ಗಣೇಶೋತ್ಸವ: ಮೂರ್ತಿ ಪ್ರತಿಷ್ಠಾಪನೆಗಾಗಿ 63 ಏಕಗವಾಕ್ಷಿ ಕೇಂದ್ರ ಸ್ಥಾಪನೆ, ಏನಿದು
ಬೆಂಗಳೂರು, ಸೆಪ್ಟಂಬರ್ 07: ಬೆಂಗಳೂರಿನಲ್ಲಿ ಗಣೇಶ ಹಬ್ಬದ ಪ್ರಯುಕ್ತ ಸಾರ್ವಜನಿಕ ಮೂರ್ತಿ ಪ್ರತಿಷ್ಠಾಪನೆಗೆ ನೆರವಾಗುವಂತೆ ಬಿಬಿಎಂಪಿ ವ್ಯಾಪ್ತಿಯಲ್ಲಿ 63 ಉಪ ವಿಭಾಗ ಕಛೇರಿಗಳಲ್ಲಿ ಬಿಬಿಎಂಪಿ, ಪೊಲೀಸ್, ಬೆಸ್ಕಾಂ ಮತ್ತು ಅಗ್ನಿಶಾಮಕ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಿ ಏಕಗವಾಕ್ಷಿ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಈ ಮೂಲಕ ಒಂದೇ ಸೂರಿನಡಿ ಪ್ರತಿಷ್ಠಾಪನೆಗೆ ಅನುಮತಿ ಪತ್ರ ಪಡೆಯಬಹುದು ಎಂದು ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್ ತಿಳಿಸಿದರು.
ಗಣೇಶ ಚತುರ್ಥಿ ಆಚರಣೆ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಬೆಂಗಳೂರು ನಗರ ಪೊಲೀಸ್ ಜಂಟಿ ಸಹಯೋಗದಲ್ಲಿ ಗುರುವಾರ ಟೌನ್‌ಹಾಲ್‌ನಲ್ಲಿ "ಸಾರ್ವಜನಿಕ ಶಾಂತಿ ಸೌಹಾರ್ದ ಸಭೆ ನಡೆಯಿತು.

ಈ ವೇಳೆ ಮಾತನಾಡಿದ ತುಷಾರ್ ಗಿರಿನಾಥ್ ಅವರು, ನಗರದಲ್ಲಿ 63 ಏಕಗವಾಕ್ಷಿ ಕೇಂದ್ರಗಳ ವಿಳಾಸ ಹಾಗೂ ಏಕಗವಾಕ್ಷಿ ಕೇಂದ್ರಗಳಲ್ಲಿರುವ ಬಿಬಿಎಂಪಿ, ಪೊಲೀಸ್, ಬೆಸ್ಕಾಂ ಮತ್ತು ಅಗ್ನಿಶಾಮಕ ಇಲಾಖೆಯ ನೋಡಲ್ ಅಧಿಕಾರಿಗಳ ವಿವರವಾದ ಮಾಹಿತಿಯನ್ನು ಶೀಘ್ರವೇ ಬಿಡುಗಡೆ ಮಾಡಲಾಗುತ್ತದೆ. ಅದರನುಸಾರ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವವರು ಏಕಗವಾಕ್ಷಿ ಸ್ಥಳಕ್ಕೆ ಭೇಟಿ ನೀಡಿ ಒಂದೇ ಸ್ಥಳದಲ್ಲಿ 48 ಗಂಟೆ ಒಳಗೆ ಅನುಮತಿ ಪಡೆಯಬಹುದು ಎಂದರು.
