ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ: ಉಮೇಶ್ ಶೆಟ್ಟಿಗೆ ಬಿಜೆಪಿ ಟಿಕೆಟ್
ಬೆಂಗಳೂರು, ಏಪ್ರಿಲ್ 17: ಸೋಮವಾರ ಮೂರನೇ ಪಟ್ಟಿ ಬಿಡುಗಡೆ ಮಾಡಿರುವ ಬಿಜೆಪಿಯು ಬೆಂಗಳೂರಿನ ಪ್ರಮುಖ ವಿಧಾನಸಭಾ ಕ್ಷೇತ್ರವಾದ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಿಂದ ಈ ಬಾರಿ ಉಮೇಶ್ ಶೆಟ್ಟಿಗೆ ಟಿಕೆಟ್ ನೀಡಿದೆ.
ವಸತಿ ಸಚಿವ ವಿ ಸೋಮಣ್ಣ ಅವರ ಕರ್ಮಭೂಮಿಯಾಗಿದ್ದ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಿಂದ ಅವರಿಗೆ ಈ ಬಾರಿ ಟಿಕೆಟ್ ನಿರಾಕರಿಸಲಾಗಿತ್ತು. ಹೀಗಾಗಿ ಇಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಎಂಬುದು ಬಿಜೆಪಿ ಹೈಕಮಾಂಡ್‌ಗೆ ಬಹುದೊಡ್ಡ ತಲೆನೋವಾಗಿತ್ತು. ಆದರೆ ಸೋಮವಾರ ಇದಕ್ಕೆ ಕೊನೆಗೂ ತೆರೆ ಬಿದ್ದಿತು.

ಸಚಿವ ವಿ ಸೋಮಣ್ಣ ಅವರನ್ನು ಈ ಬಾರಿ ವರುಣಾ ಹಾಗೂ ಚಾಮರಾಜನಗರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಕಣಕ್ಕಿಳಿಸಿದೆ. ಆದರೆ ಸೋಮಣ್ಣ ಅವರಿಗೆ ನಿಜಕ್ಕೂ ಇದು ಅಗ್ನಿಪರೀಕ್ಷೆಯಂತೆ ಕಂಡಿದೆ. ಸೋಮಣ್ಣ ಈಗ ಇಲ್ಲವಾದ್ದರಿಂದ ಕ್ಷೇತ್ರದಲ್ಲಿ ಟಿಕೆಟ್ ನೀಡಲು ಮೂವರ ಹೆಸರು ಶಿಫಾರಸು ಮಾಡಲಾಗಿತ್ತು. ಇಲ್ಲಿ ಸೋಮಣ್ಣ ಅವರ ಮಗ ಅರುಣ್ ಸೋಮಣ್ಣ ಅವರಿಗೆ ಟಿಕೆಟ್ ನೀಡಬಹುದು ಎಂದು ಭಾವಿಸಲಾಗಿತ್ತು. ಆದರೆ ಬಿಜೆಪಿ ಹೈಕಮಾಂಡ್ ಪುತ್ರರಿಗೆ ಟಿಕೆಟ್ ನೀಡದಿರುವ ನಿರ್ಧಾರಕ್ಕೆ ಅಂಟಿಕೊಂಡಿತ್ತು.
ಗೋವಿಂದರಾಜನಗರ ಕ್ಷೇತ್ರದಿಂದ ಟಿಕೆಟ್ ನೀಡುವ ಬಗ್ಗೆ ಸೋಮಣ್ಣ ಅವರ ನೇತೃತ್ವದಲ್ಲೇ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ನೀಡಲು ಸೂಚನೆ ಬಂದಿತ್ತು. ಈ ಬಗ್ಗೆ ಕಳೆದ ಬುಧವಾರ ಸಭೆ ನಡೆದು ಬಿಜೆಪಿ ಪದಾಧಿಕಾರಿಗಳು, ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು. ಈ ವೇಳೆ ಅರುಣ್ ಸೋಮಣ್ಣ ಗೋವಿಂದರಾಜನಗರ ಕ್ಷೇತ್ರ ಸಮಿತಿ ಅಧ್ಯಕ್ಷ ವಿಶ್ವನಾಥ ಗೌಡ ಮತ್ತು ಮಹಾನಗರ ಪಾಲಿಕೆ ಮಾಜಿ ಸದಸ್ಯ ಮೋಹನ್ ಕುಮಾರ್ ಹೆಸರುಗಳನ್ನು ಬಿಜೆಪಿ ಹೈಕಮಾಂಡ್‌ಗೆ ಮೌಖಿಕವಾಗಿ ಶಿಫಾರಸು ಮಾಡಲಾಗಿತ್ತು. ಇದರಲ್ಲಿ ಒಬ್ಬರಿಗೆ ಟಿಕೆಟ್ ನೀಡುವಂತೆ ಹೇಳಲಾಗಿತ್ತು.
ಇದರಲ್ಲಿ ಅರುಣ್ ಸೋಮಣ್ಣ ಅವರು ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು. ಅದರೆ ಕ್ಷೇತ್ರದಲ್ಲಿ ಈಗಾಗಲೇ ಕಣದಲ್ಲಿರುವ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಕೃಷ್ಣ ಅವರ ವಿರುದ್ದ ಕಣಕ್ಕಿಳಿಸಲು ಪ್ರಮುಖ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕಾಗಿತ್ತು. ಇದರಿಂದ ವಿಶ್ವನಾಥ್ ಗೌಡ ಅವರನ್ನು ಕಣಕ್ಕಿಳಿಸಲಾಗುತ್ತದೆ ಎಂದು ಹೇಳಲಾಗಿತ್ತು. ಈ ನಿಟ್ಟಿನಲ್ಲಿ ಅರುಣ್ ಸೋಮಣ್ಣ ಅವರನ್ನು ಕರೆಸಿಕೊಂಡು ಟಿಕೆಟ್ ನೀಡಲಾಗುವುದಿಲ್ಲ ಎಂದು ಹೇಳಲಾಗಿತ್ತು.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಹಿಂದುಳಿದ ಸಮುದಾಯದ ನಾಯಕರು ಹೆಚ್ಚಾಗಿರುವುದರಿಂದ ಮೋಹನ್ ಕುಮಾರ್ ಅವರಿಗೆ ಟಿಕೆಟ್ ನೀಡಲಾಗುವುದು ಎಂದು ಹೇಳಲಾಗಿತ್ತು, ಆದರೆ ಕೊನೆಗೆ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಉಮೇಶ್ ಶೆಟ್ಟಿಗೆ ಈಗ ಟಿಕೆಟ್ ನೀಡಲಾಗಿದೆ.












Click it and Unblock the Notifications