Bengaluru House Rent: ಈ ರೀತಿ ಮಾಡೋದಕ್ಕೆ ಬೆಂಗಳೂರಿನಲ್ಲಿ ಬ್ಯಾಚುಲರ್ಸ್‌ಗಳಿಗೆ ಮನೆ ಬಾಡಿಗೆಗೆ ಕೊಡಲ್ಲ ಅನ್ನೋದು!
ಮಹಾನಗರಗಳಲ್ಲಿ ಮನೆ ಬಾಡಿಗೆ ಸಿಗೋದೆ ಕಷ್ಟ ಅಂತಹದ್ದರಲ್ಲಿ ನಾವು ಬ್ಯಾಚುಲರ್ಸ್ ಮನೆ ಕೊಡಿ ಅಂದ್ರೆ ಮಾಲೀಕರು ಇಲ್ಲ ಅನ್ನೋದೆ ಹೆಚ್ಚು. ಎಲ್ಲರೂ ಮನೆ ಕೊಡಲ್ಲ ಅಂದ್ರೆ ನಾವು ಎಲ್ಲಿಗ್ ಹೋಗ್ಬೇಕು ಅನ್ನೋದು ಬ್ಯಾಚುಲರ್ಸ್‌ಗಳ ಪ್ರಶ್ನೆ. ಆದರೆ, ಮನೆ ಬಾಡಿಗೆ ಪಡೆಯೋ ಕೆಲವು ಬ್ಯಾಚುಲರ್ಸ್‌ಗಳು ಮಾಡೋ ಕೆಲಸ ನೋಡಿದ್ರೆ, ಮಾಲೀಕರು ಭಯ ಪಡೋದ್ರಲ್ಲೂ ಅರ್ಥ ಇದೆ ಅನಿಸದೇ ಇರಲ್ಲ.
ಬೆಂಗಳೂರು, ಮುಂಬೈನಂತಹ ದೊಡ್ಡ ನಗರಗಳಲ್ಲಿ ಅಪಾರ್ಟ್‌ಮೆಂಟ್‌ಗಳಲ್ಲಿ ಮನೆ ಸಿಗಬೇಕು ಅಂದ್ರೆ ಅದಕ್ಕೆ ಸಾಕಷ್ಟು ನಿಯಮಗಳು ಇರುತ್ತವೆ. ಕೆಲವು ಅಪಾರ್ಟ್‌ಮೆಂಟ್‌ಗಳಲ್ಲಿ ಬ್ಯಾಚುಲರ್‌ಗಳಿಗೆ ಮನೆ ಬಾಡಿಗೆಗೆ ಕೊಡಲ್ಲ, ಒಂಟಿ ಮಹಿಳೆಯರು ವಾಸಿಸಲು ಕೂಡ ಕೆಲವರು ಒಪ್ಪಿಗೆ ನೀಡಲ್ಲ, ಅಕಸ್ಮಾರ್ ಒಪ್ಪಿದರೂ ಸ್ನೇಹಿತರನ್ನು ಮನೆಗೆ ಕರೆತರಲು ಅವಕಾಶ ನೀಡಲ್ಲ.

ಬೆಂಗಳೂರಿನಲ್ಲಿ ಮನೆ ಮಾಲೀಕರೊಬ್ಬರು ಬ್ಯಾಚುಲರ್‌ಗೆ ಮನೆ ಕೊಟ್ಟಿದ್ದು, ತಮಗಾಗಿರುವ ಕರಾಳ ಅನುಭವವನ್ನು ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾರೆ. ಬಹು ರಾಷ್ಟ್ರೀಯ ಕಂಪೆನಿಯಲ್ಲಿ ಕೆಲಸ ಮಾಡುತ್ತೇನೆ ಎಂದು ಹೇಳುವ ವಿದ್ಯಾವಂತ ಬ್ಯಾಚುಲರ್ ಗೆ ಮಾಲೀಕರೊಬ್ಬರು ಎರಡು ಬೆಡ್‌ರೂಂ ಮನೆಯನ್ನು ಬಾಡಿಗೆ ನೀಡಿದ್ದಾರೆ. ಮೂರ್ನಾಲ್ಕು ತಿಂಗಳು ಬಾಡಿಗೆ ನೀಡಿದ ಯುವಕ ಕಾಣೆಯಾಗಿದ್ದಾನೆ. ನಂತರ ಮಾಲೀಕರಿಗೆ ಕರೆ ಮಾಡಿ ಮನೆ ಖಾಲಿ ಮಾಡುತ್ತೇನೆ ಮುಂಗಡ ವಾಪಸ್ ಕೊಡಿ ಎಂದು ಕೇಳಿದ್ದಾನೆ.
