ಯಶಸ್ವಿ ದೆಹಲಿ ಜಿ20 ಸಭೆಯ ಪ್ರಯೋಜನ ತಿಳಿಸಿದ ಕರ್ನಾಟಕ ಬಿಜೆಪಿ
ಬೆಂಗಳೂರು, ಸೆಪ್ಟಂಬರ್ 11: ಪಾರಂಪರಿಕ ಇಂಧನಗಳ ಮಾಲಿನ್ಯ ಪ್ರಮಾಣವನ್ನು ಈಗಿನ ಶೇ.45ಕ್ಕೆ ಇಳಿಸಲು ನೈಸರ್ಗಿಕ ಇಂಧನದ ಜಾಗತಿಕ ಒಕ್ಕೂಟ ಜಿ-20 ಕಾರ್ಯಗಳಲ್ಲಿನ ಚರ್ಚೆಗಳ ಫಲವಾಗಿ ಅಸ್ತಿತ್ವಕ್ಕೆ ಬಂದಿದೆ. ಸುಸ್ಥಿರ ಇಂಧನ ಬಳಕೆಯ ವರ್ಧನೆಗಾಗಿ ಕೈಗೊಂಡ ಎಲ್ಲ ನಿರ್ಧಾರಗಳೂ ಭಾರತಕ್ಕೆ ಹೊಸ ಅವಕಾಶಗಳನ್ನು ನೀಡುತ್ತಿದೆ ಎಂದು ಕರ್ನಾಟಕ ರಾಜ್ಯ ಬಿಜೆಪಿ ಹೇಳಿದೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಬಿಜೆಪಿಯು, ಈವರೆಗಿನ ಎಲ್ಲ ಜಿ-20 ಶೃಂಗಸಭೆಗಳ ಪೈಕಿ ಅತಿಹೆಚ್ಚು ಕುತೂಹಲ-ಆಸಕ್ತಿ ಮೂಡಿಸಿ ಅಷ್ಟೇ ವ್ಯವಸ್ಥಿತವಾಗಿ ನಡೆಸಲಾದ 18ನೇ ಜಿ-20 ಶೃಂಗಸಭೆ ಸಮಾರೋಪಗೊಂಡಿದೆ. ಅಂತಾರಾಷ್ಟ್ರೀಯ ಶೃಂಗಸಭೆಗಳ ಪೈಕಿ ಇತ್ತೀಚಿನ ದಶಕಗಳಲ್ಲೇ ಅತಿಹೆಚ್ಚು ಯಶಸ್ಸು ಕಂಡ ಸಭೆಯೆಂಬುದು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತದ ಅಧ್ಯಕ್ಷತೆಯಲ್ಲಿ ನಡೆದಿರುವುದು ನಮ್ಮ ಹೆಗ್ಗಳಿಕೆಯಾಗಿದೆ.

ಮನುಕುಲದ ಮುಂದಿರುವ ಇಂಧನ ಮತ್ತು ಆಹಾರ ಭದ್ರತೆ ಬಗ್ಗೆ ಜಿ-20 ರಾಷ್ಟ್ರಗಳ ಬದ್ಧತೆ ಇದೇ ಮೊದಲ ಬಾರಿ ಇಷ್ಟು ಪ್ರಖರವಾಗಿ ಪ್ರಕಟವಾಗಿದೆ. ದೇಶ-ದೇಶಗಳ ನಡುವೆ ವ್ಯಾವಹಾರಿಕ ತಿಕ್ಕಾಟ ಮತ್ತು ಯುದ್ಧವೇ ನಡೆಯುತ್ತಿರುವ ಈ ಪ್ರತಿಕೂಲ ಸನ್ನಿವೇಶದಲ್ಲಿ ಜಗತ್ತಿಗೆ ಭಾರತ ಹೊಸ ದಿಕ್ಕು ತೋರಿಸುತ್ತಿದೆ, ಹೊಸ ಭರವಸೆಯಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ.
