A Khata: ಎ - ಖಾತಾ ಮತ್ತು ಬಿ - ಖಾತಾ ನಡುವಿನ ವ್ಯತ್ಯಾಸ: ಸಿಗುವ ಲಾಭಗಳ ಹೊಸ ಅಪ್ಡೇಟ್ಸ್ ಇಲ್ಲಿದೆ!
A Khata: ರಾಜ್ಯದಲ್ಲಿರುವ ಆಸ್ತಿಗಳಲ್ಲಿ ಎ - ಖಾತಾ ಹಾಗೂ ಬಿ - ಖಾತಾದ ಬಗ್ಗೆ ಹೆಚ್ಚು ಚರ್ಚೆಗಳು ನಡೆಯುತ್ತಿವೆ. ಅದರಲ್ಲೂ ಎ ಖಾತಾ ಅತ್ಯಂತ ಸುರಕ್ಷಿತ ಖಾತಾ ಎಂದು ಪರಿಗಣಿಸಲಾಗುತ್ತದೆ. ಹಾಗಾದರೆ ಎ - ಖಾತಾ ಮತ್ತು ಬಿ ಖಾತಾದ ನಡುವಿನ ವ್ಯತ್ಯಾಸಗಳೇನು, ಇದನ್ನು ಪರಿಶೀಲನೆ ಮಾಡುವುದು ಹೇಗೆ ಹಾಗೂ ಸರ್ಕಾರದಿಂದ ಸಿಗುತ್ತಿರುವ ಸೌಲಭ್ಯವೇನು ಎನ್ನುವುದರ ಸಂಪೂರ್ಣ ವಿವರ ಇಲ್ಲಿದೆ.
ಬೆಂಗಳೂರು ಹಾಗೂ ಕರ್ನಾಟಕ ಸೇರಿದಂತೆ ಎಲ್ಲಾ ಭಾಗದಲ್ಲೂ ಎಲ್ಲಾ ಬಿ - ಖಾತಾಗಳಿಗೂ ಎ - ಖಾತಾ ನೀಡುವುದಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಇದಕ್ಕೆ ನಿರ್ದಿಷ್ಟ ಮೊತ್ತವನ್ನು ನಿಗದಿ ಮಾಡುವ ಸಾಧ್ಯತೆ ಇದೆ. ಮೊದಲ ಹಂತದಲ್ಲಿ ಕೇವಲ ಬಿ ಖಾತಾ ಕೊಡುವುದಕ್ಕೆ ನಿರ್ಧರಿಸಲಾಗಿತ್ತು. ಆದರೆ ಆಸ್ತಿದಾರರಿಗೆ ಬಿ ಖಾತಾ ಇದ್ದರೆ ಯಾವುದೇ ಸೌಲಭ್ಯ ಸಿಗುತ್ತಿಲ್ಲ. ಅಲ್ಲದೇ ಮನೆಗಳ ನಿರ್ಮಾಣ, ವಿದ್ಯುತ್ತ ಮತ್ತು ನೀರು ಪೂರೈಕೆಗೆ ಅನುಮತಿ ಕೊಡುವುದಕ್ಕೂ ಸಾಧ್ಯವಾಗುತ್ತಿಲ್ಲ. ಹೀಗಾಗಿ ಬಿ ಖಾತಾ ಇದ್ದರೂ ಅದರಿಂದ ಯಾವುದೇ ಲಾಭವಿಲ್ಲದಂತಾಗಿ ಆಸ್ತಿದಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದಕ್ಕೆ ಇದೀಗ ಪರಿಹಾರ ಸಿಕ್ಕಿದೆ. ಆದರೆ ಹಲವು ಆಸ್ತಿದಾರರು ಬಿ - ಖಾತಾದಿಂದ ಎ - ಖಾತಾ ಮಾಡಿಸಿಕೊಳ್ಳಲು ಸಿದ್ಧರಿಲ್ಲ. ಅವರಿಗೆ ಭಾರೀ ನಷ್ಟವಾಗುವ ಸಾಧ್ಯತೆ ಇದೆ. ಅದರ ವಿವರ ಮುಂದೆ ನೋಡೋಣ.

