ಮೋದಿ ಸರ್ಕಾರದ ಬಜೆಟ್‌ಗೆ ಜನ ಏನಂತಾರೆ?
ಬೆಂಗಳೂರು,ಜು.11: ಮೋದಿ ಸರ್ಕಾರದ ಚೊಚ್ಚಲ ಬಜೆಟ್‌ನ್ನು ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಡಿಸಿದ್ದಾರೆ. ಎನ್‌ಡಿಎ ಮಿತ್ರಕೂಟದ ಪಕ್ಷಗಳು ಅಭಿವೃದ್ಧಿ ಪರ ಬಜೆಟ್ ಎಂದು ಬಣ್ಣಿಸಿದರೆ, ಕಾಂಗ್ರೆಸ್, ಟಿಎಂಸಿ, ಜೆಡಿಯು ನಿರಾಶದಾಯಕ ಬಜೆಟ್ ಎಂದು ಅಸಮಾಧಾನ ವ್ಯಕ್ತಪಡಿಸಿವೆ.[ಸರ್ದಾರ್ ಪ್ರತಿಮೆಗೆ 200 ಕೋಟಿ ಟ್ವೀಟ್ ಲೋಕದಲ್ಲಿ ಶಾಕ್]
ರಾಜಕೀಯ ಪಕ್ಷಗಳು ಏನೇ ಹೇಳಲಿ ಆಯಾ ಪಕ್ಷಗಳು ಅಧಿಕಾರದಲ್ಲಿದ್ದಾಗ ಬಜೆಟನ್ನು ಹೊಗಳುವುದು ಪ್ರತಿ ಪಕ್ಷದಲ್ಲಿದ್ದಾಗ ತಿರಸ್ಕರಿಸುವುದು ಸಾಮಾನ್ಯ. ಆದರೆ ಯಾವುದೇ ಪಕ್ಷಕ್ಕೆ ಬೆಂಬಲ ನೀಡದ ಜನ ಸಾಮಾನ್ಯರು ಬಜೆಟ್ ಬಗ್ಗೆ ಏನು ಹೇಳುತ್ತಾರೆ ಎನ್ನುವುದು ಮುಖ್ಯ. ಈ ಕಾರಣಕ್ಕೆ ಒನ್ ಇಂಡಿಯಾ ಕನ್ನಡ ಕೆಲವರನ್ನು ಮಾತನಾಡಿಸಿದ್ದು ಅವರ ಅಭಿಪ್ರಾಯಗಳನ್ನು ನೀಡಲಾಗಿದೆ.[ಶ್ರೀಸಾಮಾನ್ಯರ ಜೇಬು ತುಂಬುವ ಆರು ಪ್ರಸ್ತಾವನೆ]

ಅಭಿವೃದ್ಧಿ ಪರ ಬಜೆಟ್:
ಕನ್ನಡ ಒನ್‌ಇಂಡಿಯಾದ ಓದುಗರು ಬಜೆಟ್ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಆನ್‌ಲೈನ್ ಪೋಲ್‌ನಲ್ಲಿ 2681 ಜನ ವೋಟ್ ಮಾಡಿದ್ದು, 1902 ಜನ ಅಭಿವೃದ್ಧಿ ಪರವಾಗಿದೆ ಎಂದು ಹೇಳಿದ್ದಾರೆ. 266 ಜನ ಬಡವರ ಪರವಾಗಿ ಎಂದು ಹೇಳಿದರೆ, 513 ಜನ ಯಾವುದೇ ನಿರೀಕ್ಷೆ ಇಟ್ಟುಕೊಂಡಿಲ್ಲ ಎಂದು ವೋಟ್ ಮಾಡಿದ್ದಾರೆ.

ವಿಮೆ ಕ್ಷೇತ್ರದಲ್ಲಿ ಎಫ್‌ಡಿಐ ಹೆಚ್ಚಿಸಿರುವುದು ಸ್ವಾಗತಾರ್ಹ:
ವಿಮೆ ಕ್ಷೇತ್ರದಲ್ಲಿ ಶೇ.24ರಿಂದ ಶೇ.49ರವರೆಗೆ ವಿದೇಶಿ ಬಂಡವಾಳ ಹೂಡಿಕೆಯನ್ನು ಹೆಚ್ಚಿಸಿದ್ದಾರೆ. ಹಳ್ಳಿಯ ಸಾಕಷ್ಟು ಜನರು ವಿಮೆಯಿಂದ ವಂಚಿರಾಗಿದ್ದರು. ಈಗ ಎಫ್‌ಡಿಎ ಹೆಚ್ಚಿಸಿದ್ದರಿಂದ ಸಾಕಷ್ಟು ವಿದೇಶಿ ಕಂಪೆನಿಗಳಿಗೆ ಗ್ರಾಮೀಣ ಪ್ರದೇಶದಲ್ಲಿ ಶಾಖೆ ತೆರೆಯಲು ಸಹಾಯವಾಗಲಿದೆ.
80 ಸಿ ಅಡಿಯಲ್ಲಿ ಇದುವರೆಗೆ 1 ಲಕ್ಷ ದವರೆಗೆ ತೆರಿಗೆ ವಿನಾಯಿತಿ ಸಿಗುತಿತ್ತು. ಆದರೆ ಈಗ ಮಿತಿಯನ್ನು 1.5 ಲಕ್ಷ ದವರೆಗೆ ಹೆಚ್ಚಳ ಮಾಡಿದ್ದು ಬಹಳಷ್ಟು ಜನರಿಗೆ ಲಾಭವಾಗಲಿದೆ. ಕೆವೈಸಿ(ನೋ ಯುವರ್ ಕಸ್ಟಮರ್) ಏಕರೂಪಗೊಳಿಸಿ ಗ್ರಾಹಕರ ವ್ಯವಹಾರ ಪ್ರಕ್ರಿಯೆಯನ್ನು ಸುಲಭಗೊಳಿಸಿದ್ದಾರೆ. ಮೋದಿ ಸರ್ಕಾರ ಐದು ಲಕ್ಷದವರೆಗೆ ಆದಾಯ ತೆರಿಗೆ ವಿನಾಯಿತಿ ಮಿತಿ ಮಾಡಲಿದ್ದಾರೆ ಎನ್ನುವ ಒಂದು ಸುದ್ದಿಯಿತ್ತು. ಒಂದು ವೇಳೆ ಐದು ಲಕ್ಷದವರೆಗೆ ಆದಾಯ ತೆರಿಗೆ ಮಿತಿ ಹೆಚ್ಚಳ ಮಾಡುತ್ತಿದ್ದರೆ ಬಂಪರ್ ಬಜೆಟ್ ಆಗುತಿತ್ತು.
ಭರತ್, ಉದ್ಯೋಗಿ ಬಿರ್ಲಾ ಸನ್ ಲೈಫ್ ಇನ್ಶೂರೆನ್ಸ್, ಜಯನಗರ

ಅಂಧರಿಗಾಗಿ ವಿಶೇಷ ನೋಟ್:
ಅಂಧರಿಗಾಗಿ ವಿಶೇಷ ನೋಟ್ ಮುದ್ರಣಕ್ಕೆ ಸರ್ಕಾರ ಕೈಗೊಂಡದ್ದು ಬಹಳ ಸಂತಸ ತಂದಿದೆ. ಬಹಳಷ್ಟು ಸರ್ಕಾರೇತರ ಸಂಸ್ಥೆಗಳು ಈ ಹಿಂದೆಯೇ ಕೇಂದ್ರ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿತ್ತು. ಈಗ ಇದು ಕಾರ್ಯರೂಪಕ್ಕೆ ಬಂದಿದೆ. ಜೊತೆಗೆ ಅಂಧರ ಪುಸ್ತಕಗಳನ್ನು ಮುದ್ರಿಸಲು 15 ಬ್ರೈಲ್ ಪ್ರೆಸ್ ನಿರ್ಮಾಣ ಮಾಡುತ್ತಿರುವುದು ಉತ್ತಮ ಬೆಳವಣಿಗೆ.
ಅಂಗವಿಕಲರ ಪಿಂಚಣಿ ಹೆಚ್ಚಳ ಮಾಡಿದ್ದಾರೆ. ಶಿಕ್ಷಣ ಪಡೆದವರಿಗೆ ಮಾತ್ರ ಪಿಂಚಣಿ ಎಂದು ಘೋಷಿಸಿದರೆ ಮತ್ತಷ್ಟು ಒಳ್ಳೆದಾಗುತಿತ್ತು. ಈ ಮೂಲಕ ಪೋಷಕರು ತಮ್ಮ ಮಕ್ಕಳನ್ನು ಶಿಕ್ಷಣಕ್ಕೆ ಸೇರಿಸಲು ಮುಂದಾಗುತ್ತಾರೆ.
ಅಶ್ವಿನಿ ಅಂಗಡಿ, ವಿಶ್ವಸಂಸ್ಥೆಯ ಗೌರವಕ್ಕೆ ಪಾತ್ರವಾಗಿರುವ ಅಂಧ ಸಾಧಕಿ
ಇದನ್ನೂ ಓದಿ:ಅಂಧರಿಗಾಗಿ 'ಬೆಳಕು' ನೀಡಿದ ಅಶ್ವಿನಿ ಅಂಗಡಿ

ನಿರಾಸೆ ಆಗಿದೆ:
ಪ್ರಸ್ತುತ ನಗರಗಳಲ್ಲಿ ಮೂಲಭೂತ ಸೌಕರ್ಯಗಳಿಲ್ಲ. ಇವುಗಳ ಮಧ್ಯೆ ಸ್ಮಾರ್ಟ್ ಸಿಟಿ ಮಾಡಲು ಮುಂದಾಗುತ್ತಿದ್ದಾರೆ. ನಮ್ಮ ದೇಶದಲ್ಲಿ ವಿದ್ಯುತ್ ಇಲ್ಲ. ರೈತರಿಗೆ ಕಿಸಾನ್ ಟಿವಿ ಮಾಡುವಷ್ಟು ನಾವು ಅಭಿವೃದ್ಧಿಯಾಗಿಲ್ಲ. ರೈತರಿಗೆ ಶೇ.1 ಬಡ್ಡಿರಹಿತ ಸಾಲ ನೀಡಿದ್ದರೆ ಲಾಭವಾಗುತಿತ್ತು. ಬಜೆಟ್‌ನಿಂದ ನಿರಾಸೆಯಾಗಿದೆ.
ಪ್ರೊ.ಡಾ.ಜಿ.ಎಂ ಕೃಷ್ಣಯ್ಯ, ಸರ್ ಎಂವಿಐಟಿ ಬೆಂಗಳೂರು.

