ಡ್ರಗ್ಸ್ ಮಾರಾಟ ಅರೋಪಿ ವಿದ್ಯಾರ್ಥಿಗೆ ಜಾಮೀನು ತಿರಸ್ಕರಿಸಿದ ಹೈಕೋರ್ಟ್
ಬೆಂಗಳೂರು, ಅ. 29: ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ ಕೇರಳ ಮೂಲದ 24 ವರ್ಷದ ವಿದ್ಯಾರ್ಥಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ನಿರಾಕರಿಸಿದೆ. ಅಲ್ಲದೆ, ಮಾದಕ ವಸ್ತುಗಳ ಮಾರಾಟ ಯುವ ಪೀಳಿಗೆ ಹಾಗೂ ಇಡೀ ಸಮಾಜದ ವಿರುದ್ಧದ ಅಪರಾಧ ಕೃತ್ಯವಾಗಿದೆ ಎಂದು ಆತಂಕ ವ್ಯಕ್ತಪಡಿಸಿದೆ.
ತಿರುವನಂತಪುರ ಮೂಲದ ಶ್ರೀಜಿತ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ನ್ಯಾಯಮೂರ್ತಿ ರಾಜೇಂದ್ರ ಬಾದಾಮಿಕರ್ ಅವರಿದ್ದ ಏಕಸದಸ್ಯ ಪೀಠ ಆದೇಶಿಸಿದೆ.
ಅರ್ಜಿದಾರ ವ್ಯಾಸಂಗಕ್ಕಾಗಿ ಕರ್ನಾಟಕಕ್ಕೆ ಬಂದಿದ್ದಾನೆ. ಆದರೆ, ಮಾದಕ ವಸ್ತು ಮಾರಾಟ ದಂಧೆಯಲ್ಲಿ ತೊಡಗಿಕೊಂಡಿದ್ದಾನೆ. ಪೊಲೀಸರಿಗೆ ಮಾದಕ ವಸ್ತುವಿನೊಂದಿಗೆ ಸಿಕ್ಕಿಬಿದ್ದಿದ್ದಾನೆ. ಮಾದಕವಸ್ತುಗಳ ಮಾರಾಟ ಯುವ ಪೀಳಿಗೆ ಹಾಗೂ ಇಡೀ ಸಮಾಜದ ವಿರುದ್ಧದ ಅಪರಾಧ ಕೃತ್ಯವಾಗಿದೆ. ಯುವ ಪೀಳಿಗೆ ಗುರಿಯಾಗಿಸಲಾಗುತ್ತಿದೆ. ಪ್ರಕರಣ ದಾಖಲೆ ಪರಿಶೀಲಿಸಿದ ಜಾಮೀನು ಪಡೆಯಲು ಅರ್ಜಿದಾರ ಅರ್ಹನಾಗಿಲ್ಲ ಎಂದು ಆದೇಶದಲ್ಲಿ ನ್ಯಾಯಪೀಠ ತಿಳಿಸಿದೆ.

ಅರ್ಜಿದಾರನ ಬಳಿ ದೊರೆತ ಮಾದಕ ವಸ್ತು ಪ್ರಮಾಣ ಕಡಿಮೆ ಎಂಬುದು ಸತ್ಯ. ಆದರೆ, ಪ್ರಕರಣದ ಮತ್ತೊಬ್ಬ ಆರೋಪಿಯ ಬಳಿ 50 ಗ್ರಾಂ ಎಂಡಿಎಂಎ ದೊರೆತಿದೆ. ಅದು ವಾಣಿಜ್ಯ ಪ್ರಮಾಣವಾಗಿದೆ. ಇನ್ನೂ ಅರ್ಜಿದಾರನ ಮೇಲಿನ ಆರೋಪಗಳಿಗೆ 20 ವರ್ಷದವರೆಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲು ಅವಕಾಶವಿದೆ. ಹಾಗಾಗಿ, ಜಾಮೀನು ನೀಡಲು ಇದು ಅರ್ಹ ಪ್ರಕರಣವಲ್ಲ ಎಂದು ತಿಳಿಸಿ ಅರ್ಜಿ ವಜಾಗೊಳಿಸಿದೆ.
ಪ್ರಕರಣದ ಹಿನ್ನೆಲೆ: ನಗರದ ತಮ್ಮೇನಹಳ್ಳಿ ಸಬ್ ವೇ ಬಳಿ 2022ರ ಜೂ.29ರಂದು ಮಾದಕ ವಸ್ತು ಮಾರಾಟ ಮಾಡುತ್ತಿದ್ದ ವೇಳೆ ಅರ್ಜಿದಾರ ಹಾಗೂ ಮತ್ತೊಬ್ಬ ವ್ಯಕ್ತಿಯನ್ನು ಮಾದಕನಾಯಕನಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದರು. ಪ್ರಕರಣದಲ್ಲಿ ಎರಡನೇ ಆರೋಪಿಯಾದ ಅರ್ಜಿದಾರನಿಂದ 19 ಗ್ರಾಂ ಗಾಂಜಾ ಮತ್ತು 2 ಗ್ರಾಂ ಎಂಡಿಎಂಎ ಅನ್ನು ವಶಪಡಿಸಿಕೊಳ್ಳಲಾಗಿತ್ತು. ವಿಚಾರಣಾ ನ್ಯಾಯಾಲಯ ಜಾಮೀನು ನಿರಾಕರಿಸಿದ್ದರಿಂದ ಅರ್ಜಿದಾರ ಹೈಕೋರ್ಟ್ ಮೊರೆ ಹೋಗಿದ್ದನು.












Click it and Unblock the Notifications