ಖಾತಾ ಎಂದರೇನು ?
ಯಾವುದೇ ಆಸ್ತಿ ಇದ್ದರೂ ಆ ಆಸ್ತಿಗೆ ನಿರ್ದಿಷ್ಟವಾಗಿ ಒಂದು ಖಾತಾ ಎಂದು ನೀಡಲಾಗುತ್ತದೆ. ಇದರಲ್ಲಿ ಆಸ್ತಿದಾರರ ಹೆಸರು, ಪ್ರಾಪರ್ಟಿ ಸ್ಥಳ ಹಾಗೂ ಪ್ರಾಪರ್ಟಿ ವಾಣಿಜ್ಯವೋ ಅಥವಾ ಸಾಮಾನ್ಯ ಪ್ರದೇಶವೋ ಎನ್ನುವುದು ಸೇರಿದಂತೆ ಹಲವು ವಿವರಗಳು ದಾಖಲಾಗಿರುತ್ತವೆ.
ಎ - ಖಾತಾಗೆ ಸಿಗುವ ಸೌಲಭ್ಯ: ಇನ್ನು ಎ - ಖಾತಾಗೆ ಹಲವು ಪ್ರಮುಖ ಸೌಲಭ್ಯಗಳು ಇವೆ. ಅದರಲ್ಲಿ ಮುಖ್ಯವಾಗಿ ಇರುವುದು ಕಾನೂನಿನ ಅನುಮೋದನೆ. ಹೌದು ಎ ಖಾತಾ ಹೊಂದಿರುವ ಆಸ್ತಿಗಳಿಗೆ ಪುರಸಭೆ ಅಥವಾ ಸ್ಥಳೀಯ ಮಹಾನಗರ ಪಾಲಿಕೆಯ ಕಂದಾಯ ವಿಭಾಗದ ಅಧಿಕಾರಿಗಳಿಂದ ಕಾನೂನು ಅನುಮೋದನೆಗಳು ಸಿಗಲಿವೆ.
ತೆರಿಗೆ ಮೌಲ್ಯಮಾಪನ: ಈ ಆಸ್ತಿಗಳು ಆಸ್ತಿ ತೆರಿಗೆ ವ್ಯಾಪ್ತಿಗೆ ಒಳಪಡುತ್ತವೆ. ಅಂದರೆ ಈ ಆಸ್ತಿಯನ್ನು ಹೊಂದಿರುವವರು ನಿಖರವಾಗಿ ತೆರಿಗೆ ಪಾವತಿ ಮಾಡುವವರಾಗಿರುತ್ತಾರೆ.
ಬ್ಯಾಂಕ್‌ಗಳಲ್ಲಿ ಸಾಲ ಸೌಲಭ್ಯ: ಅಲ್ಲದೇ ಮುಖ್ಯವಾಗಿ ಎ - ಖಾತಾದ ಆಸ್ತಿಯ ಮೇಲೆ ಮಾಲೀಕರು ಬ್ಯಾಂಕುಗಳು ಹಾಗೂ ಹಣಕಾಸು ಸಂಸ್ಥೆಗಳಿಂದ ಸುಲಭವಾಗಿ ಸಾಲ ಪಡೆದುಕೊಳ್ಳಬಹುದಾಗಿದೆ.
ಕಟ್ಟಡ ನಿರ್ಮಾಣ ಸುಲಭ: ಇನ್ನು ಎ - ಖಾತಾ ಹೊಂದಿರುವವರು ಸುಲಭವಾಗಿ ಕಟ್ಟಡ ನಿರ್ಮಾಣ ಮಾಡಬಹುದು. ಅವರಿಗೆ ಸ್ಥಳೀಯ ಪಾಲಿಕೆ ಅಥವಾ ಪುರಸಭೆಗಳಿಂದ ಕಟ್ಟಡ ನಕ್ಷೆ ಮಂಜೂರಾತಿ, ಬೆಸ್ಕಾಂನಿಂದ ವಿದ್ಯುತ್ ಪೂರೈಕೆ ಹಾಗೂ ಜಲಮಂಡಳಿಯಿಂದ ನೀರು ಸರಬರಾಜು ಹಾಗೂ ಒಳಚರಂಡಿ ಸೌಲಭ್ಯಗಳು ಸುಲಭವಾಗಿ ಸಿಗಲಿದೆ.
