ಸಿದ್ದರಾಮಯ್ಯರನ್ನು ವಶಕ್ಕೆ ಪಡೆದ ಪೋಲಿಸರು: ಬೆಂಗಳೂರಿನಲ್ಲಿ ಭುಗಿಲೆದ್ದ ಪ್ರತಿಭಟನೆ- ಸಿಎಂ ರಾಜೀನಾಮೆಗೆ ಒತ್ತಾಯ
ಸಿದ್ದರಾಮಯ್ಯ, ಪ್ರಿಯಾಂಕ್ ಖರ್ಗೆ ಸೇರಿದಂತೆ ಅನೇಕರನ್ನು ಬಸ್‌ಗೆ ಹತ್ತಿಸಿದ ಪೋಲಿಸರು ವಶಕ್ಕೆ ಪಡೆದಿದ್ದಾರೆ. ನಾಯಕರನ್ನು ವಶಕ್ಕೆ ಪಡೆದ ನಂತರ ಸಿಎಂ ವಿರುದ್ಧ ಘೋಷಣೆ ಕೂಗುತ್ತಿದ್ದ ಕಾರ್ಯಕರ್ತರನ್ನೂ ಬಸ್ ಹತ್ತಿಸಿದ್ದಾರೆ. ವರದಿ, ವಿವರ ತಿಳಿಯಿರಿ
ಬೆಂಗಳೂರು, ಮಾರ್ಚ್ 04: ಲಂಚ ಪಡೆಯುವಾಗ ಸಿಕ್ಕಿಬಿದ್ದಿರುವ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ನಾಯಕರು ಬೆಂಗಳೂರಿನಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟನೆ ಮುಂದುವರೆಸಿದ್ದಾರೆ. ಬೆಂಗಳೂರಿನ ಕೆಪಿಸಿಸಿ ಕಚೇರಿ ಎದುರು ಧರಣಿ ನಡೆಸುತ್ತಿರುವ ಕಾಂಗ್ರೆಸ್ ನಾಯಕರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಮುಂದಾಗಿದ್ದಾರೆ.
Karnataka Congress protests in Bengaluru seeking resignation of CM Bommai for not taking action against BJP MLA Madal Virupakshappa who’s been charged with bribery. Party says @siddaramaiah and @rssurjewala detained by police during protests. pic.twitter.com/1lY6yZaQFP
— Ishadrita Lahiri (@ishadrita) March 4, 2023

ಡಿಕೆ ಶಿವಕುಮಾರ್ ಟ್ವೀಟ್
ಈ ಕುರಿತು ಟ್ವೀಟ್ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು, 'ಕರ್ನಾಟಕಕ್ಕೆ BJP ಆಡಳಿತದ ಬಹುದೊಡ್ಡ ಕೊಡುಗೆಯೆಂದರೆ 'ಕರಪ್ಶನ್ ಕ್ಯಾಪಿಟಲ್' ಎಂಬ ಬಿರುದು. 40 ಪರ್ಸೆಂಟ್ ಕಮಿಷನ್ ಸರ್ಕಾರದ ಆಡಳಿತದಿಂದ ಅಧಿಕಾರಿಗಳು, ಗುತ್ತಿಗೆದಾರರು, ಜನಸಾಮಾನ್ಯರು ಬೇಸತ್ತಿದ್ದಾರೆ. ಭ್ರಷ್ಟ BJP ವಿರುದ್ಧ ಹೋರಾಡೋಣ ಬನ್ನಿ ಕೈಜೋಡಿಸಿ. ಸ್ಥಳ - KPCC ಕಚೇರಿ, ಬೆಂಗಳೂರು, ದಿನಾಂಕ: 04/03/2023 ಶನಿವಾರ, ಸಮಯ -ಬೆಳಿಗ್ಗೆ 10 ಗಂಟೆ' ಎಂದು ತಿಳಿಸಿದ್ದಾರೆ.

