ಶಿವರಾಮ ಕಾರಂತ ಬಡಾವಣೆ : ರೈತರಿಗೆ ಆದ್ಯತೆ ಮೇಲೆ ನಿವೇಶನ
ಬೆಂಗಳೂರು ನಗರದ ಡಾ. ಕೆ. ಶಿವರಾಮ ಕಾರಂತ ಬಡಾವಣೆಯಲ್ಲಿ ರೈತರಿಗೆ ಆದ್ಯತೆಯ ಮೇರೆಗೆ ನಿವೇಶನ ನೀಡಲಾಗುತ್ತದೆ ಎಂದು ಬಿಡಿಎ ಹೇಳಿದೆ.
ಬೆಂಗಳೂರು, ಮಾರ್ಚ್ 21; ಬೆಂಗಳೂರು ನಗರದ ಡಾ. ಕೆ. ಶಿವರಾಮ ಕಾರಂತ ಬಡಾವಣೆಯಲ್ಲಿ ರೈತರಿಗೆ ಆದ್ಯತೆ ಮೇಲೆ ನಿವೇಶನ ಹಂಚಿಕೆ ಮಾಡಲಾಗುತ್ತದೆ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹೇಳಿದೆ. ಈ ಬಡಾವಣೆ ಬಿಡಿಎ ಕನಸಿನ ಯೋಜನೆಯಾಗಿದ್ದು, ಭೂ ಸ್ವಾಧೀನದ ವಿಚಾರದಲ್ಲಿ ಹಲವಾರು ಅಡೆತಡೆಗಳನ್ನು ಎದುರಿಸಿದೆ. ಬಡಾವಣೆಗೆ ಭೂಮಿ ನೀಡಿದ್ದ ರೈತರು ಕಾನೂನು ಹೋರಾಟವನ್ನು ಸಹ ಮಾಡಿದ್ದಾರೆ.
ಬಿಡಿಎ ಅಧ್ಯಕ್ಷ ಎಸ್. ಆರ್. ವಿಶ್ವನಾಥ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಮಾಹಿತಿ ನೀಡಲಾಗಿದೆ. ಈ ಸಭೆಯಲ್ಲಿ ಬಿಡಿಎ ಕಾರ್ಯದರ್ಶಿ ವೈ. ಬಿ. ಶಾಂತರಾಜು, ಭೂಸ್ವಾಧೀನ ವಿಭಾಗದ ಉಪ ಆಯುಕ್ತರಾದ ಡಾ. ಸೌಜನ್ಯ ಸೇರಿದಂತೆ ಇನ್ನಿತರ ಅಧಿಕಾರಿಗಳು ಪಾಲ್ಗೊಂಡಿದ್ದರು. ಬಡಾವಣೆ ನಿರ್ಮಾಣಕ್ಕೆ ಭೂಮಿ ನೀಡಿರುವ ರೈತರಿಗೆ ಆದ್ಯತೆ ಮೇಲೆ ಅಭಿವೃದ್ಧಿಪಡಿಸಿದ ನಿವೇಶನಗಳನ್ನು ಹಂಚಿಕೆ ಮಾಡಲಾಗುವುದು ಎಂದು ಎಸ್. ಆರ್. ವಿಶ್ವನಾಥ್ ಹೇಳಿದರು.