ಮುಂಗಡ ವಾಪಸ್ ಕೊಡ್ತೀನಿ ಮನೆ ಖಾಲಿ ಮಾಡಿ, ಕೀ ಕೊಡಿ ಎಂದು ಕೇಳಿದ್ದಕ್ಕೆ ಬಾಡಿಗೆದಾರ ಹಿಂದೇಟು ಹಾಕಿದ್ದಾನೆ. ಮನೆ ಮಾಲೀಕ ಅನುಮಾನಗೊಂಡು ಮನೆಗೆ ಹೋಗಿ ನೋಡಿದಾಗ ಅವರಿಗೆ ದೊಡ್ಡ ಆಘಾತ ಎದುರಾಗಿದೆ. ಇಡೀ ಮನೆ ಕಸದ ತೊಟ್ಟಿಯಾಗಿ ಮಾರ್ಪಟ್ಟಿತ್ತು. ಮನೆಯ ತುಂಬಾ ಮದ್ಯದ ಬಾಟಲಿಗಳು ಬಿದ್ದಿದ್ದವು, ಕಿಟಕಿಗಳನ್ನು ತೆರೆದಿಟ್ಟು ಹೋಗಿದ್ದರಿಂದ ಪಾರಿವಾಳಗಳು ಮನೆಯಲ್ಲೆಲ್ಲಾ ಹಿಕ್ಕೆ ಹಾಕಿ ಗಲೀಜು ಮಾಡಿದ್ದವು. ಅಡುಗೆ ಮನೆ ಮತ್ತು ಶೌಚಾಲಯ ಗಬ್ಬೆದ್ದು ನಾರುತ್ತಿತ್ತು. ಕೋಣೆಯ ಮಧ್ಯದಲ್ಲೇ ಕೊಳಕು ಹಾಸಿಗೆಯೊಂದು ಬಿದ್ದಿತ್ತು. ಇದನ್ನು ಕಂಡ ಮನೆ ಮಾಲೀಕ ಆಘಾತಗೊಂಡಿದ್ದಾರೆ, ಈ ಬಗ್ಗೆ ರೆಡ್ಡಿಟ್‌ನಲ್ಲಿ ಬರೆದುಕೊಂಡಿದ್ದಾರೆ.
This is why people don’t like renting to bachelors.
— Ravi Handa (@ravihanda) April 26, 2023
An “educated” bachelor working in a “large MNC” did this in Bangalore.
