ಇಂದಿರಾ ಕ್ಯಾಂಟಿನ್: ಬಹುತೇಕ ಕಡೆ ಸೇವೆ ಸ್ಥಗಿತ, ಕಾಂಗ್ರೆಸ್ ಕಿಡಿ, ಅಕ್ರಮದ ಅನುಮಾನ?
ಬಡವರ ಹಸಿವು ನೀಗಿಸುತ್ತಿದ್ದ ಕಾಂಗ್ರೆಸ್ ಸರ್ಕಾರ ಆರಂಭಿಸಿದ್ದ ಇಂದಿರಾ ಕ್ಯಾಂಟೀನ್‌ಗಳು ಕ್ರಮೇಣ ಸ್ಥಗಿತಗೊಳ್ಳುತ್ತಿವೆ. ಈ ಕುರಿತು ಕಾಂಗ್ರೆಸ್ ಟ್ವೀಟ್ ಮಾಡಿ ಕಿಡಿ ಕಾರಿದೆ.
ಬೆಂಗಳೂರು, ಫೆಬ್ರವರಿ 12: ಬಡವರು ಸೇರಿದಂತೆ ಜನಸಾಮಾನ್ಯರಿಗೆ ಹಸಿವು ಕಾಡದಿರಲಿ, ಅವರ ಹಸಿವಿನ ಸಮಸ್ಯೆ ನೀಗಿಸುವ ಮಹತ್ತರ ಉದ್ದೇಶದಿಂದ ಕಾಂಗ್ರೆಸ್ ಸರ್ಕಾರ ಆರಂಭಿಸಿದ್ದ ಇಂದಿರಾ ಕ್ಯಾಂಟೀನ್‌ಗಳು ಬಹುತೇಕವುಗಳು ಬಂದ್ ಆಗಿವೆ. ಆಗೊಮ್ಮೆ ಈಗೊಮ್ಮೆ ಕ್ಯಾಂಟೀನ್ ತೆರೆದಿದ್ದರೆ ಹೆಚ್ಚು ಎನ್ನುವಂತಾಗಿದೆ.
ಬೆಂಗಳೂರು ಸೇರಿದಂತೆ ಬೆಂಗಳೂರು ಗ್ರಾಮಾಂತರ, ಹಾವೇರಿ, ಚಿಕ್ಕಬಳ್ಳಾಪುರ, ತುಮಕೂರು ಹಾಗೂ ಮತ್ತಿತರ ಕಡೆಗಳಲ್ಲಿ ಕ್ಯಾಂಟೀನ್ ತೆರೆಯಲಾಗಿತ್ತು. ಅತ್ಯಂತ ಕಡಿಮೆ ದರದಲ್ಲಿ ಬಡವರಿಗೆ ಮೂರು ಹೊತ್ತಿನ ಊಟ ಸಿಗುತ್ತಿತ್ತು. ಅಂತಹ ಮಹತ್ವದ ಕ್ಯಾಂಟೀನ್‌ಗಳು ಇದೀಗ ಸ್ಥಗಿತಗೊಳ್ಳುತ್ತಿರುವುದು ದುರ್ದೈವದ ಸಂಗತಿ.
ಸದ್ದಿಲ್ಲದೇ ಬಾಗಿಲು ಮುಚ್ಚುತ್ತಿರುವ ಇಂದಿರಾ ಕ್ಯಾಂಟಿನ್‌ಗಳ ಪೈಕಿ ಅಲ್ಲೊಂದು ಇಲ್ಲೊಂದು ಆಗಾಗ ತೆರೆದಿರುತ್ತವೆ. ಇದರಿಂದ ಆಗೊಮ್ಮೆ ಈಗೊಮ್ಮೆ ತೆರೆಯುವ ಕ್ಯಾಂಟೀನ್‌ನಲ್ಲಿ ಟೋಕನ್‌ಗಳನ್ನೇ ನೀಡದೆ ನೇರವಾಗಿ ಹಣ ಪಡೆದು ಆಹಾರ ನೀಡಲಾಗುತ್ತಿದೆ. ಹೀಗಾಗಿ ಊಟದ ಲೆಕ್ಕ ಹೇಗೆ ಸಿಗುತ್ತದೆ ಎಂದು ಜನರು ಆರೋಪಿಸಿದ್ದಾರೆ.

