ಮೋದಿ ತಂತ್ರಕ್ಕೆ ಕರ್ನಾಟಕ ಕಾಂಗ್ರೆಸ್ ಪ್ರತಿತಂತ್ರ!
ಬೆಂಗಳೂರು, ಅ.21 : ಬೆಂಗಳೂರಿನಲ್ಲಿ ನಡೆದ ಕೆಪಿಸಿಸಿ ಕಾರ್ಯಕಾರಣಿ ಸಭೆಯಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ರಾಜ್ಯದಲ್ಲಿ ಹೆಚ್ಚು ಪ್ರಭಾವ ಬೀರದಂತೆ ರಣತಂತ್ರ ರೂಪಿಸಲಾಗಿದೆ. ಲೋಕಸಭಾ ಚುನಾವಣೆಗಳ ಕುರಿತು ಚರ್ಚೆ ನಡೆಸಿ ಕೆಲವು ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಈ ಮೂಲಕ ಲೋಕಸಭೆ ಚುನಾವಣೆಗೆ ಸಿದ್ಧತೆ ಆರಂಭಿಸಿದೆ.
ಶನಿವಾರ ನಗರದ ಖಾಸಗಿ ಹೋಟೆಲ್ ನಲ್ಲಿ ಕೆಪಿಸಿಸಿ ಕಾರ್ಯಕಾರಣಿ ಸಭೆ ನಡೆಯಿತು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ನಡೆದ ಮೊದಲ ಕಾರ್ಯಕಾರಣಿ ಸಭೆ ಇದಾಗಿದ್ದು, ಭಾರೀ ಕುತೂಹಲ ಮೂಡಿಸಿತ್ತು. ಎಐಸಿಸಿ ಕಾರ್ಯದರ್ಶಿ ಶಾಂತಕುಮಾರ್ ನಾಯಕ್ ನೇತೃತ್ವದಲ್ಲಿ ಸಭೆ ನಡೆಯಿತು.
ಲೋಕಸಭೆ ಚುನಾವಣೆ ಸಿದ್ಧತೆ, ನಿಗಮ-ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷರ ನೇಮಕ ಮುಂತಾದವ ವಿಚಾರಗಳ ಕುರಿತು ಸಭೆಯಲ್ಲಿ ವಿವರವಾದ ಚರ್ಚೆ ನಡೆಸಲಾಗಿದೆ. ರಾಜ್ಯದಲ್ಲಿ ಯುಪಿಎ ಸರ್ಕಾರ ಸಾಧನೆಗಳನ್ನು ಜನರಿಗೆ ತಲುಪಿಸಿ, ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳಿಸುವ ಕುರಿತು ಚರ್ಚೆ ನಡೆದಿದೆ.
ಸಭೆಯ ನಂತರ ಪತ್ರಿಕಾಗೋಷ್ಠಿ ನಡೆಸಿದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಕಾರ್ಯಕಾರಣಿ ಸಭೆಯ ವಿವರಗಳನ್ನು ನೀಡಿದರು. ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಸಭೆಗೆ ಗೈರು ಹಾಜರಾಗಿದ್ದರು. ಹಿರಿಯ ನಾಯಕ ಎಸ್.ಎಂ.ಕೃಷ್ಣ, ಕೇಂದ್ರ ಸಚಿವರಾದ ವೀರಪ್ಪ ಮೊಯ್ಲಿ, ಮಲ್ಲಿಕಾರ್ಜುನ ಖರ್ಗೆ ಸಭೆಗೆ ಆಗಮಿಸಿರಲಿಲ್ಲ. (ಸಭೆಯ ನಿರ್ಣಯಗಳು)

ನಿಗಮ ಮಂಡಳಿ ನೇಮಕ
ನಿಗಮ ಮಂಡಳಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಎರಡು ಹಂತದಲ್ಲಿ ನೇಮಕ ಮಾಡಲು ಸಭೆ ನಿರ್ಧರಿಸಿದೆ. ಹೈ ಕಮಾಂಡ್ ನಾಯಕರು ಲೋಕಸಭೆ ಚುನಾವಣೆ ಸಿದ್ಧತೆಯಲ್ಲಿ ತೊಡಗಿದ್ದಾರೆ. ಆದ್ದರಿಂದ ಲೋಕಸಭೆ ಚುನಾವಣೆಯ ನಂತರವೇ ಅಧ್ಯಕ್ಷ-ಉಪಾಧ್ಯಕ್ಷರ ನೇಮಕವಾಗುವ ಸಾಧ್ಯತೆ ಇದೆ.

