ಶನಿವಾರ ಜೆಡಿಎಸ್ 'ಜನತಾ ಮಿತ್ರ' ಸಮಾರೋಪ: ಎಚ್‌ಡಿಕೆ ಸ್ಥಳ ಪರಿಶೀಲನೆ
ಬೆಂಗಳೂರು, ಅಕ್ಟೋಬರ್ 08: ಮಳೆಯಿಂದಾಗಿ ಈಗಾಗಲೇ ಮೂರು ಭಾರಿ ಮುಂದೂಡಲ್ಪಟ್ಟಿದ್ದ ಜೆಡಿಎಸ್‌ನ ಮಹಾತ್ವಾಕಾಂಕ್ಷೆಯ 'ಜನತಾ ಮಿತ್ರ' ಸಮಾರೋಪ ಸಮಾರಂಭವು ಇದೇ ಶನಿವಾರ ಮಧ್ಯಾಹ್ನ 3ಗಂಟೆಗೆ ಬೆಂಗಳೂರಿನ ಬಸವನಗುಡಿಯಲ್ಲಿರುವ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಯಲಿದೆ.
ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಶುಕ್ರವಾರ ಸಂಜೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಭೇಟಿ ನೀಡಿ ಪರಿಶೀಲಿಸಿದರು.
ನ್ಯಾಷನಲ್ ಕಾಲೇಜು ಮೈದಾನದಲ್ಲಿ ಬೃಹತ್ ವೇದಿಕೆಯೊಂದನ್ನು ನಿರ್ಮಾಣ ಮಾಡಲಾಗುತ್ತಿದೆ. ವೇದಿಕೆ ಹಿಂಭಾಗದಲ್ಲಿ ಅಷ್ಟೇ ದೊಡ್ಡ ಪ್ರಮಾಣ ಎಲ್‌ಇಡಿ ಪರದೆಯನ್ನು ಅಳವಡಿಸಲಾಗಿದೆ. ನಾಳೆ ಮಧ್ಯಾಹ್ನ 3 ಗಂಟೆಗೆ ಸಮಾರೋಪ ಸಮಾರಂಭ ಆರಂಭವಾಗಿದೆ. ಹೀಗಾಗಿ ಸ್ಥಳಕ್ಕೆ ಭೇಟಿ ನೀಡಿ ವೇದಿಕೆ ಸೇರಿದಂತೆ ನಡೆಯುತ್ತಿರುವ ಸಿದ್ಧತೆಗಳನ್ನು ಕುಮಾರಸ್ವಾಮಿ ಪರಿಶೀಲನೆ ಮಾಡಿದರು.
ಈ ವೇಳೆ ಎಚ್.ಡಿ.ಕುಮಾರಸ್ವಾಮಿ ಅವರ ಜೊತೆಗೆ ವಿಧಾನ ಪರಿಷತ್ ಸದಸ್ಯರಾದ ಟಿ.ಎ. ಶರವಣ, ಭೋಜೆಗೌಡ, ಕೆ.ಎನ್.ತಿಪ್ಪೇಸ್ವಾಮಿ, ಜೆಡಿಎಸ್ ನ ನಗರ ಘಟಕದ ಅಧ್ಯಕ್ಷ ಪ್ರಕಾಶ್ ಸೇರಿದಂತೆ ಹಲವು ಜೆಡಿಎಸ್‌ನ ಮುಖಂಡರು ಸಮಾವೇಶದ ಸ್ಥಳಕ್ಕೆ ಭೇಟಿ ಕೊಟ್ಟರು.

ಸಮಾವೇಶದಲ್ಲಿ ಬೆಂಗಳೂರಿನ ಸಮಸ್ಯೆ ಅನಾವರಣ
ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಎಚ್. ಡಿ.ಕುಮಾರಸ್ವಾಮಿ ಅವರು, ಜನತಾಮಿತ್ರದ ಸಮಾರೋಪ ಸಮಾರಂಭ ಮಳೆಯಿಂದಾಗಿ ಮೂರು ಬಾರಿ ಮುಂದೂಡಲ್ಪಟ್ಟಿತ್ತು. ಶನಿವಾರ ಮಧ್ಯಾಹ್ನ ನಗರದ ಬಸವನಗುಡಿ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಈ ಸಮಾವೇಶದ ಮೂಲಕ ಬೆಂಗಳೂರಿನ ಸಮಸ್ಯೆಗಳು ಅನಾವರಣಗೊಳ್ಳಲಿವೆ. ಸಾವಿರಾರು ಸಮಸ್ಯೆಗಳ ಕುರಿತು ಪಕ್ಷದೆದುರು ಸಾರ್ವಜನಿಕರು ತಿಳಿಸಿದ್ದಾರೆ. ಬೆಂಗಳೂರು ಅಭಿವೃದ್ಧಿಯ ನೀಲಿ ನಕ್ಷೆ ಸಭೆಯಲ್ಲಿ ಅನಾವರಣವಾಗಲಿದೆ ಎಂದು ಅವರು ಹೇಳಿದರು.