ರಾಜತಾಂತ್ರಿಕತೆಯ ಯಶಸ್ವಿ ನಿರ್ವಹಣೆಗೆ ಕೈಪಿಡಿ
ಎಲ್ಲಾ ರಾಷ್ಟ್ರಗಳು ಒಕ್ಕೊರಲಿನಿಂದ ಅಂಗೀಕರಿಸಿದ ಜಿ-20 ದೆಹಲಿ ನಿರ್ಣಯಗಳು (G20 Delhi Declaration) ಅಂತಾರಾಷ್ಟ್ರೀಯ ರಾಜತಾಂತ್ರಿಕತೆಯ ಯಶಸ್ವಿ ನಿರ್ವಹಣೆಗೆ ಭವಿಷ್ಯದ ಕೈಪಿಡಿ ಆಗಲಿದೆ.
ಕೃಷಿ ಮತ್ತು ಇಂಧನ ವಲಯದಲ್ಲಿ ನಡೆದ ಒಪ್ಪಂದಗಳಲ್ಲಿ ಹಸಿವು ಮತ್ತು ಅಪೌಷ್ಠಿಕತೆ ಸಮಸ್ಯೆಗಳನ್ನು ಜಾಗತಿಕವಾಗಿ ನಿರ್ಮೂಲನೆ ಮಾಡುವ ನಿರ್ಣಯ ಕೈಗೊಳ್ಳಲಾಗಿದೆ. ಈ ಒಪ್ಪಂದಗಳು ಭಾರತದ ಆರ್ಥಿಕತೆ ಅಭಿವೃದ್ಧಿಯ ವೇಗಕ್ಕೆ ಮತ್ತಷ್ಟು ಪುಷ್ಠಿ ನೀಡಲಿದೆ.
ಪಾರಂಪರಿಕ ಇಂಧನಗಳ ಮಾಲಿನ್ಯ ಪ್ರಮಾಣವನ್ನು ಈಗಿನ ಶೇ.45ಕ್ಕೆ ಇಳಿಸಲು ನೈಸರ್ಗಿಕ ಇಂಧನದ ಜಾಗತಿಕ ಒಕ್ಕೂಟ ಜಿ-20 ಕಾರ್ಯಗಳಲ್ಲಿನ ಚರ್ಚೆಗಳ ಫಲವಾಗಿ ಅಸ್ತಿತ್ವಕ್ಕೆ ಬಂದಿದೆ. ಸುಸ್ಥಿರ ಇಂಧನ ಬಳಕೆಯ ವರ್ಧನೆಗಾಗಿ ಕೈಗೊಂಡ ಎಲ್ಲ ನಿರ್ಧಾರಗಳೂ ಭಾರತಕ್ಕೆ ಹೊಸ ಅವಕಾಶಗಳನ್ನು ನೀಡುತ್ತಿದೆ.
— BJP Karnataka (@BJP4Karnataka) September 11, 2023
ಇಂಧನ ಕ್ಷೇತ್ರದ ಭಾರತೀಯ ಕಂಪನಿಗಳಿಗೆ ಎಲ್ಲಾ ಜಿ-20…
ರಸಗೊಬ್ಬರಗಳ ಮುಕ್ತ ವ್ಯಾಪಾರ, ಪೌಷ್ಠಿಕತೆ, ಆಹಾರ ಸಂಸ್ಕರಣೆ ಹಾಗೂ ಕೃಷಿ ವಲಯಗಳಲ್ಲಿ ಹೆಚ್ಚಿನ ಹೂಡಿಕೆ ಭಾರತದಲ್ಲಿ ಉದ್ಯೋಗಾವಕಾಶ ಹೆಚ್ಚಿಸುವುದೂ ಅಲ್ಲದೆ ಅಂತಾರಾಷ್ಟ್ರೀಯ ವಹಿವಾಟಿಗೆ ಭಾರತಕ್ಕೆ ಇನ್ನಷ್ಟು ಬಾಗಿಲುಗಳನ್ನು ತೆರೆಯಲಿವೆ ಎಂದು ಬಿಜೆಪಿ ತಿಳಿಸಿದೆ.
