100 ಕುರಿ ಎಣಿಸಲು ಬರದವನು ಬಜೆಟ್ ಮಂಡಿಸ್ತಾನಾ: ಸತ್ಯ ಬಿಚ್ಚಿಟ್ಟ ಸಿದ್ದರಾಮಯ್ಯ
ಬೆಂಗಳೂರು, ಮೇ 02: ನಾನು ಬಾಲ್ಯದಲ್ಲಿ ವೀರ ಮಕ್ಕಳ ಕುಣಿತದಲ್ಲಿ ಭಾಗವಹಿಸಿದ್ದೆ. ಸಿದ್ದರಾಮೇಶ್ವರ ಪೂಜೆಗೆ ವೀರಮಕ್ಕಳ ಕುಣಿತದ ಜನಪದ ನೃತ್ಯ ಚಾಲ್ತಿಯಲ್ಲಿದೆ. ನಾನೂ ವೀರಮಕ್ಕಳ ಕುಣಿತ ಸೇರಿದ್ದೆ. ಆಮೇಲೆ ರಾಜಪ್ಪ ಮೇಸ್ಟ್ರು ನನ್ನನ್ನು ಕರೆದುಕೊಂಡು ಹೋಗಿ ಐದನೇ ತರಗತಿಗೆ ಸೇರಿಸಿದರು. ಹೀಗೆ ನನ್ನ ಶಿಕ್ಷಣ ಆರಂಭವಾಯಿತು. ಅಲ್ಲಿಂದ ನಾನು ಎಲ್ಲೂ ಫೇಲಾಗಲೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಬಾಲ್ಯ, ಶಿಕ್ಷಣ, ರಾಜಕೀಯ ವಿಚಾರ ಬಿಚ್ಚಿಟ್ಟಿದ್ದಾರೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಅಲ್ಲಾಪಟ್ಟಣದ ಶ್ರೀ ಅನ್ನದಾನೇಶ್ವರ ಸ್ವಾಮಿ ದೇವಸ್ಥಾನದ ಪುನರ್ ನಿರ್ಮಾಣ, ವಿಗ್ರಹಗಳ ಪ್ರತಿಷ್ಠಾಪನೆ ಹಾಗೂ ಗೋಪುರ ಕುಂಭಾಭಿಷೇಕ ನೆರವೇರಿಸಿ ಅವರು ಮಾತನಾಡಿದರು. ಜನರ ಸೇವೆಯೇ ದೇವರ ಸೇವೆ ಎಂದು ನಂಬಿದವನು ನಾನು. ಬಸವಣ್ಣನವರು ಇದನ್ನೇ "ದೇಹವೇ ದೇಗುಲ" ಎಂದು ಹಾಡಿದರು. ದೇವರು ಮತ್ತು ಜನರ ನಡುವೆ ಮಧ್ಯವರ್ತಿ ಇರಬಾರದು ಎಂದು ಬಸವಣ್ಣನವರ ಮೌಲ್ಯವಾಗಿತ್ತು ಎಂದರು.

ನಾವು ಮಾನವೀಯವಾಗಿ ಇದ್ದರಷ್ಟೇ ದೇವರ ಸಹಾಯ ಸಿಗುತ್ತದೆ. ಅಮಾನವೀಯತೆಯಿಂದ ನಡೆಯುವವರಿಗೆ ಯಾವ ದೇವರೂ ಸಹಾಯ ಮಾಡುತ್ತದೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನ, ಬಸವಾದಿ ಶರಣರ ಆಶಯದಂತೆ ಜಾತಿ ನಿರ್ಮೂಲನೆ ಮಾಡಬೇಕಿದೆ. ಜಾತಿಗೆ ಚಲನೆ ಇಲ್ಲ, ವರ್ಗಕ್ಕೆ ಚಲನೆ ಇದೆ. ನಿಂತ ನೀರಾಗಿರುವ ಜಾತಿಯನ್ನು ಅಳಿಸಬೇಕಾದರೆ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಸ್ವಾತಂತ್ರ್ಯ ಮತ್ತು ಅವಕಾಶಗಳನ್ನು ಒದಗಿಸಬೇಕು. ಆಗ ಮಾತ್ರ ಜಾತಿ ಅಳಿಸುವ ಕಡೆಗೆ ಸಾಗಬಹುದು.
"100 ಕುರಿ ಎಣಿಸಲು ಬರದವನು ಬಜೆಟ್ ಮಂಡಿಸ್ತಾನಾ"
ನಾನು ಉಪಮುಖ್ಯಮಂತ್ರಿಯಾಗಿ ಮೊದಲ ಬಜೆಟ್ ಮಂಡಿಸುವಾಗ "ನೂರು ಕುರಿ ಎಣಿಸಲು ಬರದವನು ಬಜೆಟ್ ಮಂಡಿಸ್ತಾನಾ" ಎಂದು ಅಣಕಿಸಿದ್ದರು. ಈಗ ನಾನು ಕರ್ನಾಟಕದಲ್ಲಿ ನಿರಂತರವಾಗಿ 16 ಬಜೆಟ್ ಮಂಡಿಸಿದ್ದೇನೆ. ಈ ಅವಕಾಶ ಮುಖ್ಯ. ಅವಕಾಶ ಸಿಕ್ಕಾಗ ಎಲ್ಲರ ಪ್ರತಿಭೆ ಹೊರಗೆ ಬರುತ್ತದೆ ಎಂದು ತಿಳಿಸಿದರು. ತಮ್ಮ ಬಾಲ್ಯ ರಾಜಕೀಯ ಆರಂಭ, ಇತರರ ಟೀಕೆಗಳ ಕುರಿತು ಅವರು ಸ್ಮರಿಸಿದರು.
ಆಚಾರವೇ ಸ್ವರ್ಗ, ಅನಾಚಾರವೇ ನರಕ ಎನ್ನುವ ಬಸವಣ್ಣನವರ ಸರಳ ಧರ್ಮದ ಸಾರವನ್ನು ಪಾಲಿಸಬೇಕು. ಕರ್ಮ ಸಿದ್ಧಾಂತವನ್ನು ತಿರಸ್ಕರಿಸಿ, ನ್ಯಾಯದ ಹಾದಿಯಲ್ಲಿ ನಡೆಯಬೇಕು. ಮಾಡಬಾರದ ಪಾಪದ ಕೆಲಸಗಳನ್ನು ಮಾಡಿ ಒಳ್ಳೇದು ಮಾಡಪ್ಪಾ ಅಂದ್ರೆ ದೇವರು ಒಳ್ಳೇದು ಮಾಡಲ್ಲ ಎಂದು ಅವರು ತಿಳಿಸಿದರು.












Click it and Unblock the Notifications