ವಿಡಿಯೊ ಹಂಚಿಕೊಂಡ ಡಿಕೆಶಿ
ಟ್ವೀಟ್ ಜೊತೆಗೆ ವಿಡಿಯೊವೊಂದನ್ನು ಹಂಚಿಕೊಂಡಿರುವ ಡಿಕೆ ಶಿವಕುಮಾರ್, 'ಕರ್ನಾಟಕದ ಮಾನ ಮಾರ್ಯದೆಯನ್ನು ರಾಜ್ಯ ಬಿಜೆಪಿ ಸರ್ಕಾರ ರಾಷ್ಟ್ರ ಮಟ್ಟದಲ್ಲಿ ಹರಾಜು ಮಾಡಿದೆ. ಕರ್ನಾಟಕವನ್ನು ಭ್ರಷ್ಟಾಚಾರದ ರಾಜಧಾನಿಯನ್ನಾಗಿ ಬಿಜೆಪಿ ಮಾಡಿದೆ. ಭಾರತದ ಜನರು ಕರ್ನಾಟಕದ ಬಗ್ಗೆ ಮಾತನಾಡಿಕೊಳ್ಳುವಂತಹ ದುಸ್ಥಿತಿ ಎದುರಾಗಿದೆ. ಬಿಜೆಪಿ ಶಾಸಕ ಮಾಡಾಳ ವಿರುಪಾಕ್ಷಪ್ಪನವರ ಪುತ್ರ ಲಂಚ ಸ್ವೀಕರಿಸುತ್ತಿರುವಾಗಲೇ ಸಿಕ್ಕಿಬಿದ್ದಿದ್ದಾರೆ. ಲೋಕಾಯುಕ್ತ ಪೊಲೀಸರು ಆತನ ತನಿಖೆ ಆರಂಭಿಸಿದ್ದಾರೆ. ರಾಜ್ಯ ಬಿಜೆಪಿಯ ಭ್ರಷ್ಟಾಚಾರಕ್ಕೆ ಇದು ಸಾಕ್ಷಿ' ಎಂದು ವಾಗ್ದಾಳಿ ನಡೆಸಿದ್ದಾರೆ.

ಮಾಡಾಳ್ ಪುತ್ರನ ಮನೆ ಮೇಲೆ ದಾಳಿ
ಬೆಂಗಳೂರಿನ ಸಂಜಯ್ ನಗರದಲ್ಲಿರುವ ಮಾಡಾಳ್ ವಿರುಪಾಕ್ಷಪ್ಪ ಪುತ್ರ ಪ್ರಶಾಂತ್ ನಿವಾಸದ ಮೇಲೆ ದಾಳಿ ನಡೆಸಿದ್ದ ಲೋಕಾಯುತ್ತ ತಂಡ ಆರು ಕೋಟಿಗೂ ಅಧಿಕ ಮೌಲ್ಯದ ಹಣವನ್ನು ವಶಪಡಿಸಿಕೊಂಡಿದೆ. ಈ ವಿಡಿಯೊಗಳು ದೇಶದಾದ್ಯಂತ ವೈರಲ್ ಆಗಿವೆ. ಮಾಡಾಳ್ ಪುತ್ರನನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ನಲವತ್ತು ಲಕ್ಷ ರೂಪಾಯಿ ಲಂಚ ಪಡೆಯುತ್ತಿರುವಾಗಲೇ ಪ್ರಶಾಂತ್ ಸಿಕ್ಕಬಿದ್ದಿದ್ದಾನೆ.

ಮಾಡಾಳ್ ನಿವಾಸದ ಮೇಲೆಯೂ ದಾಳಿ
ಎಸ್‌ಪಿ ಎಂ ಎಸ್ ಕೌಲಾಪುರೆ ನೇತೃತ್ವದ ಲೋಕಾಯುಕ್ತರ ತಂಡವು ಚನ್ನಗಿರಿ ತಾಲ್ಲೂಕಿನಲ್ಲಿರುವ ಚನ್ನಕೇಶಪುರುವ ಬಿಜೆಪಿ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಅವರ ಮನೆಯ ಮೇಲೆ ದಾಳಿಯೂ ದಾಳಿ ನಡೆಸಿದೆ. ಮಾಡಾಳ್ ವಿರುಪಾಕ್ಷಪ್ಪ ನಾಪತ್ತೆಯಾಗಿದ್ದಾರೆಂದು ವರದಿಯಾಗಿದೆ. ಮಾಡಾಳ್ ವಿರುಪಾಕ್ಷಪ್ಪ ಕರ್ನಾಟಕ ಸಾಬೂನುಗಳು ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್‌ನ ಅಧ್ಯಕ್ಷರಾಗಿದ್ದರು. ಈಗ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಶಾಸಕ ಮಾಡಾಳ್ ರಾಜೀನಾಮೆ
ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಶಾಸಕ ಮಾಡಾಳ್ ವಿರುಪಾಕ್ಷಪ್ಪ, 'ಮಾರ್ಚ್ 2 ರಂದು ನಡೆದಿರುವ ಲೋಕಾಯುಕ್ತ ದಾಳಿಗೂ ನನಗೂ ಯಾವುದೇ ಸಂಬಂಧವಿಲ್ಲ. ಇದು ನನ್ನ ಮತ್ತು ನನ್ನ ಕುಟುಂಬದ ವಿರುದ್ಧದ ಪಿತೂರಿ. ನನ್ನ ವಿರುದ್ಧ ಆರೋಪಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ನೈತಿಕ ಜವಾಬ್ದಾರಿ ಹೊತ್ತು ನಾನು ರಾಜೀನಾಮೆ ನೀಡುತ್ತಿದ್ದೇನೆ' ಎಂದು ಸಿಎಂ ಬೊಮ್ಮಾಯಿ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಸಿಎಂ ಮನೆಗೆ ಮುತ್ತಿಗೆ ಯತ್ನ, ವಶಕ್ಕೆ
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್ ಸಿಎಂ ಮನೆಗೆ ಮುತ್ತಿಗೆ ಹಾಕಲು ಯತ್ನ ನಡೆಸಿದೆ. ಸಿದ್ದರಾಮಯ್ಯ, ಪ್ರಿಯಾಂಕ್ ಖರ್ಗೆ ಸೇರಿದಂತೆ ಅನೇಕ ನಾಯಕರು ರಸ್ತೆಯಲ್ಲಿ ಕೂತು ಪ್ರತಿಭಟನೆ ನಡೆಸಿ ಸಿಎಂ ಮನೆಗೆ ಮುತ್ತಿಗೆ ಹಾಕಲು ಹೊರಟಿದ್ದಾಗ ಪೊಲೀಸರು ಅವರನ್ನು ಬಂಧಿಸಿದ್ದಾರೆ. ರೇಸ್ ಕೋರ್ಸ್ ರಸ್ತೆಯ ಆರಾಧ್ಯ ಸರ್ಕಲ್ ಬಳಿ ಬ್ಯಾರಿಕೇಡ್ ಹಾಕಿ ಕಾಂಗ್ರೆಸ್ ನಾಯಕರನ್ನು ಪೊಲೀಸರು ತಡೆದಿದ್ದಾರೆ. ಸಿದ್ದರಾಮಯ್ಯ ಸೇರಿದಂತೆ ಕೈ ನಾಯಕರನ್ನು ವಶಕ್ಕೆ ಪಡೆಯಲು ಪೋಲೀಸರು ಹರಸಾಹಸ ಪಟ್ಟಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ಸಿದ್ದರಾಮಯ್ಯ, ಪ್ರಿಯಾಂಕ್ ಖರ್ಗೆ ಸೇರಿದಂತೆ ಅನೇಕರನ್ನು ಬಸ್‌ಗೆ ಹತ್ತಿಸಿದ ಪೋಲಿಸರು ವಶಕ್ಕೆ ಪಡೆದಿದ್ದಾರೆ. ನಾಯಕರನ್ನು ವಶಕ್ಕೆ ಪಡೆದ ನಂತರ ಸಿಎಂ ವಿರುದ್ಧ ಘೋಷಣೆ ಕೂಗುತ್ತಿದ್ದ ಕಾರ್ಯಕರ್ತರನ್ನೂ ಬಸ್ ಹತ್ತಿಸಿದ್ದಾರೆ.












Click it and Unblock the Notifications