ಡಾ. ಕೆ. ಶಿವರಾಮ ಕಾರಂತ ಬಡಾವಣೆಗೆ ಭೂಮಿ ನೀಡಿರುವ ವಿವಿಧ ಗ್ರಾಮಗಳ 50ಕ್ಕೂ ಹೆಚ್ಚು ರೈತರೊಂದಿಗೆ ಸಭೆ ನಡೆಸಿದ ಎಸ್. ಆರ್. ವಿಶ್ವನಾಥ್, ಬಡಾವಣೆ ರಚನೆ ಸಂಬಂಧ ಹಿಂದಿನ ಸರ್ಕಾರಗಳು ಸುಪ್ರೀಂಕೋರ್ಟ್ ನೀಡಿದ್ದ ತೀರ್ಪುಗಳನ್ನು ಅನುಷ್ಠಾನಕ್ಕೆ ತರಲು ನಿರ್ಧರಿಸಿದ್ದವು. ಇದೀಗ ಆ ನಿರ್ಧಾರಗಳಂತೆ ಬಡಾವಣೆ ನಿರ್ಮಾಣವಾಗುತ್ತಿದೆ ಎಂದು ಹೇಳಿದರು. ಸಭೆಯಲ್ಲಿ ರೈತರು ತಾವು ನೀಡಿರುವ ಜಮೀನಿನಲ್ಲೇ ಪ್ರೋತ್ಸಾಹಕರ ನಿವೇಶನವನ್ನು ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು.
"ರೈತರು ತಮ್ಮ ಭೂಮಿಯನ್ನು ಬಡಾವಣೆ ನಿರ್ಮಾಣಕ್ಕಾಗಿ ನೀಡಿದ್ದಾರೆ. ಈ ನಿಟ್ಟಿನಲ್ಲಿ ಬಿಡಿಎ ಆದಷ್ಟೂ ರೈತರ ಜಮೀನಿನಲ್ಲಿಯೇ ಅಭಿವೃದ್ಧಿಪಡಿಸಿದ ನಿವೇಶನಗಳನ್ನು ಹಂಚಿಕೆ ಮಾಡಲಿದೆ. ಒಂದು ವೇಳೆ, ಕೆಲವು ರೈತರ ಜಾಗದಲ್ಲಿ ಸಿಎ ನಿವೇಶನ, ಉದ್ಯಾನವನ ಸೇರಿದಂತೆ ಸಾರ್ವಜನಿಕ ಉಪಯೋಗಿ ನಿವೇಶನವೆಂದು ನಿಗದಿಪಡಿಸಿದರೆ ಪಕ್ಕದ ಸರ್ವೇ ನಂಬರಿನಲ್ಲಿನ ನಿವೇಶನಗಳನ್ನು ಹಂಚಿಕೆ ಮಾಡಲು ಕ್ರಮ ಕೈಗೊಳ್ಳಲಿದೆ" ಎಂದು ಎಸ್. ಆರ್. ವಿಶ್ವನಾಥ್ ಭರವಸೆ ಕೊಟ್ಟರು.

ರೈತರಿಗೆ ಆದ್ಯತೆ ಮೇಲೆ ನಿವೇಶನ: ಡಾ. ಕೆ. ಶಿವರಾಮ ಕಾರಂತ ಬಡಾವಣೆ ನಿರ್ಮಾಣ ಕಾಮಗಾರಿ ಆರಂಭವಾಗಿದ್ದು, ಆದ್ಯತೆ ಮೇಲೆ ಮೊದಲ ಹಂತದಲ್ಲಿ ರೈತರಿಗೆ ನಿವೇಶನಗಳನ್ನು ಹಂಚಿಕೆ ಮಾಡಿ, ನಂತರ ಎರಡನೇ ಹಂತದಲ್ಲಿ ಸಾರ್ವಜನಿಕರಿಗೆ ಹಂಚಿಕೆ ಮಾಡುವ ಪ್ರಕ್ರಿಯೆಯನ್ನು ನಡೆಸಲಾಗುತ್ತದೆ. ಬಡಾವಣೆ ನಿರ್ಮಾಣದ ಸಂಪೂರ್ಣ ಹೊಣೆಗಾರಿಕೆ ಸುಪ್ರೀಂಕೋರ್ಟಿನ ನಿರ್ದೇಶನದನ್ವಯ ನಡೆಯುತ್ತಿದೆ. ನ್ಯಾಯಾಲಯ ನೀಡಿರುವ ಮಾರ್ಗಸೂಚಿಗಳನ್ವಯ ಅಧಿಕಾರಿಗಳು ಪ್ರಕ್ರಿಯೆಗಳನ್ನು ನಡೆಸುತ್ತಿದ್ದಾರೆ. ಈ ವಿಚಾರದಲ್ಲಿ ಬಿಡಿಎ ಅಧಿಕಾರಿಗಳು ತಮ್ಮದೇ ಆದ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುವುದಿಲ್ಲ.