ಬಿಬಿಎಂಪಿ ಚುನಾವಣೆ ದಿಕ್ಸೂಚಿ
ಸಮಾವೇಶದಲ್ಲಿ ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಪಾಲ್ಗೊಳ್ಳಲಿದ್ದಾರೆ. ಪಕ್ಷದ ಇನ್ನಿತರು ಮುಖಂಡರು ಸೇರಿದಂತೆ ಸಮಾವೇಶಕ್ಕೆ ಒಂದು ಲಕ್ಷ ಕಾರ್ಯಕರ್ತರು ಭಾಗಿಯಾಗುವ ಸಾಧ್ಯತೆ ಇದೆ. ಈ ಸಮರೋಪ ಸಮಾರಂಭ ದೊಡ್ಡ ಮಟ್ಟದ ಯಶಸ್ಸು ಕಾಣಲಿದೆ. ಮುಂಬರುವ ಬಿಬಿಎಂಪಿ ಚುನಾವಣೆಗೆ ಇದು ದಿಕ್ಸೂಚಿಯಾಗಲಿದೆ ಎಂದು ಅವರು ಹೇಳಿದರು.

ರಾಜ್ಯ ಸರ್ಕಾರ ಜನರ ಸಮಸ್ಯೆ ಆಲಿಸಿಲ್ಲ
ಇದಕ್ಕೂ ಮುನ್ನ ವೀಕ್ಷಣೆ ಮಾಡಿದ ಪರಿಷತ್ ಸದಸ್ಯ ಟಿ.ಎ.ಶರವಣ ಅವರು ಮಾತನಾಡಿ, ಜನರ ಸಮಸ್ಯೆಗಳನ್ನು ಆಲಿಸುವ ಕೆಲಸ ಕಳೆದ 15 ದಿನದಿಂದ ಆಗಿದೆ. ಶನಿವಾರ ಇದರ ಸಮಾರೋಪ ಸಮಾರಂಭ ನಡೆಯಲಿದೆ. ಬೆಂಗಳೂರು ಜನರ ಸಮಸ್ಯೆ ಆಲಿಸುವ ಕೆಲಸ ರಾಜ್ಯ ಸರ್ಕಾರ ಮಾಡಿಲ್ಲ. ಆಡಳಿತ ಪಕ್ಷ ಬಿಜೆಪಿ ಕೇವಲ ಪ್ರಚಾರಕ್ಕೆ ಮಾತ್ರ ಸೀಮಿತವಾಗಿ ಕೆಲಸ ಮಾಡಿದೆ. ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಕೆಲಸವನ್ನು ಜೆಡಿಎಸ್ ಮಾಡುತ್ತಿದೆ ಎಂದರು.

ನವೆಂಬರ್ 1ರಿಂದ 'ಪಂಚರತ್ನ ರಥಯಾತ್ರೆ
ಪ್ರಾದೇಶಿಕ ಜೆಡಿಎಸ್ ಪಕ್ಷ ಕೇವಲ ಹಳೆ ಮೈಸೂರು ಭಾಗಕ್ಕೆ ಮಾತ್ರ ಸಿಮೀತವಾಗಿಲ್ಲ, ಇಡೀ ರಾಜ್ಯಾದ್ಯಂತ ಪಕ್ಷವನ್ನು ಸಂಘಟಿಸುತ್ತೇವೆ. ಪಕ್ಷದ ಮಹಾತ್ವಾಕಾಂಕ್ಷೆಯ 'ಪಂಚರತ್ನ ರಥಯಾತ್ರೆ' ನವೆಂಬರ್ 1 ರಾಜ್ಯೋತ್ಸವದಂದು ಚಾಲನೆ ನೀಡುವುದಾಗಿ ಎಚ್.ಡಿ.ಕುಮಾರಸ್ವಾಮಿ ಘೋಷಿಸಿದರು.
ಬೆಂಗಳೂರಿನಲ್ಲಿನ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಪಂಚರತ್ನ ರಥಯಾತ್ರೆ ಆರಂಭಕ್ಕೆ ಈಗಾಗಲೇ ಸಿದ್ಧತೆಗಳು ಆರಂಭವಾಗಿವೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಈಗಾಗಲೇ ಪಕ್ಷ ಸಂಘಟನೆ ನಡೆದಿದೆ. ಇನ್ನೂ ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಪಕ್ಷಕ್ಕೆ ಬೆಂಬಲ, ಪಕ್ಷದ ಅಸ್ತಿತ್ವ ಏನೆಂಬುದನ್ನು ಈ ಕಾರ್ಯಕ್ರಮಗಳು ತೋರಿಸುತ್ತೇನೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications