ದೇವನಹಳ್ಳಿ ರೈಲ್ವೆ ಟರ್ಮಿನಲ್ ಯೋಜನೆಗೆ ಭಾರೀ ವಿರೋಧ
ಬೆಂಗಳೂರು, ಫೆಬ್ರವರಿ 17: ನೈಋತ್ಯ ರೈಲ್ವೆ ಬೆಂಗಳೂರು ವಿಭಾಗ ನಗರದ ಹೊರ ಭಾಗದಲ್ಲಿ ಬೃಹತ್ ರೈಲ್ವೆ ಟರ್ಮಿನಲ್ ನಿರ್ಮಾಣ ಮಾಡಲು ಮುಂದಾಗಿದೆ. ಈ ಯೋಜನೆಗೆ ಆರಂಭದಲ್ಲಿಯೇ ವಿರೋಧ ವ್ಯಕ್ತವಾಗಿದೆ. ನಗರದ ಕೆಆಎಸ್‌ಆರ್ ಬೆಂಗಳೂರು ಟರ್ಮಿನಲ್ ಮೇಲಿನ ಒತ್ತಡ ಕಡಿಮೆ ಮಾಡಲು ಹೊಸ ಟರ್ಮಿನಲ್ ಯೋಜನೆ ರೂಪಿಸಿದ್ದು, ಸುಮಾರು 750 ಎಕರೆ ಪ್ರದೇಶದಲ್ಲಿ ಇದು ನಿರ್ಮಾಣವಾಗಲಿದೆ.
ಸದ್ಯದ ಮಾಹಿತಿ ಪ್ರಕಾರ ಹೊಸ ರೈಲ್ವೆ ಟರ್ಮಿನಲ್ ದೇವನಹಳ್ಳಿ ಬಳಿ ನಿರ್ಮಾಣವಾಗಲಿದೆ. ರಾಷ್ಟ್ರೀಯ ಹೆದ್ದಾರಿ-44ಕ್ಕೆ ಹೊಂದಿಕೊಂಡಂತೆ ಇರುವ ವೆಂಕಟಗಿರಿಕೋಟೆ ವ್ಯಾಪ್ತಿಯಲ್ಲಿ ಬುಳ್ಳಹಳ್ಳಿ, ವೆಂಕಟಗಿರಿಕೋಟೆ, ತಟ್ಟಮಾಚನಹಳ್ಳಿ, ಇರಿಗೇನಹಳ್ಳಿ, ಜಿ. ಹೊಸೂರು ಭಾಗದಲ್ಲಿ 750 ಎಕರೆ ಪ್ರದೇಶದಲ್ಲಿ ಟರ್ಮಿನಲ್ ನಿರ್ಮಾಣವಾಗಬೇಕಿದೆ.

ಆದರೆ ಈ ಟರ್ಮಿನಲ್ ನಿರ್ಮಾಣಕ್ಕೆ ಭೂಮಿ ಸ್ವಾಧೀನ ಮಾಡಿಕೊಳ್ಳುವುದಕ್ಕೆ 5 ಗ್ರಾಮದ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ. ಸರ್ಕಾರ ಭೂ ಸ್ವಾಧೀನ ಆರಂಭಿಸಿದರೆ ಉಗ್ರವಾದ ಹೋರಾಟ ನಡೆಸುತ್ತೇವೆ ಎಂದು ರೈತರು ಎಚ್ಚರಿಸಿದ್ದಾರೆ. ಸಬ್ ಅರ್ಬನ್ ರೈಲು ಯೋಜನೆ ಮತ್ತು ರೈಲ್ವೆ ಟರ್ಮಿನಲ್‌ನಿಂದಾಗಿ ನಮ್ಮ ಜೀವನಾಧಾರ ನಾಶವಾಗಲಿದೆ. ಈಗಾಗಲೇ ಸರ್ಕಾರ ಭೂ ಸ್ವಾಧೀನಕ್ಕೆ ಸಮೀಕ್ಷೆ ಆರಂಭಿಸಿದೆ ಎಂದು ರೈತರು ಆರೋಪಿಸಿದ್ದಾರೆ.
ರೈತರಿಂದ ಸಭೆ: ಭಾನುವಾರ ರೈತರು ಮುಂದಿನ ಹೋರಾಟದ ಕುರಿತು ಚರ್ಚಿಸಲು ಸಭೆ ನಡೆಸಿದ್ದಾರೆ. ಭೂ ಸ್ವಾಧೀನ ಅಧಿಕಾರಿಗಳು ಗ್ರಾಮಕ್ಕೆ ಬಂದರೆ ಅವರನ್ನು ಹೊರಗೆ ಕಳಿಸುತ್ತೇವೆ. ಇಲ್ಲಿರುವ ಕೃಷಿ ಭೂಮಿಯನ್ನು ಬಿಟ್ಟು ಸರ್ಕಾರ ಬೇರೆ ಖಾಲಿ ಜಾಗದಲ್ಲಿ ಟರ್ಮಿನಲ್ ನಿರ್ಮಾಣ ಮಾಡಲಿ ಎಂದು ರೈತರು ಹೇಳಿದ್ದಾರೆ.
ಬೃಹತ್ ರೈಲ್ವೆ ಟರ್ಮಿನಲ್ ನಿರ್ಮಾಣ ಯೋಜನೆ ಇನ್ನೂ ಪ್ರಾಥಮಿಕ ಹಂತದಲ್ಲಿದೆ. ನೈಋತ್ಯ ರೈಲ್ವೆ ಅಧಿಕಾರಿಗಳ ಮಾಹಿತಿ ಪ್ರಕಾರ ಟರ್ಮಿನಲ್ ನಿರ್ಮಾಣ ಮಾಡಲು ಕಾರ್ಯ ಸಾಧ್ಯತಾ ವರದಿಯನ್ನು ತಯಾರು ಮಾಡಲಾಗುತ್ತದೆ. ಅಲ್ಲದೇ ಸಬ್ ಅರ್ಬನ್ ರೈಲು ಯೋಜನೆಗೆ ಟೆಂಡರ್ ಕರೆಯಲಾಗಿದೆ.
ಕಾರ್ಯ ಸಾಧ್ಯತಾ ವರದಿಯನ್ನು ರೈಲ್ವೆ ಮಂಡಳಿಗೆ ನೀಡಿ, ಅದು ಒಪ್ಪಿಗೆ ನೀಡಿದ ಬಳಿಕ ಭೂ ಸ್ವಾಧೀನ ಕಾರ್ಯ ಆರಂಭವಾಗಲಿದೆ. ಅಧಿಕಾರಿಗಳ ಪ್ರಕಾರ ಇದು ಕೇಂದ್ರ ಸರ್ಕಾರದ ಯೋಜನೆಯಾಗಿದೆ. ಬೆಂಗಳೂರು ನಗರದಲ್ಲಿ ಭವಿಷ್ಯದಲ್ಲಿ ಉಂಟಾಗುವ ಸಂಚಾರ ದಟ್ಟಣೆ, ರೈಲುಗಳ ನಿರ್ವಹಣೆಯನ್ನು ಗಮನದಲ್ಲಿಟ್ಟುಕೊಂಡು ಹೊಸ ಟರ್ಮಿನಲ್ ನಿರ್ಮಾಣ ಮಾಡಲಾಗುತ್ತದೆ.
ಕರ್ನಾಟಕದಲ್ಲಿ ಪ್ರಸ್ತುತ ಇರುವ ಅತಿ ದೊಡ್ಡ ರೈಲ್ವೆ ಟರ್ಮಿನಲ್ ಕೆಎಸ್ಆರ್ ನಿಲ್ದಾಣ ಬೆಂಗಳೂರು (ಮೆಜೆಸ್ಟಿಕ್). 10 ಪ್ಲಾಟ್ ಫಾರಂ, 6 ಸ್ಟಾಬ್ಲಿಂಗ್ ಲೈನ್, ರೈಲುಗಳ ಸ್ವಚ್ಛತೆ & ನಿರ್ವಹಣೆಗಾಗಿ 5 ಪಿಟ್ ಲೈನ್‌ಗಳನ್ನು ಇದು ಹೊಂದಿದೆ. ಆದರೆ ಹೊಸ ಟರ್ಮಿನಲ್ ಇದಕ್ಕಿಂತ ದೊಡ್ಡದು.
ಯೋಜನೆಯ ವರದಿ ಪ್ರಕಾರ 16 ಪ್ಲಾಟ್ ಫಾರಂ, 20 ಸ್ಟಾಬ್ಲಿಂಗ್ ಲೈನ್, 10 ಪಿಟ್‌ಲೈನ್‌ಗಳನ್ನು ಇದು ಹೊಂದಿದೆ. ಈ ಟರ್ಮಿನಲ್ ಅನ್ನು ಭವಿಷ್ಯದಲ್ಲಿ ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಗೆ ಸಂಪರ್ಕ ಕಲ್ಪಿಸುವುದು, ನಗರದ ಒಳಗಿನ ರೈಲು ನಿಲ್ದಾಣದ ಮೇಲಿನ ಒತ್ತಡ ಕಡಿಮೆ ಮಾಡುವುದು ಸಹ ಟರ್ಮಿನಲ್ ನಿರ್ಮಾಣದ ಉದ್ದೇಶವಾಗಿದೆ.












Click it and Unblock the Notifications