ಬೆಂಗಳೂರಿಗೆ ಚೀನಾದಿಂದ ಬಂದ ವ್ಯಕ್ತಿಗೆ ಸೋಂಕು: ಬಿಬಿಎಂಪಿ ಹೈ ಅಲರ್ಟ್
ಬೆಂಗಳೂರು, ಡಿಸೆಂಬರ್ 27: ಚೀನಾದಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು ಎನ್ನಲಾಗುತ್ತಿರುವ ಪ್ರಯಾಣಿಕರೊಬ್ಬರು ಆಗ್ರಾಗೆ ತೆರಳಿದ್ದಾರೆ. ಆದರೆ ಅವರಿಗೆ ನಿಲ್ದಾಣದಲ್ಲಿ ಮಾಡಿದ್ದ ಕೋವಿಡ್ ತಪಾಸಣೆಯಲ್ಲಿ ಪಾಸಿಟಿವ್ ಬಂದಿದ್ದು, ಇದು ಇದೀಗ ಬಿಬಿಎಂಪಿ ತಲೆನೋವಾಗಿ ಪರಿಣಮಿಸಿದೆ.
ಈ ಒಂದು ಪಾಸಿಟಿವ್ ಪ್ರಕರಣದಿಂದ ರಾಜ್ಯ ಸರ್ಕಾರ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳು ಹೈ ಅಲರ್ಟ್ ಆಗಿದ್ದಾರೆ. ಸಹ ಪ್ರಯಾಣಿಕರ ಜೊತೆ ಬೆಂಗಳೂರಿಗೆ ಬಂದಿಳಿದ ಚೀನಾ ಪ್ರಯಾಣಿಕನನ್ನು ನಿಲ್ದಾಣದಲ್ಲೇ ತಪಾಸಣೆಗೆ ಒಳಪಡಿಸಲಾಗಿದೆ. ಆದರೆ ಅವರಿಗೆ ಕೊರೊನಾ ಇರುವುದು ದೃಢವಾಗಿದೆ. ಆದರೆ ಅವರು ಐಸೋಲೆಟ್ ಆಗದೇ ಆಗ್ರಾಗೆ ತೆರಳಿದ್ದಾರೆ. ಕೊರೊನಾ ಉಪತಳಿ ಸೋಂಕು ವ್ಯಾಪಿಸುತ್ತಿರುವ ಈ ಸಂದರ್ಭದಲ್ಲಿ ಈ ಘಟನೆ ಆರೋಗ್ಯ ಅಧಿಕಾರಿಗಳನ್ನು ಇಕ್ಕಟ್ಟಿಗೆ ಸಿಲುಕಿದೆ ಎನ್ನಲಾಗಿದೆ.
ಈ ಕುರಿತು ಸೋಮವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿರುವ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ವಿಮಾನ ನಿಲ್ದಾಣದಲ್ಲಿ ಕಂಡು ಬಂದ ಕೋವಿಡ್ ಪಾಸಿಟಿವ್ ಪ್ರಕರಣಗಳನ್ನು ವಿವಿರ ಪಡೆಯಲಾಗುತ್ತಿದೆ. ಚೀನಾದ ವ್ಯಕ್ತಿ ಬೆಂಗಳೂರಿಗೆ ಬಂದು ಆಗ್ರಾಗೆ ತೆರಳಿರುವುದು, ಆತನಲ್ಲಿ ಕೋವಿಡ್ ಸೂಂಕು ಪತ್ತೆಯಾಗಿರುವುದು ಸೇರಿದಂತೆ ಒಟ್ಟು ತಪಾಸಣೆ, ಪಾಸಿಟಿವ್ ಕೇಸ್‌ಗಳ ಮಾಹಿತಿಯನ್ನು ವಿಮಾನ ನಿಲ್ದಾಣ ಅಧಿಕಾರಿಗಳಿಂದ ಬಿಬಿಎಂಪಿ ಕೇಳಿದೆ ಎಂದು ಅವರು ಹೇಳಿದರು.