ವಿಸರ್ಜನೆಗೆ ಕೆರೆಗಳ ಬಳಿ ಕೌಂಟರ್
ಗಣೇಶ ವಿಸರ್ಜನೆಗಾಗಿ ಕೆರೆಗಳ ಬಳಿ ಕೌಂಟರ್ ಗಳ ವ್ಯವಸ್ಥೆ ಮಾಡಿ ಅದಕ್ಕಾಗಿ ಅಗತ್ಯ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿರುತ್ತದೆ. ಪಿಒಪಿ ಗಣೇಶ ಮೂರ್ತಿಗಳನ್ನು ನಿಷೇಧಿಸಿದ್ದು, ಯಾರೂ ಕೂಡಾ ಪಿಒಪಿ ಗಣೇಶ ಮೂರ್ತಿಗಳನ್ನು ಖರೀದಿಸದೆ ಪರಿಸರ ಸ್ಹೇಹಿ ಗಣೇಶ ಮೂರ್ತಿಗಳನ್ನಿಟ್ಟು ಪೂಜಿಸಿ, ಈ ಬಗ್ಗೆ ಎಲ್ಲರಲ್ಲೂ ಅರಿವು ಮೂಡಿಸಿ ಹಾಗೂ ವಿಸರ್ಜನಾ ಸ್ಥಳದಲ್ಲಿ ತ್ಯಾಜ್ಯವನ್ನು ಒಂದು ಕಡೆ ಮಾತ್ರ ಹಾಕಿದರೆ ಅದನ್ನು ಸುಲಭವಾಗಿ ತೆರವುಗೊಳಿಸಲು ಅನುಕೂಲವಾಗಲಿದೆ ಎಂದು ಮನವಿ ಮಾಡಿದರು.

ಪ್ರತಿವರ್ಷದಂತೆ ಅಗತ್ಯ ವ್ಯವಸ್ಥೆ ಇರಲಿದೆ
ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿ ವರ್ಷದಂತೆ ಪಾಲಿಕೆ ವತಿಯಿಂದ ಗಣೇಶ ವಿಸರ್ಜನೆಗೆ ಸ್ಯಾಂಕಿ ಕೆರೆ, ಹಲಸೂರು ಕೆರೆ, ಯಡಿಯೂರು ಕೆರೆ, ಹೆಬ್ಬಾಳ ಕೆರೆ ಹಾಗೂ ಇತರೆ ಪ್ರಮುಖ ಕೆರೆ/ಕಲ್ಯಾಣಿಗಳಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲಾಗುತ್ತದೆ. ಪ್ರಮುಖ ಸ್ಥಳ/ಜಂಕ್ಷನ್ ಮತ್ತು ಅವಶ್ಯಕತೆ ಇರುವ ಕಡೆ ವಾರ್ಡ್ ವಾರು ತಾತ್ಕಾಲಿಕವಾಗಿ ಸಂಚಾರಿ ವಿಸರ್ಜನಾ ಘಟಕ(ಮೊಬೈಲ್ ಟ್ಯಾಂಕ್)ಗಳನ್ನು ಪ್ರತಿ ವರ್ಷದಂತೆ ವ್ಯವಸ್ಥೆ ಮಾಡಲಾಗಿದೆ.
ಗಣೇಶ ಮೂರ್ತಿಗಳ ವಿಸರ್ಜನೆಗೆ ಗುರುತಿಸಿರುವ ಕೆರೆಗಳ ಕಲ್ಯಾಣಿಗಳ ಬಳಿ ಭದ್ರತೆಯ ದೃಷ್ಠಿಯಿಂದ ಪೊಲೀಸ್ ವ್ಯವಸ್ಥೆಯ ಜೊತೆಗೆ ಬ್ಯಾರಿಕೇಡಿಂಗ್, ಸಿಸಿಟಿವಿ, ವಿದ್ಯುತ್ ದ್ವೀಪ, ನುರಿತ ಈಜುಗಾರರ ವ್ಯವಸ್ಥೆ, ಕ್ರೇನ್ ಗಳ ಸೌಲಭ್ಯವನ್ನು ಕಲ್ಪಿಸಲಾಗುವುದು ಎಂದು ಅವರು ವಿವರಿಸಿದರು.
ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಶ್ರೀ ಬಿ. ದಯಾನಂದ್ ರವರು ಮಾತನಾಡಿ, ಪ್ರತಿ ವರ್ಷದಂತೆ ಶಾಂತಿ ಸೌಹಾರ್ದತೆಯಿಂದ ಗಣೇಶ ಹಬ್ಬವನ್ನು ಆಚರಿಸಬೇಕು. ಈಗಾಗಲೇ ಎಲ್ಲಾ ಕಡೆ ಶಾಂತಿ ಸಬೆಗಳನ್ನು ನಡೆಸಲಾಗಿದೆ. ಈ ಬಾರಿ ಯಾವುದೇ ರೀತಿಯ ಅನಾನುಕೂಲವಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸಭೆಯ ಪ್ರಮುಖ ಸಲಹೆಗಳು
ಗಣೇಶ ಪ್ರತಿಷ್ಠಾನದ ಆಯೋಜನಕರಿಂದ ಸಭೆಯಲ್ಲಿ ಬಂದಂತಹ ಪ್ರಮುಖ ಸಲಹೆಗಳು:
• ಏಕಗವಾಕ್ಷಿ ಪದ್ದತಿಯಲ್ಲಿ ಅನುಮತಿ ಪತ್ರವನ್ನು ನೀಡಬೇಕು.
• ಹಲಸೂರು ಕೆರೆಯ ಕಲ್ಯಾಣಿಯನ್ನು ಇನ್ನೂ ಸ್ವಚ್ಛಗೊಳಿಸಿಲ್ಲ, ಕೂಡಲೆ ಸ್ವಚ್ಛಗೊಳಿಸಬೇಕು.
• ಜೆಸಿ ನಗರದ ಬಳಿ ಗಣೇಶ ವಿಸರ್ಜನೆಯ ಮೆರವಣಿಗೆಯ ವೇಳೆ ಸಂಚಾರ ದಟ್ಟಣೆಯನ್ನು ನಿವಾರಿಸಬೇಕು
• ಗಣೇಶ ವಿಸರ್ಜನಾ ಮೆರವಣಿಗೆಯ ವೇಳೆ ಬೆಸ್ಕಾಂ ಇಲಾಖೆಯಿಂದ ಅಗತ್ಯ ಕ್ರಮ ಕೈಗೊಂಡು ಯಾವುದೇ ಅವಘಡ ನಡೆಯದಂತೆ ನೋಡಿಕೊಳ್ಳಬೇಕು.
• ಪಿಒಪಿ ಗಣೇಶ ಮೂರ್ತಿಗಳನ್ನು ಕಡ್ಡಾಯವಾಗಿ ನಿಷೇಧಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು.
• ಯಾವುದೇ ಜಾತಿ ಭೇದ ಭಾವವಿಲ್ಲದೆ ಶಾಂತಿ ಸೌಹಾರ್ದತೆಯಿಂದ ಗಣೇಶ ಹಬ್ಬವನ್ನು ಆಚರಿಸುವಂತಾಗಬೇಕು.
• ಹಿಂದು-ಕ್ರೈಸ್ತ-ಮುಸ್ಲಿಂ ಸೇರಿ ಒಂದಾಗಿ ಗಣೇಶ ಹಬ್ಬವನ್ನು ಶಾಂತಿಯುತವಾಗಿ ಆಚರಿಸಬೇಕು.
• ಫ್ಲೆಕ್ಸ್, ಬ್ಯಾನರ್ ಅಳವಡಿಸಲು ಅನುಮತಿ ನೀಡಲು ಮನವಿ.
• ಸ್ಯಾಂಕಿ ಟ್ಯಾಂಕಿ ಕಲ್ಯಾಣಿ ಬಳಿ ವಿದ್ಯುತ್ ದೀಪಗಳನ್ನು ಅಳವಡಿಸಿ.












Click it and Unblock the Notifications