Breaking: ಬೆಂಗಳೂರಿನಲ್ಲಿ ಮುಂದುವರಿದ ಮಳೆ ಆರ್ಭಟ: ಇಂದು ವರ್ತೂರಿನಲ್ಲಿ 60mm ಮಳೆ ದಾಖಲು
ಬೆಂಗಳೂರು, ಜೂನ್ 12: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೆಲವು ದಿನಗಳಿಂದ ಕಡಿಮೆಯಾಗಿದ್ದ ಮಳೆರಾಯನ ಆರ್ಭಟ ಸೋಮವಾರ ಮತ್ತೆ ಶುರುವಾಗಿದೆ. ರಾತ್ರಿ ನಗರದ ವಿವಿಧ ಬಡಾವಣೆಗಳಲ್ಲಿ ಅರ್ಧ ಗಂಟೆಗೂ ಹೆಚ್ಚು ಒಂದೇ ಸಮನೇ ಮಳೆ ಸುರಿದಿದೆ. ವರ್ತೂರಿನಲ್ಲಿ 60 mm ಮಳೆ ದಾಖಲಾಗಿದೆ. ಈ ರಣಮಳೆ ಮುಂದಿನ ಜೂನ್ 16 ರವರೆಗೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರಿನಲ್ಲಿ ಇಂದು ಸಂಜೆ 6.30ರ ನಂತರ ಅಲ್ಲಲ್ಲಿ ಚದುರಿದಂತೆ ಸಣ್ಣ ಹನಿಗಳ ಮೂಲಕ ಮಳೆ ಆರಂಭವಾಯಿತು. ನೋಡ ನೋಡುತ್ತಿದ್ದಂತೆ ಗುಡುಗು ಮಿಂಚು ಸಹಿತ ಧಾರಾಕಾರವಾಗಿ ಅಬ್ಬರಿಸಲು ಶುರುವಿಟ್ಟುಕೊಂಡಿತು.

ನಗರದ ವರ್ತೂರಿನಲ್ಲಿ (ರಾತ್ರಿ 8 ಗಂಟೆ ಮಾಹಿತಿ) 60 ಮಿಲಿ ಮೀಟರ್, ಹಗದೂರು 42 ಮಿಲಿ ಮೀಟರ್, ಎಚ್‌ಎಎಲ್ ವಿಮಾನ ನಿಲ್ದಾಣ 40 ಮಿ.ಮೀ, ಮಾರತ್ತಹಳ್ಳಿ 38 ಮಿ.ಮೀ, ವಿವಿ ಪುರಂ 24 ಮಿ.ಮೀ, ಬಸವನಪುರ 23ಮಿ.ಮೀ, ದೊಡ್ಡಾನೆಕ್ಕುಂದಿ 20ಮಿ.ಮೀ, ಹಂಪಿನಗರ 20ಮಿ.ಮೀ, ಸಂಪಂಗಿರಾಮನಗರನಲ್ಲಿ 12ಮಿ.ಮೀ ಮಳೆ ದಾಖಲಾಗಿದೆ.
ಇದರೊಂದಿಗೆ ಬಸವನಗುಡಿ, ವಿದ್ಯಾಪೀಠ, ಹನುಮಂತ ನಗರ, ಕತ್ರಿಗುಪ್ಪೆ, ಮಡಿವಾಳ, ಕೋರಮಂಗಲ, ವಿಜಯನಗರ, ಮೆಜೆಸ್ಟಿಕ್ ಸುತ್ತಮುತ್ತಲಿನ ಪ್ರದೇಶ, ಹೆಬ್ಬಾಳ, ಕೆಂಗೇರಿ, ಆರ್‌ಆರ್ ನಗರ, ವಿದ್ಯಾರಣ್ಯಪುರ ಸೇರಿದಂತೆ ಬಹುತೇಕ ಬೆಂಗಳೂರಿನಲ್ಲಿ ಗುಡುಗು ಸಹಿತ ಜೋರು ಮಳೆ ಬಿದ್ದಿದೆ. ಕೆಲವೆಡೆ ತಡರಾತ್ರಿವೆಗೂ ಮಳೆ ಮುಂದುವರಿಯುವ ಲಕ್ಷಣಗಳು ಇವೆ.
ಮಳೆಗೆ ಪ್ರಮುಖ ರಸ್ತೆಗಳು, ಅಂಡರ್‌ಪಾಸ್‌ಗಳಲ್ಲಿ ನೀರು ಉಕ್ಕಿ ಹರಿದಿದೆ. ಕೆಲವೆಡೆ ರಸ್ತೆ ಸಂಚಾರಕ್ಕೆ ತೊಂದರೆಯಾದರೆ, ಪ್ರಮುಖ ಜಂಕ್ಷನ್‌ಗಳಲ್ಲಿ ಟ್ರಾಫಿಕ್ ಸಮಸ್ಯೆ ಸೃಷ್ಟಿಯಾಗಿತ್ತು. ಕೆಲಸ ಮುಗಿಸಿ ತೆರಳುವ ನೌಕರರಿಗೆ, ಸಾರ್ವಜನಿಕರಿಗೆ ಮತ್ತು ಬೀದಿ ಬದಿ ವ್ಯಾಪಾರಿಗಳಿಗೆ ಮಳೆಯಿಂದ ತೊಂದರೆ ಉಂಟಾಯಿತು.
ಜೂನ್ 16 ರವರೆಗೆ ನಗರದಲ್ಲಿ ಹೀಗೆ ಜೋರು ಮಳೆಯ ವಾತಾವರಣ ಕಂಡು ಬರಲಿದೆ. ನಿತ್ಯವು ಬೆಳಗ್ಗೆ ಬಿಸಿಲಿನ ದರ್ಶನವಾದರೆ ಸಂಜೆ ನಂತರ ವ್ಯಾಪಕ ಮಳೆಯ ದರ್ಶನವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.












Click it and Unblock the Notifications