ಬಿ ಖಾತಾ ಏನೆಲ್ಲಾ ನಷ್ಟ: ಎ - ಖಾತಾಗೆ ಹೋಲಿಕೆ ಮಾಡಿದರೆ ಬಿ - ಖಾತಾ ಸಂಪೂರ್ಣ ತದ್ವಿರುದ್ಧವಾಗಿದೆ. ಬಿ ಖಾತಾಗೆ ಕಾನೂನಿನ ಮಾನ್ಯತೆ ಇರುವುದಿಲ್ಲ. ಯಾವುದೇ ಸಾಲ ಸೌಲಭ್ಯ ಸೇರಿದಂತೆ ಸರ್ಕಾರದ ಮೂಲಸೌಕರ್ಯಗಳು ಲಭ್ಯವಾಗುವುದಿಲ್ಲ.
ಕಾನೂನಿನ ಮಾನ್ಯತೆ ಇಲ್ಲ: ಇತ್ತೀಚಿನ ದಿನಗಳಲ್ಲಿ ಯಾವುದೇ ಖಾತೆ ಇಲ್ಲದೆ ಇರುವವರು ಬಿ ಖಾತಾ ಮಾಡಿಸಿಕೊಂಡು ಇ ಖಾತಾವನ್ನೂ ಮಾಡಿಸಿಕೊಳ್ಳುತ್ತಿದ್ದಾರೆ. ಆದರೆ ಈ ರೀತಿ ಖಾತಾ ಮಾಡಿಸಿಕೊಳ್ಳುತ್ತಿರುವವರಿಗೂ ಎ ಖಾತಾದ ಸೌಲಭ್ಯ ಸಿಗಲ್ಲ. ಎ ಖಾತಾದ ಸೌಲಭ್ಯ ಲಭ್ಯವಾಗಬೇಕಾದರೆ ಅವರು ಸಹ ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಮಾಡಿಕೊಳ್ಳಬೇಕು.
ತೆರಿಗೆ ಹೆಚ್ಚು & ಸಾಲ ಸೌಲಭ್ಯ ಸಿಗಲ್ಲ: ಬಿ ಖಾತಾ ಹೊಂದಿರುವವರು ತೆರಿಗೆ ವ್ಯಾಪ್ತಿಗೆ ಸೇರುವುದಿಲ್ಲ. ಅಲ್ಲದೇ ಬಿ ಖಾತಾವನ್ನು ಎ ಖಾತಾ ಮಾಡಿಸಿಕೊಳ್ಳುವಾಗ ಹೆಚ್ಚುವರಿ ತೆರಿಗೆ ಪಾವತಿ ಮಾಡಬೇಕಾದ ಅನಿವಾರ್ಯತೆ ಎದುರಾಗುವ ಸಾಧ್ಯತೆಯೂ ಇದೆ. ತೆರಿಗೆ ಪಾವತಿ ಮಾಡಿದ ಬಿಲ್ ನಿಮಗೆ ಸಿಗುವುದಿಲ್ಲ.
ಕಟ್ಟಡ ನಿರ್ಮಾಣ ಕಷ್ಟ: ಮುಖ್ಯವಾಗಿ ಬಿ ಖಾತಾ ಇರುವವರಿಗೆ ಕಟ್ಟಡ ನಕ್ಷೆ ಮಂಜೂರಾತಿ ಸಿಗುವುದಿಲ್ಲ. ಅಲ್ಲದೇ ಕಟ್ಟಡ ನಕ್ಷೆ ಮಂಜೂರಾತಿ ಇಲ್ಲದೆ ನಿರ್ಮಾಣ ಮಾಡುವ ಕಟ್ಟಡಗಳನ್ನು ಸ್ಥಳೀಯ ಸಂಸ್ಥೆಗಳು ಯಾವುದೇ ಸಮಯದಲ್ಲಾದರೂ ತೆರವು ಮಾಡುವ ಅಪಾಯ ಇರುತ್ತದೆ.












Click it and Unblock the Notifications