ಡ್ರೋನ್ ಸರ್ವೆಯಲ್ಲಿ ಅಕ್ರಮ: ಆರ್.ಅಶೋಕ್ ವಿರುದ್ಧ ತನಿಖೆಗೆ ಎಎಪಿ ಆಗ್ರಹ
ಡ್ರೋನ್ ಸರ್ವೆ ಕಾರ್ಯದಲ್ಲಿ ಅಕ್ರಮವಾಗಿರುವ ಬಗ್ಗೆ ಮಾತುಗಳು ಕೇಳಿ ಬಂದಿವೆ. ಈ ಸಂಬಂಧ ಸಚಿವ ಆರ್.ಅಶೋಕ್ ವಿರುದ್ಧ ಸೂಕ್ತ ತನಿಖೆ ಕೈಗೊಳ್ಳಬೇಕು ಎಂದು ಆಮ್ ಆದ್ಮಿ ಪಕ್ಷ (AAP) ಒತ್ತಾಯಿಸಿದೆ.
ಬೆಂಗಳೂರು, ಫೆಬ್ರವರಿ 20: ಡ್ರೋನ್ ಸರ್ವೆ ಕಾರ್ಯದಲ್ಲಿ ಅಕ್ರಮವಾಗಿರುವ ಬಗ್ಗೆ ಮಾತುಗಳು ಕೇಳಿ ಬಂದಿವೆ. ಈ ಸಂಬಂಧ ಸಚಿವ ಆರ್.ಅಶೋಕ್ ವಿರುದ್ಧ ಸೂಕ್ತ ತನಿಖೆ ಕೈಗೊಳ್ಳಬೇಕು ಎಂದು ಆಮ್ ಆದ್ಮಿ ಪಕ್ಷ (AAP) ಒತ್ತಾಯಿಸಿದೆ.
ಪ್ರಕರಣವೊಂದರ ವಿಚಾರದಲ್ಲಿ ಐಪಿಎಸ್ ಅಧಿಕಾರಿ ರೂಪಾ ಡಿ.ಮೌದ್ಗಿಲ್ ಅವರು ಡ್ರೋನ್ ಸರ್ವೆ ಕಾರ್ಯದಲ್ಲಿ ಅಕ್ರಮವಾಗಿದೆ ಎಂದು ಆರೋಪಿಸಿದ್ದಾರೆ. ಈ ಆರೋಪಕ್ಕೆ ಸಂಬಂಧಿಸಿದಂತೆ ಕಂದಾಯ ಸಚಿವ ಆರ್.ಅಶೋಕ್ ವಿರುದ್ಧ ಸೂಕ್ತ ತನಿಖೆಯಾಗಬೇಕು ಎಂದು ಎಎಪಿ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್.ವಿ ಸದಂ ಹೇಳಿದರು.

