ಎಚ್ಡಿಕೆ 'ಟಿಕೆಟ್' ಹಗರಣದ ಬಗ್ಗೆ ಸಿದ್ದು ಗುದ್ದು
ಬೆಂಗಳೂರು, ಜು.6: ವಿಧಾನ ಪರಿಷತ್‌ನ ಟಿಕೆಟ್, ಗೋಲ್‌ಮಾಲ್, ಸಿಡಿ ಹಗರಣಕ್ಕೆ ಸಂಬಂಧಪಟ್ಟಂತೆ ಅವ್ಯವಹಾರ, ಅಕ್ರಮದಲ್ಲಿ ಭಾಗಿಯಾಗಿರುವವರಿಗೆ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದಾರೆ.
ವಿಧಾನಸೌಧದ ಆವರಣದಲ್ಲಿ ಮಾಜಿ ಉಪ ಪ್ರಧಾನಿ ಜಗಜೀವನ್‌ರಾಮ್ ಅವರ 28ನೇ ಪುಣ್ಯತಿಥಿ ಅಂಗವಾಗಿ ಅವರ ಪ್ರತಿಮೆಗೆ ಭಾನುವಾರ ಮಾಲಾರ್ಪಣೆ ಮಾಡಿದ ನಂತರ ಈ ರೀತಿ ಪ್ರತಿಕ್ರಿಯೆ ನೀಡಿದರು.
'ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದು ಜಗತ್ತು ಹೀಗೇ ಇದೆ, ಹೀಗೇ ಕಣ್ಣು ಮುಚ್ಚಿ ಹಾಲು ಕುಡಿಯುತ್ತವೆ ಎಂದು ಭಾವಿಸಿಕೊಂಡರೆ ಅದು ತಪ್ಪು, ಮೂರ್ಖತನದ ಪರಮಾವಧಿ ಎಂದು ಯಾರ ಹೆಸರನ್ನೂ ಹೇಳದೆ ಪರೋಕ್ಷವಾಗಿ ಚಾಟಿ ಬೀಸಿದರು.
ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೂ ಇತರೆ ಬೆಕ್ಕುಗಳು ಅದೇ ರೀತಿ ಕಣ್ಣು ಮುಚ್ಚಿ ಹಾಲು ಕುಡಿಯುತ್ತವೆ ಎಂದು ಭಾವಿಸಿಕೊಳ್ಳುವುದು ತಪ್ಪು. ಕಣ್ಣು ಮುಚ್ಚಿ ಹಾಲು ಕುಡಿದರೆ ಯಾರೂ ನೋಡುವುದಿಲ್ಲ ಎಂದು ಅಂದುಕೊಳ್ಳುವುದು ಇನ್ನೂ ಮೂರ್ಖತನ, ಜಗತ್ತು ನೋಡಿಯೇ ನೋಡುತ್ತದೆ. ಇದಕ್ಕೆ ಜನರೇ ತಕ್ಕ ಪಾಠ ಕಲಿಸುತ್ತಾರೆ, ಯಾರ ಯೋಗ್ಯತೆ ಏನು ಎಂಬುದನ್ನು ಜನರು ಬಹುಬೇಗ ಅಳೆದುಬಿಡುತ್ತಾರೆ.

ಆದ್ದರಿಂದ ಯಾವುದೇ ವಿಚಾರವನ್ನು ಒಂದು ದಿನ ಮುಚ್ಚಿಡಬಹುದು, ಎರಡು ದಿನ ಮುಚ್ಚಿಡಬಹುದು. ಬಹಳ ಕಾಲ ಸತ್ಯವನ್ನು ಬ್ಯಾಗಿನಲ್ಲಿ ಹಾಕಿ ಮುಚ್ಚಿಡಲು ಸಾಧ್ಯವಿಲ್ಲ ಎಂದು ಮಾರ್ಮಿಕವಾಗಿ ನುಡಿದರು. ಪ್ರಕರಣದ ಬಗ್ಗೆ ಸಿಸಿಬಿ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಆದರೆ ಈ ಬಗ್ಗೆ ಸಿದ್ದರಾಮಯ್ಯ ಅವರು ಉತ್ತರ ನೀಡಲು ನಿರಾಕರಿಸಿದರು.[ಜೆಡಿಎಸ್‌ನಿಂದ ಕೋಟಿ ಕೋಟಿ ಡೀಲ್?]
ಸಮಾರಂಭದಲ್ಲಿ ಹೇಳಿದ್ದೇನು: ಜಗಜೀವನ್‌ರಾಮ್ ಕುರಿತು ಮಾತನಾಡಿದ ಅವರು, ದೇಶ ಕಂಡ ಅಪ್ರತಿಮ ಆಡಳಿತಗಾರ, ಹಸಿರು ಕ್ರಾಂತಿ ಮೂಲಕ ಜನರಿಗೆ ಆಹಾರ ಸ್ವಾವಲಂಬನೆಗೆ ದಾರಿ ಮಾಡಿಕೊಟ್ಟಿದ್ದಾರೆ. ದೂರದೃಷ್ಟಿಯ ಚಿಂತನೆ ಇಟ್ಟುಕೊಂಡಿದ್ದ ಮಹಾನ್ ನಾಯಕರಾಗಿದ್ದರು ಎಂದು ಗುಣಗಾನ ಮಾಡಿದರು.
ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ರಾಷ್ಟ್ರದ ಅಭಿವೃದ್ಧಿಗೆ ವಿಶೇಷವಾಗಿ ಕೃಷಿ ಅಭಿವೃದ್ಧಿಗೆ ಬಾಬು ಜಗಜೀವನ್‌ರಾಮ್ ಅವರ ಕೊಡುಗೆ ಮತ್ತು ಮಾರ್ಗದರ್ಶನವನ್ನು ಮರೆಯುವಂತೆಯೇ ಇಲ್ಲ ಎಂದು ಕೊಂಡಾಡಿದರು.
ಈ ಸಮಾರಂಭದಲ್ಲಿ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಎಚ್. ಆಂಜನೇಯ, ಕಾನೂನು ಮತ್ತು ಸಂಸದೀಯ ಹಾಗೂ ಪಶುಸಂಗೋಪನಾ ಸಚಿವ ಟಿ.ಬಿ.ಜಯಚಂದ್ರ ಹಾಗೂ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.












Click it and Unblock the Notifications