ತೆರಿಗೆ ಮಿತಿಯನ್ನು ಕನಿಷ್ಠ 3 ಲಕ್ಷಕ್ಕೆ ಏರಿಸಬೇಕಿತ್ತು:
ಓರ್ವ ಮಧ್ಯಮ ವರ್ಗದ ವ್ಯಕ್ತಿಯ ದೃಷ್ಟಿಯಿಂದ ನೋಡುವುದಾದಲ್ಲಿ ಈ ಬಜೆಟ್‌ನ ಪ್ರಮುಖ ಅಂಶ ಆದಾಯ ತೆರಿಗೆ ಮಿತಿಯ ಹೆಚ್ಚಳ , 80ಸಿ ಯಲ್ಲಿ ಕೊಡಲ್ಪಟ್ಟಿರುವ ಹೂಡಿಕೆಯ ಮೇಲಿನ ವಿನಾಯಿತಿಯ ಹೆಚ್ಚಳ ಮತ್ತು ಮನೆ ಸಾಲದ ಮೇಲೆ ಕೊಟ್ಟಿರುವ ವಿನಾಯಿತಿಯ ಹೆಚ್ಚಳ. ಇದರಿಂದಾಗಿ ಸಂಬಳವನ್ನೇ ನೆಚ್ಚಿರುವ ಮಧ್ಯಮ ವರ್ಗದ ಜನಕ್ಕೆ 10 ಸಾವಿರ ರೂಗಳ ತೆರಿಗೆ ಉಳಿತಾಯವಾಗಲಿದೆ.
ಆದರೆ ಮಹಾನಗರಗಳಿಗೆ ತೆರಿಗೆ ನೀತಿಯನ್ನು ಬೇರೆಯದೇ ಆಗಿ ನಿಗದಿ ಪಡಿಸುವ ಅಗತ್ಯತೆ ಇದೆ. ಯಾಕೆಂದರೆ ಪ್ರತಿಯೊಂದು ವಸ್ತುವಿನ ಬೆಲೆ ಗಗನಕ್ಕೇರುತ್ತಿದ್ದರೂ ಸಂಬಳ ಮಾತ್ರ ಅಷ್ಟೇ ಇರುತ್ತದಲ್ಲ, ಡೀಸೆಲ್, ಪೆಟ್ರೋಲ್ ಬೆಲೆ ಏರಿಕೆಯ ಜತೆಯಲ್ಲಿ ಅಗತ್ಯವಸ್ತುಗಳ ಬೆಲೆಯೂ ಏರುತ್ತಿದೆ ಆ ಸಂದರ್ಭದಲ್ಲಿ ಜೇಬಿನಲ್ಲಿ ಎಷ್ಟು ಹಣ ಇದ್ದರೂ ಖರ್ಚಾಗಿ ಹೋಗುವ ಸಂದರ್ಭವೇ ಅಧಿಕವಾಗಿದೆ.
ಬೆಂಗಳೂರು ಮಹಾನಗರದಲ್ಲಿ ಮನೆ ಬಾಡಿಗೆಯೂ ಗಗನ ಮುಖಿಯಾಗಿದೆ ಅದರೆಡೆಯಲ್ಲಿ 8ಸಾವಿರಕ್ಕಿಂತ ಹೆಚ್ಚಿನ ಬಾಡಿಗೆ ಕೊಡುವವರು ಮಾಲೀಕನ ಪಾನ್ ಕಾರ್ಡ್ ಲಗತ್ತಿಸುವುದನ್ನೂ ಸರ್ಕಾರ ಕಡ್ಡಾಯಗೊಳಿಸಿದೆ, ಕಪ್ಪುಹಣದ ಮೂಲ ಇಲ್ಲೇ ಇದೆ ಆದರೆ ಬಾಡಿಗೆ ಮನೆ ಕೊಡುವುದರ ಮೇಲೆ ನೀತಿಯನ್ನು ಹೇರುವುದರ ಬದಲಾಗಿ ಬಾಡಿಗೆ ಕೊಡುವವರಿಗೇ ಕಷ್ಟ ಕೊಡುತ್ತಿದೆ ಸರ್ಕಾರ. ಏಕರೂಪದ ಬಾಡಿಗೆ ನೀತಿಯನ್ನು ಜಾರಿಗೆ ತರುವ ಅವಶ್ಯಕತೆ ಇದೆ. ಧನಿಕರು ಮತ್ತಷ್ಟು ಧನಿಕರಾಗುತ್ತಾರೆ ಬಡವರು ಮತ್ತು ಮಧ್ಯಮವರ್ಗದವರ ಪರಿಸ್ಥಿತೆ ಅಲ್ಲೇ ಉಳಿಯುತ್ತದೆ.
ಪ್ರತೀ ವಸ್ತುವನ್ನು ಖರೀದಿಸುವಾಗಲೂ ತೆರಿಗೆ ಪಾವತಿ ಮಾಡಿಯೇ ನಾವು ಖರೀದಿಸುವುದಲ್ಲ. ನಾನು ಗಳಿಸುವ 100 ರೂಪಾಯಿಗಳಲ್ಲಿ 10ರೂ ಸರ್ಕಾರಕ್ಕೆ ಕೊಡಬೇಕಾಗಿರುತ್ತದೆ. ಉಳಿದ 90ರೂ ಗಳಲ್ಲಿ ನಾನು ಯಾವುದೇ ವಸ್ತುವನ್ನು ಖರೀದಿದರೂ ಅದರ ಮೇಲೆ ಪುನಃ ತೆರಿಗೆಯನ್ನು ಕಡಿತಗೊಳಿಸುತ್ತಾರೆ. ಆದಾಯ ತೆರಿಗೆ ಮಿತಿಯನ್ನು ಕನಿಷ್ಠ 3 ಲಕ್ಷಕ್ಕಾದರೂ ನಿಗದಿ ಪಡಿಸಿದ್ದಲ್ಲಿ ಚೆನ್ನಾಗಿತ್ತು. ಐಶಾರಾಮಿ ವಸ್ತುಗಳ ಮೇಲಿನ ತೆರಿಗೆಗಳನ್ನು ಸರ್ಕಾರ ಹೆಚ್ಚಿಸಲಿ ಮಾತ್ರವಲ್ಲ ಹೆಚ್ಚಿನ ಆದಾಯದ ಮೇಲೆ ಹೆಚ್ಚಿನ ತೆರಿಗೆ ಎನ್ನುವಂತಹ ನೀತಿ ಜಾರಿಯಾಗಲಿ. 3 ತಿಂಗಳಿನಲ್ಲಿ ಜಾದೂ ಮಾಡಲಾಗುವುದಿಲ್ಲ ಎನ್ನುವುದು ಸತ್ಯವೇ ಆದರೆ ಮುಂಬರುವ ದಿನಗಳಲ್ಲಿ ಮೋದಿ ಸರ್ಕಾರದಿಂದ ಉತ್ತಮ ಆಡಳಿತದ ನಿರೀಕ್ಷೆ ಎಲ್ಲಾ ಭಾರತೀಯರದ್ದು.
ಲಕ್ಷ್ಮೀನಾರಾಯಣ ಭಟ್, ಸಾಫ್ಟ್‌ವೇರ್ ಉದ್ಯೋಗಿ

