Interest Waive: ಶೈಕ್ಷಣಿಕ ಸಂಸ್ಥೆಗಳು ಬಾಕಿ ಸೇವಾ ಶುಲ್ಕ ಕಟ್ಟಿದರೆ ಬಡ್ಡಿ ಮನ್ನಾ: ಬಿಬಿಎಂಪಿ
ಬೆಂಗಳೂರು, ಜುಲೈ 21: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಬರುವ ಶೈಕ್ಷಣಿಕ ಸಂಸ್ಥೆಗಳು ಬಾಕಿ ಇರುವ ಸೇವಾ ಶುಲ್ಕವನ್ನು ಪಾವತಿಸಬೇಕು. ಒನ್ ಟೈಮ್ ಸಿಸ್ಟಮ್ ಯೋಜನೆಯಡಿ (ಒಟಿಎಸ್) ಪಾವತಿಸಲು ಜುಲೈ 31 ಕೊನೆಯ ದಿನವಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಬಾಕಿ ಆಸ್ತಿ ತೆರಿಗೆದಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಒಂದು ಬಾರಿ ಪರಿಹಾರ ಯೋಜನೆಯ ಕುರಿತು ವೈದ್ಯಕೀಯ ಕಾಲೇಜು, ಇಂಜಿನಿಯರಿಂಗ್ ಕಾಲೇಜು ಸೇರಿದಂತೆ ಇನ್ನಿತರೆ ಶೈಕ್ಷಣಿಕ ಸಂಸ್ಥೆಗಳ ಜೊತೆ ಶನಿವಾರ ನಗರದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಶೈಕ್ಷಣಿಕ ಸಂಸ್ಥೆಗಳು ಒಂದು ಪರಿಹಾರ ಯೋಜನೆಯಡಿ ಶೇಕಡಾ 25 ರಷ್ಟು ಸೇವಾ ಶುಲ್ಕವನ್ನು ಪಾವತಿಸಬೇಕಾಗಿದೆ. ಈ ಯೋಜನೆ ಜುಲೈ 31ಕ್ಕೆ ಮುಗಿಯಲಿದ್ದು, ಈ ಕೂಡಲೆ ಎಲ್ಲರೂ ಬಾಕಿ ಇರುವ ಸೇವಾ ಶುಲ್ಕವನ್ನು ಪಾವತಿಸಿದರೆ ಬಡ್ಡಿ ಮನ್ನಾ ಆಗಲಿದೆ ಎಂದು ಹೇಳಿದರು.
ಕೂಡಲೇ ಬಾಕಿ ಪಾವತಿಸಿದರೆ ಏನೆಲ್ಲ ಲಾಭ?
ನಗರದಲ್ಲಿ ಒಂದು ಬಾರಿ ಪರಿಹಾರ ಯೋಜನೆಯನ್ನು ಕಾಯ್ದೆ ಅನುಸಾರ ಜಾರಿ ಮಾಡಲಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಒಂದು ಬಾರಿ ಪರಿಹಾರ ಯೋಜನೆಯಡಿ ಬಾಕಿ ಇರುವ ಆಸ್ತಿ ತೆರಿಗೆಯ ಮೇಲೆ ವಿಧಿಸುವ ಬಡ್ಡಿ ಸಂಪೂರ್ಣ ಮನ್ನಾ ಹಾಗೂ ದಂಡವನ್ನು ಅರ್ಧಕ್ಕೆ ಇಳಿಸಲಾಗಿದೆ. ಶೈಕ್ಷಣಿಕ ಸಂಸ್ಥೆಗಳು ಕೂಡಲೆ ಇದರ ಸದುಪಯೋಗವನ್ನು ಪಡೆದುಕೊಂಡು ಕೂಡಲೆ ಬಾಕಿ ಇರುವ ಸೇವಾ ಶುಲ್ಕವನ್ನು ಪಾವತಿಸುವಂತೆ ಅವರು ಮನವಿ ಮಾಡಿದರು.
