Heavy Rain in Bengaluru: ಬೆಂಗಳೂರಿನಲ್ಲಿ ಧಾರಾಕಾರ ಮಳೆ: ವಾರಾಂತ್ಯದ ಸಂತಸ ಹೆಚ್ಚಿಸಿ ಐಪಿಎಲ್ ಖುಷಿ ಕಿತ್ತುಕೊಂಡ ವರುಣ
ಬೆಂಗಳೂರು ಮೇ 18: ಬೆಂಗಳೂರಿನಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಬೆಳಿಗ್ಗೆಯಿಂದಲೂ ಮೋಡ ಕವಿದ ವಾತಾವರಣವಿದ್ದು ಮಧ್ಯಾಹ್ನ ವರುಣನ ಅರ್ಭಟ ಶುರುವಾಗಿದೆ. ಮುಂದಿನ ಕೆಲ ದಿನಗಳವರೆಗೆ ಮಳೆ ಹೀಗೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ನಗರದ ವಿಜಯನಗರ, ರಾಜಾಜಿನಗರ, ಮಾಗಡಿ ರಸ್ತೆ, ಮೈಸೂರು ರಸ್ತೆ, ಕೆಆರ್ ಮಾರುಕಟ್ಟೆ, ಗಾಂಧಿ ಬಜಾರ್ ಸೇರಿದಂತೆ ಹಲವೆಡೆ ಮಳೆ ತೀವ್ರಗೊಂಡಿದೆ. ಏಕಾಏಕಿ ಮಳೆ ಜೋರಾಗಿ ಸುರಿಯುತ್ತಿದ್ದು ಸಂಜೆವರೆಗೂ ಮಳೆಯಾಗುವ ಸಾಧ್ಯತೆ ಇದೆ. ಇಂದು ಬೆಳಗ್ಗೆ ಕೂಡ ಹಲವೆಡೆ ಜಿಟಿಜಿಟಿ ಮಳೆಯಾಗಿದ್ದು, ತಂಪಾದ ವಾತಾವರಣವಿತ್ತು.

ಏಕಾಏಕಿ ಸುರಿದ ಭಾರೀ ಮಳೆಗೆ ರಸ್ತೆಗಳಲ್ಲಿ ನೀರು ನಿಂತುಕೊಂಡಿದೆ. ಇನ್ನೂ ವಾಹನ ಸವಾರರು ಮೆಟ್ರೋ ಪಿಲ್ಲರ್ ಹಾಗೂ ರಸ್ತೆ ಬದಿಯ ಅಂಗಡಿ ಮಳಿಗೆಗಳ ಆಶ್ರಯ ಪಡೆದಿರುವ ದೃಶ್ಯಗಳು ಕಂಡುಬರುತ್ತಿವೆ. ಮಳೆ ಹೀಗೆ ಮುಂದುವರೆದರೆ ಕಚೇರಿಗಳಿಗೆ ಹೋಗಿ ವಾಪಾಸ್ಸಾಗುವ ಜನರಿಗೆ ಕಿರಿಕಿರಿಯಾಗಲಿದೆ.
ವಾರಾಂತ್ಯದ ಖುಷಿ ತಂದು
ಮಳೆರಾಯ ವಾರಾಂತ್ಯದ ಖುಷಿಯನ್ನು ಹೆಚ್ಚಿಸಿದ್ದಾನೆ. ಪ್ರವಾಸ ಹೋಗುವವರು, ಶಾಪಿಂಗ್, ಪಾರ್ಕ್, ಸಿನಿಮಾ ಹೀಗೆ ಸುತ್ತಾಡಲು ಹೋಗುವವರಿಗೆ ಮಳೆ ಸಂತೋಷ ತಂದಿದೆ. ಕಳೆದ ಕೆಲ ದಿನಗಳಿಂದ ಬೆಂಗಳೂರಿನಲ್ಲಿ ಮಳೆಯಾಗುತ್ತಿದ್ದು ಸಿಲಿಕಾನ್ ಸಿಟಿ ಮಂದಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಧಾರಾಕಾರ ಮಳೆಗೆ ಭೂಮಿ ತಂಪಾಗಿದೆ. ಇದರಿಂದಾಗಿ ತಂಪಾದ ವಾತಾವರಣವಿದ್ದು, ಮಳೆಯನ್ನು ಜನ ಎಂಜಾಯ್ ಮಾಡ್ತಾಯಿದ್ದಾರೆ.