ಸೋಮವಾರ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಅವರು, ರಾಜ್ಯ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದಿರುವ 423 ಕೋಟಿ ರೂಪಾಯಿ ಮೊತ್ತದ ಡ್ರೋನ್ ಸರ್ವೆ ಯೋಜನೆಯಲ್ಲಿ ಅಕ್ರಮ ನಡೆದಿದೆ. ಮೊದಲು ತಮಗೆ ಬೇಕಾದ ರೀತಿಯಲ್ಲಿ ಟೆಂಡರ್ ಮಾರ್ಗಸೂಚಿ ರೂಪಿಸಿದ್ದಾರೆ. ಬಳಿಕ ತಮ್ಮಿಷ್ಟದವರಿಗೆ ಟೆಂಡರ್ ನೀಡುತ್ತಿದ್ದಾರೆ. ಒಟ್ಟು 5,000 ಚದರ ಕಿಲೋ ಮೀಟರ್ ವ್ಯಾಪ್ತಿಯ 1,000 ಚದರ ಕಿಲೋಮೀಟರ್‌ಗೆ ಇಳಿಕೆ ಮಾಡಲಾಗಿದೆ ಎಂದರು.
ಅಕ್ರಮಕ್ಕಾಗಿಯೇ ಒಟ್ಟು ಗುತ್ತಿಗೆಯನ್ನು ತುಂಡು ಗುತ್ತಿಗೆಯಾಗಿ ಮಾರ್ಪಡಿಸಿದ್ದಾರೆ. 1.5 ಕೋಟಿ ರೂ.ನಿಂದ 8 ಕೋಟಿ ರೂಪಾಯಿಗೆ ಟೆಂಡರ್ ಮೊತ್ತ ಹೆಚ್ಚಿಸಲಾಗಿದೆ. ಇದನ್ನು ಹಣಕಾಸು ಇಲಾಖೆಯ ಗಮನಕ್ಕೆ ತರಬೇಕು ಎಂಬ ನಿಯಮವಿದ್ದು, ಅದನ್ನು ಗಾಳಿಗೆ ತೂರಲಾಗಿದೆ. ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ಅವರು ಮಾಡಿರುವ ಆ ಆರೋಪಗಳನ್ನು ಗಮನಿಸಿದರೆ ಭಾರೀ ಪ್ರಮಾಣದ ಕಿಕ್‌ಬ್ಯಾಕ್ ಪಡೆದ ಅನುಮಾನ ವ್ಯಕ್ತವಾಗಿದೆ.

ಪ್ರಮುಖ ಅಧಿಕಾರಿಗಳ ಪಾತ್ರ
ಕಂದಾಯ ಸಚಿವರಾದ ಆರ್.ಅಶೋಕ್, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಮೌನೀಶ್ ಮೌದ್ಗಿಲ್ ಪಾತ್ರದ ಕುರಿತು ಸೂಕ್ತ ತನಿಖೆ ನಡೆಸಬೇಕು ಎಂದು ಅವರು ಪುನರುಚ್ಚರಿಸಿದರು.
ಡ್ರೋನ್ ಸರ್ವೇ ಮಾಡಿಸಲು ಎರಡನೇ ಹಂತದಲ್ಲಿ ಟೆಂಡರ್ ಕರೆಯಲು ಸಿದ್ಧತೆ ನಡೆಸಿಕೊಂಡಿರುವ ಮೌನೀಶ್ ಅವರು ಆರವ್ ಎನ್ನುವ ಸಂಸ್ಥೆಗೆ ನೆರವಾಗುವ ಸಂಬಂಧ ಟೆಂಡರ್ ಮಾರ್ಗಸೂಚಿ ಬದಲಾಯಿಸಿದ್ದಾರೆ. ಈ ಹಿಂದಿನ ಗುತ್ತಿಗೆಗಳಿಗೆ ಆರವ್ ಸಂಸ್ಥೆಯು ಸಬ್ ಕಂಟ್ರ್ಯಾಕ್ಟರ್ ಆಗಿತ್ತು. ಇದೀಗ ಕೆಲವರು ಪ್ರಮುಖ ಸಂಸ್ಥೆಗಳಿಗೆ ಟೆಂಡರ್ ಸಿಗದಂತೆ ಮಾರ್ಗಸೂಚಿಯಲ್ಲಿ ಬದಲಾವಣೆ ಮಾಡಿ ಅಕ್ರಮ ನಡೆಸಲಾಗಿದೆ. ವಿಶೇಷವೆಂದರೆ ಮೌನೀಶ್ ಮೌದ್ಗಿಲ್ ರೂಪಾ ಮೌದ್ಗೀಲ್ ಅವರೆ ಈ ಅಕ್ರಮ ಬಗ್ಗೆ ಆರೋಪ ಮಾಡಿದ್ದಾರೆ ಎಂದು ಜಗದೀಶ್ ತಿಳಿಸಿದರು.












Click it and Unblock the Notifications