ಶೈಕ್ಷಣಿಕ ಸಂಸ್ಥೆಗಳು ಆಸ್ತಿ ತೆರಿಗೆಯಿಂದ ವಿನಾಯಿತಿ ಕೋರಿ ಶೇ. 25 ರಷ್ಟು ಸೇವಾ ಶುಲ್ಕ ಪಾವತಿಸಲು ಅರ್ಜಿ ಸಲ್ಲಿಸಿ ಅನುಮೋದನೆಯ ನಂತರ ಪಾವತಿಸಲು ಅವಕಾಶ ಕಲ್ಪಿಸಲಾಗಿತ್ತು. ಪ್ರಸ್ತುತ ಒಂದು ಬಾರಿ ಪರಿಹಾರ ಯೋಜನೆ ಅವಧಿಯಲ್ಲಿ ಶೈಕ್ಷಣಿಕ ಸಂಸ್ಥೆಯ ಸ್ವತ್ತುಗಳು ಸರ್ಕಾರದಿಂದ ಮಾನ್ಯತೆ ಪಡೆದಿದ್ದಲ್ಲಿ ಸೇವಾ ಶುಲ್ಕವನ್ನು ಪಾವತಿಸಲು ಶೈಕ್ಷಣಿಕ ಉದ್ದೇಶಕ್ಕೆ ಬಳಸುತ್ತಿರುವ ಅವಧಿಯಿಂದ ಅನ್ವಯವಾಗುವಂತೆ ಅವಕಾಶ ಕಲ್ಪಿಸಲಾಗಿರುತ್ತದೆ.

ಇದೇ ಜುಲೈ 31ರ ವರೆಗೂ ಮಾತ್ರ ಒಂದು ಬಾರಿ ಪರಿಹಾರ ಯೋಜನೆ ಚಾಲ್ತಿಯಲ್ಲಿರಲಿದೆ. ಆನ್‌ಲೈನ್ ಇಲ್ಲವೇ ಆಫ್ಲೈನ್ ಮೂಲಕ ಸೇವಾ ಶುಲ್ಕ ಪಾವತಿ ಮಾಡಬಹದು ಎಂದು ಹೇಳಿದರು.
ಡಿಡಿ ಮೂಲಕ ಬಾಕಿ ಸೇವಾ ಶುಲ್ಕ ಕಟ್ಟಿ
ಬೆಂಗಳೂರಿನ ಶೈಕ್ಷಣಿಕ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಒಂದೊಂದು ಸಂಸ್ಥೆಯಲ್ಲಿ ಒಂದೊಂದು ರೀತಿಯ ಸಮಸ್ಯೆ ಇದೆ. ಅದನ್ನು ಪರಿಶೀಲಿಸಿದಾಗ ಆಸ್ತಿ ತೆರಿಗೆ ತಂತ್ರಾಂಶದಲ್ಲಿ ಬದಲಾವಣೆ ಮಾಡಿಕೊಂಡು ಆನ್ಲೈನ್ ನಲ್ಲಿ ಪಾವತಿಸಲು ಸಮಸ್ಯೆ ಆಗುತ್ತಿರುತ್ತದೆ. ಈ ನಿಟ್ಟಿನಲ್ಲಿ ಆನ್ ಲೈನ್ ನಲ್ಲಿ ಪಾವತಿ ಮಾಡಲು ಸಾಧ್ಯವಿಲ್ಲದವರಿಗೆ ಆಸ್ತಿ ತೆರಿಗೆ ಬ್ಯಾಂಕರ್ಸ್ ಚೆಕ್/ಫೇ ಆರ್ಡರ್/ಡಿಮಾಂಡ್ ಡ್ರಾಫ್ಟ್ ಮೂಲಕ ಪಾವತಿಸಲು ಅವಕಾಶ ನೀಡಲಾಗುವುದು.
ಆಯಾ ವಲಯ ಜಂಟಿ ಆಯುಕ್ತರಿಗೆ ನಿಮ್ಮ ಸಂಸ್ಥೆಗಳ ಬಾಕಿ ಸೇವಾ ಶುಲ್ಕವನ್ನು ಡಿಮಾಂಡ್ ಡ್ರಾಫ್ಟ್ ಗಳನ್ನು ಸಲ್ಲಿಸಬಹುದೆಂದು ತಿಳಿಸಿದರು.
ಬಿಬಿಎಂಫಿ ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್ ಅವರು ಮಾತನಾಡಿ, ಸರ್ಕಾರದ ವತಿಯಿಂದ ಪಾಲಿಕೆಯಲ್ಲಿ ಜಾರಿಗೆ ತಂದಿರುವ ಒಂದು ಬಾರಿ ಪರಿಹಾರ ಯೋಜನೆಯ ಲಾಭವನ್ನು ಶೈಕ್ಷಣಿಕ ಸಂಸ್ಥೆಗಳು ಪಡೆದುಕೊಳ್ಳಲು ಮನವಿ ಮಾಡಿದ ಅವರು, ಸದರಿ ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಮಾದರಿ ಕಾರ್ಯವಿಧಾನವನ್ನು ನೀಡಲಾಗುವುದು ಎಂದು ಹೇಳಿದರು.












Click it and Unblock the Notifications