ಇನ್ನೂ ರಸ್ತೆ ಬದಿ ಸಿಗುವ ತಿಂಡಿಗಳಿಗೂ ಡಿಮ್ಯಾಂಡ್ ಹೆಚ್ಚಾಗಿದೆ. ಟೀ, ಕಾಫಿಯಿಂದ ಹಿಡಿದು ಮಿರ್ಚಿ ಬಜ್ಜಿ, ಬೊಂಡಾ, ಗೋಬಿ ಹೀಗೆ ಬಿಸಿ ಬಿಸಿ ಸ್ನ್ಯಾಕ್ಸ್ ತಿನ್ನಲು ಜನ ಮುಗಿ ಬೀಳುತ್ತಿದ್ದಾರೆ.
ಮ್ಯಾಚ್ ನೋಡುವ ಖುಷಿ ಕಿತ್ತುಕೊಂಡ ವರುಣ
ಬೆಂಗಳೂರಿನಲ್ಲಿ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು (ಮೇ 18) ಐಪಿಎಲ್ 2024ರ ಪಂದ್ಯ ನಂ.68ರಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ. ಈ ಪಂದ್ಯವು ಎರಡೂ ತಂಡಗಳಿಗೆ ಮಾಡು ಇಲ್ಲವೇ ಮಡಿ ಎಂಬಂತಾಗಿದೆ. ಸಿಎಸ್‌ಕೆ ಈ ಪಂದ್ಯದಲ್ಲಿ ಯಾವುದೇ ಅಂತರದಿಂದ ಗೆಲುವು ಸಾಧಿಸಿದರೆ ಪ್ಲೇ ಆಫ್‌ಗೆ ಪ್ರವೇಶ ಪಡೆಯಲಿದೆ. ಆದರೆ ಆರ್‌ಸಿಬಿ 18 ರನ್‌ಗಳಿಗಿಂತ ಹೆಚ್ಚು ಅಂತರದಲ್ಲಿ ಅಥವಾ 18.1 ಓವರ್‌ಗಳಿಗಿಂತ ಒಳಗೆ ಗೆಲ್ಲಬೇಕು.

ಇಂದು ಸಂಜೆ 7.30ಕ್ಕೆ ಮ್ಯಾಚ್ ಶುರುವಾಗಲಿದೆ. ಆದರೆ ಮ್ಯಾಚ್ ಆರಂಭಕ್ಕೂ ಮುನ್ನ ಮಳೆ ಶುರುವಾಗಿದ್ದು ಮಾಚ್ ನೋಡಲು ತೆರಳುವವರಿಗೆ ತೊಂದರೆಯನ್ನುಂಟು ಮಾಡಿದೆ. ಅಲ್ಲದೆ ಹೀಗೆ ಮಳೆ ಮುಂದುವರೆದರೆ ಪಂದ್ಯಕ್ಕೆ ತೊಂದರೆಯನ್ನುಂಟು ಮಾಡಲಿದೆ. ಹೀಗಾಗಿ ಮ್ಯಾಚ್ ನೋಡಲು ಕಾತುರದಿಂದ ಕಾದು ಕುಳಿತವರು ಮಳೆಯಾಗದಂತೆ ದೇವರಲ್ಲಿ ಬೇಡಿಕೊಳ್ಳುತ್ತಿದ್ದಾರೆ.












Click it and Unblock the Notifications