Jagadish Shettar: ನಮ್ಮ ಮನೆಯಿಂದಲೇ ಹೊರ ಹಾಕಿದ್ದಾರೆ: ಶೆಟ್ಟರ್
ಬೆಂಗಳೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಜಗದೀಶ್ ಶೆಟ್ಟರ್, ಪಕ್ಷದ ವರಿಷ್ಠರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ನಮ್ಮ ಮನೆಯಿಂದಲೇ ನಮ್ಮನ್ನು ಹೊರಗೆ ಹಾಕುತ್ತಿದ್ದಾರೆ ಎನ್ನುವ ಮೂಲಕ ಜಗದೀಶ್ ಶೆಟ್ಟರ್ (jagadish shettar) ತಮಗೆ ಆಗಿರುವ ನೋವು ಹೊರಹಾಕಿದ್ದಾರೆ. ಈ ಮೂಲಕ ಬಿಜೆಪಿ ತೊರೆಯುವುದು ಗ್ಯಾರಂಟಿ ಎಂಬ ಸಂದೇಶ ನೀಡಿದ್ದಾರೆ ಮಾಜಿ ಸಿಎಂ ಜಗದೀಶ್ ಶೆಟ್ಟರ್.
ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ರಾಜೀನಾಮೆ ಸಲ್ಲಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಶೆಟ್ಟರ್, ನಾವು ಕಟ್ಟಿ ಬೆಳೆಸಿದ ಪಕ್ಷದಲ್ಲೇ ಇಂತಹ ಸ್ಥಿತಿ ಬಂದಿದೆ. ನಮ್ಮ ಮನೆಯಿಂದಲೇ ನಮ್ಮನ್ನು ಹೊರಗೆ ಹಾಕುತ್ತಿದ್ದಾರೆ. ನನ್ನ ಸೋಲಿಗೆ ಕೆಲವರಿಂದ ಚಿತಾವಣೆ ನಡೆದಿದೆ ಎನ್ನುವ ಮೂಲಕ ಟಿಕೆಟ್‌ಗೆ ಕಲ್ಲು ಹಾಕಿದವರ ವಿರುದ್ಧ ಗುಡುಗಿದ್ದಾರೆ ಶೆಟ್ಟರ್. ನಾನು ಅಧಿಕಾರದ ಆಸೆಯಿಂದ ಟಿಕೆಟ್ ಕೇಳಿಲ್ಲ, ಸಚಿವ ಸ್ಥಾನ ಕೂಡ ಸ್ವೀಕರಿಸಲಿಲ್ಲ. ಆದರೆ ಟಿಕೆಟ್ ಕೂಡ ಕೊಡದೆ ನನ್ನ ಸೋಲಿಗೆ ಕೆಲವರು ಕುತಂತ್ರ ಮಾಡಿದ್ದರು ಎಂದು ಆರೋಪಿಸಿದ್ದಾರೆ.