ಓವರ್ ಆಲ್ ಉತ್ತಮ ಬಜೆಟ್:
ಮಧ್ಯಮ ವರ್ಗದ ಜನರಿಗೆ ಹೇಳಿ ಮಾಡಿಸಿದ ಬಜೆಟ್. ಆದಾಯ ಮಿತಿಯನ್ನು 2.5 ಲಕ್ಷದವರೆಗೆ ಹೆಚ್ಚಿಸಿದ್ದು, ಗೃಹ ಸಾಲದ ಬಡ್ಡಿ ವಿನಾಯಿತಿ ಯಿಂದಾಗಿ 80 ಸಿ ಅಡಿಯಲ್ಲಿ ಉಳಿತಾಯ ಮಾಡಲು ಹಲವು ಮಾರ್ಗಗಳನ್ನು ಜೇಟ್ಲಿ ನೀಡಿದ್ದಾರೆ. ಭವಿಷ್ಯದಲ್ಲಿ ಈ ಬಜೆಟ್‌ನಿಂದ ಬಹಳಷ್ಟು ಜನರಿಗೆ ಲಾಭವಾಗಲಿದೆ. ಉತ್ತಮ ಬಜೆಟ್.
ರವಿ, ಚಾರ್ಟೆಡ್ ಅಕೌಂಟೆಂಟ್

ಮಧ್ಯಮ ವರ್ಗದವರು ಮನೆ ಕಟ್ಟಬಹುದು:
ಉತ್ತಮವಾದ ಬಜೆಟ್. ಗೃಹ ಸಾಲದ ಮೇಲಿನ ಪಾವತಿಸುವ ಬಡ್ಡಿಗೆ ಈ ಹಿಂದೆ ವಾರ್ಷಿಕ 1.50 ಲಕ್ಷ ವಿನಾಯಿತಿ ಸಿಗುತಿತ್ತು. ಇದನ್ನು ಇದೀಗ 2 ಲಕ್ಷಕ್ಕೆ ಹೆಚ್ಚಿಸಿದ್ದು ಉತ್ತಮ ಬೆಳವಣಿಗೆ. ಬಹಳಷ್ಟು ಮಧ್ಯಮ ವರ್ಗದ ಜನರು ಮನೆಕಟ್ಟಲು ಮನಸ್ಸು ಮಾಡಬಹುದು.
ಪವನ್ ಕುಮಾರ್, ರಿಯಲ್ ಎಸ್ಟೇಟ್ ಉದ್ಯಮಿ.

ಕರ್ನಾಟಕಕ್ಕೆ ಏನು ಇಲ್ಲ:
ಕೆಟ್ಟ ಬಜೆಟ್. ಸರ್ಕಾರದ ಹೊಸ ಐಐಟಿ ಮತ್ತು ಏಮ್ಸ್‌ಗಳು ಎಲ್ಲಾ ಉತ್ತರ ಭಾರತಕ್ಕೆ ಹೋಗಿದೆ. ಕರ್ನಾಟಕಕ್ಕೆ ಏನು ಇಲ್ಲ .
ಸಿದ್ದು, ಒನ್ ಇಂಡಿಯಾ ಬಜೆಟ್ ಸುದ್ದಿಗೆ ಪ್ರತಿಕ್ರಿಯೆ ನೀಡಿದವರು.
ಇದನ್ನೂ ಓದಿ: ಬಜೆಟ್ 2014 -: ಕರ್ನಾಟಕಕ್ಕೆ ಸಿಕ್ಕಿದ್ದೇನು?