Got these pics from Reddit. pic.twitter.com/LbYhEk9hx5
ಬ್ಯಾಚುಲರ್ ವಿರುದ್ಧ ದೂರು ದಾಖಲಿಸಿದ ಮಾಲಿಕ
"ಮಾರತ್‌ಹಳ್ಳಿಯಲ್ಲಿರುವ ನನ್ನ 2 ಬೆಡ್‌ರೂಂ ಫ್ಲಾಟ್ ಅನ್ನು ಹೊರ ವರ್ತುಲ ರಸ್ತೆಯಲ್ಲಿರುವ ದೊಡ್ಡ ಎಂಎನ್‌ಸಿ ಕಂಪೆನಿಯಲ್ಲಿ ಕೆಲಸ ಮಾಡುವ ಸುಶಿಕ್ಷಿತ ಬ್ಯಾಚುಲರ್‌ಗೆ ಬಾಡಿಗೆಗೆ ನೀಡಿದ್ದೆ. 85 ಸಾವಿರ ಠೇವಣಿ ಮತ್ತು 17 ಸಾವಿರ ಬಾಡಿಗೆ ಇತ್ತು. 3-4 ತಿಂಗಳು ಬಾಡಿಗೆ ಕೊಟ್ಟ ಯುವಕ ನಂತರ ಕಣ್ಮರೆಯಾಗಿದ್ದು. ನಂತರ ನನಗೆ ಕರೆ ಮಾಡಿ ತೀರಾ ತುರ್ತು ಪರಿಸ್ಥಿತಿ ಇರುವುದರಿಂದ ಮನೆ ಖಾಲಿ ಮಾಡಬೇಕು, ಠೇವಣಿ ಅಗತ್ಯವಿದೆ ಎಂದು ಹೇಳಿದರು. ನಾನು ಬಾಡಿಗೆ ಸ್ವಲ್ಪ ಭಾಗವನ್ನು ಮನ್ನಾ ಮಾಡಲು ಮತ್ತು ಉಳಿದ ಠೇವಣಿಯನ್ನು ಹಿಂದಿರುಗಿಸಲು ನಿರ್ಧರಿಸಿದೆ. ಆದರೆ ಅವರು ಮನೆಯನ್ನು ಸರಿಯಾಗಿ ಹಸ್ತಾಂತರಿಸಲು ಹಿಂಜರಿಯುತ್ತಿದ್ದರು. ನನಗೆ ಅನುಮಾನ ಬಂದು ಫ್ಲ್ಯಾಟ್‌ಗೆ ಹೋಗಿ ನೋಡಿದೆ, ಅವನು ಸರಿಯಾಗಿ ಮನೆ ಕಿಟಕಿ ಕೂಡ ಹಾಕದೇ ಅವರ ಊರಿಗೆ ತೆರಳಿದ್ದಾನೆ" ಎಂದು ಹೇಳಿದ್ದಾರೆ.
"ಇಲ್ಲಿಗೆ ಸಾಕಷ್ಟು ಜನ ಸ್ನೇಹಿತರು ಬಂದುಹೋಗಿದ್ದಾರೆ, ರಾತ್ರಿ 10ರ ನಂತರವೂ ಜೋರಾಗಿ ಹಾಡು ಹಾಕಿಕೊಂಡು, ಪಾರ್ಟಿಯನ್ನು ಮಾಡಿದ್ದಾರೆ ಎಂದು ಗಮನಿಸಿದೆ. ನಾನು ಠೇವಣಿಯನ್ನು ವಾಪಸ್ ಕೊಡುವುದಿಲ್ಲ. ಆತನ ವಿವರಗಳನ್ನು ಸ್ಥಳೀಯ ಪೊಲೀಸರಿಗೆ ನೀಡಿದ್ದೇನೆ. ಆತ ಈಗ ನನ್ನ ನಂಬರ್ ಬ್ಲಾಕ್ ಮಾಡಿದ್ದಾನೆ, ಆಗಾಗ್ಗೆ ಕರೆ ಮಾಡಿ ನನ್ನನ್ನು ಅವಾಚ್ಯ ಪದಗಳಲ್ಲಿ ನಿಂದಿಸುತ್ತಾನೆ" ಎಂದು ಮನೆ ಮಾಲೀಕರು ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ.
ಮನೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಲವು ಮಂದಿ ವಿವಿಧ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಕೆಲವು ಬ್ಯಾಚುಲರ್ಸ್‌ಗಳು ಮಾಡುವ ಕೆಲಸದಿಂದ ಎಲ್ಲರಿಗೂ ಕೆಟ್ಟ ಹೆಸರು ಎಂದು ಹಲವರು ಹೇಳಿದ್ದರೆ, ಇನ್ನೂ ಕೆಲವರು ಎಲ್ಲರೂ ಈ ರೀತಿ ಇರುವುದಿಲ್ಲ, ತುಂಬಾ ಸಭ್ಯಸ್ಥರು ಇರುತ್ತಾರೆ, ಕೆಲವರು ಮಾಡುವ ಕೆಲಸಕ್ಕೆ ಎಲ್ಲರಿಗೂ ತೊಂದರೆಯಾಗುತ್ತದೆ ಎಂದು ಹೇಳಿದ್ದಾರೆ.












Click it and Unblock the Notifications