ಈ ಮಧ್ಯೆ, ಡಿಸೆಂಬರ್ 10 ರಂದು, ಹಾಂಕಾಂಗ್‌ನಿಂದ ಹಿಂದಿರುಗಿದ ಬೆಂಗಳೂರು ಮೂಲದ ವ್ಯಕ್ತಿಯಲ್ಲಿ ಕೋವಿಡ್ ಪಾಸಿಟಿವ್ ಬಂದಿದೆ. ಇದು ಕೊರೊನಾ ಉಪತಳಿಯೇ ಎಂದು ಪರಿಶೀಲನೆಗಾಗಿ ಆ ಸೋಮಕಿತರ ಮಾದರಿಯನ್ನು ನೋಮ್ ಸೀಕ್ವೆನ್ಸಿಂಗ್‌ಗಾಗಿ ಕಳುಹಿಸಲಾಗಿದೆ. ಅದರ ವರದಿ ಕುರಿತು ಕಾಯುತ್ತಿದ್ದೇವೆ ಎಂದರು.
ಉಪತಳಿ ಬಿಎಫ್ 7: ಬಿಬಿಎಂಪಿ ಹೈ ಅಲರ್ಟ್
ಹಾಂಕಾಂಗ್ ರಿಟನ್ಸ್ ಸೋಂಕಿತರ ಕುಟುಂಬ, ಇತರ ಪ್ರಾಥಮಿಕ ಮತ್ತು ಮಾಧ್ಯಮಿಕ ಸಂಪರ್ಕಗಳನ್ನು ಪತ್ತೆಹಚ್ಚಲಾಗಿದೆ. ಅವರೆಲ್ಲರನ್ನು ಪರೀಕ್ಷಿಸಿದಾಗಿ ಎಲ್ಲರಿಗೂ ಕೋವಿಡ್ ನೆಗಟಿವ್ ಬಂದಿದೆ. ಸೋಂಕಿತರ ಮಾದರಿಯ ಜೀನೋಮ್ ಸೀಕ್ವೆನ್ಸಿಂಗ್ ವರದಿ ಬರುವವರೆಗೂ ಅವರ ವಾಸಸ್ಥಳದ ಪ್ರದೇಶದಲ್ಲಿ ತೀವ್ರ ನಿಗಾ ಇರಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ಚೀನಾ ಪ್ರಯಾಣಿಕರು ಭಾರತಕ್ಕೆ ಬಂದು ಬೆಂಗಳೂರಿನಿಂದ ಆಗ್ರಾಕ್ಕೆ ಸಾಗುತ್ತಿರುವ ವರದಿಯನ್ನು ಪರಿಶೀಲಿಸಲಾಗಿದೆ ಮತ್ತು ಅವರು ನೇರವಾಗಿ ಚೀನಾದಿಂದ ಬಂದಿದ್ದಾರೆ ಮತ್ತು ಕೊರೊನಾ ಪರೀಕ್ಷೆಗೆ ಒಳಗಾಗಿದ್ದಾರೆ ಎಂಬುದನ್ನು ಖಚಿತವಾಗಿ ಹೇಳಲು ಸದ್ಯಕ್ಕೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ತಿಳಿಸಿದರು.

ಭಾನುವಾರ ವಿವಿಧ ದೇಶಗಳಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದವರ ಪೈಕಿ ಸುಮಾರು 12ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಅವರೆಲ್ಲರ ಗಂಟಲು ಮಾದರಿಯನ್ನು ಜಿನೋಮ್ ಸಿಕ್ವೆನ್ಸಿಂಗ್ ಗೆ ಕಳುಹಿಸಲಾಗಿದೆ. ಅದರ ವರದಿ ಬಂದ ಬಳಿಕವೇ ಉಪತಳಿ ಬಿಎಫ್ 7 ಕರ್ನಾಟಕ ಅದರಲ್ಲೂ ಬೆಂಗಳೂರಿಗೆ ಆಗಮಿಸಿದೇ? ಇಲ್ಲವೆ ಎಂಬುದು ತಿಳಿಯಲಿದೆ ಎಂದು ತುಷಾರ್ ಗಿರಿನಾಥ್ ಹೇಳಿದರು.












Click it and Unblock the Notifications