ರಾಜಧಾನಿ ಬೆಂಗಳೂರು ಬಿಬಿಎಂಪಿ ವ್ಯಾಪ್ತಿಯಲ್ಲೇ ಒಟ್ಟು ಸುಮಾರು 174 ಇಂದಿರಾ ಕ್ಯಾಂಟೀನ್‌ಗಳು, 20ಕ್ಕೂ ಅಧಿಕ ಮೊಬೈಲ್ ಕ್ಯಾಂಟೀನ್‌ಗಳು ನಗರಾದ್ಯಂತ ಕಡಿಮೆ ಹಣಕ್ಕೆ ಆಹಾರ ನೀಡುತ್ತಿದ್ದವು. ಉಳಿದಂತೆ ಆಯಾ ಜಿಲ್ಲೆಗಳ ನಗರಾಭಿವೃದ್ಧಿ ಕೋಶದ ವ್ಯಾಪ್ತಿಯಲ್ಲಿ ನಗರಸಭೆಗಳ ನೇತೃತ್ವದಲ್ಲಿ ಇಂದಿರಾ ಕ್ಯಾಂಟೀನ್ ಇದ್ದವು.
ಬೆಂಗಳೂರಲ್ಲಿ ಮೊಬೈಲ್ ಕ್ಯಾಂಟೀನ್ ಸ್ಥಗಿತಗೊಂಡವು. ಇತರೆಡೆಯು ಕ್ಯಾಂಟೀನ್ ಸ್ಥಗಿತಗೊಳ್ಳುವ ಹಂತದಲ್ಲಿವೆ ಎನ್ನಲಾಗಿದೆ.
ಟೋಕನ್ ಇಲ್ಲ, ರಾತ್ರಿ ಸ್ಥಗಿತ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹಲವು ಕ್ಯಾಂಟೀನ್‌ಗಳು ತಮಗಿಷ್ಟ ಬಂದಾಗ ತೆರೆಯುತ್ತವೆ. ಕೆಲವು ಕಡೆಗಳಲ್ಲಿ ರಾತ್ರಿ ವೇಳೆ ಬಂದ್ ಆಗಿರುತ್ತವೆ. ಬೆಳಗ್ಗೆ ಮತ್ತು ಮಧ್ಯಾಹ್ನವಷ್ಟೇ ಕ್ಯಾಂಟಿನ್ ತೆರೆಯುತ್ತವೆ. ಟೋಕ್ ನೀಡದೇ ಹಣ ಪಡೆಯುತ್ತಾರೆ. ಬೆಳಗ್ಗೆ ಹಾಗೂ ಮಧ್ಯಾಹ್ನ ತಿಂಡಿ ಊಟವನ್ನು ತಲಾ ಸುಮಾರು 50ಮಂದಿಗೆ ನೀಡುತ್ತಾರೆ.ನಂತರ ಮತ್ತೆ ಬಂದ್ ಆಗುತ್ತವೆ. ಇದರ ಹಿಂದೆ ಏನೋ ಅಕ್ರಮ ನಡೆಯುತ್ತಿದೆ ಎಂಬ ಅನುಮಾನವನ್ನು ಸ್ಥಳಿಯರು ವ್ಯಕ್ತಪಡಿಸುತ್ತಿದ್ದಾರೆ.

ಸರ್ಕಾರದ ನಿರ್ಲಕ್ಷ್ಯ
ಬೆಂಗಳೂರು ವ್ಯಾಫ್ತಿಯಲ್ಲಿ ಬಿಬಿಎಂಪಿಯಿಂದಲೇ ಇಂದಿರಾ ಕ್ಯಾಂಟೀನ್‌ಗಳ ಪರಿಶೀಲನೆಗೆ ಅಧಿಕಾರಿಗಳು ನಿಯೋಜನೆಗೊಂಡಿದ್ದಾರೆ. ಆದರೆ ತಾಲೂಕು ಕೇಂದ್ರಗಳಲ್ಲಿ ಕ್ಯಾಂಟೀನ್‌ಗಳ ಅವ್ಯವಸ್ಥೆ, ಆಹಾರ ಗುಣಮಟ್ಟ, ಊಟದ ಸಂಖ್ಯೆ ಪಾಲನೆ, ಸ್ವಚ್ಚತೆ, ಟೋಕನ್ ವ್ಯವಸ್ಥೆ ಪರಿಶೀಲಿಸುವವರೆ ಇಲ್ಲದಾಗಿದೆ. ಸರ್ಕಾರ ನಿರ್ಲಕ್ಷ್ಯ ವಹಿಸಿದೆ.
ಈ ಕುರಿತು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿ ಕಿಡಿ ಕಾರಿದೆ. ಬಿಜೆಪಿ ಸರ್ಕಾರಕ್ಕೆ ಅನ್ನ ಹಾಕುವುದು ಗೊತ್ತಿಲ್ಲ. ಬರೀ ಕನ್ನ ಹಾಕುವುದಷ್ಟೆ ಗೊತ್ತು. ಬಡವರ, ಕೂಲಿ ಕಾರ್ಮಿಕರ, ವಿದ್ಯಾರ್ಥಿಗಳ ಹೊಟ್ಟೆ ತುಂಬಿಸುತ್ತಿದ್ದ ಇಂದಿರಾ ಕ್ಯಾಂಟೀನ್ ಇಂದು ವ್ಯವಸ್ಥಿತವಾಗಿ ಬಂದ್ ಮಾಡಿ ಬಿಜೆಪಿ ಬಡವರ ಹೊಟ್ಟೆಗೆ ಹೊಡೆಯುತ್ತಿದೆ. ಕಮಿಷನ್ ತಿನ್ನುವ ಬಿಜೆಪಿ ಸರ್ಕಾರ ಅನ್ನ ತಿನ್ನುವವರ ಹಸಿವಿನ ಬೆಲೆ ತಿಳಿದಿದೆಯೇ? ಎಂದು ಬಿಜೆಪಿ ವಿರುದ್ಧ ಟೀಕಿಸಿದೆ.












Click it and Unblock the Notifications