Harish Poonja: ಬಿಜೆಪಿಗರ ಮೇಲೆ ದಬ್ಬಾಳಿಕೆ ಮಾಡಿದ್ರೆ ಅಷ್ಟೇ- ಸಿಟ್ಟಿಗೆದ್ದ ಬಿವೈ ವಿಜಯೇಂದ್ರ
ಮಂಗಳೂರು ಮೇ 22: ಬಿಜೆಪಿಗರ ಮೇಲೆ ಪದೇ ಪದೇ ದಬ್ಬಾಳಿಕೆ ಮಾಡುತ್ತಿದ್ದರೆ ಸಹಿಸುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆಡಳಿತ ಪಕ್ಷದ ವಿರುದ್ಧ ಕಿಡಿ ಕಾರಿದ್ದಾರೆ. ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ಅವರ ಮಾತನ್ನು ಮರೆಮಾಚಲಾಗಿದೆ ಇದು ಖಂಡನೀಯ ಎಂದು ಅವರು ಗುಡುಗಿದ್ದಾರೆ.
ಇಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ ಅವರು, 'ಹರೀಶ ಪೂಂಜಾ ಬಂಧನಕ್ಕೆ ಪ್ರಯತ್ನಗಳು ನಡೆಯುತ್ತಿವೆ. ನಾನು ಅವರ ಮಾತನ್ನು ಕೇಳಿದ್ದೇನೆ. ವಿಷಯವನ್ನು ಮರೆಮಾಚಲಾಗಿದೆ. ನಾನು ಪೊಲೀಸರೊಂದಿಗೆ ಚರ್ಚಿಸುತ್ತೇನೆ' ಎಂದರು.

ಪೊಲೀಸರ (Police) ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿರೋ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಠಾಣೆ ಪೊಲೀಸರು (Belthangadi Police) ಶಾಸಕರ ಬಂಧನಕ್ಕೆ ಹರೀಶ್ ಪೂಂಜಾ ಮನೆಗೇ ಬಂದಿದ್ದರು. ಇದನ್ನು ವಿಜಯೇಂದ್ರ ಖಂಡಿಸಿದ್ದಾರೆ.
ಶಾಸಕರು ಉದ್ವೇಗದಲ್ಲಿ ಕೆಲವು ಮಾತುಗಳನ್ನು ಹೇಳಿದ್ದಾರೆ. ಅದು ಸರಿ ಅಲ್ಲ ಎಂಬುದು ಪೂಂಜಾರಿಗೂ ಕೂಡ ಗೊತ್ತಾಗಿದೆ. ಹಾಗೆಂದು ಪದೇಪದೆ ಬಿಜೆಪಿಗರ ಮೇಲೆ ದಬ್ಬಾಳಿಕೆ ಸಹಿಸಲು ಆಗಲ್ಲ ಎಂದು ವಿಜಯೇಂದ್ರ ಎಚ್ಚರಿಕೆ ಕೊಟ್ಟಿದ್ದಾರೆ.
ಶಾಸಕರನ್ನು ಅರೆಸ್ಟ್ ಮಾಡುವ ದುಸ್ಸಾಹಸಕ್ಕೆ ಕೈಹಾಕಿದರೆ ಮುಂದಾಗುವುದಕ್ಕೆಲ್ಲ ಸರ್ಕಾರ, ಇಲಾಖೆ ಹೊಣೆ ಆಗಬೇಕಾಗುತ್ತದೆ ಎಂದು ವಿಜಯೇಂದ್ರ ಎಚ್ಚರಿಕೆ ನೀಡಿದ್ದಾರೆ. ಕಾನೂನು ಸುವ್ಯವಸ್ಥೆ ಹದಗೆಡಲು ನೀವೇ ಕುಮ್ಮಕ್ಕು ಕೊಡತ್ತಿದ್ದೀರಿ. ಶಶಿರಾಜ್ ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು. ಶಾಸಕರ ಬಂದನಕ್ಕೆ ಮುಂದಾಗುವುದನ್ನು ಕೈ ಬಿಡಬೇಕು. ಗೃಹ ಸಚಿವರು ಎಸ್‌ಪಿ ಜತೆ ಮಾತನಾಡಿ ಸೂಚನೆ ಕೊಡಬೇಕು ಎಂದು ವಿಜಯೇಂದ್ರ ಆಗ್ರಹಿಸಿದ್ದಾರೆ.
