ವೀಕೆಂಡ್: ಭಾರೀ ಟ್ರಾಫಿಕ್ ಜಾಂಗೆ ಬೆಂಗಳೂರಿಗರೇ ಸಿದ್ದರಾಗಿ
ಬೆಂಗಳೂರು, ಸೆಪ್ಟೆಂಬರ್, 23: ತಮಿಳುನಾಡಿಗೆ ನಿತ್ಯ 5 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ನೀಡಿರುವ ಸುಪ್ರೀಂ ಕೋರ್ಟ್ ಆದೇಶದ ವಿರುದ್ಧ ಈಗಾಗಲೆ ರಾಜ್ಯದೆಲ್ಲೆಡೆ ರೈತರು ಸಮರ ಮುಂದುವರೆಸಿದ್ದಾರೆ. ಹಾಗೆಯೆ ಈ ವಿಚಾರವಾಗಿ ಇಂದು ಬೆಂಗಳೂರಿನ ಹಲವೆಡೆ ಹಲವು ಸಂಘಟನೆಗಳು ಪ್ರತಿಭಟನೆ ಮಾಡಲು ಸಜ್ಜಾಗಿದ್ದು, ಈ ಮೂಲಕ ರಾಜ್ಯ ರಾಜಧಾನಿ ಸಾಲು ಸಾಲು ಪ್ರತಿಭಟನೆಗಳಿಗೆ ಸಾಕ್ಷಿಯಾಗಲಿದೆ ಎನ್ನಲಾಗುತ್ತಿದೆ. ಹಾಗಾದರೆ ಎಲ್ಲೆಲ್ಲಿ ಪ್ರತಿಭಟನೆ ಮಾಡಲಾಗುತ್ತದೆ ಎನ್ನುವ ಮಾಹಿತಿ ಇಲ್ಲಿ ತಿಳಿಯಿರಿ.
ಪ್ರತಿಭಟನೆಗೂ ಮುನ್ನ ಇದೇ ವಿಚಾರವಾಗಿ ಇಂದು ಬೆಂಗಳೂರಿನ ಪ್ರಮುಖ ಅಪಾರ್ಟ್‌ಮೆಂಟ್ ಅಸೋಸಿಯೇಷನ್, ಲೇಔಟ್ ಅಸೋಸಿಯೇಷನ್, ಹೋಟೆಲ್ ಮಾಲೀಕರ ಸಂಘ, ಕನ್ನಡಪರ ಸಂಘಟನೆಗಳು, ರೈತ ಸಂಘಟನೆಳು, ಐಟಿ ಕಂಪನಿಗಳು ಸೇರಿ ಸಭೆ ನಡೆಸಲಿವೆ. ಬಳಿಕ ಹೋರಾಟದ ರೂಪುರೇಷೆಯ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಬೆಂಗಳೂರಿನಲ್ಲಿ ಕನ್ನಡಪರ ಹೋರಾಟಗಾರರು ಪ್ರತಿಭಟನೆ ನಡೆಸಲು ಸಜ್ಜಾಗಿದ್ದು, ಕೇಂದ್ರ, ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸಲಿದ್ದಾರೆ. ಇನ್ನು ವಾಟಾಳ್ ನಾಗರಾಜ್ ಅಧ್ಯಕ್ಷತೆಯ ಕನ್ನಡ ಒಕ್ಕೂಟ ಮಹತ್ವದ ಸುದ್ದಿಗೋಷ್ಟಿ ಕರೆದಿದ್ದು, ಈ ವೇಳೆ ಇಂದು ಕರ್ನಾಟಕ ಬಂದ್ ನಡೆಸಬೇಕಾ ಏನು ಅನ್ನುವುದರ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.
ಇನ್ನು ಇಂದು ಬೆಂಗಳೂರಿನ ಯಾವ್ಯಾವ ಸಂಘಟನೆಗಳಿಂದ ಎಲ್ಲೆಲ್ಲಿ ಪ್ರತಿಭಟನೆಗಳನ್ನು ಹಮ್ಮಿಕೊಂಡಿದ್ದಾರೆ ಎನ್ನುವ ವಿವರವನ್ನು ಇಲ್ಲಿ ಗಮನಿಸಿ.