ರೈತರಿಗೆ ಅಭಿವೃದ್ಧಿಪಡಿಸಿದ ನಿವೇಶನಗಳ ಹಂಚಿಕೆ ಪ್ರಕ್ರಿಯೆ ಯಾವ ಸ್ವರೂಪದಲ್ಲಿ ಇರಬೇಕು ಎಂಬುದರ ಬಗ್ಗೆ ಅಧಿಕಾರಿಗಳು ರೂಪುರೇಷೆಗಳನ್ನು ಸಿದ್ಧಪಡಿಸುತ್ತಿದ್ದಾರೆ. ಈ ಪ್ರಕ್ರಿಯೆ ರೈತರ ಹಿತ ಕಾಯುವಂತಿರುತ್ತದೆ. ಸದ್ಯದಲ್ಲೇ ರೂಪುರೇಷೆ ಅಂತಿಮವಾಗಲಿದ್ದು, ಅದರನ್ವಯ ನಿವೇಶನಗಳ ಹಂಚಿಕೆ ಮತ್ತು ಪರಿಹಾರ ಹಂಚಿಕೆ ಪ್ರಕ್ರಿಯೆ ನಡೆಯಲಿದೆ. ಬಡಾವಣೆ ನಿರ್ಮಾಣಕ್ಕೆಂದು ಭೂಮಿ ನೀಡಿರುವ ರೈತರ ಹಿತವನ್ನು ಕಾಯಲು ಬಿಡಿಎ ಬದ್ಧವಾಗಿದೆ ಎಂದು ಸಭೆಯಲ್ಲಿ ಭರವಸೆ ಕೊಡಲಾಯಿತು.
ಹಕ್ಕುಪತ್ರಗಳ ವಿತರಣೆ; ಡಾ. ಕೆ. ಶಿವರಾಮ ಕಾರಂತ ಬಡಾವಣೆ ರಚನೆ ಮಾಡಲು ಭೂಸ್ವಾಧೀನಪಡಿಸಿಕೊಂಡಿರುವ ರೈತರು ಹಾಗೂ ಭೂಮಾಲೀಕರುಗಳಿಗೆ ಹಕ್ಕು ಪತ್ರವನ್ನು ಅವರುಗಳ ವಿಳಾಸಕ್ಕೆ ತೆರಳಿ ವಿತರಣೆ ಮಾಡಲಾಗುತ್ತಿದೆ. ಇಲ್ಲಿಯವರೆಗೂ ಸುಮಾರು 170 ಹಕ್ಕು ಪತ್ರಗಳನ್ನು ವಿತರಣೆ ಮಾಡಲಾಗಿದೆ. ಹಕ್ಕು ಪತ್ರ ನೀಡುವ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ರೈತರು ಹಾಗೂ ಭೂಮಾಲೀಕರುಗಳು ಭೂಪರಿಹಾರ ಪಡೆಯಲು ಸ್ವ-ಇಚ್ಛೆಯಾಗಿ ತಮ್ಮ ದಾಖಲೆಗಳನ್ನು ಸಲ್ಲಿಸುತ್ತಿದ್ದಾರೆ. ದಾಖಲೆಗಳ ಪರಿಶೀಲನೆಯ ನಂತರ ಹಕ್ಕು ಪತ್ರವನ್ನು ನೀಡಲಾಗುತ್ತಿದೆ.












Click it and Unblock the Notifications