ತಮ್ಮ ತನ್ನ ಆಪ್ತನ ಬಂಧನದ ಹಿನ್ನಲೆಯಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ನುಗ್ಗಿದ್ದ ಶಾಸಕ ಹರೀಶ್ ಪೂಂಜಾ, ಅಶ್ಲೀಲ ಶಬ್ದಗಳಿಂದ ಪೊಲೀಸರಿಗೆ ಬೈಯ್ದಿದ್ರು ಎನ್ನಲಾಗಿದೆ. ಇದೇ ತಿಂಗಳ 20ರಂದು ಬೆಳ್ತಂಗಡಿ ತಾಲೂಕು ಕಚೇರಿ ಎದುರು ಶಾಸಕ ಹರೀಶ್ ಪೂಂಜಾ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆ ವೇಳೆ ಪೊಲೀಸರಿಗೆ ಬೆದರಿಕೆ ಹಾಕಿದ್ದ ಆರೋಪ ಮೇರೆಗೆ ಕಳೆದ ಎರಡು ದಿನಗಳ ಹಿಂದೆ ಹರೀಶ್ ಪೂಂಜಾ ವಿರುದ್ಧ ಪ್ರಕರಣ ದಾಖಲಾಗಿತ್ತು.
ಅರೆಸ್ಟ್ ಆಗಿರುವ ಕಾರ್ಯಕರ್ತರಿಗಾಗಿ ಪೊಲೀಸರ ಕಾಲರ್ ಹಿಡಿಯಲು ಸಿದ್ಧ, ಬೆಂಗಳೂರಿನ ಡಿ.ಜೆ ಹಳ್ಳಿ, ಕೆ.ಜೆ ಹಳ್ಳಿಯ ಪೊಲೀಸ್ ಠಾಣೆಗೆ ಆದ ಗತಿಯನ್ನು ಬೆಳ್ತಂಗಡಿ ಠಾಣೆಗೂ ಕಾಣಿಸುತ್ತೇನೆಂದು ಬೆದರಿಕೆ ಹಾಕಿರುವ ಆರೋಪ ಶಾಸಕರ ವಿರುದ್ಧ ಕೇಳಿ ಬಂದಿದೆ.
ಅಲ್ಲದೇ, ಬೆಳ್ತಂಗಡಿ ಠಾಣಾ ಪೊಲೀಸ್ ನಿರೀಕ್ಷಕರಿಗೆ ಮತ್ತು ಇತರೆ ಪೊಲೀಸ್ ಅಧಿಕಾರಿಗಳಿಗೆ ಹಾಗೂ ಪೊಲೀಸ್ ಇಲಾಖೆಗೆ ಅವ್ಯಾಚ ಶಬ್ದಗಳಿಂದ ನಿಂದಿಸಿದ ಆರೋಪ ಕೇಳಿ ಬಂದಿದೆ. ಕೆಲ ದಿನಗಳ ಹಿಂದಷ್ಟೇ ಹರೀಶ್ ಪೂಂಜಾ ವಿರುದ್ದ ಪೊಲೀಸರಿಗೆ ಬೆದರಿಸಿದ್ದ ಹಾಗೂ ಬೆಳ್ತಂಗಡಿ ಪೊಲೀಸ್ ಠಾಣೆಗೆ ನುಗ್ಗಿ ದರ್ಪ ಪ್ರದರ್ಶಿಸಿದ ಆರೋಪದಡಿ ಎಫ್ಐಆರ್ ದಾಖಲಾಗಿತ್ತು.












Click it and Unblock the Notifications