ಬೆಂಗಳೂರಿನಲ್ಲಿ ಎಐಸಿಸಿ ಅಧಿವೇಶನ
ಮುಂದಿನ ಎಐಸಿಸಿ ಸಭೆಯನ್ನು ಬೆಂಗಳೂರಿನಲ್ಲಿ ಆಯೋಜಿಸುವಂತೆ ಎಐಸಿಸಿಗೆ ಮನವಿ ಮಾಡಲು ಕಾರ್ಯಕಾರಣಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಬ್ಲಾಕ್ ಹಾಗೂ ಜಿಲ್ಲಾ ಕಾಂಗ್ರೆಸ್ ಮಟ್ಟದಲ್ಲೂ ತಿಂಗಳಿಗೆ ಒಂದು ಕಾರ್ಯಕಾರಿಣಿ ಸಭೆಯನ್ನು ಕಡ್ಡಾಯವಾಗಿ ಮಾಡುವ ಕುರಿತು ನಿರ್ಧರಿಸಲಾಗಿದೆ.

ಡಿಸೆಂಬರ್ ನಲ್ಲಿ ಅಭ್ಯರ್ಥಿಗಳ ಪಟ್ಟಿ
2014ರ ಲೋಕಸಭಾ ಚುನಾವಣೆ ಅಭ್ಯರ್ಥಿಗಳ ಪಟ್ಟಿಯನ್ನು ಡಿಸೆಂಬರ್ ನಲ್ಲಿ ಬಿಡುಗಡೆ ಮಾಡಲು ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಈಗಾಗಲೇ ಕೆಪಿಸಿಸಿ ವೀಕ್ಷಕರು ಪ್ರತಿ ಕ್ಷೇತ್ರದಲ್ಲಿನ ಮೂರು ಅಥವ ನಾಲ್ಕು ಸಾಂಭವ್ಯ ಅಭ್ಯರ್ಥಿಗಳ ಪಟ್ಟಿ ತಯಾರಿಸಿದ್ದಾರೆ. ಇದನ್ನು ಅಂತಿಮಗೊಳಿಸಿ ಹೈಕಮಾಂಡ್ ನಾಯಕರಿಗೆ ಕಳುಹಿಸಿ ಅಂತಿಮಗೊಳಿಸಲು ನಿರ್ಧರಿಸಲಾಗಿದೆ.

ಕೇವಿಯಟ್ ಸಲ್ಲಿಕೆ
ಜೆಡಿಎಸ್ ಕಚೇರಿ ಕಾಂಗ್ರೆಸ್‌ಗೆ ಸೇರಿದ್ದು ಎಂಬ ಹೈಕೋರ್ಟ್ ಆದೇಶದ ಹಿನ್ನಲೆಯಲ್ಲಿ ಶೀಘ್ರದಲ್ಲೇ ಕಟ್ಟಡ ಪಡೆಯಲು ಕಾನೂನು ಕ್ರಮ ಕೈಗೊಳ್ಳುವುದು. ಜೆಡಿಎಸ್ ಸುಪ್ರೀಂಕೋರ್ಟ್ ಮೆಟ್ಟಿಲೇರಲು ಮುಂದಾದರೆ ಕೇವಿಯಟ್ ಸಲ್ಲಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಮೈಸೂರಿನಲ್ಲಿ ಜಿಲ್ಲಾ ಕಾಂಗ್ರೆಸ್‌ಗಾಗಿ ನೂತನ ಕಟ್ಟಡ ನಿರ್ಮಾಣ ಮಾಡುವ ಹೊಣೆಯನ್ನು ಸಿಎಂ ಸಿಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಹಿಸಲಾಗಿದೆ.

ಮೋದಿ ತಂತ್ರಕ್ಕೆ ಪ್ರತಿತಂತ್ರ
ರಾಜ್ಯದಲ್ಲಿ ನರೇಂದ್ರ ಮೋದಿ ಪ್ರಭಾವ ಬೀರದಂತೆ ತಪ್ಪಿಸುವ ಕುರಿತು ಕಾರ್ಯಕಾರಣಿ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಯಡಿಯೂರಪ್ಪ ಭ್ರಷ್ಟಾಚಾರದ ಬಗ್ಗೆ ಮೌನವಾಗಿರುವ ಬಿಜೆಪಿಯನ್ನು ಟೀಕಿಸುತ್ತಾ, ಜನರಿಗೆ ಯುಪಿಎ ಸರ್ಕಾರ ಸಾಧನೆ ತಲುಪಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಬಿಜೆಪಿ ವಿರುದ್ಧದ ಹೋರಾಟದ ಕುರಿತು ನವೆಂಬರ್ ನಲ್ಲಿ ರೂಪುರೇಷೆ ತಯಾರಾಗಲಿದೆ.

ಸರ್ಕಾರದ ಸಾಧನೆ ಜನರಿಗೆ ತಿಳಿಸುವುದು
ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಿದ ರಾಜ್ಯದ ಜನರಿಗೆ ಕೃತಜ್ಞತೆ ಸಲ್ಲಿಸುವುದು ಮತ್ತು ಅನ್ನಭಾಗ್ಯ, ಕ್ಷೀರಭಾಗ್ಯದಂತಹ ಜನಪ್ರಿಯ ಕಾರ್ಯಕ್ರಮ ಹಾಗೂ ಅಕ್ರಮ ಗಣಿಗಾರಿಕೆಯನ್ನು ಸಿಬಿಐಗೆ ವಹಿಸಿದ ದಿಟ್ಟ ಕ್ರಮ ಕೈಗೊಂಡ ರಾಜ್ಯ ಸರ್ಕಾರದ ಸಾಧನೆಯನ್ನು ಜನರಿಗೆ ತಲುಪಿಸುವುದು. ಈ ಮೂಲಕ ಲೋಕಸಭಾ ಚುನಾವಣಾ ಪ್ರಚಾರ ಕಾರ್ಯವನ್ನು ಕೈಗೊಳ್ಳವುದು.

ಯುಪಿಎ ಸಾಧನೆ ಜನರ ಬಳಿಗೆ
ಹೈ-ಕಗೆ ವಿಶೇಷ ಸ್ಥಾನಮಾನ ನೀಡಿದ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುವುದು. ಆಹಾರ ಭದ್ರತೆ, ಕಡ್ಡಾಯ ಶಿಕ್ಷಣದಂತಹ ಜನಪರ ಯೋಜನೆ ಜಾರಿಗೊಳಿಸಿದ ಪ್ರಧಾನಮಂತ್ರಿ ಹಾಗೂ ಯುಪಿಎ ಅಧಕ್ಷೆ ಸೋನಿಯಾ ಗಾಂಧಿ ಅವರಿಗೆ ಅಭಿನಂದನೆ ಸಲ್ಲಿಸಿ, ಜನರಿಗೆ ಈ ಸಾಧನೆಗಳನ್ನು ತಲುಪಿಸಿ, ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಬೆಂಬಲ ನೀಡುವಂತೆ ಮನವಿ ಮಾಡುವುದು.

ದಿಗ್ವಿಜಯ್ ಗೈರು
ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ ಸಿಂಗ್ ಅವರು ಕಾರ್ಯಕಾರಣಿ ಸಭೆಗೆ ಗೈರು ಹಾಜರಾಗಿದ್ದರು.ಐದು ರಾಜ್ಯಗಳ ಚುನಾವಣೆ ಸಿದ್ಧತೆ ಹಿನ್ನೆಲೆಯಲ್ಲಿ ಮಧ್ಯಪ್ರದೇಶಕ್ಕೆ ತೆರಳಿದ್ದ ಅವರು ಸಭೆಗೆ ಗೈರಯ ಹಾಜರಾಗಿದ್ದರು. ಮಾಜಿ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ, ಕೇಂದ್ರ ಸಚಿವರಾದ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ ಸೇರಿದಂತೆ ಹಲವು ನಾಯಕರ ಗೈರು ಹಾಜರಿ ಎದ್ದು ಕಾಣುತ್ತಿತ್ತು.












Click it and Unblock the Notifications