ಎಲ್ಲೆಲ್ಲಿ ಯಾವ್ಯಾವ ಬಣದ ಪ್ರತಿಭಟನೆ?
1. ಬೆಳಗ್ಗೆ 10:30ಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣದಿಂದ ಮಲ್ಲೇಶ್ವರಂನ ಸಂಪಿಗೆ ರಸ್ತೆಯಲ್ಲಿರುವ ಕುವೆಂಪು ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಲು ಸಜ್ಜಾಗಿದ್ದು, ಈ ವೇಳೆ ಕರವೇಯ ನೂರಾರು ಕಾರ್ಯಕರ್ತರು ಭಾಗಿಯಾಗಲಿದ್ದಾರೆ.

2. ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣದಿಂದ ಬೆಳಿಗ್ಗೆ 10 ಗಂಟೆಗೆ ಕರ್ನಾಟಕ- ತಮಿಳುನಾಡು ಅತ್ತಿಬೆಲೆ ಗಡಿ ಬಂದ್‌ಗೆ ಕರೆ ನೀಡಲಾಗಿದೆ.
ಈ ವೇಳೆ ಕರವೇಯ ಸಾವಿರಾರು ಕಾರ್ಯಕರ್ತರು ಭಾಗಿಯಾಗಲಿದ್ದಾರೆ.
3. ಕರ್ನಾಟಕ ಜಲ ಸಂರಕ್ಷಣಾ ಸಮಿತಿ ಬೆಂಗಳೂರಿನಿಂದ ಬೆಳಗ್ಗೆ 11 ಗಂಟೆಗೆ ಫ್ರೀಡಂ ಪಾರ್ಕ್‌ನಲ್ಲಿ ಮಹತ್ವದ ಸಭೆ ನಡೆಯಲಿದ್ದು, ಸಭೆಯಲ್ಲಿ ರೈತ ಮುಖಂಡರಾದ ಕುರುಬೂರು ಶಾಂತ್‌ಕುಮಾರ್, ಆಮ್ ಆದ್ಮಿ ಪಾರ್ಟಿಯ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಸೇರಿದಂತೆ ಪ್ರಮುಖ ನಾಯಕರು ಭಾಗಿಯಾಗಲಿದ್ದಾರೆ.
4. ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ತಿನಿಂದ ಬೆಳಗ್ಗೆ 11:30ಕ್ಕೆ ಮೈಸೂರು ಬ್ಯಾಂಕ್ ಸರ್ಕಲ್‌ನಲ್ಲಿ ಪ್ರತಿಭಟನೆ.
5. ಮಧ್ಯಾಹ್ನ 1:30ಕ್ಕೆ ಬೆಂಗಳೂರು ಪ್ರೆಸ್ ಕ್ಲಬ್‌ನಲ್ಲಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಸುದ್ದಿಗೋಷ್ಟಿ.
ಸುದ್ದಿಗೋಷ್ಟಿಯಲ್ಲಿ ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷರಾದ ಸಾ.ರಾಗೋವಿಂದು, ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರುಗಳಾದ ಪ್ರವೀಣ್ ಕುಮಾರ್ ಶೆಟ್ಟಿ, ಶಿವರಾಮೇಗೌಡ, ಕನ್ನಡಸೇನೆಯ ರಾಜ್ಯಾಧ್ಯಕ್ಷ ಕೆ.ಆರ್ ಕುಮಾರ್, ಕನ್ನಡ ಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ಮಂಜುನಾಥ್ ದೇವ್ ಹಾಗೂ ಕನ್ನಡಪರ ಹೋರಾಟಗಾರ ಹೆಚ್.ವಿ ಗಿರೀಶ್ ಗೌಡ ಸೇರಿದಂತೆ ಅನೇಕ ಕನ್ನಡಪರ ಸಂಘಟನೆಗಳ ಮುಖಂಡರು ಭಾಗಿಯಾಗಲಿದ್ದಾರೆ.












Click it and Unblock the Notifications