ರೈತರಿಗೆ ಕೆಲವು ಪ್ರಯೋಜನಗಳು
ಅಲ್ಲದೆ ಬೇಸಾಯ, ಮಣ್ಣಿನ ಆರೋಗ್ಯ ವೃದ್ಧಿ ಹಾಗೂ ಕೃಷಿ ಪದಾರ್ಥಗಳ ಮೌಲ್ಯವರ್ಧನೆಗೆ ಯಾವುದೇ ದೇಶದ ಆಧುನಿಕ ತಂತ್ರಜ್ಞಾನವನ್ನೂ ಕೂಡಲೇ ಅಳವಡಿಸಿಕೊಳ್ಳುವ ಅವಕಾಶವನ್ನು ಮುಕ್ತ ವ್ಯಾಪಾರ ಒಪ್ಪಂದವು ಭಾರತಕ್ಕೆ ಒದಗಿಸುತ್ತದೆ. ಇದರಿಂದ ನ್ಯಾನೋ ರಸಗೊಬ್ಬರ, ಕೃಷಿಯುಪಯೋಗಿ ಡ್ರೋಣ್‌ಗಳು ಹಾಗೂ ಇನ್ನಿತರ ತಂತ್ರಜ್ಞಾನ ರೈತರಿಗೆ ಸುಲಭವಾಗಿ ಕೈಗೆಟುಕುತ್ತದೆ.
ಇಂಧನ ಕ್ಷೇತ್ರದ ಭಾರತೀಯ ಕಂಪನಿಗಳಿಗೆ ಎಲ್ಲಾ ಜಿ-20 ರಾಷ್ಟ್ರಗಳು ಹಾಗೂ ಅಂತಾರಾಷ್ಟ್ರೀಯ ಸಂಸ್ಥೆಗಳ ಜತೆ ಪಾಲುದಾರಿಕೆಯ ಅವಕಾಶ ಕೊಡುತ್ತದೆ. ನೈಸರ್ಗಿಕ ಇಂಧನ ತಯಾರಿಗೆ ಮೂಲ ಉತ್ಪನ್ನವೇ ಕೃಷಿ ತ್ಯಾಜ್ಯ ಮತ್ತು ಆಹಾರ ತ್ಯಾಜ್ಯವಾದ ಕಾರಣ ನಮ್ಮಲ್ಲಿನ ತ್ಯಾಜ್ಯ ಸಮಸ್ಯೆಗೆ ಆಧುನಿಕ ಪರಿಹಾರ ಮಾರ್ಗ ಒದಗಿಸಿ ರೈತರ ಲಾಭಾಂಶ ಹೆಚ್ಚಿಸುತ್ತದೆ.

ಇದುವರೆಗಿನ ಎಲ್ಲಾ ಶೃಂಗಸಭೆಗಳು ರಾಜಧಾನಿಗಳಿಗೆ ಮಾತ್ರ ಸೀಮಿತವಾಗಿದ್ದ ಗಣ್ಯರ ಸಭೆಗಳಾಗಿದ್ದವು. ಆದರೆ 300 ಚಿಂತನಾ ಸಭೆಗಳನ್ನು ದೇಶದಾದ್ಯಂತ ನಡೆಸಿ, ಸಮಾಜದಲ್ಲಿನ ಜ್ಞಾನಿಗಳಿಂದಲೂ ಅಭಿಪ್ರಾಯಗಳನ್ನು ಪಡೆದು ಇದನ್ನೊಂದು ರಾಷ್ಟ್ರೀಯ ಹಬ್ಬವಾಗಿ ಕೇಂದ್ರ ಬಿಜೆಪಿ ಸರ್ಕಾರ ಪರಿವರ್ತಿಸಿದೆ.
