ಕೆಜೆಪಿ ಸಂಸ್ಥಾಪಕ ಪ್ರಸನ್ನ ಕುಮಾರ್ ನಾಪತ್ತೆ

ಶನಿವಾರ ಮಧ್ಯಾಹ್ನ ಬೆಂಗಳೂರಿನ ಅಶೋಕ ನಗರ ಠಾಣೆಗೆ ಪದ್ಮನಾಭ ಪ್ರಸನ್ನ ಕುಮಾರ್ ಕಾಣೆಯಾಗಿದ್ದಾರೆ ಎಂದು ಅವರ ತಂದೆ ನಂಜುಡಪ್ಪ ದೂರು ನೀಡಿದ್ದಾರೆ. ಡಿ.6ರಿಂದ ನನ್ನ ಮಗ ನಾಪತ್ತೆಯಾಗಿದ್ದಾನೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಡಿ.6ರ ಶುಕ್ರವಾರ ಪದ್ಮನಾಭ ಪ್ರಸನ್ನ ಕುಮಾರ್ ಅವರು ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡುತ್ತೇನೆ ಎಂದು ಮನೆಯಿಂದ ಹೋಗಿದ್ದರು. ಅಂದಿನಿಂದ ಅವರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಅವರು ನಾಪತ್ತೆಯಾಗಿದ್ದಾರೆ ಎಂದು ಪ್ರಸನ್ನ ಕುಮಾರ್ ತಂದೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಹೇಳಿದ್ದಾರೆ.
ಯಡಿಯೂರಪ್ಪನವರನ್ನು ಕೆಜೆಪಿಯಿಂದ ಕಿತ್ತುಹಾಕಿ ಕರ್ನಾಟಕ ರಾಜಕೀಯದಲ್ಲಿ ಫೆಬ್ರವರಿಯಲ್ಲಿ ಸಂಚಲನವೆಬ್ಬಿಸಿದ್ದ ಕರ್ನಾಟಕ ಜನತಾ ಪಕ್ಷದ ಸಂಸ್ಥಾಪಕ ಪದ್ಮನಾಭ ಪ್ರಸನ್ನ ಕುಮಾರ್ ಅವರು, ನಂತರ ಯಡಿಯೂರಪ್ಪನವರಿಂದ ಕೊಲೆ ಬೆದರಿಕೆ ಇದೆ ಎಂದು ಚೆನ್ನೈನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಗಳಗಳನೆ ಅತ್ತು ಸುದ್ದಿ ಮಾಡಿದ್ದರು. [ರಕ್ಷಣೆ ಬೇಕೆಂದು ಗಳಗಳನೆ ಅತ್ತ]
ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ನಕಲಿ ದಾಖಲೆಗಳ ಮೂಲಕ ಕೆಜೆಪಿ ಪಕ್ಷದ ಅಧ್ಯಕ್ಷ ಸ್ಥಾನವನ್ನು ಪಡೆದಿದ್ದಾರೆ ಎಂದು ಆರೋಪಿಸಿ, ಹೈಕೋರ್ಟ್ ಮತ್ತು ಚುನಾವಣಾ ಆಯೋಗಕ್ಕೂ ದೂರು ನೀಡಿದ್ದರು. ಅವುಗಳ ವಿಚಾರಣೆ ಮುಗಿದು ಕೆಜೆಪಿಗೆ ಯಡಿಯೂರಪ್ಪ ಅವರು ಅಧಿಕೃತ ಅಧ್ಯಕ್ಷರು ಎಂದು ತೀರ್ಪು ಪ್ರಕಟವಾದ ಬಳಿಕ ಪ್ರಸನ್ನ ಕುಮಾರ್ ಬಹಿರಂಗವಾಗಿ ಕಾಣಿಸಿಕೊಂಡಿರಲಿಲ್ಲ.
ಕೆಲವು ದಿನಗಳ ಹಿಂದೆ ಕೆಜೆಪಿ ಪಕ್ಷ ಸ್ಥಾಪನೆಗೊಂಡು ಒಂದು ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲೂ ಪ್ರಸನ್ನ ಕುಮಾರ್ ಕಾಣಿಸಿಕೊಂಡಿರಲಿಲ್ಲ. ಸದ್ಯ ಅವರ ತಂದೆ ನಂಜುಡಪ್ಪ ಯಡಿಯೂರಪ್ಪ ಭೇಟಿಯಾಗಲು ಹೋಗಿ ನಾಪತ್ತೆಯಾಗಿದ್ದಾರೆ ಎಂದು ದೂರು ನೀಡಿದ್ದಾರೆ.












Click it and Unblock the Notifications