ರೌಡಿ ಶೀಟರ್ ಅಥವಾ ಕ್ರಿಮಿನಲ್ ಅಲ್ಲ!
ಜಗದೀಶ್ ಶೆಟ್ಟರ್ ಅವರ ಆಕ್ರೋಶ ಅದೆಷ್ಟು ಬಲವಾಗಿತ್ತು ಎಂದರೆ, ಬಿಜೆಪಿ ವರಿಷ್ಠರ ನಿರ್ಧಾರಕ್ಕೆ ಸವಾಲು ಎಸೆಯುವ ಹಾಗೆ ಮಾಜಿ ಸಿಎಂ ಮಾತನಾಡಿದ್ದಾರೆ. ನನಗೆ ಟಿಕೆಟ್ ನಿರಾಕರಿಸಲು ಕಾರಣವೇನು? ಜನಸೇವೆ ಮಾಡಿಕೊಂಡು ಇದ್ದವನು ನಾನು. ಸಚಿವ ಸ್ಥಾನ ಇಲ್ಲದಿದ್ದರೂ ನನ್ನ ಕೆಲಸ ಮಾಡಿದ್ದೇನೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಾ, ಜನಪರವಾಗಿದ್ದೇನೆ. ನಾನು ರೌಡಿ ಶೀಟರ್ ಅಥವಾ ಕ್ರಿಮಿನಲ್ ಅಲ್ಲ. ಮುಂದಿನ ನಡೆ ಬಗ್ಗೆ ಶೀಘ್ರದಲ್ಲೇ ತಿಳಿಯಲಿದೆ ಎನ್ನುವ ಮೂಲಕ ಕುತೂಹಲ ಕೆರಳಿಸಿದ್ದಾರೆ ಮಾಜಿ ಸಿಎಂ ಜಗದೀಶ್ ಶೆಟ್ಟರ್.
ಅಮಿತ್ ಶಾ ಮಾತು ವರ್ಕ್ ಆಗಲಿಲ್ವಾ?
ಬಿಜೆಪಿಯ ಪವರ್ ಫುಲ್ ಮ್ಯಾನ್ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಖುದ್ದು ಜಗದೀಶ್ ಶೆಟ್ಟರ್ ಅವರ ಜೊತೆ ಮಾತನಾಡಿದ್ದಾರಂತೆ. ಈ ಮೂಲಕ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡದಂತೆ ಆದೇಶಿಸಿದ್ದರು ಎನ್ನಲಾಗಿತ್ತು. ಇಷ್ಟೆಲ್ಲಾ ಆದರೂ ನಿರ್ಧಾರ ಬದಲಿಸಿಕೊಂಡಿಲ್ಲ. ಈ ಮೂಲಕ ಪಕ್ಷ ತೊರೆದು, ವರಿಷ್ಠರ ವಿರುದ್ಧ ಗುಡುಗಿದ್ದಾರೆ. ಜೊತೆಗೆ ತಮಗೆ ಉದ್ದೇಶಪೂರ್ವಕವಾಗಿ ಟಿಕೆಟ್ ತಪ್ಪಿಸಲಾಗಿದೆ ಎಂದಿದ್ದಾರೆ. ಇದು ವಿಧಾನಸಭೆ ಚುನಾವಣಾ ಅಖಾಡವನ್ನ ರಂಗಾಗಿಸಿದೆ. ಮತ್ತೊಂದ್ಕಡೆ ಉತ್ತರ ಕರ್ನಾಟಕದಲ್ಲಿ ಬಿಜೆಪಿಗೆ ಹಿನ್ನಡೆ ಭೀತಿ ಸೃಷ್ಟಿಯಾಗಿದೆ.
ಶೆಟ್ಟರ್ ಮನವೊಲಿಕೆಗೆ ಬಿಜೆಪಿ ಸರ್ಕಸ್
ಒಂದು ಲೆಕ್ಕಾಚಾರದ ಪ್ರಕಾರ ಜಗದೀಶ್ ಶೆಟ್ಟರ್ ಅವರಿಗೆ ಈ ಬಾರಿ ಟಿಕೆಟ್ ಕೊಡಲೇಬಾರದು ಎಂಬ ನಿರ್ಧಾರಕ್ಕೆ ಬಿಜೆಪಿ ನಾಯಕರು ಬಂದಂತೆ ಕಾಣುತ್ತಿದೆ. ಹೀಗಾಗಿಯೇ ಶೆಟ್ಟರ್ ಅವರಿಗೆ ರಾಜ್ಯಸಭಾ ಸದಸ್ಯ ಸ್ಥಾನದ ಆಫರ್ ನೀಡಲಾಗಿತ್ತು. ಇದರೊಂದಿಗೆ ಕೇಂದ್ರದಲ್ಲಿ ಪ್ರಮುಖ ಜವಾಬ್ದಾರಿ ನೀಡುವ ಭರವಸೆ ನೀಡಲಾಗಿತ್ತು. ದೇಶದ ಯಾವುದಾದರೂ ರಾಜ್ಯದ ರಾಜ್ಯಪಾಲರನ್ನಾಗಿ ಮಾಡುವ ಭರವಸೆಯ ಜೊತೆಗೆ, ಹು-ಧಾ ಸೆಂಟ್ರಲ್ ಕ್ಷೇತ್ರದ ಟಿಕೆಟ್ ಕುಟುಂಬದ ಸದಸ್ಯರಿಗೆ ನೀಡುವ ಬಗ್ಗೆಯೂ ಶೆಟ್ಟರ್ ಗೆ ಆಯ್ಕೆ ನೀಡಲಾಗಿತ್ತು. ಕುಟುಂಬದವರಿಗೆ ಬೇಡ ಎನ್ನುವುದಾದರೆ ಅವರು ಸೂಚಿಸುವ ಕಾರ್ಯಕರ್ತಗೆ ಟಿಕೆಟ್ ನೀಡುವುದಾಗಿ ತಿಳಿಸಿತ್ತು ಬಿಜೆಪಿ ಹೈಕಮಾಂಡ್.

ಕಾಂಗ್ರೆಸ್ ಸೇರಲು ಶೆಟ್ಟರ್ ಸಿದ್ಧತೆ?
ಈಗಾಗಲೇ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿಗೆ ಗುಡ್‌ಬೈ ಹೇಳುವ ಮೂಲಕ ಕಾಂಗ್ರೆಸ್ ಕೈ ಹಿಡಿದಿದ್ದಾರೆ. ಇದೀಗ ಮತ್ತೊಬ್ಬ ಪ್ರಭಾವಿ ಲಿಂಗಾಯತ ಸಮುದಾಯದ ನಾಯಕ ಜಗದೀಶ್ ಶೆಟ್ಟರ್ ಕೂಡ ಇದೇ ನಿರ್ಧಾರ ಕೈಗೊಳ್ಳುತ್ತಾರೆ ಎನ್ನಲಾಗುತ್ತಿದೆ. ಜಗದೀಶ್ ಶೆಟ್ಟರ್ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಆಗಿದೆ, ಸಂಜೆ ವೇಳೆಗೆ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಮಾತು ಬಿಜೆಪಿ ನಾಯಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಉತ್ತರ ಕರ್ನಾಕಟದಲ್ಲಿ ಬಿಜೆಪಿಗೆ ಇದು ದೊಡ್ಡ ಹೊಡೆತ ನೀಡಲಿದೆ ಎಂಬುದು ರಾಜಕೀಯ ಪರಿಣತರ ಲೆಕ್ಕಾಚಾರ.












Click it and Unblock the Notifications