ವಿರೋಧಿ ಶಕ್ತಿಗಳಿಗೆ ಉಳಿಗಾಲವಿಲ್ಲ
200 ಗಂಟೆಗಳಿಗೂ ಅಧಿಕ ಕಾಲ ಗಂಭೀರ ಸಭೆಗಳನ್ನು ಭಾರತ ನಿರ್ವಹಿಸಿದ ರೀತಿ ಇಂದು ಉಳಿದೆಲ್ಲಾ ದೇಶಗಳಿಗೆ ಪ್ರೇರಣೆಯಾಗಿರುವುದರ ಜತೆ ಭಾರತೀಯರ ಸಾಮರ್ಥ್ಯ ಮತ್ತು ಕ್ಷಮತೆಯನ್ನು ಜಗತ್ತಿಗೆ ತೋರಿಸಿಕೊಟ್ಟಿದೆ.
ಜತೆಗೆ ಭಯೋತ್ಪಾದನೆಯನ್ನು ಅತಿದೊಡ್ಡ ಸವಾಲು ಎಂಬುದನ್ನು ಒಪ್ಪಿಕೊಂಡಿರುವ ಜಿ-20 ದೆಹಲಿ ನಿರ್ಣಯಗಳು ಭಾರತ ವಿರೋಧಿ ಶಕ್ತಿಗಳಿಗೆ ಹೆಚ್ಚು ಉಳಿಗಾಲವಿಲ್ಲ ಎಂಬ ಸಂದೇಶ ರವಾನೆಯಾಗಿದೆ ಎಂದು ಬಿಜೆಪಿ ಗುಡುಗಿತು.
ಇದೆಲ್ಲಕ್ಕಿಂತ ಮಿಗಿಲಾಗಿ ರಾಜತಾಂತ್ರಿಕವಾಗಿ ಭಾರತಕ್ಕೆ ಜಿ-20 ದೆಹಲಿ ನಿರ್ಣಯ ಅತ್ಯಂತ ಪ್ರಮುಖವಾಗುತ್ತದೆ. ರಷ್ಯಾ-ಯುಕ್ರೇನ್ ಯುದ್ಧ ಆರಂಭಗೊಂಡಾಗಿನಿಂದ ದೇಶಗಳು ಅಮೆರಿಕ-ನ್ಯಾಟೋ ಹಾಗೂ ಇನ್ನೊಂದೆಡೆ ರಷ್ಯಾ-ಚೀನಾ ಎಂದು ಎರಡು ಬಣಗಳ ನಡುವೆ ಹಂಚಿ ಹೋಗಿದೆ.
ಪ್ರತಿಕೂಲ ಪರಿಸ್ಥಿತಿಯಲ್ಲೂ ಅಮೆರಿಕ, ರಷ್ಯಾ, ಚೀನಾ - ಈ ಮೂರೂ ದೇಶಗಳು ಒಟ್ಟಾಗಿ ಸೇರಿ ಒಮ್ಮತಕ್ಕೆ ಬಂದು ನಿರ್ಣಯಗಳಿಗೆ ಸಹಿ ಹಾಕಿವೆ. ಇದು ಭಾರತಕ್ಕೆ ಜಾಗತಿಕ ಮಟ್ಟದಲ್ಲಿ ವರ್ಚಸ್ಸು ವೃದ್ಧಿಯಾಗಿರೋದಕ್ಕೆ ಸಾಕ್ಷಿ ಯಾಗಿದೆ. ಭಾರತಕ್ಕೆ ಇಲ್ಲ ಎನ್ನಲು ಪ್ರಸ್ತುತ ಯಾವುದೇ ದೇಶಕ್ಕೂ ಸಾಧ್ಯವಿಲ್ಲ ಎಂಬ ಹಂತಕ್ಕೆ ಭಾರತವನ್ನು ಕೊಂಡೊಯ್ದ ಕೀರ್ತಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ ಎಂದು ರಾಜ್ಯ ಬಿಜೆಪಿ ಬಣ್ಣಿಸಿದೆ.












Click it and Unblock the Notifications