ಉತ್ತಮ ಬಜೆಟ್:
ಮಾಧ್ಯಮವರ್ಗದವರಿಗೆ ಈ ಬಜೆಟ್ ತುಂಬಾ ಸಹಾಯವಾಗಲಿದೆ. 80 ಸಿ ಅಡಿಯಲ್ಲಿ ಉಳಿತಾಯ ಮಾಡಬಹುದು. ಸಾಕಷ್ಟು ಜನ ಮನೆ ಕಟ್ಟಬಹುದು. ಇಎಂಐ ಅಡಿಯಲ್ಲಿ ವಸ್ತುಗಳನ್ನು ಖರೀದಿಸಬಹುದು. ಹಿರಿಯ ನಾಗರಿಕರಿಗೆ 2.5 ಲಕ್ಷದಿಂದ 3 ಲಕ್ಷದವರೆಗೆ ಆದಾಯದ ಮಿತಿಯನ್ನು ಹೆಚ್ಚಿಸಿದ್ದಾರೆ. ಪಿಎಫ್ ಮಿತಿಯನ್ನು ಹೆಚ್ಚಳ ಮಾಡಿದ್ದು ಉತ್ತಮ ಅಂಶ.
ಶ್ರೀನಿವಾಸ್, ಐಸಿಐಸಿಐ ಬ್ಯಾಂಕ್ ಉದ್ಯೋಗಿ

ಬಡವರಿಗೆ ಬ್ಯಾಂಕಿಂಗ್ ಕ್ಷೇತ್ರ ಪರಿಚಯವಾಗುತ್ತದೆ:
ಬಹಳಷ್ಟು ಬಡವರು ಬ್ಯಾಂಕ್ ಸೇವೆಯಿಂದ ವಂಚಿತರಾಗಿದ್ದಾರೆ. ಕೇಂದ್ರ ಸರ್ಕಾರದ ಪ್ರತಿ ಮನೆಗೆ 2 ಬ್ಯಾಂಕ್ ಖಾತೆ ಯೋಜನೆ ಉತ್ತಮವಾಗಿದೆ. ದೇಶದ ಅರ್ಥಿಕ ಬೆಳವಣಿಗೆ ಇದು ಸಹಾಯವಾಗುತ್ತದೆ. ಯುಪಿಎಗೆ ಯೋಜನೆಯನ್ನು ಕೈಬಿಡದೇ ಮಧ್ಯಮ ವರ್ಗದವರಿಗೂ ಹೊರೆಯಾಗದೇ ಮೋದಿ ಸರ್ಕಾರ ಉತ್ತಮ ಬಜೆಟ್ ನೀಡಿದೆ.
ರಾಮಚಂದ್ರ, ಎಲ್‌ಐಸಿ ಏಜೆಂಟ್ ಬೆಂಗಳೂರು.

ಸಿಗರೇಟ್ ತೆರಿಗೆ ಸಿಕ್ಕಾಪಟ್ಟೆ ಆಯಿತು:
ಮೋದಿಯವರ ಅಭಿಮಾನಿ ನಾನು. ಪ್ರತಿವರ್ಷ ಸಿಗರೇಟ್ ಬೆಲೆ ತೆರಿಗೆ ಹೆಚ್ಚಳ ಮಾಡುತ್ತಾರೆ. ಆದರೆ ಈ ರೀತಿ ಹೆಚ್ಚಳ ಮಾಡುತ್ತಾರೆ ಎಂದು ನಾನು ಕನಸಿನಲ್ಲೂ ನೆನೆಸಿರಲಿಲ್ಲ. ಶೇ.72ರಷ್ಟು ತೆರಿಗೆ ಹಾಕಿದ್ದಾರೆ. ಪ್ರತಿದಿನ ಆರು ಸಿಗರೇಟ್ ಸೇದುತ್ತಿದ್ದೆ. ಈಗ ಸಂಖ್ಯೆ ಕಡಿಮೆ ಮಾಡುತ್ತೇನೆ.
ವಿನಯ್, ಎಚ್‌ಡಿಎಫ್‌ಸಿ ಬ್ಯಾಂಕ್ ಉದ್ಯೋಗಿ
ಇದನ್ನೂ ಓದಿ: ಸಿಗರೇಟು ಸೇವನೆ ಇನ್ಮುಂದೆ ಜೇಬಿಗೂ ಹಾನಿಕರ!
ಇದನ್ನೂ ಓದಿ: ಸಿಗರೇಟ್ ಬೆಲೆ ಹೆಚ್ಚಳ: ಧೂಮಪಾನಿಗಳು ಏನಂತಾರೆ?












Click it and Unblock the Notifications