಳ್ಳಿಗೆ ಸಂಪರ್ಕಿಸುವ ನಿರೀಕ್ಷೆಯಿದೆ.
ಮೊದಲ ಹಂತದಲ್ಲಿ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ಕೆ.ಆರ್. ಪುರಂ ನಿಂದ ವೈಟ್‌ಫೀಲ್ಡ್ ಲೈನ್ ನಿರ್ಮಿಸಿದೆ. ಎರಡು ಸ್ಥಳಗಳ ನಡುವಿನ ಅಂತರವು ಸುಮಾರು 13 ಕಿ.ಮೀ. ಉಳಿದ ಭಾಗ ಬೆನ್ನಿಗಾನಹಳ್ಳಿ ಬಳಿ ರೈಲ್ವೆ ಹಳಿ ಮೇಲೆ ತೆರೆದ ವೆಬ್ ಗರ್ಡರ್ ನಿರ್ಮಾಣ ಮತ್ತು ಇತರ ಕಾಮಗಾರಿಗಳನ್ನು ಪೂರ್ಣಗೊಳಿಸಿದ ನಂತರ ಕೆ.ಆರ್ ಪುರಂನಿಂದ ಬೈಯಪ್ಪನಹಳ್ಳಿಗೆ ವರ್ಷದ ಮಧ್ಯದಲ್ಲಿ ಮೆಟ್ರೋ ರೈಲುಗಳು ಓಡಾಡುವ ಸಾಧ್ಯತೆಯಿದೆ.
ಇನ್ನು ಕೆಆರ್ ಪುರಂ ಮತ್ತು ವೈಟ್‌ಫೀಲ್ಡ್ ಎರಡು ನಿಲ್ದಾಣಗಳ ನಡುವಿನ ಪ್ರಯಾಣ ದರ ಸುಮಾರು 35 ರೂಪಾಯಿ ಆಗಿರಲಿದೆ ಎಂದು ಬಿಎಂಆರ್‌ಸಿಎಲ್ ಮೂಲಗಳು ತಿಳಿಸಿವೆ. ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ ಈ ಮಾರ್ಗದಲ್ಲಿ ಕಾರ್ಯನಿರ್ವಹಿಸಲು ಏಳು ರೈಲುಗಳನ್ನು ನಿರ್ಮಿಸಿದೆ. ಅದರಲ್ಲಿ ಐದು ರೈಲುಗಳನ್ನು 10 ರಿಂದ 12 ನಿಮಿಷಗಳ ಅಂತರದಲ್ಲಿ ಓಡಿಸಲಾಗುತ್ತದೆ.

ಬೈಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್‌ವರೆಗಿನ ಸಂಪೂರ್ಣ ಮಾರ್ಗ ಪೂರ್ಣಗೊಂಡ ನಂತರ ಮೆಟ್ರೋ ಪ್ರಯಾಣಿಕರ ಸಂಖ್ಯೆ 10 ಲಕ್ಷಕ್ಕೆ ಏರಲಿದೆ ಎಂದು ಬಿಎಂಆರ್‌ಸಿಎಲ್ ನಿರೀಕ್ಷಿಸಿದೆ. ಇನ್ನು, ಮೆಟ್ರೋ ಪ್ರಯಾಣಿಕರಿಗೆ ಸೇವೆ ನೀಡುವ ಉದ್ದೇಶದಿಂದ ಮೆಟ್ರೋ ನಿಲ್ದಾಣಗಳಲ್ಲಿ ಫೀಡರ್ ಬಸ್‌ಗಳು ಸಹ ಕಾರ್ಯನಿರ್ವಹಿಸಲಿವೆ.
ಮೆಟ್ರೋ ಮಾರ್ಗವನ್ನು ಉದ್ಘಾಟಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಹೊಸ ಮಾರ್ಗದಲ್ಲಿ ಪ್ರಯಾಣಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಸೇವೆಯನ್ನು ಉದ್ಘಾಟಿಸಲಿರುವ ಮೊದಲ ಪ್ರಧಾನಿ ನರೇಂದ್ರ ಮೋದಿ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಹಿಂದೆ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ, ಹಂತ I ಅಡಿಯಲ್ಲಿ ಎಂಜಿ ರಸ್ತೆಯಿಂದ ಬೈಯಪ್ಪನಹಳ್ಳಿಯವರೆಗೆ ನಮ್ಮ ಮೆಟ್ರೋ ಯೋಜನೆಗೆ ಅಡಿಪಾಯ ಹಾಕಿದ್ದರು.
ಹಲವು ವರ್ಷಗಳಿಂದ ಮೆಟ್ರೋ ನಿಲ್ದಾಣಗಳ ಉದ್ಘಾಟನೆಯನ್ನು ಕೇಂದ್ರ ಸಚಿವರೇ ಮಾಡುತ್ತಿದ್ದರು. 2017 ರಲ್ಲಿ, ಆಗಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ನಮ್ಮ ಮೆಟ್ರೋದ ಹಂತ I ರ ಅಡಿಯಲ್ಲಿ ನಿರ್ಮಿಸಲಾದ ಭೂಗತ ಮೆಟ್ರೋ ಮಾರ್ಗವನ್ನು ಉದ್ಘಾಟಿಸಿದ್ದರು. ಈ ಬಾರಿ ಮಾರ್ಚ್ 25 ರಂದು, ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನಲ್ಲಿ ಮೆಟ್ರೋ ಸೇವೆಗಳನ್ನು ಉದ್ಘಾಟಿಸಲಿದ್ದಾರೆ.












Click it and Unblock the Notifications